ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳೆಗಟ್ಟುತ್ತಿದೆ ಮದ್ದೂರಮ್ಮ ದನಗಳ ಜಾತ್ರೆ

ರಾಸುಗಳಿಗೆ ಕುಡಿಯುವ ನೀರು, ನೆರಳಿನ ವ್ಯವಸ್ಥೆ ಮಾಡಲು ರೈತರ ಒತ್ತಾಯ
Published 28 ಏಪ್ರಿಲ್ 2024, 5:48 IST
Last Updated 28 ಏಪ್ರಿಲ್ 2024, 5:48 IST
ಅಕ್ಷರ ಗಾತ್ರ

ಮದ್ದೂರು: ಪಟ್ಟಣದ ಗ್ರಾಮದೇವತೆ ಮದ್ದೂರಮ್ಮನ ಜಾತ್ರಾ ಮಹೋತ್ಸವದ ಅಂಗವಾಗಿ ನಡೆಯುವ ಭಾರಿ ದನಗಳ ಜಾತ್ರೆಯು ಕಳೆಗಟ್ಟುತ್ತಿದೆ. ಜಿಲ್ಲೆ, ಹೊರಜಿಲ್ಲೆಗಳಿಂದ ಪಟ್ಟಣದತ್ತ ಬರುತ್ತಿರುವ ರಾಸುಗಳು ಕಲರವ ಸೃಷ್ಟಿಸುತ್ತಿವೆ.

ಮದ್ದೂರು ಜಾನುವಾರುಗಳ ಜಾತ್ರೆ ಈ ಮೊದಲೇ ನಡೆಯಬೇಕಾಗಿತ್ತು. ಆದರೆ, ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಾತ್ರೆಗೆ ಅನುಮತಿ ಕೊಡಲು ಜಿಲ್ಲಾಡಳಿತ ನಿರಾಕರಿಸಿತ್ತು. ಹೀಗಾಗಿ ಚುನಾವಣೆ ಮುಗಿದ ಮರುದಿನವೇ ದನಗಳ ಜಾತ್ರೆ ಆರಂಭಗೊಂಡಿದ್ದು ರಾಸುಗಳು ಪಟ್ಟಣದತ್ತ ದಾಂಗುಡಿ ಇಡುತ್ತಿವೆ

ಪಟ್ಟಣದ ಪೇಟೆಬೀದಿ, ಸಂಜಯ ಚಿತ್ರಮಂದಿರದ ಬಳಿ, ತಾಲ್ಲೂಕು ಕಚೇರಿಯ ಹಿಂಭಾಗ, ತಾಲ್ಲೂಕು ಕ್ರೀಡಾಂಗಣದ ಬಳಿ ಸೇರಿದಂತೆ ಹಲವು ಕಡೆಗಳಲ್ಲಿ ಹಾಗೂ ರಸ್ತೆಗಳ ಇಕ್ಕೆಲಗಳಲ್ಲಿ ರೈತರು ತಮ್ಮ ರಾಸುಗಳನ್ನು ತಂದು ಕಟ್ಟುತ್ತಿದ್ದಾರೆ.

ತಾಲ್ಲೂಕು, ಜಿಲ್ಲೆಯ ವಿವಿಧ ಹಳ್ಳಿಗಳ ರೈತರು ತಮ್ಮ ರಾಸುಗಳೊಂದಿಗೆ ಜಾತ್ರೆಗೆ ಬರುತ್ತಿದ್ದಾರೆ. ಅಲ್ಲದೇ ರಾಮನಗರ, ತುಮಕೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಸೇರಿದಂತೆ ತಮಿಳುನಾಡಿನ ಹಲವು ಭಾಗಗಳಿಂದ ರೈತರು ತಮ್ಮ ರಾಸುಗಳೊಂದಿಗೆ ಬಂದು ವ್ಯಾಪಾರ, ವಹಿವಾಟು ನಡೆಸುತ್ತಿದ್ದಾರೆ.

ಹಳ್ಳಿಕಾರ್ ಸೇರಿದಂತೆ ಹಲವು ಬಗೆಯ ರಾಸುಗಳು ಜಾತ್ರೆಗೆ ಬರುತ್ತಿವೆ. ಮದ್ದೂರಮ್ಮನ ದನಗಳ ಜಾತ್ರೆಗೆ ಐತಿಹಾಸಿಕ ಮಹತ್ವವಿದ್ದು ದನಗಳ ಜಾತ್ರೆಯಲ್ಲಿ ಕೋಟ್ಯಂತರ ರೂಪಾಯಿ ವಹಿವಾಟು ನಡೆಯುತ್ತದೆ. ರೈತರು ತಾವು ಜತನದಿಂದ ಸಾಕಿ, ಸಲುಹಿರುವ ರಾಸುಗಳನ್ನು ಪೆಂಡಾಲ್‌ ಹಾಕಿ, ಅಲಂಕಾರ ಮಾಡಿ ಕಟ್ಟುತ್ತಿದ್ದಾರೆ.

ಇಲ್ಲಿಗೆ ಬರುವ ರೈತರು ತಮ್ಮ ರಾಸುಗಳನ್ನು ವಿವಿಧ ರೀತಿಯ ಬಣ್ಣ, ಬ್ಯಾಂಡ್‌ಗಳಿಂದ ಸಿಂಗರಿಸಿದ್ದಾರೆ. ನೆರಳಿಗಾಗಿ ಶಾಮಿಯಾನ ಹಾಕಿ, ದೀಪಾಲಂಕಾರ ಮಾಡಿದ್ದಾರೆ. ಜೊತೆಗೆ ಧ್ವನಿ ವರ್ಧಕವನ್ನೂ ಹಾಕಿ ವಿಶೇಷ ಆಕರ್ಷಣೆ ತಂದಿದ್ದಾರೆ.

ನೀರಿನ ಕೊರತೆ: ಈ ಬಾರಿ ಎಲ್ಲೆಡೆ ಬರ ಪರಿಸ್ಥಿತಿ ಇರುವುದರಿಂದ ಜಾತ್ರೆಗೆ ಬರುವ ಸಾವಿರಾರು ರಾಸುಗಳಿಗೆ ಕುಡಿಯುವ ನೀರಿನ ಕೊರತೆ ಉಂಟಾಗುವ ಸಾಧ್ಯತೆ ಇದೆ. ಬಿಸಿಲು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಸಮರ್ಪಕವಾದ ನೆರಳಿನ ವ್ಯವಸ್ಥೆಯನ್ನು ತಾಲ್ಲೂಕು ಮಾಡಬೇಕು ಎಂದು ರೈತರು ಒತ್ತಾಯಿಸುತ್ತಾರೆ.

‘ಮುಂಗಾರು ಆರಂಭದಲ್ಲಿ ನಡೆಯುವ ಈ ಜಾತ್ರೆ ಕೃಷಿಕರ ಪಾಲಿಗೆ ಮಹತ್ವದ್ದಾಗಿದೆ. ತಾಲ್ಲೂಕು ಆಡಳಿತವು ರಾಸುಗಳಿಗೆ ಸೂಕ್ತ ಸ್ಥಳಾವಕಾಶ, ನೀರಿನ, ನೆರಳಿನ ವ್ಯವಸ್ಥೆ ಹಾಗೂ ತಾತ್ಕಾಲಿಕ ಪಶು ಆಸ್ಪತ್ರೆ ವ್ಯವಸ್ಥೆ ಮಾಡಬೇಕು’ ಎಂದು ರೈತ ಮುಖಂಡ ನ.ಲಿ.ಕೃಷ್ಣ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT