ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈರಮುಡಿ; ಕಂಗೊಳಿಸುತ್ತಿರುವ ಮೇಲುಕೋಟೆ

ವಿಶ್ವದಲ್ಲೇ ಅತೀ ಹೆಚ್ಚು ಬೆಲೆಬಾಳುವ ಆಭರಣ ಚೆಲುವನಾರಾಯಣಸ್ವಾಮಿ ಕಿರೀಟ
ಶ್ರೀಕಾಂತ್ ಮೇಲುಕೋಟೆ
Published 20 ಮಾರ್ಚ್ 2024, 8:53 IST
Last Updated 20 ಮಾರ್ಚ್ 2024, 8:53 IST
ಅಕ್ಷರ ಗಾತ್ರ

ಮಂಡ್ಯ: ಚೆಲುವನಾರಾಯಣ ಸ್ವಾಮಿ ನೆಲೆವೀಡು ಮೇಲುಕೋಟೆಯಲ್ಲಿ ವೈರಮುಡಿ ಬ್ರಹ್ಮೋತ್ಸವ, ವೈರಮುಡಿ ಉತ್ಸವಕ್ಕೆ ದಿನಗಣನೆ ಆರಂಭವಾಗಿದೆ. ಕ್ಷೇತ್ರಕ್ಕೆ ರಾಜ್ಯ, ಹೊರರಾಜ್ಯಗಳಿಂದ ಲಕ್ಷಾಂತರ ಭಕ್ತರು ಬರುತ್ತಿದ್ದು ಮೇಲುಕೋಟೆ ದೀಪಾಲಂಕಾರದಿಂದ ಕಂಗೊಳಿಸುತ್ತಿದೆ.

ಮಾರ್ಚ್‌ 21ರಂದು ಗುರುವಾರ ರಾತ್ರಿ ನಡೆಯುವ ಸಂಭ್ರಮವನ್ನು ಕಣ್ತುಂಬಿಗೊಳ್ಳಲು ಭಕ್ತರು ಕಾತರದಿಂದ ಕಾಯುತ್ತಿದ್ದಾರೆ. ವಜ್ರಖಚಿತ ವೈರಮುಡಿ ಕಿರೀಟಧಾರಣೆಯ ವೈರಮುಡಿ ಬ್ರಹ್ಮೋತ್ಸವ ಐತಿಹಾಸಿಕವಾಗಿದ್ದು ಸತ್ಯಯುಗ, ದ್ವಾಪರಯುಗ ಹಾಗೂ ತ್ರೇತಾಯುಗದ ಹಿನ್ನೆಲೆ ಹೊಂದಿದೆ.

ಚಲುವನಾಯಾರಣಸ್ವಾಮಿ ಧರಿಸುವ ಕಿರೀಟ ಆಭರಣವು ವಿಶ್ವದಲ್ಲೇ ಅತ್ಯಂತ ಬೆಲೆಬಾಳುವ ಕಿರೀಟ ಎಂದು ಪ್ರಾಚ್ಯವಸ್ತು ಇಲಾಖೆ, ಧಾರ್ಮಿಕ ಧತ್ತಿ ಇಲಾಖೆ ತಿಳಿಸಿದೆ. ವೈರಮುಡಿ ಕಿರೀಟವು ಸಂಪೂರ್ಣವಾಗಿ ವೃತ್ತಾಕಾರದಲ್ಲಿ ಮಾಡಲಾಗಿದೆ. ಕಿರೀಟದ ಸುತ್ತಲೂ ನೂರಾರು ವಜ್ರ ಅತೀ ಅಮೂಲ್ಯವಾದ ಮಾಣಿಕ್ಯಗಳಿಂದ ಕೂಡಿದೆ. ಕಿರೀಟದ ಮೇಲ್ಭಾಗದಲ್ಲಿ ಕೆಂಪು ಹಾಗೂ ಬಿಳಿಬಣ್ಣದ ವಜ್ರಗಳಿಂದ ತಯಾರಿಸಲಾಗಿದೆ.

ತ್ರೇತಾಯುಗದ ಹಿನ್ನೆಲೆ ಅನುಸಾರ ಅಯೋಧ್ಯೆಯಲ್ಲಿ ದಶರಥ ಮಹಾರಾಜ ತನ್ನ  ಪುತ್ರ ರಾಮಚಂದ್ರನಿಗೆ ಪಟ್ಟಾಭಿಷೇಕ ಮಾಡಲು ನಿರ್ಧರಿಸಿ ಅರಮನೆಯಲ್ಲಿ ಸಕಲ ಸಿದ್ಧತೆ ಕೈಗೊಳ್ಳಲಾಗಿತ್ತು. ಪಟ್ಟಾಭಿಷೇಕ ನಡೆಯಬೇಕೆನ್ನುವಷ್ಟರಲ್ಲಿ ಕೈಕೇಯಿಯ ಕುತಂತ್ರದಿಂದ ರಾಮಚಂದ್ರ ವನವಾಸಕ್ಕೆ ತೆರಳಬೇಕಾಯಿತು.

ಆದರೆ ಅಣ್ಣ ಶ್ರೀರಾಮಚಂದ್ರ ಪಟ್ಟಾಭಿಷೇಕವನ್ನು ಕಣ್ಣಾರೆ ನೋಡಬೇಕೆನ್ನುವ ಬಯಕೆಯಲ್ಲಿದ ಲಕ್ಷ್ಮಣನಿಗೆ ನಿರಾಸೆಯಾಗಿತ್ತು. ತನ್ನ ಬಯಕೆ ಈಡೇರಿಕೆಗಾಗಿ ಕಲಿಯುಗದಲ್ಲಿ ಲಕ್ಷ್ಮಣ ರಾಮಾನುಜಾಚಾರ್ಯರಾಗಿ ಜನಿಸಿ ಶ್ರೀ ರಾಮಚಂದ್ರನ ಪಟ್ಟಾಭಿಷೇಕ ನಿಗಧಿಯಾಗಿದ್ದ ಫಾಲ್ಗುಣ ಮಾಸದ ಪುಷ್ಯ ನಕ್ಷತ್ರದ ಶುಭದಿನದಂದೇ ಶ್ರೀ ಚೆಲುವರಾಯಸ್ವಾಮಿಗೆ  ವೈರಮುಡಿ ಕಿರೀಟಧಾರಣೆ ಮಾಡಿ ತನ್ನ ಮನದಲ್ಲಿದ್ದ ಆಸೆ ಈಡೇರಿಸಕೊಂಡರು ಎಂಬ ಪ್ರತೀತಿಯಿದೆ. ಇಂದಿಗೂ ಆದೇ ಮಾಸ ಆದೇ ನಕ್ಷತ್ರದಂದು ವೈರಮುಡಿ ಕಿರೀಟಧಾರಣೆ ಮಹೋತ್ಸವ ನಡೆಯುವುದು ವಿಶೇಷ.

ದ್ವಾಪರ ಯುಗದಲ್ಲಿ ಕೃಷ್ಣನ ಮೂಲಕ ಶ್ರೀ ಚೆಲುವರಾಯಸ್ವಾಮಿಗೆ ಗರುಡನಿಂದ ತೊಡಿಸಲಾಗಿದೆ ಎಂಬ ಪ್ರತೀತಿ ಇದೆ. ಇನ್ನೊಂದೆಡೆ ವೈಕುಂಠದಿಂದ ರಾಕ್ಷಸ ವಿರೋಚನ ಕದ್ದಿದ್ದ ಕಿರೀಟವನ್ನು ಗರುಡ ರಾಕ್ಷಸನೊಂದಿಗೆ ಹೋರಾಟಮಾಡಿ ಮರಳಿ ಶ್ರೀಚೆಲುವ ನಾರಾಯಣ ಸ್ವಾಮಿಗೆ ಅರ್ಪಿಸಿದನೆಂದು ನಂಬಿಕೆಯಿದೆ. ಇಂದಿಗೂ ಗರುಡದೇವನ ಹೆಗಲ ಮೇಲೆ ಚೆಲುವನಾರಾಯಣ ಸ್ವಾಮಿಯ ಉತ್ಸವ ಮೂರ್ತಿಯನ್ನು ಇಟ್ಟು ವೈರಮುಡಿ ಬ್ರಹ್ಮೋತ್ಸವ ನಡೆಸಲಾಗುತ್ತಿದೆ.

‘ಬ್ರಹ್ಮದೇವ ಪ್ರತಿನಿತ್ಯ ವೈರಮುಡಿ ಕಿರೀಟವನ್ನು ಪೂಜೆ‌ಮಾಡುತ್ತಿದ್ದದರು. ಅತಿಸುಂದರನಾದ ಚೆಲುವನಿಗೆ ಅರ್ಪಿಸಿದ್ದರು. ಆದ್ದರಿಂದ ವೈರಮುಡಿ ಕಿರೀಟದಿಂದಲ್ಲೇ ಮೇಲುಕೋಟೆ ದೇವಾಲಯ ಪ್ರಖ್ಯಾತಗೊಂಡಿದೆ’ ಎನ್ನುತ್ತಾರೆ ದೇವಾಲಯದ ಪುರೋಹಿತರಾದ ರಾಮಪ್ರಿಯ ಸಂಪತ್ತು ಕುಮಾರ್.

ಮೇಲುಕೋಟೆ ವೈರಮುಡಿ ಬ್ರಹ್ಮೋತ್ಸವ ಹೊರೆತುಪಡಿಸಿ ದೇಶದ ಯಾವುದೇ ಹಿಂದೂ ದೇವಾಲಯಗಳಲ್ಲಿ ಮಧ್ಯರಾತ್ರಿಯಲ್ಲಿ ಬ್ರಹ್ಮೋತ್ಸವ ನಡೆಯುವುದಿಲ್ಲ. ಮೇಲುಕೋಟೆಯಲ್ಲಿ ವೈರಮುಡಿ ಬ್ರಹ್ಮೋತ್ಸವ ಆರಂಭವಾದರೆ ಬೆಳಗಿನ ನಸಿಕಿನ 3 ಗಂಟೆಯವರೆಗೂ ನಡೆಯುತ್ತದೆ.

ಅಚ್ಚರಿಯ ವಿಚಾರವೆಂದರೆ ಹಿಂದಿನಿಂದ ಇಂದಿನವರೆಗೂ  ವೈರಮುಡಿ ಕಿರೀಟಕ್ಕೆ ಸೂರ್ಯನ ಕಿರಣಗಳ ಸ್ವರ್ಶವೇ ಆಗಿಲ್ಲ. ಬ್ರಹ್ಮೋತ್ಸವ ನಂತರ ಕಿರೀಟ ತೆಗೆದು ಸೂರ್ಯಕಿರಣ ಬಿಳದ ಪೆಟ್ಟಿಗೆಯಲ್ಲಿ ಭದ್ರಪಡಿಸಿ ಮಂಡ್ಯ ಜಿಲ್ಲಾ ಖಜಾನೆಗೆ ರವಾನಿಸಲಾಗುತ್ತದೆ. ಮುಂದಿನ ವರ್ಷದ ವರೆಗೂ ಕಿರೀಟ ಪೆಟ್ಟಿಗೆ ಮಂಡ್ಯ ಖಜಾನೆಯಲ್ಲಿ ಇರುತ್ತದೆ.

ವೃತ್ತಾಕಾರದಲ್ಲಿರುವ ವೈರಮುಡಿ ಕಿರೀಟದಲ್ಲಿ  ನಾಗಮಣಿ ಅಳವಡಿಸಲಾಗಿದೆ. ಆದ್ದರಿಂದ ವೈರಮುಡಿ ಬ್ರಹ್ಮೋತ್ಸವದ ಕಣ್ತುಂಬಿಗೊಳ್ಳಲು ಹಾಗೂ ದರ್ಶನ ಮಾಡಲು ದೇವಾನೂದೇವತೆಗಳು ಭೂಲೋಕಕ್ಕೆ ಬರುತ್ತಾರೆ ಎಂಬ ನಂಬಿಕೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT