ಶುಕ್ರವಾರ, ಜೂನ್ 18, 2021
24 °C
ಪಿಎಸ್‌ಎಸ್‌ಕೆ ಮಾದರಿಯಲ್ಲೇ ಹೊರಗುತ್ತಿಗೆ, ಶಾಸಕ ಮುರುಗೇಶ ನಿರಾಣಿ ಟೆಂಡರ್‌ ಸಲ್ಲಿಸುವರೇ?

ಮೈಷುಗರ್‌‌: ಹೆಸರಿಗಷ್ಟೇ ಗ್ಲೋಬಲ್‌ ಟೆಂಡರ್‌

ಎಂ.ಎನ್‌.ಯೋಗೇಶ್‌‌ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ರೈತರ ವಿರೋಧದ ನಡುವೆಯೂ ಮೈಷುಗರ್‌ ಕಾರ್ಖಾನೆಯನ್ನು ಹೊರಗುತ್ತಿಗೆ ನೀಡಲು ಸರ್ಕಾರ ಸಕಲ ಸಿದ್ಧತೆ ನಡೆಸಿದೆ. ಹೆಸರಿಗೆ ಅಂತರರಾಷ್ಟ್ರೀಯ ಮಟ್ಟದ ಟೆಂಡರ್‌ (ಗ್ಲೋಬಲ್‌ ಟೆಂಡರ್‌) ಪ್ರಕ್ರಿಯೆ ನಡೆದರೂ ಅಂತಿಮವಾಗಿ ಪಿಎಸ್‌ಎಸ್‌ಕೆ ಮಾದರಿಯಲ್ಲೇ ಏಕವ್ಯಕ್ತಿಗೆ ಟೆಂಡರ್‌ ಅಂತಿಮಗೊಳ್ಳುವ ಎಲ್ಲಾ ಲಕ್ಷಣ ಗೋಚರಿಸುತ್ತಿವೆ.

ಸರ್ಕಾರ ಈಗಾಗಲೇ ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆಯನ್ನು (ಪಿಎಸ್‌ಎಸ್‌ಕೆ) ಬೀಳಗಿ ಶಾಸಕ, ಉದ್ಯಮಿ ಮುಗುರೇಶ ನಿರಾಣಿ ಅವರ ಕಂಪನಿಗೆ 40 ವರ್ಷಗಳವರೆಗೆ ಗುತ್ತಿಗೆ ನೀಡಿದೆ. ಪಿಎಸ್‌ಎಸ್‌ಕೆ ಮಾದರಿಯಲ್ಲೇ ಮೈಷುಗರ್‌ ಕಾರ್ಖಾನೆಯನ್ನೂ 40 ವರ್ಷಗಳವರೆಗೆ ಹೊರಗುತ್ತಿಗೆ ನೀಡಲು ಸರ್ಕಾರ ಆದೇಶ ಹೊರಡಿಸಿದೆ.

ಶಾಸಕ ನಿರಾಣಿ ಮೈಷುಗರ್‌ ಕಾರ್ಖಾನೆಯನ್ನೂ ಗುತ್ತಿಗೆ ಪಡೆಯುವ ಆಸಕ್ತಿ ತೋರಿದ್ದು ಟೆಂಡರ್‌ನಲ್ಲಿ ಭಾಗವಹಿಸುವ ಘೋಷಣೆ ಮಾಡಿದ್ದಾರೆ. ‘ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಮುರುಗೇಶ ನಿರಾಣಿ ಅವರಿಗೆ ಮೈಷುಗರ್‌ ಕಾರ್ಖಾನೆಯ ಗುತ್ತಿಗೆಯನ್ನೂ ನೀಡುವ ಭರವಸೆ ನೀಡಿದ್ದು ಅವರಿಗೇ ಟೆಂಡರ್‌ ಒಲಿಯಲಿದೆ’ ಎಂದು ಸ್ಥಳೀಯ ಬಿಜೆಪಿ ಮುಖಂಡರೊಬ್ಬರು ವಿಶ್ವಾಸ ವ್ಯಕ್ತಪಡಿಸಿದರು.

‘ಅಂತರರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಟೆಂಡರ್‌ ಪ್ರಕ್ರಿಯೆಯಲ್ಲಿ ಯಾರೂ ಬೇಕಾದರೂ ಭಾಗವಹಿಸಬಹದು. ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆಯನ್ನು ನಾವು ಅತೀ ಹೆಚ್ಚು ₹ 405 ಕೋಟಿಗೆ ಗುತ್ತಿಗೆ ಪಡೆದಿದ್ದೇವೆ. ಟೆಂಡರ್‌ ಆಹ್ವಾನಿಸಿದಾಗ ಅಂದಿನ ಪರಿಸ್ಥಿತಿ ನೋಡಿಕೊಂಡು ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಶಾಸಕ ಮುರುಗೇಶ ನಿರಾಣಿ ತಿಳಿಸಿದರು.

ನಿರಾಣಿ ವಿರುದ್ಧ ಎನ್‌ಎಸ್‌ಎಲ್‌‌?: ಪಿಎಸ್‌ಎಸ್‌ಕೆ ಟೆಂಡರ್‌ ಪ್ರಕ್ರಿಯೆ ನಡೆದಾಗ ಮದ್ದೂರು ತಾಲ್ಲೂಕು, ಕೊಪ್ಪದ ನ್ಯಾಷನಲ್‌ ಶುಗರ್ಸ್‌ ಲಿಮಿಟೆಡ್‌ ಕೂಡ ಟೆಂಡರ್‌ ಸಲ್ಲಿಸಿತ್ತು. ಆದರೆ ತಾಂತ್ರಿಕ ಕಾರಣ ನೀಡಿ ಎನ್‌ಎಸ್‌ಎಲ್‌ ಟೆಂಡರ್‌ ಅರ್ಜಿಯನ್ನು ಸರ್ಕಾರ ತಿರಸ್ಕಾರ ಮಾಡಿತು. ಎನ್‌ಎಸ್‌ಎಲ್‌ ಕಾರ್ಖಾನೆ ಬ್ಯಾಂಕ್‌ಗಳಿಗೆ ಅಪಾರ ಪ್ರಮಾಣದ ಹಣ ಬಾಕಿ ಉಳಿಸಿಕೊಂಡಿದ್ದು ಟೆಂಡರ್‌ ಸಲ್ಲಿಕೆಗೆ ಅರ್ಹತೆ ಪಡೆದಿಲ್ಲ ಎಂದು ಕಾರಣ ನೀಡಲಾಗಿತ್ತು. ನಂತರ ಸರ್ಕಾರ ನಿರಾಣಿ ಕಂಪನಿಗೆ ಏಕವ್ಯಕ್ತಿ ಗುತ್ತಿಗೆಯನ್ನು ಅಂತಿಮಗೊಳಿಸಿತ್ತು.

ಈಗ ಮೈಷುಗರ್‌ಗಾಗಿ ಎನ್‌ಎಸ್‌ಎಲ್‌ ಕಾರ್ಖಾನೆಯೂ ಟೆಂಡರ್‌ ಸಲ್ಲಿಸುವ ಸಾಧ್ಯತೆ ಇದ್ದು ಮತ್ತೆ ‘ನಿರಾಣಿ ವಿರುದ್ಧ ಎನ್‌ಎಸ್‌ಎಲ್‌’ ಪೈಪೋಟಿ ನಡೆಯಲಿದೆ ಎಂದು ಹೇಳಲಾಗುತ್ತಿದೆ.

‘ಎನ್‌ಎಸ್‌ಎಲ್‌ ತಾಂತ್ರಿಕವಾಗಿ ಇನ್ನೊಂದು ಕಾರ್ಖಾನೆಯನ್ನು ಗುತ್ತಿಗೆ ಪಡೆಯುವ ಅರ್ಹತೆ ಹೊಂದಿಲ್ಲ. ಈಗಲೂ ಬ್ಯಾಂಕ್‌ ಬಾಕಿ ವಾವತಿಯಾಗಿಲ್ಲ. ಟೆಂಡರ್‌ ಸಲ್ಲಿಸಿದರೆ ಮತ್ತೆ ತಿರಸ್ಕೃತಗೊಳ್ಳಲಿರುವ ಸಾಧ್ಯತೆಯೇ ಹೆಚ್ಚು’ ಎಂದು ಮುರುಗೇಶ್‌ ನಿರಾಣಿ ಆಪ್ತರೊಬ್ಬರು ತಿಳಿಸಿದರು.

ಜಿಲ್ಲಾಡಳಿತ ಮನವಿ: ಮುಂದಿನ ಮೇ, ಜೂನ್‌ ತಿಂಗಳ ಕಬ್ಬು ಅರೆಯುವ ಹಂಗಾಮಿಗೆ ಕಾರ್ಖಾನೆ ಆರಂಭಿಸಬೇಕು ಎಂದು ಜಿಲ್ಲಾಡಳಿತ ಸರ್ಕಾರಕ್ಕೆ ಮನವಿ ಮಾಡಿದೆ. ಅದರಂತೆ ಡಿಸೆಂಬರ್‌ ತಿಂಗಳಲ್ಲಿ ಟೆಂಡರ್‌ ಪ್ರಕ್ರಿಯೆ ಆರಂಭಗೊಳ್ಳುವ ನಿರೀಕ್ಷೆ ಇದೆ.

‘ಆದಷ್ಟು ಬೇಗ ಕಾರ್ಖಾನೆ ಆರಂಭವಾದರೆ ಕೂಳೆ ಕಬ್ಬನ್ನು ಅರೆಯಬಹುದು. ಪ್ರಸ್ತುತ ಹಂಗಾಮಿನಲ್ಲಿ ಮೈಷುಗರ್‌ ವ್ಯಾಪ್ತಿಯ ಕಬ್ಬನ್ನು ಬೇರೆ ಕಾರ್ಖಾನೆಯಲ್ಲಿ ಅರೆಸಲಾಗುತ್ತಿದೆ. ಶೇ 60ರಷ್ಟು ಕಬ್ಬನ್ನು ಈಗಾಗಲೇ ಅರೆಯಲಾಗಿದೆ’ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ಹೇಳಿದರು.

***********

ರೈತರು ಬೀದಿಗಿಳಿಯಲಿ

‘ಮೈಷುಗರ್‌ ಕಾರ್ಖಾನೆಯನ್ನೂ ಮುರುಗೇಶ ನಿರಾಣಿಯವರಿಗೆ ನೀಡುವ ಗುಮಾನಿ ಮೊದಲಿನಿಂದಲೂ ಇದೆ. ಸರ್ಕಾರ ರೈತರ ಹೆಸರಿನಲ್ಲಿ ಖಾಸಗಿ ಉದ್ಯಮಿಯ ಬೊಕ್ಕಸ ತುಂಬಿಸಲು ಹೊರಟಿದೆ. ಇದರ ವಿರುದ್ಧ ರೈತರು ಮೌನಮುರಿದು, ಬೀದಿಗಿಳಿದು ಹೋರಾಟ ಮಾಡಬೇಕಾದ ಅನಿವಾರ್ಯತೆ ಇದೆ’ ಎಂದು ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನಾಯಕಿ ಸುನಂದಾ ಜಯರಾಂ ಹೇಳಿದರು.

‘ಕಾರ್ಖಾನೆ ಖಾಸಗೀಕರಣ ನಿರ್ಧಾರದ ವಿರುದ್ಧ ಹೋರಾಟದ ರೂಪುರೇಷೆಗಳನ್ನು ಸಿದ್ಧಪಡಿಸಲು ವಿವಿಧ ಸಂಘಟನೆಗಳ ಮುಖಂಡರು ಡಿ.1 ಅಥವಾ 2ರಂದು ಸಭೆ ಸೇರಿ ನಿರ್ಧರಿಸಲಾಗುವುದು. ಜಿಲ್ಲೆಯ ಶಾಸಕರು ಸರ್ಕಾರದ ನಿರ್ಧಾರ ಕುರಿತು ತಮ್ಮ ನಿಲುವು ಸ್ಪಷ್ಟ ಪಡಿಸಬೇಕು’ ಎಂದು ಅವರು ಒತ್ತಾಯಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು