ಮಂಡ್ಯ: ಅಟ್ಟುಣ್ಣುವ ಜಾತ್ರೆಯೆಂದೇ ಹೆಸರುವಾಸಿಯಾದ ತಾಲ್ಲೂಕಿನ ಸಂತೆಕಸಲಗೆರೆ ಹೊರವಲಯದಲ್ಲಿರುವ ಭೂಮಿ ಸಿದ್ದೇಶ್ವರ ಸ್ವಾಮಿಯ ಜಾತ್ರೆಯು ಶುಕ್ರವಾರ ವಿಜೃಂಭಣೆಯಿಂದ ನಡೆಯಿತು.
ಭೂಮಿ ಸಿದ್ದೇಶ್ವರ ದೇವಾಲಯದ ಸುತ್ತಮುತ್ತಲಿನ ಏಳು ಗ್ರಾಮಗಳ ಜನರು ಸೇರಿ ಭಕ್ತಿಭಾವದಿಂದ ದೇವರಿಗೆ ಪೂಜೆ ಸಲ್ಲಿಸಿದರು. ದೇವಾಲಯದಲ್ಲಿ ಗುರುವಾರ ಸಂಜೆಯಿಂದಲೇ ದೇವರ ಪೂಜಾ ಕಾರ್ಯ ಆರಂಭವಾಗಿತ್ತು. ಸುತ್ತಲಿನ ಗ್ರಾಮಸ್ಥರು ಬಾಯಿಬೀಗ ಹಾಕಿಸಿಕೊಂಡು ದೇವಾಲಯಕ್ಕೆ ಬಂದು ಹರಕೆ ತೀರಿಸಿದರು.
ಬೆಳಗಿನ ಜಾವದಲ್ಲಿ ಏಕವಾರ ರುದ್ರಾಭಿಷೇಕ ಪೂಜೆ ನೆರವೇರಿಸಲಾಯಿತು. ನಂತರ ವಿವಿಧ ಹೂವುಗಳಿಂದ ಸ್ವಾಮಿಗೆ ಅಲಂಕಾರ ಮಾಡಲಾಗಿತ್ತು, ಸಾವಿರಾರು ಭಕ್ತರು ಬಂದು ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದರು.
ಸಂತಕಸಲಗೆರೆ, ಕಾರಸವಾಡಿ, ಮಂಗಲ, ಹನಿಯಂಬಾಡಿ, ಮೊತ್ತಹಳ್ಳಿ, ಕೊತ್ತತ್ತಿ ಹಾಗೂ ಬೇವಿನಹಳ್ಳಿಯ ಏಳು ಗ್ರಾಮಸ್ಥರು ತಮ್ಮ ಊರಿನಲ್ಲಿ ನಾಲ್ಕು ದಿಕ್ಕಿನಲ್ಲಿ ಮೂಲೆಮರಿ ಬಲಿಯೊಂದಿಗೆ ಪೂಜೆ ಮಾಡುತ್ತಾರೆ. ಮರಿಯ ಮಾಂಸವನ್ನು ಗ್ರಾಮದ ಪ್ರತಿಯೊಂದು ಮನೆಗೂ ಹಂಚಲಾಗುತ್ತದೆ. ಅದನ್ನು ಭೂಮಿಸಿದ್ದೇಶ್ವರನ ಸನ್ನಿಧಿಗೆ ತಂದು ಅಡುಗೆ ಮಾಡಿ ದೇವರಿಗೆ ನೈವೇದ್ಯ ಅರ್ಪಿಸುತ್ತಾರೆ.
ಮಾಡಿದ ಅಡುಗೆಯನ್ನು ಕುಟುಂಬಸ್ಥರು ಹಾಗೂ ನೆಂಟರಿಷ್ಟರೊಂದಿಗೆ ಇಲ್ಲಿಯೇ ಊಟ ಮಾಡಿ ಹೋಗುತ್ತಾರೆ. ದೇವಾಲಯದಲ್ಲಿ ಭಕ್ತರಿಗೆ ಪಾನಕ, ಮಜ್ಜಿಗೆ ಹಾಗೂ ಲಾಡು ಪ್ರಸಾದ ನೀಡಲಾಗುತ್ತಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.