ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಮಲತಾ ಪರ ಮೊಳಗಿದ ಜೈಕಾರ

ನಟ ಯಶ್‌ಗೆ ಅದ್ಧೂರಿ ಸ್ವಾಗತ, ಆರತಿ ಎತ್ತಿದ ಮಹಿಳೆಯರು
Last Updated 4 ಏಪ್ರಿಲ್ 2019, 17:41 IST
ಅಕ್ಷರ ಗಾತ್ರ

ಪಾಂಡವಪುರ: ಮಂಡ್ಯ ಲೋಕಸಭಾ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್‌ ಪರ ನಟ ಯಶ್‌ ಗುರುವಾರ ತಾಲ್ಲೂಕಿನ ವಿವಿಧೆಡೆ ರೋಡ್ ಷೋ ನಡೆಸಿ ಮತಯಾಚಿಸಿದರು.

ಬೆಳಿಗ್ಗೆ ಪಾಂಡವಪುರ ರೈಲ್ವೆ ನಿಲ್ದಾಣದಲ್ಲಿನ ಕೆನ್ನಾಳು ಗೇಟ್‌ ಬಳಿ ರೈತ ಸಂಘ, ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರು ನಟ ಯಶ್‌ ಅವರಿಗೆ ಹೂಹಾರ ಹಾಕಿ ಅದ್ಧೂರಿ ಸ್ವಾಗತ ನೀಡಿದರು. ಪಟಾಕಿ ಸಿಡಿಸಿ ಸಂಭ್ರಮಿಸಿದರು. ಸುಮಲತಾ ಅಂಬರೀಷ್‌ಗೆ ಜಯವಾಗಲಿ ಎಂಬ ಘೋಷಣೆ ಕೂಗಿದರು.

ಚುನಾವಣೆ ಪ್ರಚಾರಕ್ಕಾಗಿ ಯಶ್‌ ಅವರಿಗೆ ಎತ್ತಿನ ಗಾಡಿಯನ್ನು ಸಿದ್ಧಗೊಳಿಸಲಾಗಿತ್ತು. ‘ಸಮಯದ ಅಭಾವವಿದೆ. ಎಲ್ಲ ಕಡೆ ಪ್ರಚಾರಕ್ಕೆ ತೆರಳಬೇಕಾಗಿದೆ’ ಎಂದು ಹೇಳಿ ಯಶ್‌ ತೆರೆದ ವಾಹವನ್ನೇರಿದರು. ರೈತ ನಾಯಕಿ ಸುನೀತಾ ಪುಟ್ಟಣ್ಣಯ್ಯ ಸಾಥ್ ನೀಡಿದರು. ಕೆನ್ನಾಳು ಗ್ರಾಮದಲ್ಲಿ ಮಹಿಳೆಯರು ಯಶ್‌ಗೆ ಆರತಿ ಎತ್ತಿ ಶುಭ ಕೋರಿದರು.

ಯುವಕ–ಯುವತಿಯರು ಯಶ್‌ ಅವರತ್ತ ಕೈಬೀಸಿ ತಮ್ಮ ಮೊಬೈಲ್‌ಗಳಲ್ಲಿ ಫೋಟೊ ಕ್ಲಿಕ್ಕಿಸಿಕೊಂಡರು.

‘ಎಲ್ರಗೂ ನಮಸ್ಕಾರ, ಚನ್ನಾಗಿ ದ್ದೀರಾ, ಅಣ್ಣ್‌ ತಮ್ಮಾಸ್‌ ಹೇಗಿದ್ದೀರಾ? ಎಂದು ಮಾತು ಆರಂಭಿಸಿದ ನಟ ಯಶ್, ಸುಮಲತಾ ಅಂಬರೀಷ್ ಅವರಿಗೆ ಒಂದು ಅವಕಾಶ ಮಾಡಿಕೊಡಿ, ಮಂಡ್ಯದತ್ತ ದೇಶವೇ ತಿರುಗಿ ನೋಡ್ತಿದೆ. ಮಂಡ್ಯದ ಸ್ವಾಭಿಮಾನ ಕಾಪಾಡಿ, ಜಿಲ್ಲೆಯ ಸೊಸೆ ಸುಮಲತಾ ಹೆಣ್ಣುಮಗಳು ಚುನಾವಣೆಯಲ್ಲಿ ಸ್ಪರ್ಧಿಸಿರೋದೋ ತಪ್ಪಾ? ಅವರಿಗೆ ಸಂಸದರಾಗಿ ಕೆಲಸ ಮಾಡುವ ಸಾಮರ್ಥ್ಯವಿದೆ. ಮಂಡ್ಯ ಜನರ ದನಿಯಾಗುವ ಶಕ್ತಿ ಅವರಿಗಿದೆ. ಇದನ್ನು ಅರ್ಥಮಾಡಿಕೊ‌ಳ್ಳಿ ಎಂದು ಮನವಿ ಮಾಡಿದರು.

ಸುಮಲತಾ ಅಂಬರೀಷ್ ಅವರಂತೆಯೇ ಮೂರು ಮಂದಿ ಸುಮಲತಾ ಎಂಬುವವರು ಕಣದಲ್ಲಿ ದ್ದಾರೆ. ಕನ್‌ಪ್ಯೂಷ್‌ ಮಾಡಿಕೊಳ್ಳಬೇಡಿ. ಕ್ರಮ ಸಂಖ್ಯೆ 20 ಮರೆಯಬೇಡಿ ಎಂದು ಒತ್ತಿ ಹೇಳಿದರು.

ರೈತ ನಾಯಕಿ ಸುನೀತಾ ಪುಟ್ಟಣ್ಣಯ್ಯ ಮಾತನಾಡಿ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮಹಿಳೆಗೆ ಪ್ರಾಶಸ್ತ್ಯ ನೀಡಿ, ಸುಮಲತಾ ಅಂಬರೀಷ್ ಅವರಿಗೆ ನಾವೆಲ್ಲರೂ ಬೆಂಬಲವಾಗಿ ನಿಲ್ಲಬೇಕಿದೆ. ಆ ಮೂಲಕ ಜಿಲ್ಲೆಯ ಸ್ವಾಭಿಮಾನ ಉಳಿಸಿಕೊಳ್ಳಬೇಕಿದೆ ಎಂದರು.

ವಿ.ವಿ.ನಗರ, ಹರಳಹಳ್ಳಿ ಗ್ರಾಮದಲ್ಲಿ ಪ್ರಚಾರ ನಡೆಸಿ ಹಿರೇಮರಳಿ ಗ್ರಾಮಕ್ಕೆ ಯಶ್ ಬಂದಾಗ ಕೂಡ ಜನರು ಪಟಾಕಿ ಸಿಡಿಸಿ ಹೂಹಾರ ಹಾಕಿ ಸ್ವಾಗತಿಸಿದರು. ನಂತರ ಟಿ.ಎಸ್.ಛತ್ರ, ಲಕ್ಷ್ಮಿಸಾಗರ, ಸುಂಕಾತೊಣ್ಣೂರು, ಮಾಣಿಕ್ಯನಹಳ್ಳಿ, ಜಕ್ಕನಹಳ್ಳಿ, ಮೇಲುಕೋಟೆ, ಬಳಘಟ್ಟ, ನಾರಾಯಣಪುರ, ಚಿನಕುರಳಿ, ಹೊನಗಾನಹಳ್ಳಿ, ರಾಗಿಮುದ್ದನಹಳ್ಳಿ, ಡಿಂಕಾ, ಬನ್ನಂಗಾಡಿ, ಕಟ್ಟೇರಿ, ಅರಳಕುಪ್ಪೆ, ಹರವು, ಕೆ.ಬೆಟ್ಟಹಳ್ಳಿ ಗ್ರಾಮ ಪಂಚಾಯಿತಿಗಳಲ್ಲಿ ನಟ ಯಶ್‌ ರೋಡ್‌ ಷೋ ನಡೆಸಿ ಚುನಾವಣಾ ಪ್ರಚಾರ ನಡೆಸಿದರು.

ಬಿಸಿಲಿನ ಬೇಗೆ, ಬಾಯಾರಿಕೆ ತಣಿಸಿಕೊಳ್ಳಲು ಯಶ್‌ಗೆ ಅಲ್ಲಲ್ಲಿ ಜನರು ಎಳೆನೀರು ನೀಡುತ್ತಿದ್ದರು.

ರೈತ ಸಂಘದ ಮುಖಂಡರಾದ ಕೆ.ಟಿ.ಗೋವಿಂದೇಗೌಡ, ಎ.ಎಲ್.ಕೆಂಪೂಗೌಡ, ಕೆನ್ನಾಳು ನಾಗರಾಜು, ಹರವು ಪ್ರಕಾಶ್, ಕ್ಯಾತನಹಳ್ಳಿ ದಯಾನಂದ, ಕಾಂಗ್ರೆಸ್ ಮುಖಂಡ ಎಲ್.ಸಿ.ಮಂಜುನಾಥ್, ಬಿಜೆಪಿ ಮುಖಂಡ ಎಚ್‌.ಎನ್.ಮಂಜುನಾಥ್, ಧನಂಜಯ ಅವರು ನಟ ಯಶ್‌ಗೆ ಸಾಥ್ ನೀಡಿದರು.

ಸುಮಲತಾ ಪ್ರಚಾರ ಜೋರು
ಮದ್ದೂರು:
ತಾಲ್ಲೂಕಿನ ಆತಗೂರು ಹೋಬಳಿಯ ಕೆಸ್ತೂರು ಭಾಗದ ಹಳ್ಳಿಗಳಲ್ಲಿ ಮಂಡ್ಯ ಲೋಕಸಭಾ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್‌ ಅವರು ಬಿರು ಬಿಸಿಲಿನ ನಡುವೆಯೂ ಅಬ್ಬರದ ಪ್ರಚಾರ ನಡೆಸಿದರು.

ಕೆಸ್ತೂರು ಹಾಗೂ ಮಲ್ಲನಕುಪ್ಪೆ ಗ್ರಾಮಗಳಲ್ಲಿ ಮಾತನಾಡಿದ ಅವರು, ‘ಈ ಬಾರಿ ಎರಡು ಮತಯಂತ್ರಗಳು ಇರಲಿದ್ದು ನನ್ನದು ಕ್ರಮ ಸಂಖ್ಯೆ 20. ಮತದಾರರು ಗೊಂದಲ ಮಾಡಿಕೊಳ್ಳದೆ ನನ್ನ ಭಾವಚಿತ್ರವನ್ನು ನೋಡಿ ಮತ ಚಲಾಯಿಸಬೇಕು. ಆ ಮೂಲಕ ನಿಮ್ಮೆಲ್ಲರ ಸೇವೆ ಮಾಡಲು ಒಂದು ಸದಾವಕಾಶವನ್ನು ಕಲ್ಪಿಸಬೇಕು’ ಎಂದು ಮನವಿ ಮಾಡಿದರು.

‘ಎದುರಾಳಿಗಳು ಎಷ್ಟೇ ನನ್ನ ವಿರುದ್ಧ ಹೇಳಿಕೆ ನೀಡಿದ್ದರೂ ನಾನು ಅವುಗಳಿಗೆ ಕಿವಿಕೊಡುವುದಿಲ್ಲ ಅಂಬರೀಷ್ ಅವರ ಜನಪರ ಕೆಲಸಗಳೇ ನನಗೆ ಶ್ರೀರಕ್ಷೆಯಾಗಲಿವೆ’ ಎಂದರು.

ತಾಲ್ಲೂಕಿನ ತೊರೆಶೆಟ್ಟಹಳ್ಳಿ, ಮಾಚಹಳ್ಳಿ, ಕೆಸ್ತೂರು, ಮಲ್ಪನಕುಪ್ಪೆ, ಮಲ್ಲನಕುಪ್ಪೆ ಗೇಟ್, ತೂಬಿನಕೆರೆ, ಆತಗೂರು, ಕದಲೂರು ಸೇರಿದಂತೆ ಹಲವಾರು ಗ್ರಾಮಗಳಲ್ಲಿ ಪ್ರಚಾರ ನಡೆಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಧ್ವಜಗಳು ರಾರಾಜಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT