ಬುಧವಾರ, ಆಗಸ್ಟ್ 4, 2021
20 °C

ಕೆಆರ್‌ಎಸ್‌ ಸಮೀಪ ರಾತ್ರಿ ಪಾರ್ಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ಕೆಆರ್‌ಎಸ್‌ ಜಲಾಶಯದಿಂದ ಅರ್ಧ ಕಿ.ಮೀ ದೂರದ ತೋಟವೊಂದರಲ್ಲಿ ಲಾಕ್‌ಡೌನ್‌ ಕರ್ಫ್ಯೂ ಉಲ್ಲಂಘಿಸಿ ಬುಧವಾರ ರಾತ್ರಿ ನೂರಾರು ಜನರು ಪಾಲ್ಗೊಂಡು ಔತಣಕೂಟ ಆಯೋಜನೆ ಮಾಡಿರುವುದು ಬೆಳಕಿಗೆ ಬಂದಿದೆ.

ತೋಟ ಕಾವೇರಿ ನದಿ ತೀರದಲ್ಲಿದ್ದು ರಾತ್ರಿ 11 ಗಂಟೆಯಾದರೂ ಔತಣಕೂಟ ನಡೆಯುತ್ತಿತ್ತು. ಪೆಂಡಾಲ್‌ ಹಾಕಿ, ಆರ್ಕೆಸ್ಟ್ರಾ ಆಯೋಜನೆ ಮಾಡಲಾಗಿತ್ತು. ಧ್ವನಿಯಿಂದಾಗಿ ಕಿರಿಕಿರಿ ಅನುಭವಿಸಿದ ಸ್ಥಳೀಯರು ಪಾರ್ಟಿ ಮಾಡುತ್ತಿರುವವರನ್ನು ಪ್ರಶ್ನಿಸಿದ್ದಾರೆ.ಇದಕ್ಕೆ ಅವರು ಉದ್ಧಟತನದಿಂದ ಉತ್ತರ ನೀಡಿದ್ದಾರೆ.

ತೋಟ ಮೈಸೂರಿನ ಸಂಜಯ್‌ ಅವರಿಗೆ ಸೇರಿದ್ದು ಕಾರುಗಳಲ್ಲಿ ಬಂದು ಪಾರ್ಟಿ ನಡೆಸುತ್ತಿದ್ದರು. ಸ್ಥಳೀಯರು ಛಾಯಾಚಿತ್ರ, ವಿಡಿಯೊ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ನಂತರ ಪ್ರಕರಣ ಬೆಳಕಿಗೆ ಬಂದಿದೆ.

ಮೈಸೂರು–ಬೆಂಗಳೂರು ಕಡೆಯಿಂದ ಬಂದಿರುವ ಶ್ರೀಮಂತರು ರೇವ್‌ ಪಾರ್ಟಿ ಮಾಡುತ್ತಿದ್ದು, ಕುಡಿದು, ನೃತ್ಯ ಮಾಡುತ್ತಿದ್ದರು. ಪೊಲೀಸರಿಗೆ ಈ ವಿಷಯ ತಿಳಿದಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆರೋಪಿಸಿದರು.

‘ತೋಟದಲ್ಲಿ ಜನ್ಮದಿನ ಆಚರಣೆ ಮಾಡುತ್ತಿದ್ದರು ಎಂಬ ವಿಷಯ ಗೊತ್ತಾಗಿದೆ. ಯಾರ ಜನ್ಮದಿನ ಎಂಬ ಮಾಹಿತಿ ತಿಳಿಯಬೇಕಾಗಿದೆ, ಈ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ. ಔತಣಕೂಟ ಕುರಿತು ಯಾವುದೇ ಅನುಮತಿ ಪಡೆದಿಲ್ಲ. ರಾತ್ರಿ ಕರ್ಫ್ಯೂ ಜಾರಿಯಲ್ಲಿದ್ದು ಐವರಿಗಿಂತ ಹೆಚ್ಚು ಜನರು ಗುಂಪು ಸೇರುವಂತಿಲ್ಲ. ಆದರೆ ನಿಯಮ ಉಲ್ಲಂಘಿಸಿ ಪಾರ್ಟಿ ನಡೆಸಿದವರ ವಿರುದ್ಧ ಪ್ರಕರಣ ದಾಖಲು ಮಾಡಲಾಗುವುದು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಪರಶುರಾಮ್‌ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು