ಭಾರತೀನಗರ: ‘ವಿದ್ಯಾರ್ಥಿಗಳಲ್ಲಿ ಮೊಬೈಲ್, ಸೋಷಿಯಲ್ ಮೀಡಿಯಾ ಮೇಲಿನ ವ್ಯಾಮೋಹ ಜಾಸ್ತಿಯಾಗಿ ವಿದ್ಯಾಭ್ಯಾಸದ ಮೇಲಿನ ಆಸಕ್ತಿ ಕಡಿಮೆಯಾಗುತ್ತಿದೆ. ಕೆಲವು ಮಾಹಿತಿ ಪಡೆಯಲು ಸೋಷಿಯಲ್ ಮೀಡಿಯಾ ಅವಶ್ಯಕತೆ ಇರಲಿ. ಆದರೆ ಮಿತಿಯಲ್ಲಿರಲಿ’ ಎಂದು ಶಾಸಕ ಮಧು ಜಿ.ಮಾದೇಗೌಡ ತಿಳಿಸಿದರು.
ಇಲ್ಲಿಯ ಭಾರತೀ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಭಾರತೀ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಭಾರತಿ ಸಂಯುಕ್ತ ಪಿಯು ಕಾಲೇಜು, ಡಾ. ಜಿ.ಮಾದೇಗೌಡ ಕಾಲೇಜ್ ಆಫ್ ಎಕ್ಸಲೆನ್ಸ್, ಸಹಯೋಗದಲ್ಲಿ ನಡೆದ ಫ್ರೆಶರ್ಸ್ ಡೇ ಆಚರಣೆ, 2023ರ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಟಾಪರ್‌ಗಳಿಗೆ ಅಭಿನಂದನೆ ಮತ್ತು ಪದವಿ ವಿದ್ಯಾರ್ಥಿಗೆ ಉತ್ತಮ ವಿದಾಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ವಿದ್ಯಾಭ್ಯಾಸದ ಕಡೆಗೆ ಗಮನ ಕೇಂದ್ರೀಕರಿಸಿ ಉತ್ತಮ ಅಂಕ ಗಳಿಸಿರಿ. ಸಂಸ್ಥೆಯ ಆಶಯಕ್ಕೆ ವಿದ್ಯಾರ್ಥಿಗಳು, ಪೋಷಕರು ಬದ್ಧರಾಗಿರಬೇಕು. ವಿದ್ಯಾರ್ಥಿಗಳು ಕಾಲೇಜಿನ ನೀತಿ ನಿಯಮಗಳಿಗೆ ಬದ್ಧರಾಗಬೇಕು. ಪೋಷಕರೂ ಕಾಲೇಜಿನ ಜೊತೆಗೆ ಸಹಕರಿಸಬೇಕು’ ಎಂದು ಹೇಳಿದರು.
‘ಕಾಲೇಜಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ, ಇತರೆ ವಿಷಯಗಳ ಕುರಿತು ತರಬೇತಿ ಸೇರಿದಂತೆ ಎಲ್ಲಾ ರೀತಿಯಲ್ಲಿ ವಿದ್ಯಾರ್ಥಿಗಳನ್ನು ಸನ್ನದ್ಧಗೊಳಿಸಲಾಗುತ್ತಿದೆ. ಕಾಲೇಜನ್ನು ರೈತಾಪಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ನಡೆಸುತ್ತಿದ್ದೇವೆ. ಹಣ ಮಾಡಬೇಕೆಂದಿದ್ದರೆ ಬೆಂಗಳೂರಿನಲ್ಲಿ ವಿದ್ಯಾ ಸಂಸ್ಥೆಗಳನ್ನು ತೆರೆಯುತ್ತಿದ್ದೆವು. ಹಣ ಮಾಡುವ ಉದ್ದೇಶವಿಲ್ಲ. ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಬೇಕೆಂಬ ಧ್ಯೆಯ ನಮ್ಮದಾಗಿದೆ’ ಎಂದು ತಿಳಿಸಿದರು.
ಸಂಸ್ಥೆಯ ಕಾರ್ಯದರ್ಶಿ ಬಿ.ಎಂ.ನಂಜೇಗೌಡ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಪ್ರಾಧ್ಯಾಪಕ ರೇವಣ್ಣ, ಭಾರತೀ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸಿ.ವಿ.ಮಲ್ಲಿಕಾರ್ಜುನ್ ಉಪಸ್ಥಿತರಿದ್ದರು.
ಕಳೆದ ಸಾಲಿನಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ಎಸ್‌ಎಸ್‌ಎಲ್‌ಸಿ, ಪಿಯುಸಿ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.