ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೆಟ್ರೋಲ್‌ ಬಂಕ್‌ಗಳಲ್ಲಿ ನೀರಿಲ್ಲ, ಏರ್‌ ಇಲ್ಲ!

ಸಿಬ್ಬಂದಿಗೂ ಶೌಚಾಲಯ ಇಲ್ಲ, ಹಣ ಸಂಪಾದನೆ ಮಾತ್ರ ಮಾಲೀಕರ ಆದ್ಯತೆ
Last Updated 9 ಜನವರಿ 2022, 19:31 IST
ಅಕ್ಷರ ಗಾತ್ರ

ಮಂಡ್ಯ: ಜಿಲ್ಲೆಯಾದ್ಯಂತ 200ಕ್ಕೂ ಹೆಚ್ಚು ಪೆಟ್ರೋಲ್‌ ಬಂಕ್‌ಗಳಿದ್ದು ಶೇ 90ರಷ್ಟು ಬಂಕ್‌ಗಳಲ್ಲಿ ಮಾಲೀಕರು ಕೇವಲ ಹಣ ಸಂಪಾದನೆಗಷ್ಟೇ ಮಹತ್ವ ಕೊಟ್ಟಿದ್ದಾರೆ. ನಿಯಮಾನುಸಾರ ಗ್ರಾಹಕರಿಗೆ ಸಿಗಬೇಕಾದ ಮೂಲ ಸೌಲಭ್ಯಗಳು ಯಾವ ಬಂಕ್‌ಗಳಲ್ಲೂ ಇಲ್ಲವಾಗಿವೆ.

ಬಹುತೇಕ ಪೆಟ್ರೋಲ್‌ ಬಂಕ್‌ಗಳು ಕೇವಲ ಪೆಟ್ರೋಲ್‌, ಡೀಸೆಲ್‌ ಮಾರಾಟ ಮಾಡುವುದಕ್ಕಷ್ಟೇ ಸೀಮಿತವಾಗಿವೆ. ಬಂಕ್‌ ಆವರಣದಲ್ಲಿ ಕುಡಿಯುವುದಕ್ಕೂ ಒಂದು ಲೋಟ ನೀರು ದೊರೆಯುವುದಿಲ್ಲ. ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿರುವ ಪೆಟ್ರೋಲ್‌ ಬಂಕ್‌ಗಳಲ್ಲಿ ಕೇವಲ ವ್ಯವಹಾರವೇ ಮುಖ್ಯವಾಗಿದ್ದು ಗ್ರಾಹಕರಿಗೆ ನೀಡಬೇಕಾದ ಯಾವ ಮೂಲಸೌಲಭ್ಯವೂ ಇಲ್ಲವಾಗಿವೆ.

ಭಾರತ್‌ ಪೆಟ್ರೋಲಿಯಂ ಕಾರ್ಪೊರೇಷನ್‌ ಲಿಮಿಟೆಡ್‌ (ಬಿಪಿಸಿಎಲ್‌), ಹಿಂದೂಸ್ತಾನ್‌ ಪೆಟ್ರೋಲಿಯಂ ಕಾರ್ಪೊರೇಷನ್‌ ಲಿಮಿಟೆಡ್‌ (ಎಚ್‌ಪಿಸಿಎಲ್‌) ಹಾಗೂ ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ (ಐಒಸಿ) ಕಂಪೆನಿ ನಿಯಮಗಳ ಪ್ರಕಾರ ಪ್ರತಿ ಬಂಕ್‌ಗಳಲ್ಲಿ ಗ್ರಾಹಕರಿಗೆ ಕುಡಿಯುವ ನೀರಿನ ಸೌಲಭ್ಯ ಒದಗಿಸಬೇಕು. ಪುರುಷ, ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಇರಬೇಕು. ಆದರೆ ಬಹುತೇಕ ಬಂಕ್‌ಗಳಲ್ಲಿ ಕುಡಿಯುವ ನೀರಿಲ್ಲ, ಶೌಚಾಲಯಗಳಿಲ್ಲ.

ಗ್ರಾಹಕರಿಗಿರಲಿ, ಪೆಟ್ರೋಲ್‌ ಬಂಕ್‌ಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗೂ ಶೌಚಾಲಯ ವ್ಯವಸ್ಥೆ ಇಲ್ಲ. ನಗರ ವ್ಯಾಪ್ತಿಯಲ್ಲಿ ಮಹಿಳಾ ಸಿಬ್ಬಂದಿ ಕೆಲಸ ಮಾಡುತ್ತಾರೆ. ಅವರಿಗೂ ಶೌಚಾಲಯ ವ್ಯವಸ್ಥೆ ಕಲ್ಪಿಸದಿರುವುದು ಮಾಲೀಕರ ನಿರ್ಲಕ್ಷ್ಯಕ್ಕೆ ಕಾರಣವಾಗಿದೆ. ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕೆಲ ಬಂಕ್‌ಗಳಲ್ಲಿ ಶೌಚಾಲಯ ನಿರ್ಮಾಣ ಮಾಡಿದ್ದಾರೆ, ಆದರೆ, ಅವುಗಳು ಬಂದ್‌ ಆಗಿದ್ದು ಉಪಯೋಗಕ್ಕೆ ಬಾರದಾಗಿವೆ.

ಉಚಿತ ಏರ್‌ ಇಲ್ಲ: ನಿಯಮಾನುಸಾರ ಪೆಟ್ರೋಲ್‌, ಡೀಸೆಲ್‌ ಹಾಕಿಸಿಕೊಂಡ ಗ್ರಾಹಕರಿಗೆ ಉಚಿತವಾಗಿ ಏರ್‌ (ಗಾಳಿ) ಸೌಲಭ್ಯ ಕಲ್ಪಿಸಬೇಕು. ಆದರೆ ಜಿಲ್ಲೆಯಾದ್ಯಂತ ಬಹುತೇಕ ಬಂಕ್‌ ಗಳಲ್ಲಿ ಏರ್‌ ಹಾಕುವ ಅಭ್ಯಾಸ ಇಲ್ಲ. ಹೊಸದಾಗಿ ಆರಂಭಗೊಂಡ ಬಂಕ್‌ಗಳಲ್ಲಷ್ಟೇ ಗಾಳಿ ಹಾಕುತ್ತಿದ್ದು ಹಳೆಯ ಬಂಕ್‌ಗಳಲ್ಲಿ ಏರ್‌ ಹಾಕುವ ವ್ಯವಸ್ಥೆ ಇಲ್ಲದಾಗಿದೆ.

ಹಲವು ಬಂಕ್‌ಗಳಲ್ಲಿ ಏರ್‌ ಹಾಕುವ ಯಂತ್ರಗಳು ಹಾಳಾಗಿವೆ. ಯಂತ್ರ ತುಕ್ಕು ಹಿಡಿಯುತ್ತಿದ್ದು ಯಂತ್ರಗಳು ಉಪಯೋಗಕ್ಕೆ ಬರುತ್ತಿಲ್ಲ. ಇನ್ನೂ ಕೆಲವು ಬಂಕ್‌ಗಳಲ್ಲಿ ಸಿಬ್ಬಂದಿ ಇಲ್ಲ ಎಂಬ ಕಾರಣಕ್ಕೆ ಗಾಳಿ ಹಾಕುತ್ತಿಲ್ಲ.

ಬಿಪಿಸಿಎಲ್‌, ಎಚ್‌ಪಿಸಿಎಲ್‌, ಐಒಸಿ ಸ್ವಾಮ್ಯದ ಕಂಪೆನಿಗಳ ಜೊತೆಗೆ ಹೊಸದಾಗಿ ಸಂಪೂರ್ಣ ಖಾಸಗಿ ಸ್ವಾಮ್ಯದ ಬಂಕ್‌ಗಳೂ ಜಿಲ್ಲೆಯಲ್ಲಿ ಆರಂಭಗೊಳ್ಳುತ್ತಿವೆ. ಶೆಲ್‌, ಎಸ್‌ಆರ್‌, ನಯಾರಾ ಕಂಪನಿಗಳ ಬಂಕ್‌ಗಳು ಕೂಡ ಸ್ಥಾಪನೆಯಾಗಿವೆ. ಆ ಬಂಕ್‌ಗಳಲ್ಲೂ ಮೂಲಸೌಲಭ್ಯ ಒದಗಿಸಿಲ್ಲ.

‘ಮಂಡ್ಯ ಜಿಲ್ಲೆ ದೊಡ್ಡ ಹಳ್ಳಿಯಂತಿದೆ, ಬಂಕ್‌ಗಳಲ್ಲಿ ಪೆಟ್ರೋಲ್‌, ಡೀಸೆಲ್‌ ಸಿಕ್ಕರೆ ಸಾಕು. ಯಾವ ಸೌಲಭ್ಯವೂ ಬೇಡ ಎನ್ನುವ ಜನರಿದ್ದಾರೆ. ಆದರೆ, ಬೆಂಗಳೂರು, ಮೈಸೂರು ನಗರದಲ್ಲಿ ಸಕಲ ಸೌಲಭ್ಯ ಒದಗಿಸಿದ್ದಾರೆ. ಪೆಟ್ರೋಲ್‌ ಬಂಕ್‌ಗಳು ವಿಶ್ರಾಂತಿ ಪಡೆಯುವ ತಾಣವೂ ಆಗಿವೆ. ಅಂತಹ ಬಂಕ್‌ಗಳನ್ನು ಮಂಡ್ಯ ಜಿಲ್ಲೆಯಲ್ಲಿ ಕಲ್ಪಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ’ ಎಂದು ಸುಭಾಷ್‌ ನಗರದ ನಿವಾಸಿ ಮಂಜುನಾಥ್‌ ಹೇಳಿದರು.

ಮೇಲುಸ್ತುವಾರಿ ಕೊರತೆ: ತೈಲ ಕಂಪೆನಿಗಳ ಅಧಿಕಾರಿಗಳು ಜಿಲ್ಲೆಯ ಬಂಕ್‌ಗಳ ಉಸ್ತುವಾರಿಯ್ನು ಸಮರ್ಪಕ
ವಾಗಿ ನೋಡಿಕೊಳ್ಳುತ್ತಿಲ್ಲ ಎಂಬ ಆರೋಪವಿದೆ. ಸಾಮಾನ್ಯವಾಗಿ ಆಯಾ ಕಂಪೆನಿಗಳ ಮಾರಾಟ ಅಧಿಕಾರಿಗಳು ಉಸ್ತುವಾರಿ ನೋಡಿಕೊಳ್ಳಬೇಕು. ಗ್ರಾಹಕರಿಗೆ ಸೌಲಭ್ಯ ನೀಡದ ಬಂಕ್‌ ಮಾಲೀಕರಿಗೆ ದಂಡ ವಿಧಿಸಬಹುದು. ಆದರೆ, ಅಂತಹ ಯಾವುದೇ ಕಠಿಣ ಕ್ರಮಗಳನ್ನು ಜಿಲ್ಲೆಯಲ್ಲಿ ಕೈಗೊಳ್ಳದ ಕಾರಣ ಪೆಟ್ರೋಲ್‌ ಬಂಕ್‌ ಮಾಲೀಕರು ಗ್ರಾಹಕರಿಗೆ ಯಾವುದೇ ಸೌಲಭ್ಯ ನೀಡಿಲ್ಲ.

‘ಗ್ರಾಹಕರು ಶೌಚಾಲಯವನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳುವುದಿಲ್ಲ. ಕುಡಿಯುವ ನೀರಿಗಾಗಿ ಒಂದು ಟ್ಯಾಂಕ್‌ ಹಾಕಿಸಿದ್ದೆವು. ನೀರಿನ ನಲ್ಲಿಗಳನ್ನೇ ಕಳವು ಮಾಡಿದ್ದಾರೆ. ಹೀಗಾಗಿ ಯಾವುದೇ ಸೌಲಭ್ಯ ನೀಡಲು ಸಾಧ್ಯವಾಗುತ್ತಿಲ್ಲ’ ಎಂದು ನಗರದ ಪೆಟ್ರೋಲ್‌ ಬಂಕ್‌ ಮಾಲೀಕರೊಬ್ಬರು ತಿಳಿಸಿದರು.

‘ನಮ್ಮ ಕಂಪೆನಿ ಪೆಟ್ರೋಲ್‌ ಬಂಕ್‌ಗಳಲ್ಲಿ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಆದರೂ ಈ ಬಗ್ಗೆ ಪರಿಶೀಲನೆ ಮಾಡಲಾಗುವುದು. ಕುಡಿಯುವ ನೀರು, ಶೌಚಾಲಯ ಸೌಲಭ್ಯ ನೀಡದ ಬಂಕ್‌ ಡೀಲರ್‌ಗಳ ವಿರುದ್ಧ ಕ್ರಮ ಜರುಗಿಸಲಾಗುವುದು’ ಎಂದು ಬಿಪಿಸಿಎಲ್‌ ಕಂಪೆನಿ ಮಾರಾಟ ಅಧಿಕಾರಿ ಕಾರ್ತಿಕ್‌ ತಿಳಿಸಿದರು.

ಅಂಗಡಿಗಳಲ್ಲೂ ಪೆಟ್ರೋಲ್‌ ಮಾರಾಟ: ಮಂಡ್ಯ ನಗರದಿಂದ 1 ಕಿ.ಮೀ ಹೊರತೆ ತೆರಳಿದರೆ ಸಣ್ಣ ಪುಟ್ಟ ಅಂಗಡಿಗಳಲ್ಲಿ, ಮನೆಗಳಲ್ಲಿ ಪೆಟ್ರೋಲ್‌ ಮಾರಾಟ ಮಾಡುತ್ತಾರೆ. 1 ಲೀಟರ್‌ ಪೆಟ್ರೋಲ್‌ ₹ 100 ದರ ಇದ್ದರೆ ಚಿಲ್ಲರೆ ಅಂಗಡಿಗಳಲ್ಲಿ ₹ 150ಕ್ಕೆ ಮಾರಾಟ ಮಾಡುತ್ತಾರೆ.

ಹಳ್ಳಿ ಜನರು ಇದೇ ಪೆಟ್ರೋಲ್‌ ಹಾಕಿಸಿಕೊಂಡು ದ್ವಿಚಕ್ರ ವಾಹನ ಓಡಿಸುತ್ತಿದ್ದಾರೆ. ಕೆಲವೆಡೆ ಕಲಬೆರಕೆ ಪೆಟ್ರೋಲ್‌ ಮಾರಾಟ ಮಾಡುತ್ತಿರುವುದು ಪತ್ತೆಯಾಗಿದೆ. ಇವರ ವಿರುದ್ಧ ತೈಲ ಕಂಪೆನಿಗಳು ಯಾವುದೇ ಕ್ರಮ ಜರುಗಿಸಿಲ್ಲ, ಜಿಲ್ಲಾಡಳಿತಕ್ಕೆ ದೂರು ಕೂಡ ನೀಡಿಲ್ಲ.

ಹೆದ್ದಾರಿ ಬದಿ ಮುಚ್ಚುತ್ತಿರುವ ಬಂಕ್‌ಗಳು

ಬೆಂಗಳೂರು– ಮೈಸೂರು ಹೆದ್ದಾರಿ ಬದಿಯಲ್ಲಿ ವಹಿವಾಟು ನಡೆಯದೆ 20ಕ್ಕೂ ಹೆಚ್ಚು ಪೆಟ್ರೋಲ್‌ ಬಂಕ್‌ಗಳು ಬಾಗಿಲು ಮುಚ್ಚಿವೆ. ದಶಪಥ ಕಾಮಗಾರಿ ವೇಳೆ ರಸ್ತೆಬದಿಯಲ್ಲೇ ಇದ್ದ ಹಲವು ಬಂಕ್‌ಗಳು ಬಂದ್‌ ಆಗಿವೆ. ಹೆದ್ದಾರಿ ಮೇಲ್ಸೇತುವೆ, ಕೆಳ ಸೇತುವೆ ಮಾರ್ಗದಲ್ಲಿ ಗ್ರಾಹಕರೇ ಇಲ್ಲ. ಹೆದ್ದಾರಿ ಆರಂಭಗೊಂಡರೆ ಇನ್ನಷ್ಟು ಬಂಕ್‌ಗಳು ಮುಚ್ಚುವ ಸಾಧ್ಯತೆ ಇದೆ.

‘ಹೆದ್ದಾರಿ ಕಾಮಗಾರಿ ಮುಗಿಯುವ ವೇಳೆಗೆ ಏನಾಗುತ್ತದೆಯೋ ಗೊತ್ತಿಲ್ಲ. ಈಗಾಗಲೇ ಹೆದ್ದಾರಿ ಬದಿಯ ಬಂಕ್‌ಗಳಲ್ಲಿ ವಹಿವಾಟು ತೀವ್ರ ಕುಸಿದಿದೆ. ಕಂಪೆನಿಯೇ ನೇರವಾಗಿ ನಡೆಸುತ್ತಿರುವ ಬಂಕ್‌ಗಳ ವಹಿವಾಟು ಕೂಡ ಕುಸಿದಿದೆ. ಪೆಟ್ರೋಲ್‌ ಬಂಕ್‌ ವ್ಯವಹಾರ ಈಗ ಲಾಭಾದಾಯಕವಾಗಿಲ್ಲ’ ಎಂದು ಪೆಟ್ರೋಲ್‌ ಬಂಕ್‌ ಮಾಲೀಕರ ಸಂಘದ ಅಧ್ಯಕ್ಷ ಪಣ್ಣೆದೊಡ್ಡಿ ಹರ್ಷ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT