ಶನಿವಾರ, ಫೆಬ್ರವರಿ 4, 2023
18 °C
ಕೇಳುಕೇಳುತ್ತಲೇ ಬಾಲ್ಯದ ಶಿಕ್ಷಣ ಪೂರೈಸಿದ ಡಾ.ಬಿ.ಎಂ.ಮಾಲಾ, ಐಎಎಸ್‌ ಪರೀಕ್ಷೆಗೆ ಸಿದ್ಧತೆ

ಶಾಲೆಯ ಮೆಟ್ಟಿಲು ಹತ್ತಲಿಲ್ಲ, ಕಲಿವ ಛಲ ಬಿಡಲಿಲ್ಲ!

ಎಂ.ಎನ್‌.ಯೋಗೇಶ್‌ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ಎಸ್ಸೆಸ್ಸೆವರೆಗೆ ಶಾಲೆಯ ಮೆಟ್ಟಿಲನ್ನೇ ಹತ್ತದಿದ್ದರೂ ಆಕೆ ಎಂದಿಗೂ ಕಲಿಯುವ ತುಡಿತ ಬಿಟ್ಟುಕೊಟ್ಟವರಲ್ಲ. ಜನ್ಮತಹ ಅಂಧತ್ವ ಕಣ್ತುಂಬಿಕೊಂಡಿದ್ದರೂ ಕನಸು ಕಾಣುವುದನ್ನು ನಿಲ್ಲಿಸಿದವರಲ್ಲ.

ಮಳವಳ್ಳಿ ತಾಲ್ಲೂಕು ಬೆಳಕವಾಡಿಯ ಡಾ.ಬಿ.ಎಂ.ಮಾಲಾ ಸಾಗಿ ಬಂದ ಹಾದಿಯಲ್ಲಿ ಸ್ಫೂರ್ತಿಯ ಸೆಲೆ ಇದೆ. ಕನ್ನಡ ಸಾಹಿತ್ಯದಲ್ಲಿ ಪಿ.ಎಚ್‌ಡಿ ಪೂರೈಸಿ ಐಎಎಸ್‌ ಪರೀಕ್ಷೆಗೆ ತಯಾರಾಗುತ್ತಿರುವ ಅವರು ಯುವ ಸಮುದಾಯಕ್ಕೆ ಅಪರೂಪದ ಮಾದರಿಯಾಗಿ ನಿಲ್ಲುತ್ತಾರೆ. ಬಾಲ್ಯದಲ್ಲಿ ಆಕಾಶವಾಣಿ ಕೇಳ್ಮೆಯೇ ಅವರಿಗೆ ಶಾಲೆಯಾಗಿತ್ತು. 15ನೇ ವಯಸ್ಸಿನಲ್ಲಿ ಖಾಸಗಿಯಾಗಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಕಟ್ಟಿ ತೇರ್ಗಡೆಯಾದ ಅವರು ಪಿಯುಸಿ, ಬಿ.ಎ, ಎಂ.ಎ, ಪಿಎಚ್‌.ಡಿ ಪೂರೈಸಿದ ಹಾದಿ ಬೆರುಗು ಮೂಡಿಸುತ್ತದೆ.

ಮುತ್ತಯ್ಯ– ವೆಂಕಟಮ್ಮ ದಂಪತಿಯ 3ನೇ ಪುತ್ರಿಯಾದ ಮಾಲಾಗೆ ಶಾಲೆಗೆ ತೆರಳುವ ಅವಕಾಶ ಸಿಗಲಿಲ್ಲ. ಸಂಪೂರ್ಣ ಅಂಧರಾಗಿದ್ದ ಕಾರಣಕ್ಕೆ ಮಗಳನ್ನು ಯಾವ ಶಾಲೆಗೆ ಸೇರಿಸಬೇಕು ಎಂಬ ಅರಿವೂ ಆ ತಂದೆ–ತಾಯಿಗಿರಲಿಲ್ಲ. ಮನೆಯಲ್ಲಿ ಉಳಿದ ಮಾಲಾ ಇಬ್ಬರು ಅಕ್ಕಂದಿರು, ಇಬ್ಬರು ತಮ್ಮಂದಿರ ಪಾಠಗಳನ್ನು ಕೇಳುತ್ತಲೇ ಬೆಳೆದರು. ಮಾಲಾಗಾಗಿಯೇ ಸಹೋದರ, ಸಹೋದರಿಯರು ಜೋರಾಗಿ ಓದುವ ಪರಿಪಾಠ ರೂಢಿಸಿಕೊಂಡಿದ್ದರು.

ಆಕಾಶವಾಣಿ ಜೊತೆ ಗೆಳೆತನ ಬೆಳೆಸಿಕೊಂಡ ಮಾಲಾ ಲೋಕಶಿಕ್ಷಣ ಕಲಿಯುತ್ತಾ ಸಾಗಿದರು. ಬಾನುಲಿ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಅಂಧರ ಸಂಸ್ಥೆ (ಎನ್‌ಎಬಿ)ಯ ಚಟುವಟಿಕೆಗಳು ಅರಿವಿಗೆ ಬಂದವು, ಅಂಧರಿಗೆ ಇರುವ ಅವಕಾಶಗಳ ಮಾಹಿತಿ ದೊರೆಯಿತು. ಆಗ ಅವರಿಗೆ ಓದುವ ಕನಸು ಚಿಗುರೊಡೆಯಿತು. ವಯಸ್ಸಿನ ಆಧಾರದ ಮೇಲೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಕಟ್ಟಿದ ಅವರು ಶೇ 69.09 ಅಂಕಗಳೊಂದಿಗೆ ತೇರ್ಗಡೆಯಾದರು.

ಎಸ್ಸೆಎಸ್ಸೆಲ್ಸಿ ಮುಗಿದ ನಂತರ ಅವರ ಕಲಿಕಾ ಹಂತ ಹೊಸ ದಿಕ್ಕು ತೋರಿಸಿತು. ಮಂಡ್ಯದ ಪಿಇಎಸ್‌ ಪದವಿಪೂರ್ವ ಕಾಲೇಜಿಲ್ಲಿ ಪಿಯುಸಿ ಮುಗಿಸಿದರು. ಮೈಸೂರು ಮಹಾರಾಣಿ ಕಾಲೇಜಿನಲ್ಲಿ ಬಿ.ಎ ಪೂರೈಸಿದರು. ಬೆಳಕವಾಡಿಯಲ್ಲಿ ‘ಭಾಗ್ಯಲಕ್ಷ್ಮಿ ಜನಾರ್ಧನ್‌’ ಅವರ ಬಳಿ ಸಂಗೀತ ಕಲಿಯುತ್ತಿದ್ದ ಹಿನ್ನೆಲೆಯಲ್ಲಿ ಸಂಗೀತ ಅವರ ಐಚ್ಛಿಕ ವಿಷಯವಾಯಿತು.

ನಂತರ ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದರು. ಸದಾ ಹುಡುಕಾಟದ ಮನೋಭಾವದ ಮಾಲಾಗೆ ಕಲಿಯುವ ಉತ್ಸಾಹ ತಗ್ಗಲಿಲ್ಲ. ಮುಂದೆ ರಾಷ್ಟ್ರಿಯ ಅರ್ಹತಾ ಪರೀಕ್ಷೆ (ಎನ್‌ಇಟಿ)ಯಲ್ಲೂ ತೇರ್ಗಡೆಯಾದ ಅವರು ನೇರವಾಗಿ ಪಿಎಚ್‌.ಡಿಗೆ ದಾಖಲಾದರು.

ಡಾ.ಷಹಸೀನಾ ಬೇಗಂ ಅವರ ಮಾರ್ಗದರ್ಶನದಲ್ಲಿ ‘ಸುಕನ್ಯಾ ಮಾರುತಿ, ಎಚ್‌.ಎಲ್‌.ಪುಷ್ಪಾ, ಸವಿತಾ ನಾಗಭೂಷಣ ಅವರ ಕಾವ್ಯಗಳಲ್ಲಿ ಬಂಡಾಯ ಮತ್ತು ಮಹಿಳಾ ಧೋರಣೆ’ ವಿಷಯದಲ್ಲಿ ಪ್ರೌಢಪ್ರಬಂಧ ರಚಿಸಿ 2021ರಲ್ಲಿ ಪಿಎಚ್‌.ಡಿ ಪದವಿ ಮುಡಿಗೇರಿಸಿಕೊಂಡರು. ಮನೋಶಕ್ತಿಯಿಂದಲೇ ತಮ್ಮ ಬದುಕು ಕಟ್ಟಿಕೊಂಡಿರುವ ಮಾಲಾ ಯುವ ಸಮುದಾಯಕ್ಕೆ ಸ್ಫೂರ್ತಿಯ ಚಿಲುಮೆಯಾಗಿದ್ದಾರೆ. ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಪರೀಕ್ಷೆಯನ್ನೂ ಬರೆದಿರುವ ಅವರು ಫಲಿತಾಂಶದ ನಿರೀಕ್ಷೆಯಲ್ಲಿದ್ದಾರೆ.

****

ಉತ್ಸಾಹದ ಮುಂದೆ ಯಾವ ನ್ಯೂನತೆಯೂ ಅಡ್ಡಿಯಾಗುವುದಿಲ್ಲ. ನಮಗೆ ಏನೂ ಆಗುವುದಿಲ್ಲ ಎಂದುಕೊಂಡರೆ ಎನೂ ಆಗುವುದಿಲ್ಲ. ಸಕಾರಾತ್ಮಕ ಚಿಂತನೆಯೊಂದಿಗೆ ಹೆಜ್ಜೆ ಇಟ್ಟಿರೆ ಅಂದುಕೊಂಡ ಗುರಿ ಮುಟ್ಟಲು ಸಾಧ್ಯ
–ಡಾ.ಬಿ.ಎಂ.ಮಾಲಾ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು