ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಬ್ಬು ಕಟಾವಿಗೆ ಅಧಿಕ ದರ: ಡಿ.ಸಿ ಎಚ್ಚರಿಕೆ

14 ದಿನದ ಒಳಗೆ ಹಣ ನೀಡುವಂತೆ ಸಕ್ಕರೆ ಕಾರ್ಖಾನೆ ಅಧಿಕಾರಿಗಳಿಗೆ ಸೂಚನೆ
Last Updated 31 ಜುಲೈ 2021, 12:27 IST
ಅಕ್ಷರ ಗಾತ್ರ

ಮಂಡ್ಯ: ‘ಜಿಲ್ಲೆಯಾದ್ಯಂತ ಕಬ್ಬು ಕಟಾವು ಆರಂಭವಾಗಿದ್ದು ನಿಗದಿತ ಕಟಾವು ದರಕ್ಕಿಂತ ರೈತರಿಂದ ಹೆಚ್ಚು ದರ ಪಡೆಯುತ್ತಿರುವ ದೂರುಗಳು ಬಂದಿವೆ. ಅಧಿಕಾರಿಗಳು ಈ ಬಗ್ಗೆ ನಿಗಾ ವಹಿಸಬೇಕು. ನಿಗದಿತ ದರಕ್ಕಿಂತ ಹೆಚ್ಚಿಗೆ ವಸೂಲಿ ಮಾಡಿದರೆ ಗುತ್ತಿಗೆದಾರರ (ಗ್ಯಾಂಗ್‌ಮೆನ್‌) ವಿರುದ್ಧ ಕ್ರಮ ಜರುಗಿಸಬೇಕು’ ಎಂದು ಜಿಲ್ಲಾಧಿಕಾರಿ ಎಸ್‌.ಅಶ್ವತಿ ಎಚ್ಚರಿಸಿದರು.

ಪ್ರಸ್ತುತ ಹಂಗಾಮಿನಲ್ಲಿ ಕಬ್ಬು ನುರಿಯುವ ಸಂಬಂಧ ಸಕ್ಕರೆ ಕಾರ್ಖಾನೆ ಅಧಿಕಾರಿಗಳೊಂದಿಗೆ ಶನಿವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

‘ಕಬ್ಬು ಕಟಾವಿಗೆ ಹೆಚ್ಚು ದರ ಪಡೆಯುತ್ತಿರುವ ಕಾರಣ ರೈತರಿಗೆ ನಷ್ಟ ಉಂಟಾಗುತ್ತಿದೆ. ಮುಂದಿನ ದಿನಗಳಲ್ಲಿ ರೈತರಿಂದ ಈ ರೀತಿಯ ದೂರುಗಳು ಬಾರದಂತೆ ನೋಡಿಕೊಳ್ಳಬೇಕು. ರೈತರ ಹಿತಕ್ಕೆ ಆದ್ಯತೆ ನೀಡಬೇಕು. ಕಾರ್ಖಾನೆಯ ಫೀಲ್ಡ್ ಅಧಿಕಾರಿಗಳು ಕಟಾವು ಕಾರ್ಮಿಕರನ್ನು ನಿಯಂತ್ರಿಸುವಲ್ಲಿ ವಿಫಲರಾಗಿದ್ದಾರೆ. ಈ ಕುರಿತಂತೆ ನಿತ್ಯ ರೈತರು ದೂರು ನೀಡುತ್ತಿದ್ದಾರೆ. ರೈತರಿಗೆ ಅನುಕೂಲವಾಗುವಂತೆ ಕಟಾವು ವೆಚ್ಚ ಹೆಚ್ಚಿಸದಂತೆ ಅಧಿಕಾರಿಗಳು ಗಮನಹರಿಸಬೇಕು’ ಎಂದರು.

‘ಕಬ್ಬು ಸಾಗಣೆ ವೆಚ್ಚಕ್ಕೆ ಸಂಬಂಧಿಸಿದಂತೆ ಲಾರಿ ಚಾಲಕರು ಹೆಚ್ಚುವರಿಯಾಗಿ ಬಾಟ ನೀಡುವಂತೆ ರೈತರ ಮೇಲೆ ಒತ್ತಡ ಹಾಕುತ್ತಿದ್ದಾರೆ. ಲಾರಿ ಚಾಲಕರು ರೈತರಿಂದ ಯಾವುದೇ ಹಣ ಪಡೆಯುವಂತಿಲ್ಲ. ಗ್ಯಾಂಗ್‌ಮನ್‌ಗಳು ಈ ಕುರಿತು ಅವರಿಗೆ ಸೂಚನೆ ನೀಡಬೇಕು. ಸಾಗಣೆ ವೆಚ್ಚ ಭರಿಸುವುದಲ್ಲದೇ ರೈತರಿಂದ ಬಾಟ ಕೇಳಬಾರದು’ ಎಂದರು.

‘ಕಬ್ಬು ಕಟಾವು ಮಾಡುವಾಗ ಯಾವುದೇ ರೀತಿಯಿಂದ ತಾರತಮ್ಯ ಮಾಡಬಾರದು. 12 ರಿಂದ 14 ತಿಂಗಳ ಆದ್ಯತೆ ಮೇರೆಗೆ ಕಟಾವು ಮಾಡಬೇಕು. ಕಬ್ಬು ಪೂರೈಕೆಯಾದ 14 ದಿನಗಳೊಳಗೆ ರೈತರಿಗೆ ನ್ಯಾಯಯುತ ದರ (ಎಫ್‌ಆರ್‌ಪಿ) ಪಾವತಿಯಾಗಬೇಕು. ಈ ಬಗ್ಗೆ ಕಾರ್ಖಾನೆ ಅಧಿಕಾರಿಗಳು ಹೆಚ್ಚು ನಿಗಾ ವಹಿಸಬೇಕು. ಪ್ರತಿ ಬಾರಿ ಕಬ್ಬಿನ ಹಣ ಪಾವತಿಸುವಲ್ಲಿ ಕಾರ್ಖಾನೆ ಮಾಲೀಕರು ತಡ ಮಾಡುತ್ತಿದ್ದಾರೆ. ಈ ಬಾರಿ ರೈತರು ಸಂಕಷ್ಟದಲ್ಲಿದ್ದು ನಿಯಮಾನುಸಾರ 14 ದಿನದೊಳಗೆ ಬಾಕಿ ಪಾವತಿ ಮಾಡಬೇಕು’ ಎಂದು ಸೂಚಿಸಿದರು.

‘ಕಬ್ಬು ಕಡಿಯಲು ಬರುವ ಕಾರ್ಮಿಕರಿಗೆ ಸೂಕ್ತ ರಕ್ಷಣೆ ನೀಡಬೇಕು. ಅನಧಿಕೃತ ಚಟುವಟಿಕೆಗಳನ್ನು ತಕ್ಷಣದಿಂದಲೇ ಸಂಪೂರ್ಣವಾಗಿ ಅಂತ್ಯಗೊಳಿಸಬೇಕು. ಮೀಸಲು ಪ್ರದೇಶದಲ್ಲಿ ಲಭ್ಯವಿರುವ ಕಬ್ಬನ್ನು ಸಕಾಲದಲ್ಲಿ ಸಾಗಾಣಿಕೆ ಮಾಡಲು ಕ್ರಮವಹಿಸಬೇಕು. ರೈತರು ನೋಂದಣಿ ಮಾಡಿಸಿಕೊಂಡಿರುವ ಮಾಹಿತಿಯನ್ನು ಆಧರಿಸಿ ಕಬ್ಬು ಕಟಾವಿಗೆ ಮುಂದಾಗಬೇಕು. ರೈತಸಂಪರ್ಕ ಕೇಂದ್ರ , ಗ್ರಾಮ‌ ಪಂಚಾಯತಿ, ಹಾಲಿನ ಡೇರಿ ವಿಭಾಗೀಯ ಕಚೇರಿಗಳಲ್ಲಿ ಪ್ರತಿ ತಿಂಗಳ ವಿವರ ಪ್ರದರ್ಶನ ಮಾಡಬೇಕು’ ಎಂದು ಸೂಚಿಸಿದರು.

ಆಹಾರ ಇಲಾಖೆ ಜಂಟಿ ನಿರ್ದೇಶಕ ಶಿವಣ್ಣ , ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಬಿ.ಎಸ್. ಚಂದ್ರಶೇಖರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT