ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ | ಪ್ರಸಕ್ತ ವರ್ಷ ಮೈಷುಗರ್‌ ಕಾರ್ಯಾರಂಭ ಕಷ್ಟ: ನಾರಾಯಣಗೌಡ

ಜನಪ್ರತಿನಿಧಿಗಳು, ಸಂಘಟನೆ ಸದಸ್ಯರಲ್ಲಿ ಇಲ್ಲದ ಒಮ್ಮತ; ಸಚಿವ ಕೆ.ಸಿ.ನಾರಾಯಣಗೌಡ
Last Updated 3 ಜೂನ್ 2020, 13:44 IST
ಅಕ್ಷರ ಗಾತ್ರ

ಮಂಡ್ಯ: ‘ಜಿಲ್ಲೆಯ ಜನಪ್ರತಿನಿಧಿಗಳು, ರೈತ ಮುಖಂಡರು, ಸಂಘಟನೆಗಳ ಮುಖಂಡರಲ್ಲಿ ಒಮ್ಮತ ಇಲ್ಲದಿರುವುದೇ ಮೈಷುಗರ್‌ ಕಾರ್ಖಾನೆ ಪ್ರಾರಂಭಕ್ಕೆ ಹಿನ್ನಡೆಯಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ ಕಾರ್ಖಾನೆ ಪ್ರಾರಂಭವಾಗುವುದು ಕಷ್ಟ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಚಿವ ಕೆ.ಸಿ.ನಾರಾಯಣಗೌಡ ಹೇಳಿದರು.

ಸಚಿವರಾಗಿ ನೂರು ದಿನ ಪೂರೈಸಿದ ಹಿನ್ನೆಲೆಯಲ್ಲಿ ಬುಧವಾರ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

‘ಈ ಹಿಂದೆ ಸರ್ಕಾರ ಖಾಸಗಿ ನಿರ್ವಹಣೆಗೆ ವಹಿಸಲು ನಿರ್ಧರಿಸಿತ್ತು. ಆದರೆ ಜನಪ್ರತಿನಿಧಿಗಳು, ರೈತ ಮುಖಂಡರಲ್ಲಿ ಇದಕ್ಕೆ ಒಮ್ಮತ ಮೂಡಲಿಲ್ಲ. ಒಂದು ಗುಂಪು, ಕಾರ್ಯಾಚರಣೆ ಮತ್ತು ನಿರ್ವಹಣೆಗೆ (ಒ ಅಂಡ್‌ ಎಂ) ಒಪ್ಪಿದರೆ ಮತ್ತೊಂದು ಗುಂಪು ಸರ್ಕಾರಿ ಸ್ವಾಮ್ಯದಲ್ಲೇ ಉಳಿಯಬೇಕು ಎಂದು ಒತ್ತಾಯಿಸಿತು. ಇದರಿಂದ ಗೊಂದಲ ಸೃಷ್ಟಿಯಾಗಿ ಸರ್ಕಾರಕ್ಕೆ ಸ್ಪಷ್ಟ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ’ ಎಂದರು.

‘ಸಚಿವನಾಗಿ ಅಧಿಕಾರಿ ಸ್ವೀಕರಿಸಿದ ನಂತರ ಕೆಡಿಪಿ ಸಭೆ ನಡೆಸಿದ್ದೆ. ಆ ಸಂದರ್ಭದಲ್ಲಿ ಹಲವು ಜನಪ್ರತಿನಿಧಿಗಳು ಸಭೆಗೆ ಬಂದಿರಲಿಲ್ಲ. ಅಲ್ಲಿಯೂ ಕೆಲವರು ಒ ಅಂಡ್‌ ಎಂಗೆ ನೀಡಬೇಕು ಎಂದರೆ ಹಲವರು ಬೇಡ ಎಂದರು. ಇತ್ತೀಚೆಗೆ ಮುಖ್ಯ ಮಂತ್ರಿ ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲೂ ಇದೇ ಅಭಿಪ್ರಾಯ ವ್ಯಕ್ತವಾಯಿತು. ಅದಕ್ಕೆ ಮುಖ್ಯಮಂತ್ರಿಗಳು, ಒಮ್ಮತದ ಅಭಿಪ್ರಯಾಯಕ್ಕೆ ಬನ್ನಿ ಎಂದು ಹೇಳಿ ಕಳುಹಿಸಿದರು’ ಎಂದರು.

ಮೈಷುಗರ್‌ ವಿಚಾರದಲ್ಲಿ ಶಾಸಕರು, ಸಚಿವರ ಹೊಂದಾಣಿಕೆ ಬರುವುದಿಲ್ಲ. ರೈತ ಮುಖಂಡರು ಮೊದಲು ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಬೇಕು. ಆನಂತರ ಅದನ್ನು ಜಾರಿಗೊಳಿಸಲು ಮುಖ್ಯಮಂತ್ರಿ ಅವರನ್ನು ಒತ್ತಾಯಿಸಲಾಗುವುದು’ ಎಂದರು.

ಕೋವಿಡ್‌ ನಿಯಂತ್ರಣ: ‘ಮುಂಬೈನಿಂದ 1,567, ರಾಜಸ್ತಾನದಿಂದ 25, ಗುಜರಾತ್‌ನಿಂದ 30, ಕೇರಳದಿಂದ 19, ಹೈದರಾಬಾದ್‌ನಿಂದ 10, ಬಿಹಾರದಿಂದ 3 ಮಂದಿ ಜಿಲ್ಲೆಗೆ ಹಿಂದಿರುಗಿದ್ದಾರೆ. ಕೊರೊನಾ ಸೋಂಕು ನಿಯಂತ್ರಣಕ್ಕೆ ಸರ್ಕಾರದಿಂದ ಜಿಲ್ಲೆಗೆ ₹18.57ಕೋಟಿ ಬಿಡುಗಡೆಯಾಗಿದೆ. ಇದರಲ್ಲಿ ₹2.5ಕೋಟಿ ಖರ್ಚು ಮಾಡಲಾಗಿದೆ. ಜಿಲ್ಲೆಯಲ್ಲಿ ತೆಗೆದುಕೊಂಡ ಕಟ್ಟುನಿಟ್ಟಿನ ಕ್ರಮಗಳಿಂದ ಕೋವಿಡ್‌–19 ನಿಯಂತ್ರಣಕ್ಕೆ ಬರುತ್ತಿದೆ’ ಎಂದರು.

‘ಪ್ರತಿ ಹೆಕ್ಟೇರ್‌ ಹೂವಿನ ಬೆಳೆಗೆ ₹ 25ಸಾವಿರ, ಹಣ್ಣು ಮತ್ತು ತರಕಾರಿ ಬೆಳೆ ಹೆಕ್ಟೇರ್‌ಗೆ ₹15ಸಾವಿರದಂತೆ ಜಿಲ್ಲೆಯ 766 ಹೆಕ್ಟೇರ್‌ ಪ್ರದೇಶದ ವಿವಿಧ ಹೂವಿನ ಬೆಳೆ ₹ 2 ಕೋಟಿ ಪರಿಹಾರ ನೀಡಲಾಗುವುದು. 4,800ಹೆಕ್ಟೇರ್‌ ಹಣ್ಣು ಮತ್ತು ತರಕಾರಿ ಬೆಳೆಗೆ ₹ 6 ಕೋಟಿ ಪರಿಹಾರವನ್ನು ಇನ್ನೊಂದು ವಾರದಲ್ಲಿ ರೈತರ ಖಾತೆಗೆ ಜಮೆ ಮಾಡಲಾಗುವುದು. ಇದು ಗ್ರೀನ್‌ ಹೌಸ್‌ ಬೆಳೆಗಾರರಿಗೆ ಅನ್ವಯಿಸುವುದಿಲ್ಲ’ ಎಂದರು.

‘ಕೆ.ಆರ್‌.ಪೇಟೆಯಲ್ಲಿನ ಮೆಗಾ ಫುಡ್‌ ಪಾರ್ಕ್‌ ನಿರ್ಮಾಣಕ್ಕೆ ಖಾಸಗಿ ಸಂಸ್ಥೆ ಅನುಮತಿ ಪಡೆದಿದ್ದು, ಇಲ್ಲಿಯವರೆಗೂ ಕೆಲಸ ಪ್ರಾರಂಭವಾಗಿಲ್ಲ. ಈ ಸಂಬಂಧ 4 ತಿಂಗಳ ಹಿಂದೆ ನೋಟಿಸ್‌ ಕಳುಹಿಸಲಾಗಿದೆ. ಕಂಪನಿ 12 ತಿಂಗಳ ಕಾಲಾವಕಾಶ ಕೇಳಿದ್ದು ಕೇಂದ್ರ ಸರ್ಕಾರದಿಂದಲೂ ಸಬ್ಸಿಡಿ ಹಣ ಪಡೆದಿದೆ’ ಎಂದರು.

ಬಿಜೆಪಿ ಮುಖಂಡರಾದ ಡಾ.ಸಿದ್ದರಾಮಯ್ಯ, ಚಂದಗಾಲು ಶಿವಣ್ಣ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವಿಜಯ್‌ ಕುಮಾರ್‌, ಮುಡಾ ಅಧ್ಯಕ್ಷ ಆರ್‌. ಶ್ರೀನಿವಾಸ್‌ ಇದ್ದರು.

ರೇಷ್ಮೆ ಗೂಡು: ₹ 40–50 ಪ್ರೋತ್ಸಾಹ ಧನ

‘ರೇಷ್ಮೆ ಗೂಡು ಹಿಂದಿಗಿಂತ ಕಡಿಮೆ ದರದಲ್ಲಿ ಮಾರಾಟವಾಗುತ್ತಿದ್ದು, ರೈತರಿಗೆ ಉತ್ತೇಜನ ನೀಡಲು ಪ್ರತಿ ಕೆ.ಜಿ. ರೇಷ್ಮೆ ಗೂಡಿಗೆ ₹40–50 ಪ್ರೋತ್ಸಾಹಧನ ನೀಡಲಾಗುವುದು’ ಎಂದು ಸಚಿವ ನಾರಾಯಣಗೌಡ ಹೇಳಿದರು.

‘ಲಾಕ್‌ಡೌನ್‌ ಕಾರಣದಿಂದ ಮದುವೆಗಳು ನಡೆಯದೆ ರೇಷ್ಮೆ ಸೀರೆಗಳು ಮಾರಾಟವಾಗುತ್ತಿರಲಿಲ್ಲ. ಇದರಿಂದ ಗೂಡಿನ ಬೆಲೆ ಕುಸಿದಿತ್ತು. ಇದು ರೇಷ್ಮೆ ಬೆಳೆಗಾರರ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡಿತ್ತು. ಇದನ್ನು ತಡೆದು, ಪ್ರೋತ್ಸಾಹ ಧನ ನೀಡಲು ನಿರ್ಧರಿಸಲಾಗಿದೆ’ ಎಂದರು.

‘ರಾಜ್ಯದಲ್ಲಿನ 41 ರೇಷ್ಮೆ ಮಾರುಕಟ್ಟೆ ಪೈಕಿ 14 ಮಾರುಕಟ್ಟೆ ಲಾಕ್‌ಡೌನ್‌ ಸಂದರ್ಭದಲ್ಲಿ ತೆರೆದಿರಲಿಲ್ಲ. ಈ ಸಂಬಂಧ ನಿರ್ಲಕ್ಷ್ಯ ವಹಿಸಿದ್ದ ಅಧಿಕಾರಿಗಳನ್ನು ಅಮಾನತುಗೊಳಿಸಿ ಮಾರುಕಟ್ಟೆಯನ್ನು ತೆರೆಸಲಾಯಿತು’ ಎಂದರು.

‘ರೇಷ್ಮೆ ರೀಲರ್ಸ್‌ಗಳಿಗೆ ಉತ್ತೇಜನ ನೀಡಲು ₹2ಲಕ್ಷ ಅಡಮಾನ ಸಾಲ ನೀಡಲು ₹50ಕೋಟಿ ಬಿಡುಗಡೆ ಮಾಡಲಾಗಿದೆ. ಇಲ್ಲಿಯವರೆಗೆ ₹ 7ಕೋಟಿ ಸಾಲ ನೀಡಲಾಗಿದೆ. ರೀಲರ್ಸ್‌ಗಳಿಂದ ರೇಷ್ಮೆ ನೂಲನ್ನು ಕರ್ನಾಟಕ ರೇಷ್ಮೆ ಮಾರಾಟ ಮಂಡಳಿ ವತಿಯಿಂದ ಖರೀದಿಸಲಾಗುತ್ತಿದ್ದು, ಇಲ್ಲಿಯವರೆಗೆ ₹3 ಕೋಟಿ ಮೊತ್ತದ ರೇಷ್ಮೆ ನೂಲು ಖರೀದಿಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT