ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಲಸೆ ಕಾರ್ಮಿಕರ ಮಕ್ಕಳಿಗೂ ಲಸಿಕೆ: ಆರೋಗ್ಯಾಧಿಕಾರಿ ಡಾ.ಬಿ.ಹೆಚ್.ರಮೇಶ್

Published 3 ಮಾರ್ಚ್ 2024, 12:23 IST
Last Updated 3 ಮಾರ್ಚ್ 2024, 12:23 IST
ಅಕ್ಷರ ಗಾತ್ರ

ನಾಗಮಂಗಲ: ‘ತಾಲ್ಲೂಕಿಗೆ ವಿವಿಧ ಉದ್ಯೋಗ ಅರಸಿ ಬಂದಿರುವ ವಲಸೆ ಕಾರ್ಮಿಕರ ಮಕ್ಕಳು ಇರುವ ಜಾಗಕ್ಕೆ ಆರೋಗ್ಯ ಇಲಾಖೆಯ ಸಿಬ್ಬಂದಿ ಹೋಗಿ ಪೊಲೀಯೊ ಲಸಿಕೆ ಹಾಕಲು ಕ್ರಮವಹಿಸಲಾಗಿದೆ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ಎಚ್.ರಮೇಶ್ ಹೇಳಿದರು.

ಪಟ್ಟಣದ ಮಿನಿವಿಧಾನ ಸೌಧದ ಮುಂಭಾಗ ಭಾನುವಾರ ಪೊಲೀಯೋ ಲಸಿಕೆ ವಿತರಣೆಗಾಗಿ ತೆರೆಯಲಾಗಿದ್ದ ಬೂತ್ ನಲ್ಲಿ ಪೊಲೀಯೊ ಲಸಿಕಾ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಅವರು ಮಾ.3 ರಿಂದ ಮಾ.6 ರವರೆಗೆ ರಾಷ್ಟ್ರೀಯ ಪಲ್ಸ್ ಪೊಲೀಯೋ ಕಾರ್ಯಕ್ರಮ ಜರುಗುತ್ತಿದ್ದು, ತಾಲ್ಲೂಕಿನಲ್ಲಿ ಒಟ್ಟು 9,883 ಮಕ್ಕಳನ್ನು ಗುರ್ತಿಸಿಕೊಂಡಿದ್ದು, ಲಸಿಕೆ ಹಾಕುವ ಗುರಿಯನ್ನು ಹೊಂದಿದ್ದೇವೆ. ಅಲ್ಲದೇ ತಾಲ್ಲೂಕಿನಲ್ಲಿ ವಿವಿಧೆಡೆ 71 ಪೊಲೀಯೋ ಬೂತ್ ಗಳನ್ನು ತೆರೆಯಲಾಗಿದೆ. ಚುಂಚನಗಿರಿ, ಸೋಮನಹಳ್ಳಿ ಸೇರಿದಂತೆ ವಿವಿಧೆಡೆಯಲ್ಲಿ ಜಾತ್ರೆಗಳಿರುವುದರಿಂದ ಲಸಿಕಾ ವಿತರಣೆಯ ಪ್ರಮಾಣ ಹೆಚ್ಚಾಗುವ ಸಾಧ್ಯತೆಯಿದೆ’ ಎಂದರು.

ಲಸಿಕಾ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ರೋಟರಿ ಕ್ಲಬ್ ಅಧ್ಯಕ್ಷ ಗೋವಿಂದರಾಜು, ‘ಆರೋಗ್ಯ ಇಲಾಖೆಯು ತಾಲ್ಲೂಕಿನ ಪ್ರತಿ ಮಕ್ಕಳಿಗೂ ಲಸಿಕೆ ವಿತರಣೆ ಮಾಡುವ ನಿಟ್ಟಿನಲ್ಲಿ ಜನದಟ್ಟಣೆ ಇರುವ ಆಯಕಟ್ಟಿನ ಸ್ಥಳಗಳಲ್ಲಿ ಬೂತ್‌ಗಳನ್ನು ಸ್ಥಾಪನೆ ಮಾಡಿದ್ದು, ಎಲ್ಲಾ ಮಕ್ಕಳಿಗೆ ಲಸಿಕೆ ವಿತರಿಸಲು ಕ್ರಮವಹಿಸುತ್ತಿದೆ’ ಎಂದು ಮನವಿ ಮಾಡಿದರು.

ಆರೋಗ್ಯ ನಿರೀಕ್ಷಕ ಸಿದ್ಧಲಿಂಗಪ್ಪ, ಪುರಸಭೆ ಸದಸ್ಯ ಅತೀಕ್, ಪ್ರಾಥಮಿಕ ಆರೋಗ್ಯ ಸುರಕ್ಷಕಿ ಪ್ರಮೀಳಾ, ಸುರಕ್ಷಾ ಅಧಿಕಾರಿ ರವಿಕುಮಾರ್ ಮತ್ತು ಸಾರ್ವಜನಿಕರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT