ಮೇಲುಕೋಟೆ (ಮಂಡ್ಯ ಜಿಲ್ಲೆ): ರಾಮಾನುಜಾಚಾರ್ಯರ ಕರ್ಮಭೂಮಿಯಾದ ಮೇಲುಕೋಟೆಯಲ್ಲಿ ಸೋಮವಾರ ರಾತ್ರಿ ಸಾವಿರಾರು ಭಕ್ತರ ಜಯಘೋಷಗಳ ನಡುವೆ ಚೆಲುವನಾರಾಯಣ ಸ್ವಾಮಿಯ ವಿಶ್ವವಿಖ್ಯಾತ ‘ವೈರಮುಡಿ ಬ್ರಹ್ಮೋತ್ಸವ’ ಸಂಭ್ರಮದಿಂದ ನಡೆಯಿತು.

ವಿಶ್ವಾವಸು ಸಂವತ್ಸರದ ಚೈತ್ರಮಾಸದ ಪುಷ್ಯ ನಕ್ಷತ್ರದ ಶುಭದಿನದಂದು ಸ್ವಾಮಿಯ ಉತ್ಸವವು ದೇವಾಲಯದಿಂದ ಹೊರಬರುತ್ತಿದ್ದಂತೆ ನೆರೆದಿದ್ದ ಭಕ್ತರು ‘ಗೋವಿಂದಾ, ಗೋವಿಂದಾ’ ಎಂದು ಜಯಘೋಷ ಮೊಳಗಿಸುತ್ತಾ ಭಕ್ತಿಯ ಪರಾಕಾಷ್ಠೆ ಮೆರೆದರು. ಲೋಕಕಲ್ಯಾಣಾರ್ಥವಾಗಿ ಅರ್ಧ ಚಂದ್ರಾಕೃತಿಯ ಗರುಡಾರೂಢನಾದ ಚೆಲುವನಾರಾಯಣ ಸ್ವಾಮಿಯ ದರ್ಶನವನ್ನು ಸಹಸ್ರಾರು ಭಕ್ತರು ಕಣ್ತುಂಬಿಕೊಂಡರು.

ಉತ್ಸವದಲ್ಲಿ ಸಾಗಿದ ಸ್ವಾಮಿಗೆ ಸ್ಥಾನಿಕರು, ಅರ್ಚಕರು ನಿರಂತರವಾಗಿ ಚಾಮರ ಬೀಸಿದರು. ‘ಭೂವೈಕುಂಠ’ ಎಂದೇ ಹೆಸರಾದ ಮೇಲುಕೋಟೆಗೆ ರಾಜ್ಯದ ವಿವಿಧ ಭಾಗಗಳಿಂದ ಹಾಗೂ ನೆರೆಯ ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಕೇರಳ, ಗುಜರಾತ್ ರಾಜ್ಯಗಳಿಂದ ಭಕ್ತ ಸಾಗರವೇ ಹರಿದು ಬಂದಿತ್ತು. ದೇವಾಲಯದ ಮುಂದೆ ವೈರಮುಡಿ ಹೆಸರಿನಲ್ಲಿ ಅಲಂಕೃತಗೊಂಡ ಹೂವಿನ ಅಲಂಕಾರ ಭಕ್ತರ ಗಮನಸೆಳೆಯಿತು.

ಮಂಡ್ಯ ಜಿಲ್ಲಾ ಖಜಾನೆಯಿಂದ ವಿಶೇಷ ಪೊಲೀಸ್ ಭದ್ರತೆಯೊಂದಿಗೆ ಮೇಲುಕೋಟೆಗೆ ಸಂಜೆ ಆಗಮಿಸಿದ ವೈರಮುಡಿ ಕಿರೀಟ ಹಾಗೂ ಆಭರಣ ಪೆಟ್ಟಿಗೆಗೆ ಇಲ್ಲಿನ ಪಾರ್ವತಿಗುಡಿ ಹಾಗೂ ಆಂಜನೇಯಸ್ವಾಮಿ ದೇವಾಲಯಲ್ಲಿ ಪ್ರಥಮ ಪೂಜೆ ಸಲ್ಲಿಸಲಾಯಿತು. ನಂತರ ಚಿನ್ನದ ಪಲ್ಲಕ್ಕಿಯಲ್ಲಿ ನಾದಸ್ವರದೊಂದಿಗೆ ಮೆರವಣಿಗೆಯ ಮೂಲಕ ದೇವಾಲಯಕ್ಕೆ ತರಲಾಯಿತು.

ತಿರುವಾಭರಣ ಪೆಟ್ಟಿಗೆಯ ‘ಪರ್ಕಾವಣೆ’ (ಆಭರಣಗಳ ಪರಿಶೀಲನೆ) ಬಳಿಕ ಗಂಡಭೇರುಂಡ ಸ್ವರೂಪಿ ಚಂದ್ರಪ್ರಭೆ ಪ್ರಭಾವಳಿ ಮಧ್ಯದಲ್ಲಿ ಶ್ರೀದೇವಿ ಮತ್ತು ಭೂದೇವಿ ನಡುವೆ ಅಲಂಕೃತನಾಗಿದ್ದ ಚೆಲುವನಾರಾಯಣ ಸ್ವಾಮಿಗೆ ರಾಮಾನುಜಾಚಾರ್ಯರ ಸನ್ನಿಧಿಯಲ್ಲಿ ಕಿರೀಟಧಾರಣೆ ನೆರವೇರಿಸಲಾಯಿತು. ತಿರುವಾಭರಣ ಪೆಟ್ಟಿಗೆಯಲ್ಲಿದ್ದ ಶಂಖ, ಗದಾಂಗಿ, ಚಕ್ರ, ಪದ್ಮಪೀಠ, ಶಿರಚಕ್ರ, ಅಭಯಹಸ್ತ, ಕರ್ಣಾಭರಣ ಸೇರಿದಂತೆ 16 ಪದಕಗಳನ್ನು ಸ್ವಾಮಿಗೆ ತೊಡಿಸಲಾಯಿತು. ಪ್ರಥಮ ಪೂಜೆ ಸಲ್ಲಿಸಿದ ನಂತರ ರಾತ್ರಿ 8.10ಕ್ಕೆ ವೈರಮುಡಿ ಉತ್ಸವಕ್ಕೆ ಚಾಲನೆ ನೀಡಲಾಯಿತು.

ದಾರಿಯುದ್ದಕ್ಕೂ ಭವ್ಯ ಸ್ವಾಗತ

ಮಂಡ್ಯದಿಂದ ಮೇಲುಕೋಟೆಗೆ ವೈರಮುಡಿ ಪೆಟ್ಟಿಗೆ ಸಾಗಿಸುವ ಮಾರ್ಗದಲ್ಲಿ ಸಿಗುವ 86 ಹಳ್ಳಿಗಳ ರಸ್ತೆಗಳಲ್ಲಿ ರಂಗೋಲಿ ಇಟ್ಟು, ತಳಿರು, ತೋರಣ ಕಟ್ಟಿ ಕಾಯುತ್ತಿದ್ದ ಭಕ್ತರು ವೈರಮುಡಿಗೆ ಭಕ್ತಿಪೂರ್ವಕ ಸ್ವಾಗತ ಕೋರಿದರು. ಅಲ್ಲಲ್ಲಿ ಪಾನಕ, ನೀರು ಮಜ್ಜಿಗೆ ಮತ್ತು ಪ್ರಸಾದವನ್ನು ವಿತರಿಸಲಾಯಿತು.

ಆದಿಚುಂಚನಗಿರಿ ಶಾಖಾಮಠದ ಬಳಿ ಕಿರೀಟಗಳಿಗೆ ನಿರ್ಮಲಾನಂದನಾಥ ಸ್ವಾಮೀಜಿ, ಆಂಜನೇಯ ದೇವಾಲಯದ ಬಳಿ ಒಕ್ಕಲಿಗರ ಸಮುದಾಯದವರು ಹಾಗೂ ಕೊನೆಯಲ್ಲಿ ಸ್ಥಾನಾಚಾರ್ಯ ಯತಿರಾಜದಾಸರ್ ಶ್ರೀನಿವಾಸನರಸಿಂಹನ್ ಗುರೂಜಿ ಮನೆತನದವರು ಪೂಜೆ ಸಲ್ಲಿಸಿದರು.

ವೈರಮುಡಿಗೆ ಆಗಮಿಸಿದ ಒಂದು ಲಕ್ಷಕ್ಕೂ ಹೆಚ್ಚು ಭಕ್ತರಿಗೆ ಅನ್ನಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ, ಯಾದಗಿರಿ ಸಂಸದ ಕುಮಾರನಾಯಕ್, ಶಾಸಕರಾದ ದರ್ಶನ್ ಪುಟ್ಟಣ್ಣಯ್ಯ, ರಮೇಶ ಬಂಡಿಸಿದ್ದೇಗೌಡ, ಮಾಜಿ ಸಚಿವರಾದ ಸಿ.ಎಸ್. ಪುಟ್ಟರಾಜು, ಎಚ್.ಡಿ.ರೇವಣ್ಣ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉತ್ಸವದಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.