ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬರ ನಿರ್ವಹಣೆಗೆ ₹ 10.50 ಕೋಟಿ ಬಿಡುಗಡೆ: ಚಲುವರಾಯಸ್ವಾಮಿ

ಗಣರಾಜ್ಯೋತ್ಸವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ ಅಭಿಮತ
Published 26 ಜನವರಿ 2024, 15:15 IST
Last Updated 26 ಜನವರಿ 2024, 15:15 IST
ಅಕ್ಷರ ಗಾತ್ರ

ಮಂಡ್ಯ: ‘ಜಿಲ್ಲೆಯ ಏಳೂ ತಾಲ್ಲೂಕುಗಳಲ್ಲಿ ಬರಗಾಲ ಕಾಡುತ್ತಿದ್ದು ಪರಿಸ್ಥಿತಿ ನಿರ್ವಹಣೆಗೆ ನಮ್ಮ ಸರ್ಕಾರ ಜಿಲ್ಲೆಗೆ ₹ 10.50 ಕೋಟಿ ಬಿಡುಗಡೆ ಮಾಡಿದೆ. ಜನರ ಸಂಕಷ್ಟಗಳಿಗೆ ನಮ್ಮ ಸರ್ಕಾರ ಸ್ಪಂದಿಸಲಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ ಹೇಳಿದರು.

ನಗರದ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಮೈದಾನದಲ್ಲಿ ಶುಕ್ರವಾರ ನಡೆದ 75ನೇ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

‘ಬರ ಪರಿಸ್ಥಿತಿಯಲ್ಲಿ ರೈತರಿಗೆ, ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅನ್ನಭಾಗ್ಯ ಯೋಜನೆಯಡಿ ಪ್ರತಿ ವ್ಯಕ್ತಿಗೆ 5 ಕೆ.ಜಿ ಅಕ್ಕಿ ಹಾಗೂ 5 ಕೆ.ಜಿ. ಅಕ್ಕಿಗೆ ಬದಲಾಗಿ ನಗದು 4,36,510 ಫಲಾನುಭವಿಗಳಿಗೆ ₹137.50 ಕೋಟಿ ಹಣವನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗಿದೆ’ ಎಂದರು.

‘ಗೃಹಜ್ಯೋತಿ ಯೋಜನೆಯಡಿ 4,64,303 ಗ್ರಾಹಕರು ಹೆಸರು ನೋಂದಾಯಿಸಿಕೊಂಡಿದ್ದು, 8.90 ಕೋಟಿ ಯೂನಿಟ್ಸ್ ವಿದ್ಯುಚ್ಛಕ್ತಿಯನ್ನು ಗ್ರಾಹಕರಿಗೆ ಉಚಿತವಾಗಿ ಒದಗಿಸಿ ₹76.22 ಕೋಟಿ ಪಾವತಿಸಲಾಗಿದೆ, ಗೃಹಲಕ್ಷ್ಮಿ ಯೋಜನೆಯಡಿ 4,35,820 ಮಹಿಳೆಯರಿಗೆ ತಲಾ ₹2 ಸಾವಿರದಂತೆ ₹89.17 ಕೋಟಿ ಪಾವತಿಸಲಾಗಿದೆ’ ಎಂದರು.

‘ತಹಶೀಲ್ದಾರ್, ಉಪವಿಭಾಗಾಧಿಕಾರಿ ಮತ್ತು ಜಿಲ್ಲಾಧಿಕಾರಿಗಳ ನ್ಯಾಯಾಲಯಗಳಲ್ಲಿ ಬಾಕಿ ಇದ್ದ 4,600 ಕ್ಕೂ ಹೆಚ್ಚು ಕಂದಾಯ ನ್ಯಾಯಾಲಯ ಪ್ರಕರಣಗಳನ್ನು ಕಳೆದ 6 ತಿಂಗಳುಗಳಲ್ಲಿ ವಿಲೇವಾರಿ ಮಾಡುವ ಮೂಲಕ ಮಂಡ್ಯ ಜಿಲ್ಲೆಯು ರಾಜ್ಯದಲ್ಲಿಯೇ ಮೊದಲ ಸ್ಥಾನದಲ್ಲಿದೆ’ ಎಂದರು.

ಶಾಸಕ ಪಿ.ರವಿಕುಮಾರ್, ಜಿಲ್ಲಾಧಿಕಾರಿ ಕುಮಾರ್, ಜಿ.ಪಂ. ಸಿಇಒ ಶೇಖ್ ತನ್ವೀರ್‌ ಆಸಿಫ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಎಲ್.ನಾಗರಾಜು ಭಾಗವಹಿಸಿದ್ದರು.

ಆಕರ್ಷಕ ಪಥ ಸಂಚಲನ: ಗಣರಾಜ್ಯೋತ್ಸವ ಅಂಗವಾಗಿ ನಡೆದ ಆಕರ್ಷಕ ಪಥಸಂಚಲನ ಗಮನ ಸೆಳೆಯಿತು. ಜಿಲ್ಲಾ ಸಶಸ್ತ್ರ ಮೀಸಲು ಪಡೆ, ಜಿಲ್ಲಾ ನಾಗರಿಕ ಪೊಲೀಸ್ ಪಡೆ, ಗೃಹ ರಕ್ಷಕ ದಳ, ಅಬಕಾರಿ ದಳ ಸೇರಿದಂತೆ ವಿವಿಧ ಶಾಲೆಗಳಿಂದ ಒಟ್ಟು 24 ತಂಡಗಳು ಪಥ ಸಂಚಲನದಲ್ಲಿ ಭಾಗವಹಿಸಿದ್ದವು.

ಇದರಲ್ಲಿ ಅಬಕಾರಿ ದಳ ಪ್ರಥಮ ಬಹುಮಾನ ಪಡೆದರೆ, ಗೃಹರಕ್ಷಕ ದಳ ದ್ವಿತೀಯ ಬಹುಮಾನ ಪಡೆದವು. ಎನ್‌ಸಿಸಿ ವಿಭಾಗದಲ್ಲಿ ಪಿಇಎಸ್ ಪದವಿ ಕಾಲೇಜು ಬಾಲಕಿಯರು ಪ್ರಥಮ, ಪಿಇಎಸ್ ಬಾಲಕರ ಪದವಿ ಕಾಲೇಜು ದ್ವಿತೀಯ, ಅನಿಕೇತನ ಪದವಿ ಪೂರ್ವ ಕಾಲೇಜು ಹಾಗೂ ಪ್ರೌಢಶಾಲಾ ವಿಭಾಗದಲ್ಲಿ ಸೇಂಟ್ ಜೋಸೆಫ್ ಶಾಲೆ ಪ್ರಥಮ, ಕಾರ್ಮೆಲ್‌ ಕಾನ್ವೆಂಟ್ ದ್ವಿತೀಯ, ಕೆಪಿಎಸ್ ಪ್ರೌಢಶಾಲೆ ತೃತೀಯ ಬಹುಮಾನ ಪಡೆದವು.

ಹಿರಿಯ ಪ್ರಾಥಮಿಕ ಶಾಲೆಗಳ ವಿಭಾಗದಲ್ಲಿ ಅಭಿನವ ಭಾರತಿ ಪ್ರಾಥಮಿಕ ಶಾಲೆ ಪ್ರಥಮ, ಕಾರ್ಮೆಲ್‌ ಕಾನ್ವೆಂಟ್ ಶಾಲೆ ದ್ವಿತೀಯ, ಸೇಂಟ್ ಜೋಸೆಫ್ ಶಾಲೆ ತೃತೀಯ ಬಹುಮಾನ ಪಡೆದವು.

ಸಾಂಸ್ಕೃತಿಕ ಕಾರ್ಯಕ್ರಮಗಳು: ವಿದ್ಯಾರ್ಥಿಗಳ ಸಾಮೂಹಿಕ ನೃತ್ಯ ದೇಶಭಕ್ತಿ ಮೂಡಿಸಿದವು. ವಿಮಲಾ ಹಿರಿಯ ಪ್ರಾಥಮಿಕ ಶಾಲೆಯ 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ‘ಭಾರತಾಂಬೆ ಇಂದು ನಿನ್ನ ಜನುಮ ದಿನ’ ಗೀತೆಗೆ ಹೆಜ್ಜೆ ಹಾಕಿದರು. ಕೆಪಿಎಸ್‌, ಚೈತನ್ಯ ಟೆಕ್ನೊ, ಅಚೀವರ್ಸ್‌ ಇಂಟರ್‌ನ್ಯಾಷನಲ್‌ ಶಾಲೆಯ ಮಕ್ಕಳು ನೃತ್ಯ ಪ್ರದರ್ಶಿಸಿದರು.

ಶಾಲಾ ಮಕ್ಕಳು ಪ್ರದರ್ಶಿಸಿದ ನೃತ್ಯ ಗಮನ ಸೆಳೆಯಿತು
ಶಾಲಾ ಮಕ್ಕಳು ಪ್ರದರ್ಶಿಸಿದ ನೃತ್ಯ ಗಮನ ಸೆಳೆಯಿತು

ಅಭಿವೃದ್ಧಿ ಯೋಜನೆ ವರ್ಣಿಸಿದ ಉಸ್ತುವಾರಿ ಸಚಿವ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಕರ್ಷಕ ಪಥ ಸಂಚಲನ, ಬಹುಮಾನ ವಿತರಣೆ

ಸಂವಿಧಾನ ಜಾಗೃತಿ ರಥಕ್ಕೆ ಚಾಲನೆ

ಗಣರಾಜ್ಯೋತ್ಸವ ಸಮಾರಂಭದಲ್ಲೇ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಸಂವಿಧಾನ ಜಾಗೃತಿ ರಥ ಸಂಚಾರಕ್ಕೆ ಚಾಲನೆ ನೀಡಿದರು. ಸಂವಿಧಾನದ ಮೌಲ್ಯಗಳನ್ನು ಒಳಗೊಂಡ ವಿಷಯಗಳನ್ನು ಎಲ್‌ಇಡಿ ಪರದೆಯ ಮೂಲಕ ಪ್ರದರ್ಶನ ಮಾಡಲಾಯಿತು. ಜಾಗೃತಿ ರಥದಲ್ಲಿ ಶಿವಪುರ ಧ್ವಜ ಸತ್ಯಾಗ್ರಹ ಸೌಧ ಗೌತಮ ಬುದ್ಧ ಡಾ.ಬಿ.ಆರ್‌. ಅಂಬೇಡ್ಕರ್ ಬಸವೇಶ್ವರರ ಪ್ರತಿಮೆ ರೂಪಿಸಲಾಗಿತ್ತು. ಇದು ಜಿಲ್ಲೆಯಾದ್ಯಂತ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಚಾರ ನಡೆಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT