ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ: ನವೋದಯದತ್ತ ‘ಕನ್ನಿಕಾ’ ದಾರಿದೀಪ

25 ವರ್ಷಗಳ ಶೈಕ್ಷಣಿಕ ತರಬೇತಿಗೆ ‘ಕಿತ್ತೂರಿ ರಾಣಿ ಚನ್ನಮ್ಮ’ ಪ್ರಶಸ್ತಿ ಘೋಷಣೆ
Last Updated 7 ಮಾರ್ಚ್ 2022, 20:15 IST
ಅಕ್ಷರ ಗಾತ್ರ

ಮಂಡ್ಯ: ಕಬ್ಬಿಣದ ಕಡಲೆಯಂತಿರುವ ಗಣತವನ್ನು ಅವರು ಸರಳಾತಿ ಸರಳ ವಿಧಾನಗಳ ಮೂಲಕ ಬಿಡಿಸಿ ಮಕ್ಕಳ ಮನಸ್ಸಿಗಿಳಿಸುತ್ತಾರೆ. ಮಾತೃಭಾಷೆಯಲ್ಲೇ ಬೋಧನೆ ಮಾಡಿ ಮನಸೂರೆಗೊಳ್ಳುತ್ತಾರೆ. ಮಕ್ಕಳಿಗಾಗಿ ‘ನವೋದಯ’ ಸೇರಿ ಹಲವು ವಸತಿ ಶಾಲೆಗಳ ಸ್ಪರ್ಧಾತ್ಮಕ ಪರೀಕ್ಷೆಗಳ ಬಾಗಿಲು ತೆರೆಯುತ್ತಾರೆ.

ಮಂಡ್ಯ, 4ನೇ ಕ್ರಾಸ್‌ನಲ್ಲಿರುವ ಕನ್ನಿಕಶಿಲ್ಪ ನವೋದಯ ತರಬೇತಿ ಕೇಂದ್ರದ ಸಂಸ್ಥಾಪಕಿ ಎಚ್‌.ಆರ್‌.ಕನ್ನಿಕಾ ಕಳೆದ 25 ವರ್ಷಗಳಿಂದ ಮಕ್ಕಳಲ್ಲಿ ಸ್ಪರ್ಧಾತ್ಮಕ ಮನೋಭಾವ ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶಿಕ್ಷಣದ ಜೊತೆಗೆ ಸಾಹಿತ್ಯ, ಪರಿಸರ, ಸಮಾಜ ಸೇವೆಯಲ್ಲೂ ಗುರುತಿಸಿಕೊಂಡಿರುವ ಅವರಿಗೆ ಕರ್ನಾಟಕ ಸರ್ಕಾರ ಈ ಬಾರಿಯ ಮಹಿಳಾ ದಿನಾಚರಣೆ ಅಂಗವಾಗಿ ‘ಕಿತ್ತೂರು ರಾಣಿ ಚೆನ್ನಮ್ಮ’ ಪ್ರಶಸ್ತಿ ಘೋಷಣೆ ಮಾಡಿದೆ.

ನವೋದಯ ವಸತಿ ಶಾಲೆ, ಸೈನಿಕ ಶಾಲೆ, ಅಳಿಕೆ ವಸತಿ ಶಾಲೆ, ರಾಮಕೃಷ್ಣ ಆಶ್ರಮ, ಕಿತ್ತೂರು ರಾಣಿ ಚೆನ್ನಮ್ಮ, ಅಂಬೇಡ್ಕರ್‌, ಮೊರಾರ್ಜಿ ದೇಸಾಯಿ ವಸತಿಶಾಲೆಗಳ ಪರೀಕ್ಷೆ ಎದುರಿಸುವ ಮಕ್ಕಳಿಗೆ ಕನ್ನಿಕಾ ಸ್ಫೂರ್ತಿಯ ಚಿಲುಮೆಯಾಗಿದ್ದಾರೆ. ಇಲ್ಲಿ ತರಬೇತಿ ಪಡೆದ ಸಾವಿರಾರು ಮಕ್ಕಳು ಪ್ರತಿಷ್ಠಿತ ಶಾಲೆಗಳಲ್ಲಿ ದಾಖಲಾತಿ ಪಡೆದಿದ್ದಾರೆ. 2020ರಲ್ಲಿ ಅತೀ ಹೆಚ್ಚು ಮಕ್ಕಳು ನವೋದಯ ಶಾಲೆಗೆ ಪ್ರವೇಶಾತಿ ಪಡೆದಿದ್ದು ‘ಕರ್ನಾಟಕ ಬುಕ್‌ ಆಫ್‌ ರೆಕಾರ್ಡ್‌’ನಲ್ಲಿ ದಾಖಲಾತಿ ಪಡೆದಿದ್ದಾರೆ.

1996–97ರಲ್ಲಿ ಆರಂಭವಾದ ತರಬೇತಿ ಸಂಸ್ಥೆ ಇಲ್ಲಿಯವರೆಗೂ ನಿರಂತರವಾಗಿ ನಡೆದುಕೊಂಡು ಬಂದಿದೆ. ಬಡ, ರೈತ ಮಕ್ಕಳಿಗೆ, ಅಂಗವಿಕಲ ಮಕ್ಕಳಿಗೆ ಉಚಿತವಾಗಿ ತರಬೇತಿ ನೀಡುವ ಅವರು ಮಕ್ಕಳ ಉತ್ತಮ ಭವಿಷ್ಯಕ್ಕೆ ಬುನಾದಿ ಹಾಕಿಕೊಟ್ಟಿದ್ದಾರೆ. ಅವರಿಂದ ತರಬೇತಿ ಪಡೆದವರು ಇಂದು ಐಎಎಸ್‌, ಕೆಎಎಸ್‌ ಹುದ್ದೆ ಗಳಿಸಿದ್ದಾರೆ.

ಭಾನುವಾರ ರಜೆಯನ್ನೂ ನೀಡದೆ ವಿವಿಧ ಬ್ಯಾಚ್‌ಗಳಲ್ಲಿ ತರಬೇತಿ ನೀಡುವ ಅವರು ಮಕ್ಕಳಲ್ಲಿ ಸವಾಲು ಸ್ವೀಕರಿಸುವ ಗುಣ ಬೆಳೆಸುತ್ತಾರೆ. ಪರೀಕ್ಷೆ ಮಾತ್ರವಲ್ಲದೇ ಬದುಕಿನ ಸವಾಲುಗಳನ್ನು ಸ್ಪರ್ಧಾತ್ಮಕವಾಗಿ ಸ್ವೀಕರಿಸುವ ಮನೋಭಾವ ಬಿತ್ತುತ್ತಿದ್ದಾರೆ. ಶಿಸ್ತಿನ ಸಿಪಾಯಿಯಂತಿರುವ ಅವರು ಸಮಯ ಪರಿಪಾಲನೆಗೆ ಅತೀ ಹೆಚ್ಚು ಮಹತ್ವ ಕೊಡುತ್ತಾರೆ. ‘ಸಮಯ ಪಾಲನೆ, ನಿರಂತರ ಕಲಿಕೆಯಿಂದ ಯಾವುದೇ ಸ್ಪರ್ಧೆ ಎದುರಿಸಬಹುದು’ ಎಂಬ ತತ್ವ ನಂಬಿರುವ ಅವರು ಮಕ್ಕಳ ಮನಸ್ಸಿನಲ್ಲೂ ಅದನ್ನು ತುಂಬುವ ಕೆಲಸ ಮಾಡುತ್ತಿದ್ದಾರೆ. ಅದಕ್ಕಾಗಿ ಪೋಷಕರನ್ನೂ ಸಿದ್ಧಗೊಳಿಸುತ್ತಿದ್ದಾರೆ.

ಗಣಿತದಲ್ಲಿ ಎಂ.ಎಸ್ಸಿ, ಕನ್ನಡ, ಸಮಾಜ ವಿಜ್ಞಾನದಲ್ಲಿ ಎಂ.ಎ, ಬಿ.ಇಡಿ, ಎಂ.ಫಿಲ್‌, ಹಿಂದಿ ಬಿ.ಇಡಿ ಶಿಕ್ಷಣ ಪಡೆದಿರುವ ಅವರು ಮಕ್ಕಳ ತರಬೇತಿಗೆ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದಾರೆ. ಸಾಹಿತಿಯಾಗಿಯೂ ಗುರುತಿಸಿಕೊಂಡಿರುವ ಅವರು ‘ಮುನ್ನಡೆ’, ‘ಮೌನದಿಂದಿರು’ ಕವನ ಸಂಕಲಕ ಪ್ರಕಟಿಸಿದ್ದಾರೆ. ಪರಿಸರ ದಿನಾಚರಣೆ ಸಂದರ್ಭದಲ್ಲಿ ಗಿಡ ವಿತರಣೆ ಮಾಡಿ ಪರಿಸರ ಪ್ರೇಮ ಮೆರೆದಿದ್ದಾರೆ.

ಅವರ ಶೈಕ್ಷಣಿಕ, ಸಾಹಿತ್ಯ ಸೇವೆಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಬುದ್ಧ ಶಾಂತಿ ರಾಷ್ಟ್ರೀಯ ಪ್ರಶಸ್ತಿ, ಸರಸ್ವತಿ ಸದ್ಭಾವನಾ ಪ್ರಶಸ್ತಿ, ಶಿಕ್ಷಣ ರತ್ನ, ಸಿದ್ಧಗಂಗಾಶ್ರೀ ಪ್ರಶಸ್ತಿಗಳು ಸಂದಿವೆ.

********

ಹೊರ ಜಿಲ್ಲೆಗಳಲ್ಲೂ ಪ್ರಸಿದ್ಧಿ

ಕನ್ನಕಶಿಲ್ಪ ನವೋದಯ ತರಬೇತಿ ಸಂಸ್ಥೆ ಮಂಡ್ಯ ಜಿಲ್ಲೆಗೆ ಮಾತ್ರ ಸೀಮಿತವಾಗಿಲ್ಲ. ಮೈಸೂರು, ಬೆಂಗಳೂರು, ಚಾಮರಾಜನರ, ಕೊಡಗು, ರಾಮನಗರ ಜಿಲ್ಲೆಗಳ ಮಕ್ಕಳು ಇಲ್ಲಿ ತರಬೇತಿ ಪಡೆಯುತ್ತಾರೆ. ಹೊರ ಜಿಲ್ಲೆಯ ಮಕ್ಕಳಿಗಾಗಿ ವಾರಾಂತ್ಯದಲ್ಲಿ ವಿಶೇಷ ತರಗತಿ ನಡೆಸಲಾಗುತ್ತದೆ.

‘ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಬಂದಿರುವುದಕ್ಕೆ ಖುಷಿಯಾಗಿದೆ. ಈ ಗೌರವವನ್ನು ನಮ್ಮ ಸಂಸ್ಥೆಯ ಮಕ್ಕಳು ಹಾಗೂ ಎಲ್ಲಾ ಪೋಷಕರಿಗೆ ಅರ್ಪಿಸುತ್ತೇನೆ’ ಎಂದು ಕನ್ನಿಕಾ ತಿಳಿಸಿದರು. ಅವರನ್ನು ಸಂಪರ್ಕಿಸಲು ಮೊ: 9538325946 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT