ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಫೆ.6ರಂದು ಸಾವಿರ ಮಂದಿಗೆ, ₹10 ಕೋಟಿ ಮೊತ್ತದ ಸವಲತ್ತು ವಿತರಣೆ: ಬಂಡಿಸಿದ್ದೇಗೌಡ

Published 3 ಫೆಬ್ರುವರಿ 2024, 14:06 IST
Last Updated 3 ಫೆಬ್ರುವರಿ 2024, 14:06 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯ ಮೈದಾನದಲ್ಲಿ ಫೆ.6ರಂದು ನಡೆಯಲಿರುವ ಸರ್ಕಾರದ ಗ್ಯಾರಂಟಿ ಯೋಜನೆ ಫಲಾನುಭವಿಗಳ ಸಮಾವೇಶ ಮತ್ತು ಸರ್ಕಾರದ ವಿವಿಧ ಯೋಜನೆಗಳ ಸವಲತ್ತು ವಿತರಣಾ ಸಮಾರಂಭದಲ್ಲಿ ಒಂದು ಸಾವಿರ ಮಂದಿಗೆ, ₹10 ಕೋಟಿಗೂ ಹೆಚ್ಚು ಮೊತ್ತದ ಸರ್ಕಾರದ ಸವಲತ್ತುಗಳನ್ನು ವಿತರಿಸಲಾಗುವುದು ಎಂದು ಸೆಸ್ಕ್‌ ಅಧ್ಯಕ್ಷ ಹಾಗೂ ಶಾಸಕ ರಮೇಶ ಬಂಡಿಸಿದ್ದೇಗೌಡ ತಿಳಿಸಿದರು.

ಇಲ್ಲಿನ ಶ್ರೀರಂಗನಾಥಸ್ವಾಮಿ ದೇವಾಲಯ ಮೈದಾನದಲ್ಲಿ ಜಿಲ್ಲಾಧಿಕಾರಿ ಕುಮಾರ್ ಇತರರ ಜತೆ ಶುಕ್ರವಾರ ಸಂಜೆ ಸಮಾರಂಭದ ವೇದಿಕೆಯ ಸಿದ್ದತೆ ಪರಿಶೀಲಿಸಿ ಅವರು ಮಾತನಾಡಿದರು.

‘ಮಹಿಳಾ ಸ್ವ ಸಹಾಯ ಗುಂಪುಗಳಿಗೆ ₹6 ಕೋಟಿ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್‌ (ಎನ್‌ಆರ್‌ಎಲ್‌ಎಂ) ವತಿಯಿಂದ ₹5 ಕೋಟಿಗೂ ಹೆಚ್ಚು ಸಹಾಯ ಧನ ನೀಡಲಾಗುತ್ತದೆ. ಡಿಸಿಸಿ ಬ್ಯಾಂಕ್‌ ಅಡಿಯಲ್ಲಿ ಕೆಲಸ ಮಾಡುವ ಸಂಘಗಳಿಗೂ ಸವಲತ್ತು ನೀಡಲಾಗುವುದು’ ಎಂದು ಹೇಳಿದರು.

‘ಪುರಸಭೆಯಿಂದ 200 ಮಂದಿಗೆ ವಿವಿಧ ಸೌಲಭ್ಯಗಳು, ರೈತರಿಗೆ ಕೃಷಿ ಇತರ ಇಲಾಖೆಗಳಿಂದ ಸಿಗುವ ವಿವಿಧ ಯೋಜನೆಗಳ ಸವಲತ್ತುಗಳು ಹಾಗೂ 300ಕ್ಕೂ ಹೆಚ್ಚು ಮಂದಿ ಸಾಮಾಜಿಕ ಭದ್ರತಾ ಯೋಜನೆ ಫಲಾನುಭವಿಗಳಿಗೆ ಮಾಸಾಶನ ಮಂಜೂರಾತಿ ಪತ್ರವನ್ನು ವಿತರಿಸಲಾಗುತ್ತದೆ. ಸಮಾರಂಭಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎನ್‌. ಚಲುವರಾಯಸ್ವಾಮಿ, ಕಂದಾಯ ಸಚಿವ ಕೃಷ್ಣ ಭೈರೇಗೌಡ ಆಗಮಿಸಲಿದ್ದಾರೆ. ಕ್ಷೇತ್ರದ ವಿವಿಧೆಡೆಗಳಿಂದ 10 ಸಾವಿರ ಮಂದಿ ಈ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ’ ಎಂದು ತಿಳಿಸಿದರು.

ಕಾಯಕಲ್ಪ: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನನ್ನ ಮೇಲೆ ನಂಬಿಕೆ ಇಟ್ಟು ಸೆಸ್ಕ್‌ ಅಧ್ಯಕ್ಷ ಸ್ಥಾನ ನೀಡಿದ್ದಾರೆ. ಸ್ವತಃ ರೈತನಾಗಿ, ರೈತರು ಮತ್ತು ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ. ವಿದ್ಯುತ್‌ ಇಲಾಖೆಯು ಜನ ಸ್ನೇಹಿಯಾಗುವಂತೆ ಕಾಯಕಲ್ಪ ನೀಡುತ್ತೇನೆ’ ಎಂದು ಹೇಳಿದರು.

ಜಿಲ್ಲಾಧಿಕಾರಿ ಕುಮಾರ, ಉಪ ವಿಭಾಗಾಧಿಕಾರಿ ಎಲ್‌.ಎಂ. ನಂದೀಶ್‌, ತಹಶೀಲ್ದಾರ್‌ ಪರಶುರಾಮ ಸತ್ತಿಗೇರಿ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ವೇಣು, ಪುರಸಭೆ ಮುಖ್ಯಾಧಿಕಾರಿ ಎಂ. ರಾಜಣ್ಣ, ಸದಸ್ಯ ಎಂ.ಎಲ್‌ ದಿನೇಶ್‌, ನಿವೃತ್ತ ಎಂಜಿನಿಯರ್‌ ಸುನಿಲ್‌, ಮುಖಂಡರಾದ ಎಂ. ಲೋಕೇಶ್‌, ನಟರಾಜ್‌, ಪುರುಷೋತ್ತಮ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT