ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ | 300ಕ್ಕೂ ಹೆಚ್ಚು ಸ್ಮಾರಕಗಳಿಗೆ ಕಾಯಕಲ್ಪ

ಆಂದೋಲನಕ್ಕೆ ಜಿ.ಪಂ ಇಸಿಒ ಶೇಖ್‌ ತನ್ವೀರ್‌ ಆಸೀಫ್‌ ಅವರೇ ಶಿಲ್ಪಿ, ವೀರಗಲ್ಲು, ಮಂಟಪ ರಕ್ಷಣೆ
Published 8 ಜನವರಿ 2024, 6:33 IST
Last Updated 8 ಜನವರಿ 2024, 6:33 IST
ಅಕ್ಷರ ಗಾತ್ರ

ಮಂಡ್ಯ: ಜಿಲ್ಲಾ ಪಂಚಾಯಿತಿ ಸಿಇಒ ಶೇಖ್‌ ತನ್ವೀರ್‌ ಆಸೀಫ್‌ ಅವರ ವಿಶೇಷ ಕಾಳಜಿಯಿಂದಾಗಿ ಜಿಲ್ಲೆಯ ನೂರಾರು ಸ್ಮಾರಕಗಳಿಗೆ ಕಾಯಕಲ್ಪದ ಕಾಲ ಬಂದಿದೆ. ರಾಜ್ಯದಲ್ಲೇ ಮೊದಲ ಬಾರಿಗೆ 300ಕ್ಕೂ ಹೆಚ್ಚು ಸ್ಮಾರಕಗಳ ಅಭಿವೃದ್ಧಿಯನ್ನು ನರೇಗಾ ಕ್ರಿಯಾ ಯೋಜನೆಗೆ ಸೇರಿಸಿದ್ದು ಹೊಸ ಮಾದರಿ ಸೃಷ್ಟಿಸಿದ್ದಾರೆ.

ಶತಶತಮಾನದಿಂದಲೂ ಇತಿಹಾಸದ ಕುರುಹನ್ನು ಕೂಗಿ ಹೇಳುತ್ತಿರುವ ಶಾಸನ, ಪ್ರಾಚೀನ ದೇವಾಲಯ, ಮಂಟಪ, ವೀರಗಲ್ಲು, ಮಹಾಸತಿಗಲ್ಲು, ಕಲ್ಯಾಣಿ, ಕೊಳ, ಶಿವಲಿಂಗ, ನಾಗರಕಲ್ಲುಗಳು ಜಿಲ್ಲೆಯಾದ್ಯಂತ ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಸ್ಮಾರಕಗಳು ದನದ ಕೊಟ್ಟಿಗೆಗಳಾಗಿವೆ. ಜಿಲ್ಲೆಯ ಸಿಇಒ ಆಗಿ ಬರುತ್ತಿದ್ದಂತೆ ಶೇಖ್‌ ತನ್ವೀರ್‌ ಆಸೀಫ್‌ ಅವರು ಎಲ್ಲೆಂದರಲ್ಲಿ ಸ್ಮಾಕರಗಳು ಬಿದ್ದಿರುವುದನ್ನು ಗುರುತಿಸಿದರು.

ಸ್ಮಾರಕಗಳ ರಕ್ಷಣೆಗೆ, ಸ್ವಚ್ಛತೆಗೆ, ಕಾಯಕಲ್ಪಕ್ಕೆ ಯೋಜನೆಯೊಂದನ್ನು ರೂಪಿಸಬೇಕೆಂದು ಅವರು ಯತ್ನಿಸಿದಾಗ ‘ವಿಶ್ವ ಪರಂಪರೆ ಸಪ್ತಾಹ’ ನೆರವಾಯಿತು. ಈ ಸಪ್ತಾಹವನ್ನು ಬಳಸಿಕೊಂಡು ಸ್ಮಾರಕಗಳ ರಕ್ಷಣೆಗೆ ಯೋಜನೆಯೊಂದನ್ನು ರೂಪಿಸಿದರು. ನ.15ರಿಂದ ನ.25ರವರೆಗೆ ಏಳು ದಿನಗಳ ಕಾಲ ಜಿಲ್ಲೆಯಾದ್ಯಂತ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಬೀಳು ಸುರಿಯುತ್ತಿರುವ ಸ್ಮಾರಕಗಳನ್ನು ಗುರುತಿಸುವ ಕಾರ್ಯಾಚರಣೆಯನ್ನು ಆಯಾ ಗ್ರಾಪಂ ಪಿಡಿಒಗಳಿಗೆ ಕೆಲಸ ವಹಿಸಿದರು.

ಜೊತೆಗೆ ತಾಪಂ ಇಒಗಳು, ಗ್ರಾಮ ಪಂಚಾಯಿತಿ ಪದಾಧಿಕಾರಿಗಳು, ಜನಪ್ರತಿನಿಧಿಗಳು, ಸಾರ್ವಜನಿಕರು, ವಿದ್ಯಾರ್ಥಿಗಳನ್ನು ಈ ಕಾರ್ಯಕ್ಕೆ ಬಳಸಿಕೊಳ್ಳುವಂತೆ ಸೂಚನೆ ನೀಡಿದರು. ‘ನಮ್ಮ ನಡೆ ಪರಂಪರೆಯ ಕಡೆ, ಬನ್ನಿ ನಮ್ಮ ಪರಂಪರೆಯನ್ನು ಸಂರಕ್ಷಿಸೋಣ’ ಎಂಬ ಆಂದೋಲನವನ್ನೇ ಆರಂಭಿಸಿದರು. ಆಂದೋಲನವನ್ನು ಆಯಾ ತಾಲ್ಲೂಕುಗಳ ಶಾಸಕರಿಂದ ಉದ್ಘಾಟನೆ ಮಾಡಿಸಿದರು.

ಸ್ಮಾರಕ ಗುರುತಿಸುವಿಕೆ: ನಿರ್ಲಕ್ಷ್ಯಕ್ಕೆ ಒಳಗಾಗಿರುವ ಸ್ಮಾರಕಗಳನ್ನು ಗುರುತಿಸಲು ಒಂದು ಕಾರ್ಯಸೂಚಿಯನ್ನು ಶೇಖ್‌ ತನ್ವೀರ್‌ ಆಸೀಫ್‌ ರೂಪಿಸಿದರು. ಸಪ್ತಾಹದ ಅಂಗವಾಗಿ ಆರಂಭದಲ್ಲಿ ಸ್ಮಾರಕಗಳನ್ನು ಗುರುತಿಸಿ ಅವುಗಳ ಛಾಯಾಚಿತ್ರ ತೆಗೆದು, ಒಟ್ಟುಗೂಡಿಸಿ ಜಿ.ಪಂಗೆ ಕಳುಹಿಸಬೇಕು. ನರೇಗಾ ಐಇಸಿ ಸಂಯೋಜಕರು ಇವುಗಳನ್ನು ಸಂಗ್ರಹಿಸಬೇಕು. ಇದರ ಉಸ್ತುವಾರಿಯನ್ನು ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕರು (ಗ್ರಾಮೀಣಾಭಿವೃದ್ಧಿ) ನೋಡಿಕೊಳ್ಳಬೇಕು.

ಸಪ್ತಾಹದ ಅಂಗವಾಗಿ ಪ್ರತಿ ಗ್ರಾಮ ಪಂಚಾಯಿತಿ ತಲಾ ಒಂದು ಸ್ಮಾರಕದಂತೆ ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಂಡು ಸ್ವಚ್ಛತೆ ಹಾಗೂ ರಕ್ಷಣೆ ಮಾಡಬೇಕು ಎಂಬ ಸೂಚನೆ ನೀಡಿದರು. ಇದರ ಫಲವಾಗಿ ಜಿಲ್ಲೆಯ 233 ಸ್ಮಾರಕಗಳು ಸ್ವಚ್ಛಗೊಂಡಿವೆ. ಜೊತೆಗೆ ಜಿಲ್ಲೆಯ ವಿವಿಧೆಡೆ ಹೊಸದಾಗಿ ಹಲವು ಕಲ್ಯಾಣಿ, ಮಂಟಪ, ಶಿವಲಿಂಗ, ವೀರಗಲ್ಲುಗಳು ಪತ್ತೆಯಾಗಿವೆ.

ಸ್ಮಾರಕಗಳ ಅಭಿವೃದ್ಧಿ ಗುರಿ ಇಟ್ಟಕೊಂಡಿರುವ ಸಿಇಒ ಇವುಗಳನ್ನು ಉದ್ಯೋಗ ಖಾತ್ರಿ ಯೋಜನೆ ಕ್ರಿಯಾ ಯೋಜನೆಗೆ ಸೇರಿಸಿ ಮಾದರಿಯೊಂದನ್ನು ಸೃಷ್ಟಿಸಿದ್ದಾರೆ. ಉದ್ಯೋಗ ಖಾತ್ರಿ ಯೋಜನೆ ಮೂಲಕ ಸ್ಮಾರಕ ಅಭಿವೃದ್ಧಿ ಪಡಿಸುವುದು ರಾಜ್ಯದಲ್ಲೇ ಮೊದಲ ಕಾರ್ಯಕ್ರಮವಾಗಿದೆ. ಇದೊಂದು ದೀರ್ಘಕಾಲದ ಯೋಜನೆಯಾಗಿದ್ದು ಮುಂದೆ ಯಾರೇ ಅಧಿಕಾರಿ ಬಂದರೂ ಅದನ್ನು ಮುಂದುವರಿಸಿಕೊಂಡು ಹೋಗುವ ಮುನ್ನೋಟ ಹಾಕಿಕೊಟ್ಟಿದ್ದಾರೆ. ಸದ್ಯ 300ಕ್ಕೂ ಹೆಚ್ಚು ಸ್ಮಾರಕಗಳು ನರೇಗಾ ಯೋಜನೆಯ ಕ್ರಿಯಾಯೋಜನೆಯಲ್ಲಿ ಸ್ಥಾನ ಪಡೆದಿವೆ.

ಆರಂಭದಲ್ಲಿ ತಾಲ್ಲೂಕಿನಲ್ಲಿ ಒಂದು ಸ್ಮಾರಕ ಅಭಿವೃದ್ಧಿ ಪಡಿಸಬೇಕು ಎಂಬ ಗುರಿಯೊಂದಿಗೆ ಈಗಾಗಲೇ ಶ್ರೀರಂಗಪಟ್ಟಣ ತಾಲ್ಲೂಕು, ಕಿರಂಗೂರಿನಲ್ಲಿರುವ ದಸರಾ ಮಂಟಪವನ್ನು ಅಭಿವೃದ್ಧಿಗೊಳಿಸಿದ್ದಾರೆ. ಬೀಳು ಸುರಿಯುತ್ತಿದ್ದ ಮಂಟಪ ಈಗ ಹೊಸ ರೂಪ ಪಡೆದಿದೆ, ಮಂಟಪದ ಪಕ್ಕದಲ್ಲೇ ಇದ್ದ ಕೊಳವನ್ನೂ ಆಕರ್ಷಕವಾಗಿ ಅಭಿವೃದ್ಧಿಗೊಳಿಸಲಾಗಿದೆ. ಜೊತೆಗೆ ಅಲ್ಲಿ ದೊರೆತಿರುವ ಪ್ರಾಚೀನ ಕಾಲದ ಶಿವಲಿಂಗವನ್ನು ಸಂರಕ್ಷಣೆ ಮಾಡಲಾಗಿದೆ.

ಸ್ವಚ್ಛತೆ ಕಂಡ ಸ್ಮಾರಕಗಳು: ವಿಶ್ವ ಪರಂಪರೆ ಸಪ್ತಾಹದ ಅಂಗವಾಗಿ ನಾಗಮಂಗಲ ತಾಲ್ಲೂಕಿನ ಆರಣಿ ಗ್ರಾಮದಲ್ಲಿ ಐತಿಹಾಸಿಕ ದೇವಾಲಯದ ಸ್ವಚ್ಛತೆ ಮಾಡಲಾಗಿದೆ. ದೇವಿಹಳ್ಳಿ ಗ್ರಾ.ಪಂ ವ್ಯಾಪ್ತಿಯ ಗೋಪಾಲಕೃಷ್ಣ ಮತ್ತು ನರಸಿಂಹಸ್ವಾಮಿ ದೇವಾಲಯಗಳ ರಕ್ಷಣೆಗೆ ಕ್ರಮವಹಿಸಲಾಗಿದೆ. ದೇವಲಾಪುರ ಹೋಬಳಿಯ ತಿಮ್ಮನಹಳ್ಳಿ ಗ್ರಾಮದಲ್ಲಿ ವೀರಗಲ್ಲು, ಮಹಾಸತಿ ಕಲ್ಲು ಗಳು ಸೇರಿದಂತೆ ಇತಿಹಾಸ ಸಾರುವ ಕಲ್ಲುಗಳನ್ನು ರಕ್ಷಣೆ ಮಾಡಲಾಗಿದೆ.

ಶ್ರೀರಂಗಪಟ್ಟಣ ತಾಲ್ಲೂಕಿನಲ್ಲಿ ಟಿ.ಎಂ. ಹೊಸೂರು ಬಳಿ, ನಾಗರಘಟ್ಟ ಪ್ರದೇಶದಲ್ಲಿ ದ್ರಾವಿಡ ಶೈಲಿಯ ಐತಿಹಾಸಿಕ ವರದರಾಜಸ್ವಾಮಿ ದೇಗುಲ, ಅಚ್ಚಪ್ಪನಕೊಪ್ಪಲು (ವಿದ್ಯಾನಗರ) ಬಳಿ, ದಿವಾನ್ ಪೂರ್ಣಯ್ಯ ಅವರಿಂದ ಸ್ಥಾಪಿಸಲ್ಪಟ್ಟ ಜೋಸಯ್ಯ ವೆಬ್ ಸ್ಮಾರಕದ ಆವರಣ ಸ್ವಚ್ಛಗೊಳಿಸಲಾಗಿದೆ. ಹುಲಿಕೆರೆ ಬಳಿ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಗಂಗರ ಕಾಲದ ಜೈನ ಮಂದಿರದ ಅವಶೇಷಗಳನ್ನು ರಕ್ಷಣೆ ಮಾಡಲಾಗಿದೆ.

ಮಳವಳ್ಳಿ ತಾಲ್ಲೂಕಿನ ಮಾರೇಹಳ್ಳಿ ಬಳಿಯ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನ, ಡಿ.ಹಲಸಹಳ್ಳಿಯ ಗವಿಮಠ, ರಾಗಿಬೊಮ್ಮನಹಳ್ಳಿಯ ಅಮೃತೇಶ್ವರ, ಹೊಸಹಳ್ಳಿಯ ಬಸವೇಶ್ವರ, ಲಿಂಗಪಟ್ಟಣದ ಬಸಪ್ಪನ, ಕಲ್ಕುಣಿಯ ರಾಮ ಮಂದಿರದ ಬಳಿ ವೀರಗಲ್ಲು, ಧನಗೂರಿನ ಗೌರೇಶ್ವರಿ, ಯತ್ತಂಬಾಡಿಯ ಪುರಾತನ ಕಾಲದ ಕೊಳ, ಹಾಡ್ಲಿಯ ಲಿಂಗದಗುಡಿ, ನಿಟ್ಟೂರಿನ ವಿಷ್ಣು ದೇವಸ್ಥಾನ, ಬ್ಯಾಡರಹಳ್ಳಿಯ ತಾಳವಾ ದೇವಸ್ಥಾನವನ್ನು ಸ್ವಚ್ಛಗೊಳಿಸಲಾಗಿದೆ.

ಮದ್ದೂರು ತಾಲ್ಲೂಕಿನ ಕೂಳಗೆರೆಯ ಗ್ರಾಮದಲ್ಲಿರುವ ವೀರಗಲ್ಲು ರಕ್ಷಣೆ, ಹೊಸಕೆರೆ ಗ್ರಾಮದ ಈಶ್ವರ ದೇವಸ್ಥಾನ, ಆತಗೂರು ಗ್ರಾಮದ ಚನ್ನಲಿಂಗೇಶ್ವರ ಸ್ವಾಮಿ ದೇವಸ್ಥಾನ ಮುಂತಾದವು ಸ್ವಚ್ಛತೆ ಕಂಡಿವೆ. ಜೊತೆಗೆ ಕೆ.ಆರ್‌.ಪೇಟೆ ಹಾಗೂ ಪಾಂಡವಪುರ ತಾಲ್ಲೂಕಿನ ಹಲವು ದೇಗುಲಗಳು, ಕಲ್ಯಾಣಿಗಳು ಸ್ವಚ್ಛತೆ ಕಂಡಿವೆ.

ಪ್ರಜಾವಾಣಿ ಬಳಗ: ಎಂ.ಎನ್‌.ಯೋಗೇಶ್‌, ಗಣಂಗೂರು ನಂಜೇಗೌಡ, ಬಲ್ಲೇನಹಳ್ಳಿ ಮಂಜುನಾಥ್‌, ಅಶೋಕ್‌ ಕುಮಾರ್‌, ಟಿ.ಕೆ.ಲಿಂಗರಾಜು, ಉಲ್ಲಾಸ್‌

ಮಾರೇಹಳ್ಳಿ ಗ್ರಾಮದ ಲಕ್ಷ್ಮಿನರಸಿಂಹ ದೇವಾಲಯದಲ್ಲಿ ಆವರಣದಲ್ಲಿರುವ ಮಂಟಪದ ಹೊಸ ರೂಪ
ಮಾರೇಹಳ್ಳಿ ಗ್ರಾಮದ ಲಕ್ಷ್ಮಿನರಸಿಂಹ ದೇವಾಲಯದಲ್ಲಿ ಆವರಣದಲ್ಲಿರುವ ಮಂಟಪದ ಹೊಸ ರೂಪ
ಮದ್ದೂರು ತಾಲ್ಲೂಕು ಹೊಸಕೆರೆ ಗ್ರಾಮದ ಈಶ್ವರ ದೇವಾಲಯದ ಆವರಣ ಸ್ವಚ್ಛಗೊಳಿಸುತ್ತಿರುವುದು
ಮದ್ದೂರು ತಾಲ್ಲೂಕು ಹೊಸಕೆರೆ ಗ್ರಾಮದ ಈಶ್ವರ ದೇವಾಲಯದ ಆವರಣ ಸ್ವಚ್ಛಗೊಳಿಸುತ್ತಿರುವುದು
ಶೇಖ್‌ ತನ್ವೀರ್‌ ಆಸೀಪ್‌
ಶೇಖ್‌ ತನ್ವೀರ್‌ ಆಸೀಪ್‌
ತೈಲೂರು ವೆಂಕಟಕೃಷ್ಣ
ತೈಲೂರು ವೆಂಕಟಕೃಷ್ಣ
ಕಲೀಂ ಉಲ್ಲಾ
ಕಲೀಂ ಉಲ್ಲಾ
ವಜ್ರಪ್ರಸಾದ್‌
ವಜ್ರಪ್ರಸಾದ್‌

Highlights - ಸ್ಮಾರಕಗಳ ರಕ್ಷಣೆ, ಸಂಗ್ರಹಕ್ಕೆ ಹೊಸ ಕಾರ್ಯಕ್ರಮ ಮಾದರಿಯಾದ ಮಂಡ್ಯ ಜಿ.ಪಂ ಸಿಇಒ ಯೋಜನೆ ಆಂದೋನಕ್ಕೆ ಇತಿಹಾಸ ಸಂಶೋಧಕರಿಂದ ಮಾರ್ಗದರ್ಶನ

ಇತಿಹಾಸ ಅಧ್ಯಯನಕ್ಕೆ ಸ್ಮಾರಕಗಳೇ ಆಧಾರ. ಮುಂದಿನ ಪೀಳಿಗೆಗೆ ಸ್ಮಾರಕಗಳನ್ನು ಉಳಿಸುವುದು ಪ್ರತಿಯೊಬ್ಬರ ಜವಾಬ್ದಾರಿ. ಆಂದೋಲನಕ್ಕೆ ಜಿಲ್ಲೆಯಾದ್ಯಂತ ಉತ್ತಮ ಸ್ಪಂದನೆ ಸಿಕ್ಕಿದೆ – ಶೇಖ್‌ ತನ್ವೀರ್‌ ಆಸೀಪ್‌ ಜಿಲ್ಲಾ ಪಂಚಾಯಿತಿ ಸಿಇಒ

ಇತಿಹಾಸ ಅಧ್ಯಯನಕ್ಕೆ ನೆರವು ಸ್ಮಾರಕಗಳ ಸ್ವಚ್ಛತೆ ಅಭಿವೃದ್ಧಿಯಲ್ಲಿ ಸ್ಥಳೀಯ ವಿದ್ಯಾರ್ಥಿಗಳನ್ನು ಬಳಸಿಕೊಳ್ಳಲಾಗಿದೆ. ಆಯಾ ತಾಲ್ಲೂಕುಗಳ ಶಾಲಾ ಕಾಲೇಜು ವಿದ್ಯಾರ್ಥಿಗಳು ಸ್ಮಾರಕಗಳ ಬಳಿ ಭೇಟಿ ನೀಡಿ ಸ್ವಚ್ಛತಾ ಕಾರ್ಯದಲ್ಲಿ ಕೈ ಜೋಡಿಸಿದ್ದಾರೆ. ವಿದ್ಯಾರ್ಥಿಗಳು ಸ್ಮಾರಕಗಳ ಅಧ್ಯಯನಕ್ಕೂ ಅವಕಾಶ ಕಲ್ಪಿಸಲಾಗಿದೆ. ಸ್ಮಾರಕಗಳನ್ನು ಗಂಭೀರವಾಗಿ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಸಂಶೋಧಕರಿಗೆ ಪಿ.ಎಚ್‌ಡಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹದ ಜೊತೆಗೆ ಗೌರವಧನ ನೀಡುವುದಕ್ಕೂ ಸಿಇಒ ಅವರು ಕಾರ್ಯಕ್ರಮ ರೂಪಿಸಿದ್ದಾರೆ. ಆ ಮೂಲಕ ಸ್ಮಾರಕಗಳ ಉಳಿವಿನ ಆಂದೋಲನದಲ್ಲಿ ಯುವಪೀಳಿಗೆಯನ್ನೂ ತೊಡಗಿಸಿಕೊಂಡಿದ್ದಾರೆ. ಆಂದೋಲನಕ್ಕೆ ಇತಿಹಾಸ ತಜ್ಞರ ಮಾರ್ಗದರ್ಶನವನ್ನೂ ಪಡೆಯಲಾಗಿದ್ದು ಮುಂದಿನ ಹಲವು ವರ್ಷಗಳವರೆಗೆ ಸ್ಮಾರಕಗಳ ಉಳಿವಿಗೆ ಇದು ಸಹಕಾರಿಯಾಗಲಿದೆ.

- ಸಾರ್ವಜನಿಕರಿಗೆ ಸ್ಮಾರಕ ಜಾಗೃತಿ ಜಿಲ್ಲೆಯ ಹಲವು ಹಳ್ಳಿಗಳಲ್ಲಿ ಸ್ಮಾರಕಗಳನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ಮಂಟಪಗಳನ್ನು ಎತ್ತಿನ ಗಾಡಿ ನಿಲ್ಲಿಸುವ ದನ ಕಟ್ಟುವ ಜಾಗಗಳನ್ನಾಗಿ ಪರಿವರ್ತಿಸಿದ್ದಾರೆ. ಈ ಬಗ್ಗೆ ಜಾಗೃತಿ ಮೂಡಿಸುವುದು ಸಿಇಒ ಅವರ ಪ್ರಥಮ ಆದ್ಯತೆಯಾಗಿದೆ. ಇದಕ್ಕಾಗಿ ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರು ಅಧ್ಯಕ್ಷರು ಗ್ರಾಮಸ್ಥರ ಸಹಕಾರ ಪಡೆಯಲಾಗಿದ್ದು ಸ್ಮಾರಕಗಳ ರಕ್ಷಣೆ ಮೂಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಸ್ಮಾರಕಗಳ ಪತ್ತೆ ರಕ್ಷಣೆ ಸಂಬಂಧ ತಾಲ್ಲೂಕು ಪಂಚಾಯಿತಿ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಹಲವು ಹಂತದ ತರಬೇತಿ ನೀಡಲಾಗಿದೆ. ಅಧಿಕಾರಿಗಳಿಗೆ ರಾಜ್ಯ ಪ್ರಾಚ್ಯವಸ್ತು ಸಂಗ್ರಹಾಲಯ ಇಲಾಖೆ ಪುರಾತತ್ವ ಇಲಾಖೆ ಅಧಿಕಾರಿಗಳನ್ನು ಕರೆಸಿ ಅಧಿಕಾರಿಗಳಿಗೆ ತರಬೇತಿ ಕೊಡಿಸಿದ್ದಾರೆ.

ಜನಾಭಿಪ್ರಾಯ ಸಿಇಒ ಪ್ರಯತ್ನ ಶ್ಲಾಘನೀಯ ಮಂಡ್ಯ ಜಿಲ್ಲೆಯಲ್ಲಿ ಸಾವಿರಾರು ಶಾಸನ ಸ್ಮಾರಕಗಳಿವೆ. ಒಂದೊಂದು ಹಳ್ಳಿಯಲ್ಲೂ ನೂರಾರು ಶಾಸನಗಳು ದೊರೆಯುತ್ತವೆ. ಇಲ್ಲಿಯವರೆಗೂ ಅವುಗಳ ರಕ್ಷಣಾ ಕಾರ್ಯ ಆಗಿಲ್ಲ. ಜನರು ಜನಪ್ರತಿನಿಧಿಗಳು ಅಧಿಕಾರಿ ವರ್ಗವೂ ಆಸಕ್ತಿ ತೋರಿಸಿರಲಿಲ್ಲ. ಆದರೆ ಜಿ.ಪಂ ಸಿಇಒ ಶೇಖ್‌ ತನ್ವೀರ್‌ ಆಸೀಫ್‌ ಅವರು ಸ್ಮಾರಕಗಳ ಉಳಿವಿಗೆ ಗಟ್ಟಿ ಯೋಜನೆ ರೂಪಿಸಿರುವುದು ಶ್ಲಾಘನೀಯ. ಅವರ ಯತ್ನಕ್ಕೆ ನಾವೆಲ್ಲರೂ ಕೈಜೋಡಿಸೋಣ.– ತೈಲೂರು ವೆಂಕಟಕೃಷ್ಣ ಇತಿಹಾಸ ಸಂಶೋಧಕ ಮಂಡ್ಯ ಮುಂದಿನ ಪೀಳಿಗೆಗೆ ಅನುಕೂಲಶಾಸನಗಳ ಉಳಿಸಿ ಎಂದು ನಾನು ಮೊದಲಿನಿಂದಲೂ ಕೂಗುತ್ತಾ ಬಂದಿದ್ದೇನೆ. ವಿದ್ಯಾರ್ಥಿಗಳಿಗೆ ಸ್ಮಾರಕ ಪ್ರವಾಸ ಮಾಡಿಸಿ ಅರಿವು ಮೂಡಿಸುವ ಪ್ರಯತ್ನ ಮಾಡುತ್ತಾ ಬಂದಿದ್ದೇನೆ. ಸಿಇಒ ಅವರು ಶಾಸನಗಳ ಉಳಿವಿಗೆ ದೀರ್ಘಕಾಲದ ಯೋಜನೆಯೊಂದನ್ನು ರೂಪಿಸಿರುವುದು ಸಂತಸ ತಂದಿದೆ. ನರೇಗಾ ಯೋಜನೆಯಲ್ಲಿ ಸೇರಿಸಿರುವುದು ದಿಟ್ಟ ಕ್ರಮ. ಇದರಿಂದ ಮುಂದಿನ ಪೀಳಿಗೆಗೆ ಅನುಕೂಲವಾಗಲಿದೆ.–ಕಲೀಂ ಉಲ್ಲಾ ಇತಿಹಾಸ ತಜ್ಞ ನಾಗಮಂಗಲ ಸ್ಮಾರಕಗಳಿಗೆ ಮರುಜೀವವಿಶ್ವ ಪರಂಪರೆ ಸಪ್ತಾಹದ ಅಡಿಯಲ್ಲಿ ಹಲವು ಜೈನ ಬಸದಿ ಮಂದಿರಗಳನ್ನು ಸ್ಮಾರಕಗಳ ಸ್ವಚ್ಛತೆ ರಕ್ಷಣೆ ಮಾಡುತ್ತಿರುವುದು ಸಂತಸ ತಂದಿದೆ. ಇತಿಹಾಸ ಪ್ರಸಿದ್ಧ ಹೊಯ್ಷಳ ದೊರೆ ವಿಷ್ಣುವರ್ಧನನ ಕಾಲದ ಬಸದಿಗಳಿಗೆ ಮರುಜೀವ ನೀಡಲಾಗುತ್ತಿದೆ. ಯುವಜನರಿಗೆ ಅರಿವು ಮೂಡಿಸಲಾಗತ್ತಿದೆ. – ಎಚ್.ಎನ್.ವಜ್ರಪ್ರಸಾದ್ ಜೈನಮುಖಂಡರು ಕೆ.ಆರ್‌.ಪೇಟೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT