ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಾಗಮಂಗಲ | ಹಿರಿಕೆರೆ ನೀರು ಕಲುಷಿತ: ಮೀನುಗಳ ಸಾವು

ಪಟ್ಟಣ ವ್ಯಾಪ್ತಿಯಲ್ಲಿ ದುರ್ನಾತ ಬೀರುತ್ತಿರುವ ಕೆರೆನೀರು, ಅಪಾರ ಪ್ರಮಾಣದ ತ್ಯಾಜ್ಯ
Published 1 ಏಪ್ರಿಲ್ 2024, 5:57 IST
Last Updated 1 ಏಪ್ರಿಲ್ 2024, 5:57 IST
ಅಕ್ಷರ ಗಾತ್ರ

ನಾಗಮಂಗಲ: ಪಟ್ಟಣದ ವ್ಯಾಪ್ತಿಯಲ್ಲಿರುವ ಐತಿಹಾಸಿಕ ಹಿನ್ನೆಲೆಯುಳ್ಳ ಹಿರಿಕೆರೆಗೆ ಹಲವು ವರ್ಷಗಳಿಂದ ನಿರಂತರವಾಗಿ ಚರಂಡಿ, ಒಳಚರಂಡಿಯಿಂದ ಹರಿದು ಬರುವ ತ್ಯಾಜ್ಯ ಸೇರಿದಂತೆ ಸಾರ್ವಜನಿಕರು ವಾಣಿಜ್ಯ ತ್ಯಾಜ್ಯಗಳನ್ನು ಕೆರೆ ಬಯಲಿಗೆ ತಂದು ಬಿಸಾಡುತ್ತಿರುವ ಹಿನ್ನೆಲೆಯಲ್ಲಿ ನೀರು ಕಲುಷಿತಗೊಂಡಿದ್ದು ಅಪಾರ ಸಂಖ್ಯೆಯ ಮೀನುಗಳು ಸಾವನ್ನಪ್ಪಿದ್ದು, ಕೆರೆಯನ್ನು ಹರಾಜು ಪಡೆದದ್ದ ಸಂಘದ ಸದಸ್ಯರು ಆತಂಕಗೊಂಡಿದ್ದಾರೆ.

ಪಟ್ಟಣದ ಟಿ.ಬಿ.ಬಡಾವಣೆ ಸೇರಿದಂತೆ ಪಟ್ಟಣ ವ್ಯಾಪ್ತಿಯನ್ನು ಒಳಗೊಂಡಿರುವ ಹಿರಿಕೆರೆಗೆ ಪಟ್ಟಣದ ಸಾರೀಮೇಗಲಕೊಪ್ಪಲು ಗ್ರಾಮದ ಬಳಿ ಚರಂಡಿ ಮತ್ತು ಒಳಚರಂಡಿಯ ತ್ಯಾಜ್ಯಯುಕ್ತ ನೀರು ಅಪಾರ ಪ್ರಮಾಣದಲ್ಲಿ ಬಂದು ಸೇರುತ್ತಿದ್ದು, ನೀರು ಹಸಿರು ಬಣ್ಣಕ್ಕೆ ತಿರಿಗಿದ್ದು, ಜಾನುವಾರುಗಳು ಮತ್ತು ಇತರ ಯಾವುದೇ ಉದ್ದೇಶಕ್ಕೂ ಬಳಕೆಯಾಗದಂತಾಗಿದೆ. ಜೊತೆಗೆ ಪಟ್ಟಣದ ಪಶು ಆಸ್ಪತ್ರೆ ಬಳಿಯಲ್ಲಿ ಪಟ್ಟಣದ ಹಲವು ಬೀದಿಗಳಿಂದ ಬರುವ ಚರಂಡಿ ನೀರು ಕೆರೆ ಸೇರುತ್ತಿದೆ. ಅಲ್ಲದೇ ಪಟ್ಟಣದ ವ್ಯಾಪ್ತಿಯಲ್ಲಿ ಹಲವು ಕಡೆ ಒಳಚರಂಡಿ ಮ್ಯಾನ್ ಹೋಲ್ ಗಳು ಹೊಡೆದಿರುವ ಜೊತೆಗೆ ಇನ್ನೂ ಹಲವು ಕಡೆ ಸರಿಯಾದ ಸಂಪರ್ಕ ಕಲ್ಪಿಸದಿರುವುದರಿಂದ ಒಳಚರಂಡಿಯ ತ್ಯಾಜ್ಯಯುಕ್ತ ನೀಡಿ ಕೆರೆಗೆ ಸೇರುತ್ತಿದೆ. ಜೊತೆಗೆ ಸಾರ್ವಜನಿಕರು ಕೋಳಿ ಅಂಗಡಿಗಳ ತ್ಯಾಜ್ಯ, ಗೃಹೋಪಯೋಗಿ ತ್ಯಾಜ್ಯ, ವಾಣಿಜ್ಯ ಮಳಿಗೆಗಳ ತ್ಯಾಜ್ಯಗಳನ್ನು ಸರಿಯಾಗಿ ನಿರ್ವಹಣೆ ಮಾಡದೇ ಕೆರೆ ಜಾಗದಲ್ಲಿ ತಂದು ಸುರಿಯುವುದರಿಂದ ನೀರು ಮಲೀನಗೊಳ್ಳಲು ಕಾರಣವಾಗುತ್ತಿದೆ‌. ನೀರು ದುರ್ವಾಸನೆ ಪಟ್ಟಣದ ಕೆರೆಯ ವ್ಯಾಪ್ತಿಯಲ್ಲಿ ಹರಡುತ್ತದೆ.

ಅಲ್ಲದೇ ಪಾಲಕೆರೆಗೂ ಸಹ ಚರಂಡಿಯ ತ್ಯಾಜ್ಯಯುಕ್ತ ನೀರು ಹರಿಯುತ್ತಿರುವ ಹಿನ್ನೆಲೆಯಲ್ಲಿ ಕೆಲ ತಿಂಗಳ ಹಿಂದೆ ಅಲ್ಲಿಯೂ ಸಹ ನೀರು ಕಲುಷಿತಗೊಂಡು ಅಪಾರ ಪ್ರಮಾಣದ ಮೀನುಗಳು ಸಾವನ್ನಪ್ಪಿದ್ದವು. ಹಿರಿಕೆರೆ ತುಂಬಿ ಹರಿದಾಗ ತ್ಯಾಜ್ಯವೂ ಸಹ ಅದರೊಂದಿಗೆ ಪಾಲಕೆರೆ ಸೇರುತ್ತಿದೆ. ಕೆರೆ ಕಲುಷಿತವಾಗಿ ಮೀನುಗಳು ಸಾಯುತ್ತಿರುವ ವಿಷಯವನ್ನು ಸಂಬಂಧಿಸಿ ನೀರಾವರಿ ಅಧಿಕಾರಿಗಳ ಗಮನಕ್ಕೆ ತಂದ ನಿಟ್ಟಿನಲ್ಲಿ ಕೆರೆಯನ್ನು ಖಾಲಿ ಮಾಡಿಸಲು ಕ್ರಮವಹಿಸಿದ್ದರು. ಜೊತೆಗೆ ಪುರಸಭೆಯಿಂದ ಅಮ್ಮನಕೆಟ್ಟೆಯ ಬಳಿ ತ್ಯಾಜ್ಯ ಶುದ್ಧೀಕರಣ ಘಟಕವನ್ನು ನಿರ್ಮಾಣ ಮಾಡಲಾಗಿದ್ದರೂ ಸಹ ಅದು ಸರಿಯಾಗಿ ಕಾರ್ಯ ನಿರ್ವಹಿಸದೇ ಕೆಟ್ಟು ಹಲವು ವರ್ಷಗಳೇ ಕಳೆದಿವೆ. ಆ ನಿಟ್ಟಿನಲ್ಲಿ ಅಲ್ಲಿ ತ್ಯಾಜ್ಯಯುಕ್ತ ನೀರು ಹರಿದು ಕೆರೆ ನೀರು ವಿಷಮಯವಾಗುತ್ತಿದೆ. ಜೊತೆಗೆ ಪಟ್ಟಣದ ವ್ಯಾಪ್ತಿಯ ಮಂಡ್ಯ ರಸ್ತೆಯಲ್ಲಿರುವ ಅಮ್ಮನಕಟ್ಟೆ ಕೆರೆಗೂ ಸಹ ಮಂಡ್ಯ ರಸ್ತೆ ಸೇರಿದಂತೆ ವಿವಿಧ ಭಾಗಗಳಿಂದ ಹರಿಯವ ಅಪಾರ ಪ್ರಮಾಣದ ತ್ಯಾಜ್ಯಯುಕ್ತ ಚರಂಡಿ ನೀರು ಕೆರೆಗೆ ಸೇರಿ ನೀರು ಕಲುಷಿತಗೊಂಡಿದ್ದು, ಹಸಿರು ಬಣ್ಣಕ್ಕೆ ತಿರುಗಿ ದುರ್ನಾತ ಬೀರುವ ಸನ್ನಿವೇಶ ಎದುರಾಗಿದೆ. ಜೊತೆಗೆ ಕಲುಷಿತವಾಗಿರುವ ನೀರನ್ನು ಜಾನುವಾರುಗಳಿಗೆ ಕುಡಿಸಿದರೆ ಹಲವು ರೋಗಗಳು ಬರುವ ಭೀತಿಯೂ ಸ್ಥಳೀಯರಲ್ಲಿದೆ. ಕೆರೆ ಕಲುಷಿತಗೊಳ್ಳುವ ಮೊದಲು ಈ ಕಟ್ಟೆಯಲ್ಲಿ ಪಕ್ಷಿತಜ್ಞ ಮನು ಎಂಬುವರು 16 ಬಗೆಯ ಪಕ್ಷಿಗಳನ್ನು ಕೆರೆಯಂಗಳಲ್ಲಿ ಗುರ್ತಿಸಿದ್ದರು. ಆ ನಿಟ್ಟಿನಲ್ಲಿ ಪಟ್ಟಣ ವ್ಯಾಪ್ತಿಯ ಹಿರಿಕೆರೆ, ಅಮ್ಮನಕಟ್ಟೆ ಸೇರಿದಂತೆ ಕೋಟೆ ಬೆಟ್ಟದ ಬಳಿ ಇರುವ ಪಾಲಕೆರೆಗೂ ತ್ಯಾಜ್ಯಯುಕ್ತ ನೀರು ಹರಿಯದಂತೆ ಅಧಿಕಾರಿಗಳು ಕ್ರಮವಹಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ನೀರಾವರಿ ಇಲಾಖೆಯ ಅಧಿಕಾರಿಗಳು ಮತ್ತು ನಿರ್ವಹಣೆ ಮಾಡಬೇಕಾದ ಪುರಸಭೆ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿರುವುದಕ್ಕೆ ಸಾರ್ವಜನಿಕರು ಬೇಸರ ವ್ಯಕ್ತಪಡಿಸುತ್ತಾರೆ.

ಹಿರಿಕೆರೆಯಲ್ಲಿ ಮೀನು ಸಾಕಲು ಮತ್ತು ಹಿಡಿಯಲು ಗಂಗಾಪರಮೇಶ್ವರಿ ಸಂಘವು ಗುತ್ತಿಗೆ ಪಡೆದಿದ್ದು, ಮೀನುಗಳನ್ನು ಸಾಕಿದ್ದಾರೆ. ಈಗ ಪಟ್ಟಣದ ಹಲವು ಕಡೆಗಳಿಂದ ತ್ಯಾಜ್ಯಯುಕ್ತ ನೀರು ಕೆರೆ ಸೇರುತ್ತಿರುವ ಜೊತೆಗೆ ಉಷ್ಣಾಂಶವು ಏರಿಕೆಯಾಗಿರುವುದರಿಂದ ಮೀನುಗಳು ಸಾಯುತ್ತಿವೆ. ಲಕ್ಷಾಂತರ ರೂಪಾಯಿಗೆ ಕೆರೆಯನ್ನು ಹರಾಜು ಪಡೆದಿದ್ದು, ಮೀನುಗಳು ಸಾಯುತ್ತಿರುವ ಹಿನ್ನೆಲೆಯಲ್ಲಿ ನಷ್ಟವಾಗುತ್ತಿದೆ. ನೀರನ್ನು ಶುದ್ಧಗೊಳಿಸುವ ನಿಟ್ಟಿನಲ್ಲಿ ಕೆರೆಗೆ ರಾಸಾಯನಿಕವನ್ನು ಅಳವಡಿಸುತ್ತಿದ್ದೇವೆ ಎಂದು ಮೀನಗಾರರಾದ ದೊಡ್ಡಯ್ಯ ಮತ್ತು ಕೆಂಪರಾಜು ಹೇಳಿದರು.

ನಾಗಮಂಗಲ ಪಟ್ಟಣದ ವ್ಯಾಪ್ತಿಯ ಸಾರೀಮೇಗಲ ಕೊಪ್ಪಲಿನ ಬಳಿ ತ್ಯಾಜ್ಯಯುಕ್ತ ಚರಂಡಿ ನೀರು ಕೆರೆಗೆ ಸೇರುತ್ತಿರುವುದು.
ನಾಗಮಂಗಲ ಪಟ್ಟಣದ ವ್ಯಾಪ್ತಿಯ ಸಾರೀಮೇಗಲ ಕೊಪ್ಪಲಿನ ಬಳಿ ತ್ಯಾಜ್ಯಯುಕ್ತ ಚರಂಡಿ ನೀರು ಕೆರೆಗೆ ಸೇರುತ್ತಿರುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT