ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರಗಳಲ್ಲೂ ಉದ್ಯೋಗ ಖಾತ್ರಿ ಜಾರಿಯಾಗಲಿ

ಕಾಯಕ ಬಂಧುಗಳ ಜಿಲ್ಲಾ ಮಟ್ಟದ ಸಮಾವೇಶ; ಜಿ.ಎನ್‌.ನಾಗರಾಜು ಅಭಿಮತ
Last Updated 2 ಜನವರಿ 2021, 13:06 IST
ಅಕ್ಷರ ಗಾತ್ರ

ಮಂಡ್ಯ: ‘ಉದ್ಯೋಗ ಖಾತ್ರಿ ಯೋಜನೆಯನ್ನು ನಗರ ಭಾಗದಲ್ಲೂ ಜಾರಿಗೊಳಿಸಬೇಕು. ಕೊರೊನಾ ಕಾಲದಲ್ಲಿ ವಲಸಿಗರು ಹಳ್ಳಿಗಳಿಗೆ ವಾಪಸ್‌ ಬಂದಿದ್ದು ಮೂಲವಾಸಿಗಳಿಗೆ ಕೆಲಸ ಇಲ್ಲದಂತಾಗಿದೆ. ಇದನ್ನು ಮನಗಂಡು ನಗರಗಳಿಗೂ ಯೋಜನೆ ವಿಸ್ತರಿಸಬೇಕು’ ಎಂದು ರಾಜ್ಯ ಪ್ರಾಂತ ಕೃಷಿ ಕೂಲಿಕಾರರ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಜಿ.ಎನ್‌.ನಾಗರಾಜು ಹೇಳಿದರು.

ಪ್ರಾಂತ ಕೃಷಿ ಕೂಲಿಕಾರರ ಸಂಘ, ಜಿಲ್ಲಾ ಘಟಕದ ವತಿಯಿಂದ ನಗರದ ಗಾಂಧಿಭವನದಲ್ಲಿ ಶನಿವಾರ ನಡೆದ ಉದ್ಯೋಗ ಖಾತ್ರಿ ಕಾಯಕ ಬಂಧುಗಳ ಜಿಲ್ಲಾ ಮಟ್ಟದ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಕೃಷಿಕ ಹಾಗೂ ಕೂಲಿ ಕಾರ್ಮಿಕ ಒಕ್ಕಲುತನ ಬಂಡಿಯ ಎರಡು ಚಕ್ರಗಳಿದ್ದಂತೆ. ಕೇಂದ್ರ ಸರ್ಕಾರದ ಕೃಷಿ ವಿರೋಧಿ ನೀತಿಗಳ ವಿರುದ್ದ ಹೋರಾಡಲು ಎಲ್ಲರೂ ಒಗ್ಗಟ್ಟಿನ ಹೆಜ್ಜೆ ಇಡಬೇಕು. ಸರ್ಕಾರಗಳ ನೀತಿಗಳು ರೈತರ ಬದುಕಿಗೆ ಮಾರಕವಾಗಿದ್ದು ಅವುಗಳ ವಿರುದ್ಧ ಹೋರಾಟ ಅನಿವಾರ್ಯವಾಗಿದೆ. ಕೃಷಿಕ, ಕೂಲಿಕಾರ್ಮಿಕರು ರೈತ ವಿರೋಧಿ ನೀತಿ ವಿರುದ್ಧ ಧ್ವನಿ ಎತ್ತಬೇಕು’ ಎಂದರು.

‘ರೈತ ಉಳಿದರೆ ಕೃಷಿ ಉಳಿಯುವುದು, ಕೂಲಿ ಕಾರ್ಮಿಕರು ಉಳಿದರೆ ರೈತರು ಉಳಿಯಲು ಸಾಧ್ಯ. ರೈತ– ಕೃಷಿ ಕೂಲಿಕಾರ ಉಳಿದರೆ ಮಾತ್ರ ಕೃಷಿ ಉಳಿಯುತ್ತದೆ. ಕೂಲಿ ಕಾರ್ಮಿಕರಿಗೆ ವರ್ಷಕ್ಕೆ ₹28 ಸಾವಿರ ಆದಾಯ ನೀಡಬೇಕು. ರಾಜ್ಯ ಸರ್ಕಾರ ನಿಗದಿ ಮಾಡಿರುವ ಕನಿಷ್ಠ ಕೂಲಿ ಕೃಷಿ ಕಾರ್ಮಿಕರಿಗೆ ದೊರೆಯಬೇಕು. ಹಳ್ಳಿಗಳಲ್ಲಿ ಮಹಿಳಾ ಕೂಲಿ ಕಾರ್ಮಿಕರಿಗೆ ದಿನಕ್ಕೆ ₹150 ಮಾತ್ರ ನೀಡುತ್ತಾರೆ. ಕೃಷಿಕರು ಅವರಿಗೆ ₹ 600 ನೀಡಬೇಕು’ ಎಂದರು.

‘ಕೃಷಿ ಕಾಯ್ದೆಗಳ ತಿದ್ದುಪಡಿ ವಾಪಸಾತಿಗೆ ಒತ್ತಾಯಿ ಪಂಜಾಬ್‌, ಹರಿಯಾಣ ರಾಜ್ಯಗಳ ಲಕ್ಷಾಂತರ ರೈತರು 35 ದಿನಗಳಿಂದ ದೆಹಲಿಯ ಗಡಿಯಲ್ಲಿ ಪ್ರತಿಭಟಿಸುತ್ತಿದ್ದಾರೆ. ಇದರಲ್ಲಿ 40 ರೈತರು ಸಾವನ್ನಪ್ಪಿದ್ದಾರೆ. ಹೋರಾಟ ಹತ್ತಿಕ್ಕಲು ಸರ್ಕಾರ ಇನ್ನಿಲ್ಲದಂತೆ ಪ್ರಯತ್ನಿಸಿದರೂ ಪಟ್ಟು ಸಡಿಲಿಸದೆ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದನ್ನು ಬೆಂಬಲಿಸಿ ದೇಶದಾದ್ಯಂತ ಹೋರಾಟ, ಧರಣಿಗಳು ನಡೆದಿವೆ. ಕಾಯ್ದೆಗಳ ತಿದ್ದುಪಡಿ ವಾಪಸ್‌ ಪಡೆಯುವವರೆಗೂ ಹೋರಾಟ ಮುಂದುವರಿಸುವ ಅಗತ್ಯವಿದೆ’ ಎಂದರು.

‘ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಕೊಡಿ ಎಂದು ಯಾರೂ ಪಂಚಾಯಿತಿಗಳಿಗೆ ಹೋಗಬಾರದು. ಅವರೇ ನಿಮ್ಮನ್ನು ಹುಡುಕಿ ಬಂದು ಕೆಲಸ ನೀಡಬೇಕು. ಕೆಲಸಕ್ಕೆ ಅರ್ಜಿ ಹಾಕಿ 15 ದಿನದೊಳಗೆ ಕೆಲಸ ನೀಡದಿದ್ದರೆ ನಿರುದ್ಯೋಗ ಭತ್ಯೆ ನೀಡಬೇಕು. ಇದನ್ನು ಎಲ್ಲರೂ ತಿಳಿದುಕೊಂಡು ಪ್ರಶ್ನಿಸಿದಾಗ ಮಾತ್ರ ಉದ್ಯೋಗ ಖಾತ್ರಿಯ ಸಮರ್ಪಕ ಅನುಷ್ಠಾನ ಸಾಧ್ಯ. ಉದ್ಯೋಗ ಖಾತ್ರಿಯಲ್ಲಿ ಕನಿಷ್ಠ 250 ದಿನಗಳ ಕೆಲಸ, ನಿತ್ಯ ₹600 ಕೂಲಿ ನೀಡುವಂತಾಗಬೇಕು. ಆಗ ಮಾತ್ರ ಕೂಲಿಕಾರರ ಜೀವನ ಮಟ್ಟ ಸುಧಾರಣೆಯಾಗುತ್ತದೆ’ ಎಂದರು.

ಜಿಲ್ಲಾ ಪಂಚಾಯಿತಿ ಸಿಇಒ ಎಸ್‌.ಎಂ.ಜುಲ್ಫೀಕರ್‌ ಉಲ್ಲಾ ಕಾರ್ಯಕ್ರಮ ಉದ್ಘಾಟಿಸಿದರು. ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಪುಟ್ಟಮಾದು ಅಧ್ಯಕ್ಷತೆ ವಹಿಸಿದ್ದರು. ಸಂಘದ ರಾಜ್ಯ ಸಹ ಕಾರ್ಯದರ್ಶಿ ಕೆ.ಹನುಮೇಗೌಡ, ಜಿಲ್ಲಾ ಘಟಕದ ಉಪಾಧ್ಯಕ್ಷ ಬಿ.ಎಂ.ಶಿವಮಲ್ಲಯ್ಯ, ಪ್ರಧಾನ ಕಾರ್ಯದರ್ಶಿ ಬಿ.ಹನುಮೇಶ್‌, ಸರೋಜಮ್ಮ, ಶುಭಾವತಿ, ಶಾಂತಮ್ಮ. ಸಿಐಟಿಯು ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ ಇದ್ದರು.

***
ವಿವರ ಸರಿ ಇದ್ದರೆ ಶೀಘ್ರ ಹಣ ಜಮಾ
‘ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡಿದ 15 ದಿನಗಳಲ್ಲಿ ಖಾತೆಗೆ ಹಣ ಜಮಾ ಆಗುತ್ತದೆ. ವಿವರಗಳನ್ನು ದಾಖಲಿಸುವಲ್ಲಿ, ವಿವರ ನೀಡುವಲ್ಲಿ ತಪ್ಪಾಗಿದ್ದರೆ ಅದನ್ನು ಪರೀಕ್ಷಿಸಿ ಸರಿಮಾಡಿಸಿಕೊಳ್ಳಬೇಕು’ ಉದ್ಯೋಗ ಖಾತ್ರಿ ಯೋಜನೆ ಎಡಿಪಿಸಿ ಮುನಿರಾಜು ಹೇಳಿದರು.

‘ಅರ್ಜಿ ನೀಡಿದ್ದೇವೆ ಎಂದು ಸುಮ್ಮನೆ ಕೂರಬಾರದು. ಕಂಪ್ಯೂಟರ್‌ ಆಪರೇಟರ್‌ಗಳು ತಪ್ಪು ಮಾಡಿರುವ ಸಾಧ್ಯತೆಗಳಿರುತ್ತದೆ. ಇದರಿಂದ ಹಣ ಜಮೆಯಾಗುವುದು ತಡವಾಗುತ್ತದೆ.ಖಾತೆ, ಆಧಾರ್‌ ಸಂಖ್ಯೆ ಜೋಡಣೆಯಾಗಿದೆಯೇ ಎಂಬುದನ್ನು ಖಾತರಿಪಡಿಸಿಕೊಳ್ಳಬೇಕು. ದೂರು ಪರಿಹರಿಸಲು ಕಾಯಕ ಮಿತ್ರ ಆನ್‌ಲೈನ್‌ ಆ್ಯಪ್‌ ಸದುಪಯೋಗ ಮಾಡಿಕೊಳ್ಳಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT