ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ: ಮೈಷುಗರ್‌ ಪುನಾರಂಭಕ್ಕೆ ₹ 50 ಕೋಟಿ

ದುಡಿಯುವ ಬಂಡವಾಳ ಬಿಡುಗಡೆಗೆ ಹಣಕಾಲು ಇಲಾಖೆ ಅನುಮೋದನೆ
Published 2 ಜೂನ್ 2023, 23:30 IST
Last Updated 2 ಜೂನ್ 2023, 23:30 IST
ಅಕ್ಷರ ಗಾತ್ರ

ಮಂಡ್ಯ: ಮೈಷುಗರ್‌ ಕಾರ್ಖಾನೆ ಪುನಾರಂಭಗೊಳಿಸಲು ಸರ್ಕಾರದಿಂದ ₹ 50 ಕೋಟಿ ಬಿಡುಗಡೆ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅನುಮೋದನೆ ನೀಡಿದ್ದಾರೆ, ಇದಕ್ಕೆ ಹಣಕಾಸು ಇಲಾಖೆ ಕೂಡ ಒಪ್ಪಿಗೆ ಸೂಚಿಸಿದೆ.

ಪ್ರಸಕ್ತ ಹಂಗಾಮಿನಲ್ಲಿ ಕಾರ್ಖಾನೆ ಆರಂಭವಾಗುವ ಬಗ್ಗೆ ಸಾಕಷ್ಟು ಅನುಮಾನಗಳು ಇದ್ದವು. ಕಳೆದ ಬಿಜೆಪಿ ಸರ್ಕಾರ ಬಾಕಿ ಉಳಿಸಿಕೊಂಡಿದ್ದ ₹ 18 ಹಣ ಬಿಡುಗಡೆ ಮಾಡುವಂತೆ ಕಾಂಗ್ರೆಸ್‌ ಸರ್ಕಾರವನ್ನು ಒತ್ತಾಯಿಸಲಾಗಿತ್ತು, ಹಲವರು ಸರ್ಕಾರಕ್ಕೆ ಪತ್ರ ಬರೆದಿದ್ದರು.

ಈ ಹಿನ್ನೆಲೆಯಲ್ಲಿ ಕಾರ್ಖಾನೆ ಪುನಾರಂಭಕ್ಕೆ ₹ 15 ಕೋಟಿ ಜೊತೆಗೆ ದುಡಿಯುವ ಬಂಡವಾಳವಾಗಿ ₹ 35 ಕೋಟಿ ನೀಡಲು ಆರ್ಥಿಕ ಇಲಾಖೆ ಒಪ್ಪಿಗೆ ಸೂಚಿಸಿದೆ. ಇದರಿಂದಾಗಿ ಈ ಹಂಗಾಮಿನಲ್ಲಿ ಕಾರ್ಖಾನೆ ಆರಂಭವಾಗುವುದು ಬಹುತೇಕ ಖಚಿತವಾಗಿದೆ.

ಕಾರ್ಖಾನೆ ಪುನಶ್ಚೇತನಕ್ಕೆ ಹಣ ಬಿಡುಗಡೆ ಮಾಡಲು ಒಪ್ಪಿಗೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ಅವರನ್ನು ಶಾಸಕರಾದ ಪಿ.ಎಂ.ನರೇಂದ್ರಸ್ವಾಮಿ, ದಿನೇಶ್‌ ಗೂಳಿಗೌಡ, ಗಣಿಗ ರವಿಕುಮಾರ್‌ ಅಭಿನಂದಿಸಿದ್ದಾರೆ. ಕಾರ್ಖಾನೆ ಆರಂಭಕ್ಕೆ ಹಸಿರು ನಿಶಾನೆ ದೊರೆತಿರುವ ಹಿನ್ನೆಲೆಯಲ್ಲಿ ಕಬ್ಬು ಬೆಳೆಗಾರರು ಕೂಡ ಸಂತಸ ವ್ಯಕ್ತಪಡಿಸಿದ್ದಾರೆ.

ಕಾರ್ಖಾನೆ ಆರಂಭವಾಗಲು ಇರುವ ಸವಾಲು, ಹಣಕಾಸು ಅವಶ್ಯಕತೆಗಳ ಸಂಬಂಧ ಶಾಸಕರಾದ ದಿನೇಶ್‌ ಗೂಳಿಗೌಡ, ಗಣಿಗ ರವಿಕುಮಾರ್ ಈಚೆಗೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗೆ ಪತ್ರ ಬರೆದಿದ್ದರು.

‘ಈ ಹಂಗಾಮಿನಲ್ಲಿ 10 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ರೈತರು ಕಬ್ಬು ಬೆಳೆದಿದ್ದು, ಸುಮಾರು 5 ಲಕ್ಷ ಮೆಟ್ರಿಕ್‌ ಟನ್‌ ಕಬ್ಬು ಪೂರೈಕೆ ಮಾಡುವ ಕುರಿತು ಒಪ್ಪಂದ ಮಾಡಿಕೊಳ್ಳಲಾಗಿದೆ. 5,745 ರೈತರು ಕಾರ್ಖಾನೆಗೆ ಕಬ್ಬು ಪೂರೈಸುವುದಾಗಿ ಈಗಾಗಲೇ ನೋಂದಣಿ ಮಾಡಿಕೊಂಡಿದ್ದಾರೆ. ಕಬ್ಬು ನುರಿಸುವಿಕೆಯ ಸಿದ್ಧತೆಯು ಜೂನ್‌ನಿಂದ ಆರಂಭವಾಗಬೇಕಿದೆ. ಹೀಗಾಗಿ ಹಣದ ಅವಶ್ಯಕತೆ ಇದೆ’ ಪತ್ರದಲ್ಲಿ ತಿಳಿಸಿದ್ದರು.

‘ಜೊತೆಗೆ ವಿವಿಧ ಸಿವಿಲ್ ಕಾಮಗಾರಿಗಳಿಗೆ ₹ 98 ಲಕ್ಷ, ಇಆರ್‌ಪಿ ಪ್ರಾಜೆಕ್ಟ್‌ಗೆ ₹ 98 ಲಕ್ಷ, ನೀರು ಮತ್ತು ಸ್ಟೇಕ್ ಆನ್‌ಲೈನ್ ಮಾನಿಟರಿಂಗ್ ವ್ಯವಸ್ಥೆ ಅಳವಡಿಕೆಗೆ ₹ 30 ಲಕ್ಷ, ಗೇರ್ ಬಾಕ್ಸ್ ಅಳವಡಿಕೆಗೆ ₹ 1 ಕೋಟಿ, ಜಿಐ ಶೀಟ್ ಹಾಗೂ ಕಟಾವು ಕಾರ್ಮಿಕರ ಸಾಮಗ್ರಿಗೆ ₹ 2 ಕೋಟಿ ಅಗತ್ಯವಾಗಿದೆ. ಹೀಗಾಗಿ ಕೂಡಲೇ ಅಗತ್ಯವಾಗಿ ಬೇಕಿರುವ ಹಣವನ್ನು ಬಿಡುಗಡೆ ಮಾಡಬೇಕು. ಆ ಮೂಲಕ ರೈತರ ಹಿತ ಕಾಪಾಡಬೇಕು’ ಎಂದು ಪತ್ರದಲ್ಲಿ ಒತ್ತಾಯಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT