ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರಿದೇವಮ್ಮ, ನಿಷ್ಕಾಮೇಶ್ವರ ಕಲ್ಯಾಣಿಗಳಿಗೆ ಕಾಯಕಲ್ಪ

ಪರಿಸರ ಬಳಗ, ಕೆ.ಎಸ್.ಪುಟ್ಟಣ್ಣಯ್ಯ ಅಭಿಮಾನಿ ಬಳಗ, ರೈತ ಸಂಘದ ಕಾರ್ಯಕರ್ತರಿಂದ ಸ್ವಚ್ಛತಾ ಕಾರ್ಯ
Last Updated 11 ಏಪ್ರಿಲ್ 2021, 4:12 IST
ಅಕ್ಷರ ಗಾತ್ರ

ಪಾಂಡವಪುರ: ಪರಿಸರ ಬಳಗ, ಕೆ.ಎಸ್.ಪುಟ್ಟಣ್ಣಯ್ಯ ಅಭಿಮಾನಿಗಳ ಬಳಗ, ರೈತ ಸಂಘದ ಕಾರ್ಯಕರ್ತರು ತಾಲ್ಲೂಕಿನ ಹೊಸಕೋಟೆ ಗ್ರಾಮದ ಹಿರಿದೇವಮ್ಮ ಕಲ್ಯಾಣಿ ಹಾಗೂ ನಿಷ್ಕಾಮೇಶ್ವರ ದೇವಸ್ಥಾನದ ಕಲ್ಯಾಣಿಯನ್ನುಹೂಳೆತ್ತಿ ಸ್ವಚ್ಛಗೊಳಿಸಿದರು.

ಬೆಳಿಗ್ಗೆ 7 ಗಂಟೆಗೆ ಒಂದೆಡೆ ಸೇರಿದ ಕಾರ್ಯಕರ್ತರು, ‘ಪರಿಸರ ಸಂರಕ್ಷಣೆ ನಮ್ಮ ಹೊಣೆ, ಕೆರೆಕಟ್ಟೆ ಕಲ್ಯಾಣಿ ಸಂರಕ್ಷಿಸೋಣ, ಜೀವಜಲ ಜೀವ ಜಗತ್ತಿಗೆ ಬೇಕು, ಪರಿಸರ ಬಳಗಕ್ಕೆ ಜಯವಾಗಲಿ, ನಮ್ಮ ಊರಿನ ಕೆಲಸ ನಾವೇ ಮಾಡೋಣ... ಎಂಬ ಘೋಷಣೆ ಕೂಗುತ್ತಾ, ರೈತ ಗೀತೆ, ಪರಿಸರ ಗೀತೆಗಳನ್ನು ಹಾಡುತ್ತಾ ಕಲ್ಯಾಣಿಗಳ ಕಡೆ ಮೆರವಣಿಗೆಯಲ್ಲಿ ಸಾಗಿದರು.

ಹಾರೆ, ಪಿಕಾಸಿ, ಗುದ್ದಲಿ, ಬಾಂಡ್ಲಿ, ಕುಡುಗೋಲು ಹಿಡಿದ 80ಕ್ಕೂ ಹೆಚ್ಚು ಕಾರ್ಯಕರ್ತರು ಎರಡು ತಂಡಗಳಾಗಿ ಕಲ್ಯಾಣಿಯನ್ನು ಸ್ವಚ್ಛಗೊಳಿಸಿದರು. ಸಾಮೂಹಿಕವಾಗಿ ಉಪಾಹಾರ ಸೇವಿಸಿದರು. ಗಿಡಗಂಟಿಗಳ ಸ್ವಚ್ಛತಾ ಕಾರ್ಯ ಮಧ್ಯಾಹ್ನದವರೆಗೂ ಸಾಗಿತು.

ದೊಡ್ಡ ದೊಡ್ಡ ಗಿಡಗಳು ಹಾಗೂ ಮಣ್ಣನ್ನು ಮೇಲೆತ್ತುವಾಗ ‘ಬಂತು ಬಂತು ಐಸಾ, ಇನ್ನು ಸ್ವಲ್ಪ ಐಸಾ....’ ಎಂದು ಲೇಖಕ ಡಿ.ಹೊಸಹಳ್ಳಿ ಶಿವು ಅವರ ಕೂಗಿಗೆ ಶ್ರಮಿಕರು ದನಿಗೂಡಿಸಿ ಕೆಲಸ ಮಾಡಿದರು.

ನೆತ್ತಿ ಸುಡುವ ಸೂರ್ಯನ ಪ್ರಖರತೆಯನ್ನೂ ಲೆಕ್ಕಿಸದೆ ಕಾರ್ಯಕರ್ತರು ಸ್ವಚ್ಛತಾ ಕಾರ್ಯದಲ್ಲಿ ತೊಡಗಿದರು. ಅವರ ಉತ್ಸಾಹ ಕಂಡ ಗ್ರಾಮಸ್ಥರು ಕೈಜೋಡಿಸಿದರು.

ಶ್ರಮದ ಜತೆ ಗಾಯನ: ಹೂಳೆತ್ತುವ ಕಾಯಕದ ಜತೆಗೆ ಹಾಡುಗಳೂ ಅನುರಣಿಸಿದವು. ‘ಮತ್ತೆ ನೆಲದ ಎದೆಯ ಮೇಲೆ ತೆನೆಯ ಧ್ವಜವೂ ಹಾರಲಿ’ ಎಂಬ ಕುವೆಂಪು ಅವರ ಗೀತೆಯನ್ನು ಗಾಂಧಿವಾದಿ ಸಂತೋಷ್ ಕೌಲಗಿ ಹಾಡಿದರು. ‘ಹಳ್ಳಿ ಅಂದರೆ ಮರ ಗಿಡ ಇರಬೇಕು’, ‘ಶರಣಯ್ಯ ಶರಣಯ್ಯ ಪೂರ್ವಿಕರ ಪಾದಗಳಿಗೆ ಶರಣು’, ‘ಉಳುವ ಯೋಗಿಯ ನೋಡಲ್ಲಿ’, ‘ಈ ನೆಲಕ್ಕೆ ನಮಿಸ ಬನ್ನಿ’, ‘ಬಿದಿರು ನಾನ್ಯಾರಿಗಲ್ಲದವಳು’ ಸೇರಿದಂತೆ ಹಲವು ಗೀತೆಗಳನ್ನು ಹುರುಗಲವಾಡಿ ರಾಮಯ್ಯ ಹಾಡಿದರು.

‘ಒಳಿತು ಮಾಡು ಮನುಷ್ಯ, ನೀನಿರೋದು ಮೂರು ದಿವಸ’ ಹಾಡಿಗೆ ಜಿ.ಶ್ರೀಧರ್ ಧ್ವನಿಯಾದರು. ‘ಚೆಲ್ಲಿದರು ಮಲ್ಲಿಗೆಯ’, ‘ಸೋಜುಗಾದ ಸೂಜು ಮಲ್ಲಿಗೆ’ ಹಾಡನ್ನು ಹರ್ಷಿತಾ, ನಿವೇದಿತಾ ಹಾಡಿದರು. ಇವೆರೆಲ್ಲರ ಹಾಡಿಗೆ ಶ್ರಮದಾನಿಗಳು ದನಿಗೂಡಿಸುತ್ತಾ ಕೆಲಸದಲ್ಲಿ ತೊಡಗಿದರು. ಹಾಡಿನ ಜತೆಗೆ ಶ್ರಮದಾನವೂ ಸಾಗಿತು.

ಸಂಜೆ 4ರ ವೇಳೆಗೆ ಎರಡೂ ಕಲ್ಯಾಣಿಗಳ ಸ್ವಚ್ಛತಾ ಕಾರ್ಯ ಪೂರ್ಣಗೊಂಡಿತು. ಕಾರ್ಯಕರ್ತರ ಮೊಗದಲ್ಲೂ ನಗೆ ಮೂಡಿದಂತೆ ಗ್ರಾಮದ ಹಿರಿದೇವಮ್ಮ ಮತ್ತು ನಿಷ್ಕಾಮೇಶ್ವರ ದೇವಸ್ಥಾನದ ಕಲ್ಯಾಣಿಗಳು ನಸುನಕ್ಕಂತಿದ್ದವು.

ಮೈಸೂರಿನ ಪ್ರಗತಿಪರ ಚಿಂತಕರಾದ ಪ್ರೊ.ಕಾಳಚನ್ನೇಗೌಡ, ಪರಶುರಾಮೇಗೌಡ, ಕುಸುಮ, ಆಯಿರಹಳ್ಳಿ ಲೇಖಕ ಡಿ.ಹೊಸಹಳ್ಳಿ ಶಿವು, ಪರಿಸರವಾದಿ ಪ್ರಸನ್ನ ಎನ್.ಗೌಡ, ರೈತ ಸಂಘದ ಮುಖಂಡರಾದ ನಂದಿನಿ ಜಯರಾಮ್‌, ಕೆ.ಟಿ.ಗೋವಿಂದೇಗೌಡ, ಸ್ಮಿತಾ ಪುಟ್ಟಣ್ಣಯ್ಯ, ಕೆನ್ನಾಳು ವಿಜಯಕುಮಾರ್, ವೈ.ಎಚ್.ಕೊಪ್ಪಲು ಮಂಜುನಾಥ್, ರಘು, ಅರಳಕುಪ್ಪೆ ಅಚ್ಯುತನ್, ಹಿರೇಮರಳಿ ರಂಜಿತ, ಗ್ರಾಮದ ಮುಖಂಡರಾದ ಡಾ.ಎಚ್.ಎನ್.ರವೀಂದ್ರ, ವಿಜಯಕುಮಾರ್ ಕೊಳ ಕಾಯಕಲ್ಪದ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT