ಮಂಡ್ಯ: ‘ಕಳೆದ ನಾಲ್ಕು ವರ್ಷಗಳಿಂದ ಪಕ್ಷೇತರ ಸಂಸದೆಯಾಗಿ ಒಬ್ಬಂಟಿ ಹೋರಾಟ ನಡೆಸಿದ್ದೇನೆ. ಇನ್ನು ಮುಂದೆ ಜಿಲ್ಲೆಯ ಅಭಿವೃದ್ಧಿಯ ದೃಷ್ಟಿಯಿಂದ ಬಿಜೆಪಿಗೆ ಬೆಂಬಲ ನೀಡುತ್ತೇನೆ’ ಎಂದು ಸಂಸದೆ ಸುಮಲತಾ ಶುಕ್ರವಾರ ಘೋಷಣೆ ಮಾಡಿದರು.
‘ಪ್ರಧಾನಿ ನರೇಂದ್ರ ಮೋದಿ ಅವರ ಸ್ಥಿರ ನಾಯಕತ್ವ, ಜನಪರ ಕಾಳಜಿ ಮೆಚ್ಚಿ ಬಿಜೆಪಿ ಜೊತೆ ಗುರುತಿಸಿಕೊಳ್ಳಲು ನಿರ್ಧರಿಸಿದ್ದೇನೆ. ಸದ್ಯ ಬಿಜೆಪಿ ಸೇರ್ಪಡೆಯಾಗಲು ತಾಂತ್ರಿಕ ತೊಂದರೆ ಇದೆ, ಪಕ್ಷೇತರ ಸಂಸದರು ಗೆದ್ದ 6 ತಿಂಗಳೊಳಗೆ ಯಾವುದಾದರೂ ಪಕ್ಷ ಸೇರಲು ಅವಕಾಶವಿದೆ. ನಾನು ಗೆದ್ದು 4 ವರ್ಷಗಳಾಗಿದ್ದು ಈಗ ಪಕ್ಷ ಸೇರಲು ಸಾಧ್ಯವಿಲ್ಲ. ಹೀಗಾಗಿ ಪಕ್ಷೇತರ ಸಂಸದೆಯಾಗಿಯೇ ಉಳಿದು ಬಿಜೆಪಿಗೆ ಬೆಂಬಲ ನೀಡುತ್ತೇನೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ನನ್ನ ಬೆಂಬಲಿಗರು, ಹಿತೈಷಿಗಳು ಹಾಗೂ ಅಂಬರೀಷ್ ಅಭಿಮಾನಿಗಳು ಯಾವುದಾದರೂ ಪಕ್ಷ ಸೇರ್ಪಡೆಯಾಗುವಂತೆ ಒತ್ತಾಯ ಮಾಡಿದ್ದರು. ಜಿಲ್ಲೆಯ ರಾಜಕಾರಣ ಕಲುಷಿತಗೊಂಡಿದ್ದು ಅದನ್ನು ಶುದ್ಧಗೊಳಿಸುವುದಕ್ಕಾಗಿ ಬಿಜೆಪಿಗೆ ಬೆಂಬಲ ನೀಡುತ್ತೇನೆ. ಈ ನಿರ್ಧಾರದ ಹಿಂದೆ ಸ್ವಾರ್ಥವಿಲ್ಲ, ಜಿಲ್ಲೆ ಹಿತಕ್ಕಾಗಿ ಈ ನಿರ್ಧಾರ ಕೈಗೊಂಡಿದ್ದೇನೆ’ ಎಂದರು.
‘ಲೋಕಸಭಾ ಚುನಾವಣೆ ವೇಳೆ ಬಿಜೆಪಿ ನನಗೆ ಬಾಹ್ಯ ಬೆಂಬಲ ನೀಡಿತ್ತು, ಮೈಸೂರಿಗೆ ಬಂದಿದ್ದ ಪ್ರಧಾನಿ ನನ್ನ ಪರ ಪ್ರಚಾರ ಮಾಡಿದ್ದರು. ಕಳೆದ ನಾಲ್ಕು ವರ್ಷಗಳಿಂದ ಜಿಲ್ಲೆಯ ಅಭಿವೃದ್ಧಿಗೆ ಬಿಜೆಪಿ ಸರ್ಕಾರ ಸಾಕಷ್ಟು ಸಹಾಯ ಮಾಡಿದೆ. ಸ್ಥಳೀಯ ರಾಜಕಾರಣಿಗಳ ಅಸಹಕಾರದಿಂದ ಬೇಸತ್ತಿದ್ದೇನೆ, ಅನುದಾನ ತರಲು ಒಬ್ಬಂಟಿಯಾಗಿ ಹೋರಾಟ ನಡೆಸಿದ್ದೇನೆ. ಮುಂದೆ ಜಿಲ್ಲೆಯಲ್ಲಿ ಬದಲಾವಣೆ ತರುವ ಉದ್ದೇಶವಿದ್ದು ಇದ್ದು ಬಿಜೆಪಿ ಜೊತೆ ಹೆಜ್ಜೆ ಹಾಕುವುದು ಅನಿವಾರ್ಯವಾಗಿದೆ’ ಎಂದರು.
‘ಮೈಸೂರು ದಸರಾ ಸಂದರ್ಭದಲ್ಲಿ ಪ್ರಧಾನಿಯನ್ನು ಭೇಟಿ ಮಾಡಿ ಮಂಡ್ಯಕ್ಕೆ ಬರುವಂತೆ ಮನವಿ ಮಾಡಿದ್ದೆ. ಅವರಿಗೆ ನಮ್ಮ ಕ್ಷೇತ್ರದ ಬಗ್ಗೆ ಅಪಾರ ಕಾಳಜಿ ಇದೆ. ಇದೇ ಕಾರಣಕ್ಕೆ ಅವರು ಮಂಡ್ಯ ವ್ಯಾಪ್ತಿಯಲ್ಲಿ ದಶಪಥ ಕಾಮಗಾರಿ ಉದ್ಘಾಟಿಸುತ್ತಿದ್ದಾರೆ, ನಗರದಲ್ಲಿ ರೋಡ್ ಶೋ ನಡೆಸುತ್ತಿದ್ದಾರೆ. ಮುಂದೆಯೂ ಜಿಲ್ಲೆಯಲ್ಲಿ ಬದಲಾವಣೆ ತರಲು ಅವರು ಸಹಾಯ ಮಾಡಲಿದ್ದಾರೆ’ ಎಂದರು.
‘ಬಿಜೆಪಿಗೆ ಬೆಂಬಲ ನೀಡಲು ವೈಯಕ್ತಿಕವಾಗಿ ನಾನು ಯಾವುದೇ ಷರತ್ತು ಹಾಕಿಲ್ಲ, ಆದರೆ ಜಿಲ್ಲೆಯ ಅಭಿವೃದ್ಧಿಯ ಷರತ್ತು ಹಾಕಿದ್ದೇನೆ. ಚಾಮುಂಡಿತಾಯಿ ಆಣೆಗೂ ನಾನು ಕುಟುಂಬ ರಾಜಕಾರಣ ಮಾಡುವುದಿಲ್ಲ. ನಾನು ರಾಜಕಾರಣದಲ್ಲಿ ಇರುವವರೆಗೂ ನನ್ನ ಮಗ ಅಭಿಷೇಕ್ ರಾಜಕೀಯಕ್ಕೆ ಬರುವುದಿಲ್ಲ’ ಎಂದರು.
‘ನಾನು ಸ್ವಾಭಿಮಾನದಿಂದ ಗೆದ್ದು ಬಂದವಳು. ರಾಜಕಾರಣ ಬಿಟ್ಟುಬಿಡುತ್ತೇನೆ, ಆದರೆ ಸ್ವಾಭಿಮಾನ ಬಿಡುವುದಿಲ್ಲ. ಪ್ರಾಣ ಬಿಡುತ್ತೇನೆ, ಮಂಡ್ಯ ಬಿಡುವುದಿಲ್ಲ. ಈ ಬಗ್ಗೆ ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ನಾನು ಗೆದ್ದ ತಕ್ಷಣ ಬಿಜೆಪಿ ಸೇರಿ, ಅಲ್ಲಿ ಅಧಿಕಾರ ಅನುಭವಿಸುವ ಅವಕಾಶಗಳಿದ್ದವು. ಆದರೆ ನಾನು ಸ್ವಾರ್ಥಿಯಾಗಲಿಲ್ಲ’ ಎಂದರು.
‘ಚುನಾವಣೆ ಸಮಯದಲ್ಲಿ ಕಾಂಗ್ರೆಸ್, ಬಿಜೆಪಿ, ರೈತಸಂಘ ಸೇರಿ ಸಾಕಷ್ಟು ಸಂಘಟನೆಗಳು ಸಹಾಯ ಮಾಡಿವೆ. ಬಿಜೆಪಿಗೆ ಜೊತೆ ಗುರುತಿಸಿಕೊಂಡರೆ ಹಲವರಿಗೆ ಬೇಸರವಾಗಬಹುದು. ಆದರೆ ಜಿಲ್ಲೆಯ ಅಭಿವೃದ್ಧಿಯ ದೃಷ್ಟಿಯಿಂದ ಈ ನಿರ್ಧಾರ ಅನಿವಾರ್ಯವಾಗಿದೆ’ ಎಂದರು.
ವಿಧಾನಸಭೆ ಸ್ಪರ್ಧೆ; ಬಿಜೆಪಿ ವರಿಷ್ಠರ ತೀರ್ಮಾನ
‘ನಾನು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಸಂಬಂಧ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಬಿಜೆಪಿ ಜೊತೆ ಗುರುತಿಸಿಕೊಂಡ ನಂತರ ಅಲ್ಲಿಯ ವರಿಷ್ಠರ ನಿರ್ಧಾರದಂತೆ ನಡೆದುಕೊಳ್ಳುತ್ತೇನೆ’ ಎಂದು ಸುಮಲತಾ ಹೇಳಿದರು.
‘ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಮಾಡುತ್ತೇನೆ. ರಾಜ್ಯ ರಾಜಕಾರಣಕ್ಕೆ ಬರುವಂತೆ ನನ್ನ ಬೆಂಬಲಿಗರೂ ಒತ್ತಾಯಿಸುತ್ತಿದ್ದಾರೆ. ಬಿಜೆಪಿ ವರಿಷ್ಠರನ್ನು ಭೇಟಿಯಾಗಿ, ಕಾರ್ಯಕರ್ತರ ಸಭೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು’ ಎಂದರು.
ಅಚ್ಚರಿಯ ಸುದ್ದಿಯಲ್ಲ: ಎಚ್‌ಡಿಕೆ
ಹಾಸನ: ಸುಮಲತಾ ಬಿಜೆಪಿಗೆ ಬೆಂಬಲ ಘೋಷಿಸಿರುವ ಕುರಿತು ಪ್ರತಿಕ್ರಿಯಿಸಿರುವ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ, ‘ಈ ವಿಷಯ ಯಾರಿಗೇನೂ ಅಚ್ಚರಿ ಮೂಡಿಸುವ ಸುದ್ದಿ ಅಲ್ಲ. ಇದಕ್ಕೆ ನಾವು ಪ್ರಾಮುಖ್ಯತೆ ಕೊಡಬೇಕಾದ ಅವಶ್ಯಕತೆ ಇಲ್ಲ. ಅವರು ಬಹಳ ದೊಡ್ಡವರಿದ್ದಾರೆ, ದೊಡ್ಡ ಪಕ್ಷಕ್ಕೆ ಸೇರಿದ್ದಾರೆ. ಅವರ ಬಗ್ಗೆ ಮಾತನಾಡುವಷ್ಟು ದೊಡ್ಡಮಟ್ಟಕ್ಕೆ ನಾನು ಬೆಳೆದಿಲ್ಲ’ ಎಂದರು.
ಬಿಜೆಪಿ ಶಕ್ತಿ ಹೆಚ್ಚಳ: ಪ್ರತಾಪಸಿಂಹ
ಮೈಸೂರು: ‘ಸಂಸದ ಸುಮಲತಾ ಬಂದರೆ ಪಕ್ಷದ ಶಕ್ತಿ ಹೆಚ್ಚಾಗುತ್ತದೆ. ಕಾಂಗ್ರೆಸ್ ನಾಯಕರಾಗಿದ್ದ ಅಂಬರೀಷ್ ಅವರಿಗೆ ಆ ಪಕ್ಷದಿಂದಲೇ ಅವಮಾನವಾದಾಗ, ಸ್ವಾಭಿಮಾನದ ಸಂಕೇತವಾಗಿ ಸುಮಲತಾ ಅವರನ್ನು ಜನ ಗೆಲ್ಲಿಸಿದ್ದರು’ ಎಂದು ಸಂಸದ ಪ್ರತಾಪಸಿಂಹ ಸ್ಮರಿಸಿದರು.
‘ಚುನಾವಣೆಯಲ್ಲಿ ಮಂಡ್ಯ ಗೆಲುವು ಬಿಜೆಪಿಗೆ ಗಗನ ಕುಸುಮ ಎಂದು ಟೀಕಿಸುತ್ತಾರೆ. ಆದರೆ ಅಲ್ಲಿ ಬಿಜೆಪಿ ಬಾವುಟ ಹಾರುತ್ತದೆ 3ರಿಂದ 4 ಮಂದಿ ಆಯ್ಕೆಯಾಗುತ್ತಾರೆ’ ಎಂದು ಭರವಸೆ ವ್ಯಕ್ತಪಡಿಸಿದರು.
*
ರಾಜ್ಯ ರಾಜಕಾರಣಕ್ಕೆ ಬರುವಂತೆ ಬೆಂಬಲಿಗರು ಒತ್ತಾಯಿಸುತ್ತಿದ್ದಾರೆ. ಬಿಜೆಪಿ ವರಿಷ್ಠರನ್ನು ಭೇಟಿಯಾಗಿ, ಕಾರ್ಯ<br/>ಕರ್ತರ ಸಭೆ ನಡೆಸಿ ತೀರ್ಮಾನಿಸುವೆ
-ಸುಮಲತಾ, ಸಂಸದೆ
*
ಅಂಬರೀಷ್ ಅವರಿಗೆ ಕಾಂಗ್ರೆಸ್‌ನಿಂದಲೇ ಅವಮಾನವಾದಾಗ, ಸ್ವಾಭಿಮಾನದ ಸಂಕೇತವಾಗಿ ಸುಮಲತಾ ಅವರನ್ನು ಜನ ಗೆಲ್ಲಿಸಿದ್ದರು
-ಪ್ರತಾಪಸಿಂಹ, ಸಂಸದ
*
ಅವರು ಬಹಳ ದೊಡ್ಡವರಿದ್ದಾರೆ, ದೊಡ್ಡ ಪಕ್ಷಕ್ಕೆ ಸೇರಿದ್ದಾರೆ. ಅವರ ಬಗ್ಗೆ ಮಾತನಾಡುವಷ್ಟು ದೊಡ್ಡಮಟ್ಟಕ್ಕೆ ನಾನು ಬೆಳೆದಿಲ್ಲ.
-ಎಚ್.ಡಿ. ಕುಮಾರಸ್ವಾಮಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.