ಸೋಮವಾರ, ಏಪ್ರಿಲ್ 6, 2020
19 °C
ಉಚಿತವಾಗಿ 25 ಸಾವಿರ ಬಟ್ಟೆ ಬ್ಯಾಗ್‌ ವಿತರಣೆ; ಜಿಲ್ಲಾಧಿಕಾಡಿ ಡಾ.ಎಂ.ವಿ.ವೆಂಕಟೇಶ್‌ ಅಭಿಮತ

ಸಕಲ ಜೀವ ರಾಶಿಗಳಿಗೆ ಪ್ಲಾಸ್ಟಿಕ್‌ ಮಾರಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ‘ಸಕಲ ಜೀವರಾಶಿಗಳಿಗೆ ಮಾರಕವಾಗಿರುವ ಪ್ಲಾಸ್ಟಿಕ್‌ ಬಾಗ್‌ ಹಾಗೂ ಇತರ ವಸ್ತುಗಳನ್ನು ಜನರು ತ್ಯಜಿಸಬೇಕು. ದಿನನಿತ್ಯದ ವ್ಯವಹಾರಗಳಿಗೆ ಪರಿಸರ ಸ್ನೇಹಿ ಬಟ್ಟೆ ಬ್ಯಾಗ್‌ಗಳನ್ನು ಬಳಕೆ ಮಾಡುವ ಮೂಲಕ ಪರಿಸರ  ಸಂರಕ್ಷಿಸಬೇಕು’ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ರಾಷ್ಟ್ರೀಕೃತ ಬ್ಯಾಂಕ್‌ಗಳ ಸಹಯೋಗದಲ್ಲಿ ಬುಧವಾರ ನಗರದ ಡಾ.ಬಿ.ಆರ್‌.ಅಂಬೇಡ್ಕರ್‌ ಭವನದಲ್ಲಿ ನಡೆದ 25 ಸಾವಿರ ಬಟ್ಟೆ ಬ್ಯಾಗ್‌ ವಿತರಣಾ ಕಾರ್ಯ ಉದ್ಘಾಟಿಸಿ ಅವರು ಮಾತನಾಡಿದರು.

‘ಪ್ಲಾಸ್ಟಿಕ್ ಪರಿಸರವನ್ನಷ್ಟೇ ಮಲಿನ ಮಾಡಿಲ್ಲ, ತಾಯಿಯ ಎದೆ ಹಾಲಿನಲ್ಲಿಯೂ ಪ್ಲಾಸ್ಟಿಕ್ ಅಂಶ ಸೇರಿದೆ. ವಿಶ್ವದ ಶತ್ರುವಾಗಿರುವ ಪ್ಲಾಸ್ಟಿಕ್‌ ಪರಿಕರಗಳನ್ನು ತ್ಯಜಿಸುವುದು ಅನಿವಾರ್ಯವಾಗಿದೆ. ಗಾಳಿ, ನೀರು, ಮಣ್ಣು ಹಾಗೂ ಸಮುದ್ರದಲ್ಲಿ ಪ್ಲಾಸ್ಟಿಕ್‌ ಸೇರಿಕೊಂಡಿದ್ದು, ರೋಗ ಭೀತಿ ಎದುರಾಗಿದೆ. ಮನುಷ್ಯನ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಮನುಷ್ಯನ ಆಯುಷ್ಯವನ್ನು ಕಿತ್ತುಕೊಳ್ಳುತ್ತಿದೆ. ನಾವು ತಿನ್ನುವ ಆಹಾರ ಪದಾರ್ಥಗಳಲ್ಲಿ ಪಾಲಿಮರ್ ಸೇರಿದಂತೆ ಇತರೆ ಕಲ್ಮಶಗಳು ಸೇರಿ ದುಷ್ಪರಿಣಾಮ ಬೀರುತ್ತಿದೆ’ ಎಂದು ಹೇಳಿದರು.

‘ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಪ್ಲಾಸ್ಟಿಕ್‌ ವಿರುದ್ಧ ಜಾಗೃತಿ ಮೂಡಿಸಲಾಗುತ್ತಿದೆ. 233 ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಪರಿಣಾಮಕಾರಿಯಾಗಿ ಪ್ಲಾಸ್ಟಿಕ್‌ ಬಳಸದಂತೆ ಜಾಗೃತಿ ಮೂಡಿಸಬೇಕು. ಪ್ಲಾಸ್ಟಿಕ್‌ ಮಣ್ಣು, ನೀರಿನಲ್ಲಿ ಕರಗುವುದಿಲ್ಲ ಎಂಬುದನ್ನು ಮನಗಂಡು ಪರಿಸರ ಸ್ನೇಹಿ ಬ್ಯಾಗ್‌ಗಳನ್ನು ಉಪಯೋಗಿಸಬೇಕು. ಇತರರಿಗೂ ಉಪಯೋಗಿಸುವಂತೆ ಪ್ರೇರೇಪಿಸಬೇಕು. ಜಾಗೃತಿ ಮೂಡಿಸಿ ಪ್ಲಾಸ್ಟಿಕ್‌ ಬಳಕೆಯನ್ನು ತಡೆಗಟ್ಟಬೇಕು’ ಎಂದು ಸಲಹೆ ನೀಡಿದರು.

‘ಸಹಕಾರ ಕ್ಷೇತ್ರ, ಸಂಘ ಸಂಸ್ಥೆಗಳು, ಸ್ವಯಂಸೇವರು, ಶಾಲಾ ಕಾಲೇಜು ವಿದ್ಯಾರ್ಥಿಗಳು, ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಜೊತೆ ತೆರಳಿ ನಗರದ ಮನೆ ಮನೆಗಳಿಗೆ ಬ್ಯಾಗ್‌ಗಳನ್ನು ನೀಡುತ್ತಾರೆ. ಮಾರುಕಟ್ಟೆ ಸೇರಿದಂತೆ ಸಾಮಾಗ್ರಿ ಖರೀದಿ ಸಂದರ್ಭದಲ್ಲಿ ಈ ಬ್ಯಾಗ್‌ಗಳು ಉಪಯೋಗಕ್ಕೆ ಬರುತ್ತವೆ. ಆ ಮೂಲಕ ಪ್ಲಾಸ್ಟಿಕ್‌ ಬಳಕೆಯನ್ನು ಗಣನೀಯವಾಗಿ ಕಡಿಮೆ ಮಾಡಿ, ಸಂಪೂರ್ಣವಾಗಿ ನಿಲ್ಲಿಸಬೇಕು. ಆ ಮೂಲಕ ಪ್ಲಾಸ್ಟಿಕ್‌ ಮುಕ್ತ ನಗರವನ್ನಾಗಿಸಲು ಎಲ್ಲರೂ ಕೈ ಜೋಡಿಸಬೇಕು’ ಎಂದರು.

ಬ್ಯಾಂಕ್ ಆಫ್ ಬರೋಡ ಮೈಸೂರು ವಲಯ ಕಚೇರಿ ಪ್ರಬಂಧಕ ಕೆ. ಸತ್ಯನಾರಾಯಣ್ ಮಾತನಾಡಿ ‘ಬ್ಯಾಂಕ್‌ಗಳು ಹಣದ ವ್ಯವಹಾರ ನಡೆಸಲು ಮಾತ್ರ ಸೀಮಿತವಲ್ಲ. ಜನರ ಆರೋಗ್ಯದ ಬಗ್ಗೆಯೂ ಸಾಕಷ್ಟು ಕಾಳಜಿ ವಹಿಸುತ್ತವೆ. ವಿವಿಧ ಬ್ಯಾಂಕ್‍ಗಳು ಹಾಗೂ ಸಹಕಾರ ಸಂಘಗಳ ಸಹಭಾಗಿತ್ವದಲ್ಲಿ ಪ್ಲಾಸ್ಟಿಕ್ ಬಳಸದಂತೆ ಅರಿವು ಮೂಡಿಸುವ ಕಾರ್ಯಾಗಾರಗಳನ್ನು ಮಾಡಲಾಗುತ್ತಿದೆ. ಜನರು ಸಹಕರಿಸುವ ಮೂಲಕ ಪ್ಲಾಸ್ಟಿಕ್‌ ಬಳಕೆ ನಿಲ್ಲಿಸಬೇಕು’ ಎಂದು ಹೇಳಿದರು.

ನಂತರ ಶಾಲಾ–ಕಾಲೇಜು ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಬ್ಯಾಗ್‌ಗಳನ್ನು ವಿತರಿಸಲಾಯಿತು. ಜಿಲ್ಲಾ ಪಂಚಾಯಿತಿ ಸಿಇಒ ಕೆ.ಯಾಲಕ್ಕಿಗೌಡ, ಕೆನರಾ ಬ್ಯಾಂಕ್ ವಲಯ ಕಚೇರಿಯ ಪ್ರಬಂಧಕ ಕೆ.ವಿ.ಕಾಮತ್, ಎಸ್‍ಬಿಐ ವಲಯ ಕಚೇರಿ ಪ್ರಬಂಧಕ ರಮೇಶ್‍ಬಾಬು, ಲೀಡ್ ಬ್ಯಾಂಕ್‍ನ ವ್ಯವಸ್ಥಾಪಕ ಕದರಪ್ಪ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಟಿ.ಎನ್‌.ನರಸಿಂಹಮೂರ್ತಿ, ತಹಶೀಲ್ದಾರ್ ನಾಗೇಶ್ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)