ಮಂಡ್ಯ: ವಿಶ್ವವಿಖ್ಯಾತ ಮೇಲುಕೋಟೆ ವೈರಮುಡಿ ಉತ್ಸವದ ಅಂಗವಾಗಿ ಶನಿವಾರ ಬೆಳಿಗ್ಗೆ ನಗರದ ಜಿಲ್ಲಾ ಖಜಾನೆಯಲ್ಲಿದ್ದ ತಿರುವಾಭರಣ ಪೆಟ್ಟಿಗೆಯನ್ನು ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ನೇತೃತ್ವದಲ್ಲಿ ಹೊರಕ್ಕೆ ತರಲಾಯಿತು.
ವಜ್ರಖಚಿತ ಆಭರಣಗಳ ಪೆಟ್ಟಿಗೆಗೆ ಲಕ್ಷ್ಮಿಜನಾರ್ಧನ ದೇವಾಲಯದಲ್ಲಿ ಪ್ರಥಮ ಪೂಜೆ ಸಲ್ಲಿಸಲಾಯಿತು. ಜಾನಪದ ಕಲಾತಂಡಗಳೊಂದಿಗೆ ಮೇಲುಕೋಟೆಯತ್ತ ತೆರಳುವ ವೈರಮುಡಿ ಮೆರವಣಿಗೆಗೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ವಿವಿಧೆಡೆ ಪೂಜೆ: ದಾರಿಯುದ್ದಕ್ಕೂ ವಿವಿಧೆಡೆ ವೈರಮುಡಿ ಮಂಟಪಗಳಿದ್ದು ಅಲ್ಲಿ ಪೆಟ್ಟಿಗೆ ಇಟ್ಟು ವಿವಿಧ ಗ್ರಾಮಗಳ ಜನರು ಪೂಜೆ ಸಲ್ಲಿಸುತ್ತಾರೆ. ಸಂಜೆ ಮೆರವಣಿಗೆಯು ಮೇಲುಕೋಟೆ ತಲುಪಲಿದೆ. ನಂತರ ಅಧಿಕಾರಿಗಳ ಸಮ್ಮುಖದಲ್ಲಿ ಚೆಲುವನಾರಾಯಣಸ್ವಾಮಿ ದೇವಾಲಯದ ಸ್ಥಾನೀಕರು ಪೆಟ್ಟಿಗೆ ತೆರೆದು ಆಭರಣ ಜೋಡಣೆ (ಪರ್ಕಾವಣೆ) ಮಾಡುತ್ತಾರೆ.
ರಾತ್ರಿ 8.30ಕ್ಕೆ ವಜ್ರಖಚಿತ ಕಿರೀಟ ಚೆಲುವನಾರಾಯಣಸ್ವಾಮಿಯ ಮುಡಿಗೇರಲಿದ್ದು ವಿಧ್ಯುಕ್ತವಾಗಿ ವೈರಮುಡಿ ಉತ್ಸವ ಆರಂಭವಾಗಲಿದೆ. ಕಿರೀಟ ಧರಿಸಿದ ಚೆಲುವನಾರಾಯಣಸ್ವಾಮಿ ದರ್ಶನ ಪಡೆಯಲು ಲಕ್ಷಾಂತರ ಭಕ್ತರು ಮೇಲುಕೋಟೆಗೆ ಬಂದಿದ್ದು ಕ್ಷೇತ್ರದಾದ್ಯಂತ ಸಂಭ್ರಮ ಮನೆ ಮಾಡಿದೆ. ಕ್ಷೇತ್ರದ ಬೀದಿ, ದೇವಾಲಯ, ಸ್ಮಾರಕಗಳಿಗೆ ದೀಪಾಲಂಕಾರ ಮಾಡಲಾಗಿದ್ದು ಬೆಳಕಿನಲ್ಲಿ ಕಂಗೊಳಿಸುತ್ತಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.