ತಮ್ಮಣ್ಣ ಸಚಿವರಾಗಲು ಅಂಬರೀಷ್ ಕಾರಣ: ಸುಮಲತಾ

ಶುಕ್ರವಾರ, ಏಪ್ರಿಲ್ 19, 2019
27 °C

ತಮ್ಮಣ್ಣ ಸಚಿವರಾಗಲು ಅಂಬರೀಷ್ ಕಾರಣ: ಸುಮಲತಾ

Published:
Updated:

ಮದ್ದೂರು: ಮದ್ದೂರು ಕ್ಷೇತ್ರದ ಶಾಸಕ ಹಾಗೂ ಸಾರಿಗೆ ಸಚಿವರಾದ ಡಿ.ಸಿ.ತಮ್ಮಣ್ಣ ಅವರು ಸಚಿವರಾಗಲು ಅಂಬರೀಷ್ ಅವರೇ ಕಾರಣ ಎಂದು ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಹೇಳಿದರು.

ತಾಲ್ಲೂಕಿನ ಮಠದದೊಡ್ಡಿ, ಹುಲಿಗೆರೆಪುರ, ನಗರಕೆರೆ, ಉಪ್ಪಾರದೊಡ್ಡಿ, ಬೋರಾಪುರ, ಗೆಜ್ಜಲಗೆರೆ, ಗೊರವನಹಳ್ಳಿ, ಚನ್ನಸಂದ್ರ, ಉಪ್ಪಿನಕೆರೆ ಸೇರಿದಂತೆ ತಾಲ್ಲೂಕಿನಾದ್ಯಂತ ಬಿರುಸಿನ ಪ್ರಚಾರ ನಡೆಸಿ ಉಪ್ಪಿನಕೆರೆ ಗ್ರಾಮದಲ್ಲಿ ಮಾತನಾಡಿ, ‘ಡಿ.ಸಿ.ತಮ್ಮಣ್ಣ ಅವರು ತಮ್ಮ ಚುನಾವಣಾ ಪ್ರಚಾರದಲ್ಲಿ ಅಂಬರೀಷ್‌ರ ವಿರುದ್ಧ ಮಾತನಾಡಿ ಅವರು ಏನೂ ಮಾಡಿಲ್ಲ ಅಂತಾರೆ. ಅವರು ಏನು ಮಾಡಿದ್ದಾರೆ ಎಂದು ಅವರ ಮನಸಾಕ್ಷಿಯನ್ನು ಕೇಳಿಕೊಳ್ಳಲಿ? ಈ ದಿನ ಅವರು ಸಚಿವರಾಗಿ ಅಧಿಕಾರ ನಡೆಸುತ್ತಿರುವುದಕ್ಕೆ ಯಾರು ಕಾರಣ ಅಂತ ಕೇಳಿ, ಆವತ್ತು ನಮ್ಮ ಮನೆಯಲ್ಲಿ ಕುಳಿತು ನನ್ನ ಪತಿ ಅಂಬರೀಷ್‌ ಬಳಿ ಮಂತ್ರಿ ಸ್ಥಾನಕ್ಕಾಗಿ ಚಡಪಡಿಸುತ್ತಿದ್ದಾಗ ಅಂಬಿ ಯಾರಿಗೆ ಇವರನ್ನು ಮಂತ್ರಿ ಮಾಡಿ ಎಂದು ಹೇಳಿದರು ಎಂದು ನೆನಪಿಸಿಕೊಳ್ಳಲಿ’ ಎಂದರು.

ಅವರನ್ನು ಓದಿಸಿ ಬೆಳೆಸಿದ್ದು ನಮ್ಮ ಮಾವ ಹುಚ್ಚೇಗೌಡರು ಎಂಬುದನ್ನು ಅವರು ಮರೆತಿದ್ದಾರೆ ಎಂದೆನಿಸುತ್ತದೆ. ಈಗ ಉಂಡ ಮನೆಗೆ ಏನು ಮಾಡುತ್ತಿದ್ದಾರೆಂದು ನಿಮಗೆ ಗೊತ್ತಿಲ್ಲವೆ ಎಂದು ಸಚಿವ ಡಿ.ಸಿ.ತಮ್ಮಣ್ಣರಿಗೆ ಟಾಂಗ್ ನೀಡಿದರು.

‘ಸ್ವಲ್ಪವು ಕೃತಜ್ಞತೆ ಇಲ್ಲದೆ ಇಷ್ಟು ವಯಸ್ಸಾಗಿದ್ದರೂ, ಅನುಭವವವಿದ್ದರೂ ‍ಒಬ್ಬ ಮಹಿಳೆಯ ಮೇಲೆ ಇಷ್ಟೆಲ್ಲಾ ಮಾತನಾಡುತ್ತಿದ್ದಾರೆ. ಇಂದಿನ ಅಧಿಕಾರಕ್ಕಾಗಿ ಸಂಬಂಧಗಳನ್ನು ಕಳೆದುಕೊಂಡಿದ್ದಾರೆ, ಸಂಬಂಧದಲ್ಲಿ ಅಂಬರೀಷ್‌ಗೆ ಡಿ.ಸಿ.ತಮ್ಮಣ್ಣ ಅಣ್ಣನಾಗಬೇಕಾಗಿದ್ದು ಈಗ ಸಾರಿಗೆ ಸಚಿವರಾಗಿದ್ದಾರೆಂದು ಹಿಯಾಳಿಕೆಯ ಮಾತನಾಡುತ್ತಿದ್ದಾರೆ. ಚುನಾವಣೆಯಲ್ಲಿ ಮತದಾರರು ಎಲ್ಲದಕ್ಕೂ ಉತ್ತರ ನೀಡುತ್ತಾರೆ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 17

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !