ನಾಗಮಂಗಲ: ಹಲವು ವರ್ಷಗಳ ಹಿಂದೆ ಕೇವಲ 19 ವಿದ್ಯಾರ್ಥಿಗಳಿದ್ದು, ಮುಚ್ಚುವ ಭೀತಿಯಲ್ಲಿದ್ದ ಶಾಲೆಯಲ್ಲಿ ಈಗ 92 ವಿದ್ಯಾರ್ಥಿಗಳು ದಾಖಲಾಗಿದ್ದು, ಜೀವಕಳೆ ಪಡೆದುಕೊಂಡಿದೆ. ಇದಕ್ಕೆ ಶಿಕ್ಷಕ ಎನ್.ಮುರಳೀಧರ ಅವರ ಹೊಸತನದ ಬೋಧನೆ, ಕ್ರಿಯಾಶೀಲ ಚಟುವಟಿಕೆ ಹಾಗೂ ತಂತ್ರಜ್ಞಾನಾಧಾರಿತ ಬೋಧನೆಯೇ ಪ್ರಮುಖ ಕಾರಣವಾಗಿದೆ.
ತಾಲ್ಲೂಕಿನ ವಡೇರಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯಶಿಕ್ಷಕರಾಗಿರುವ ಎನ್.ಮುರಳೀಧರ ಅವರು ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ ನೀಡುವ ನಿಟ್ಟಿನಲ್ಲಿ ಶಾಲೆಯ ಇತರ ಶಿಕ್ಷಕರ ಸಹಕಾರದೊಂದಿಗೆ ಕನ್ನಡ ಮತ್ತು ಇಂಗ್ಲಿಷ್ ಭಾಷೆ ಕಲಿಕೆಗೆ ನೆರವಾಗುವಂತೆ ಭಾಷಾ ಕೊಠಡಿಗಳ ನಿರ್ಮಾಣ ಮಾಡಿದ್ದಾರೆ.
ಕಡಿಮೆ ವೆಚ್ಚದಲ್ಲಿ ಬೋಧನೋಪಕರಣಗಳ ತಯಾರಿಕೆ, ಸ್ಮಾರ್ಟ್ ತರಗತಿಯ ಮೂಲಕ ಬೋಧನೆ, ವಿದ್ಯಾರ್ಥಿಗಳಿಗೆ ಸೃಜನಶೀಲತೆ ಬೆಳೆಸುವ ಚಟುವಟಿಕೆ, ಕ್ಷೇತ್ರ ಭೇಟಿ ಸೇರಿದಂತೆ ವಿಶೇಷ ಕ್ರಮಗಳನ್ನು ಅಳವಡಿಸಿಕೊಂಡಿದ್ದಾರೆ.
ಇಂಗ್ಲಿಷ್ ಮಾಧ್ಯಮ ಪ್ರಾರಂಭ: ಪೋಷಕರ ಬೇಡಿಕೆಯಂತೆ ಶಾಲೆಯಲ್ಲಿ ಎಲ್.ಕೆ.ಜಿ ಮತ್ತು ಯು.ಕೆ.ಜಿ.ಯನ್ನು ಆಂಗ್ಲ ಮಾಧ್ಯಮವನ್ನು ಪ್ರಾರಂಭ ಮಾಡಲು ಇಲಾಖೆಯಿಂದ ಅನುಮತಿಯನ್ನು ಪಡೆದು ಪ್ರಾರಂಭಿಸಿದ್ದಾರೆ. ಅಲ್ಲದೇ ಶಾಲೆಯಲ್ಲಿ ಗುಣಾತ್ಮಕ ಶಿಕ್ಷಣ ನೀಡಲು ತಂಡವನ್ನು ಕಟ್ಟಿಕೊಂಡು ಪ್ರಾಮಾಣಿಕ ಪ್ರಯತ್ನದ ಫಲವಾಗಿ ಸುತ್ತಮುತ್ತಲಿನ ಗ್ರಾಮಗಳ ಪೋಷಕರ ಮೆಚ್ಚುಗೆ ಪಡೆದಿದ್ದಾರೆ.
ಶಾಲಾ ಮಕ್ಕಳ ಹುಟ್ಟುಹಬ್ಬದ ಅಂಗವಾಗಿ ‘ಮೌಲ್ಯಾಧಾರಿತ ಉಡುಗೊರೆ’ ಎಂಬ ಕಾರ್ಯಕ್ರಮದಡಿ ಗೊಂಬೆಗಳನ್ನು ವಿತರಿಸಿ ಶುಭಕೋರುವ ಪದ್ಧತಿಯನ್ನು ನಡೆಸಿಕೊಂಡು ಬಂದಿದ್ದಾರೆ. ಅಲ್ಲದೇ ಬರುವ ಮಕ್ಕಳಿಗೆ ಯಾವುದೇ ರೀತಿಯ ಮೂಲಸೌಕರ್ಯಗಳ ಕೊರತೆಯಾಗದಂತೆ ಗ್ರಾಮಸ್ಥರು ಮತ್ತು ದಾನಿಗಳ ನೆರವಿನಿಂದ ಗ್ರಂಥಾಲಯ ಕೊಠಡಿ ಮತ್ತು ತರಗತಿ ಕೊಠಡಿಗಳನ್ನು ನಿರ್ಮಾಣ ಮಾಡಲು ಕ್ರಮವಹಿಸಿದ್ದಾರೆ.
ಮೆಟ್ರಿಕ್ ಮೇಳ: ಶಿಕ್ಷಕ ಎನ್.ಮುರಳೀಧರ ಅವರು ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿಯಾಗಿದ್ದು, ಕೇವಲ ಪಠ್ಯ ಚಟುವಟಿಕೆಗಳಿಗೆ ಸೀಮಿತವಾಗದೇ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯ ನಿಟ್ಟಿನಲ್ಲಿ ಪಠ್ಯೇತರ ಚಟುವಟಿಕೆಗಳಾದ ಮೆಟ್ರಿಕ್ ಮೇಳ, ಪದವಿ ಪ್ರಧಾನ ಕಾರ್ಯಕ್ರಮ, ಕ್ಷೇತ್ರಭೇಟಿ, ವಿಜ್ಞಾನ ವಸ್ತು ಪ್ರದರ್ಶನ, ಕರಕುಶಲ ಚಟುವಟಿಕೆಗಳ ಆಯೋಜನೆ, ಮಾಡಿ ಕಲಿ ಮಾದರಿಯ ಚಟುವಟಿಕೆಗಳನ್ನು ಆಯೋಜಿಸಿ ವಿದ್ಯಾರ್ಥಿಗಳನ್ನು ಕಲಿಕೆಗೆ ಸೆಳೆದಿದ್ದಾರೆ.
‘ಗುಣಾತ್ಮಕ ಶಿಕ್ಷಣ ನೀಡುತ್ತಿರುವ ಶಿಕ್ಷಕ ಮುರಳೀಧರ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಮುಂದಿನ ದಿನಗಳಲ್ಲಿ ಶಾಲೆಗೆ ಅಗತ್ಯವಾದ ಸೌಕರ್ಯ ಕಲ್ಪಿಸಲು ಅವರೊಂದಿಗೆ ಕೈಜೋಡಿಸುತ್ತೇವೆ’ ಎಂದು ಶಾಲೆಯ ಹಿರಿಯ ವಿದ್ಯಾರ್ಥಿನಿಯಾದ ಮಡಿಕೇರಿ ಉಪವಿಭಾಗದ ಅಬಕಾರಿ ಇಲಾಖೆ ಉಪ ಅಧೀಕ್ಷಕಿ (ಕೆ.ಎ.ಎಸ್) ವಿ.ಬಿ.ರಾಧಾಮಣಿ ಹೇಳಿದರು.
ವಡೇರಪುರ ಸರ್ಕಾರಿ ಶಾಲಾ ಮಕ್ಕಳ ಹುಟ್ಟುಹಬ್ಬದ ಅಂಗವಾಗಿ ‘ಮೌಲ್ಯಾಧಾರಿತ ಉಡುಗೊರೆ’ ಕಾರ್ಯಕ್ರಮದಡಿ ಗೊಂಬೆಗಳನ್ನು ವಿತರಿಸಿರುವ ದೃಶ್ಯ
ಸುಸಜ್ಜಿತ ಸ್ಮಾರ್ಟ್ ತರಗತಿ
ವಿದ್ಯಾರ್ಥಿಗಳಿಗೆ ಕೇವಲ ಸಾಂಪ್ರದಾಯಿಕ ಪದ್ಧತಿಯಲ್ಲಿ ಬೋಧಿಸದೇ ಸ್ಪರ್ಧಾತ್ಮಕ ಯುಗದಲ್ಲಿ ಅಗತ್ಯವಾದ ತಂತ್ರಜ್ಞಾನ ಆಧಾರಿತ ಶಿಕ್ಷಣ ನೀಡುವ ನಿಟ್ಟಿನಲ್ಲಿ ಪ್ರತಿ ತರಗತಿಗೂ ಸಹ ದಾನಿಗಳ ನೆರವನ್ನು ಪಡೆದು ಸ್ಮಾರ್ಟ್ ತರಗತಿಯನ್ನು ಸುಸಜ್ಜಿತವಾಗಿ ನಿರ್ಮಾಣ ಮಾಡಿಕೊಂಡಿದ್ದು ಸ್ಮಾರ್ಟ್ ತರಗತಿಯ ಮೂಲಕ ಇಂಗ್ಲಿಷ್ ಸೇರಿದಂತೆ ವಿಜ್ಞಾನ ಭಾಷೆಗಳ ಕಲಿಕೆಗೂ ಆದ್ಯತೆ ನೀಡಿದ್ದಾರೆ. ಜೊತೆಗೆ ಸ್ಮಾರ್ಟ್ ತರಗತಿಯ ಜೊತೆಗೆ ಕಂಪ್ಯೂಟರ್ ಲ್ಯಾಬ್ ಅನ್ನು ನಿರ್ಮಿಸಿಕೊಂಡಿದ್ದು ಮಕ್ಕಳಿಗೆ ಕಂಪ್ಯೂಟರ್ ಕಲಿಕೆಯ ಜೊತೆಗೆ ಇ–ಲೈಬ್ರರಿ ವ್ಯವಸ್ಥೆ ಮಾಡಿದ್ದಾರೆ.
ಸ್ವಂತ ಖರ್ಚಿನಲ್ಲಿ ಮಕ್ಕಳಿಗೆ ಪ್ರವಾಸ
ಶಾಲೆಯ ಮಕ್ಕಳಿಗೆ ಕಲಿಕೆಯೆಡೆಗೆ ಆಸಕ್ತಿ ಬೆಳೆಸುವ ಜೊತೆಗೆ ಪ್ರೇರಣೆ ನೀಡುವ ನಿಟ್ಟಿನಲ್ಲಿ ಶಿಕ್ಷಕ ಮುರಳೀಧರ ಅವರು ಪ್ರತಿ ವರ್ಷವೂ ತರಗತಿವಾರು ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಗುರುತಿಸಿ ಅವರನ್ನು ತಮ್ಮ ಸ್ವಂತ ಖರ್ಚಿನಲ್ಲಿ ಪ್ರವಾಸಕ್ಕೆ ಕರೆದುಕೊಂಡು ಹೋಗುವ ಪರಿಪಾಠವನ್ನು ಬೆಳೆಸಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.