ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ: ನಗರಸಭೆ ಸದಸ್ಯರಿಗೆ 2 ವರ್ಷದ ನಂತರ ಅಧಿಕಾರ

ನಗರಸಭೆಯಲ್ಲಿ ಜೆಡಿಎಸ್‌ಗೆ ಬಹುಮತ; ಯಾರಿಗೆ ಒಲಿಯಲಿದೆ ಅಧ್ಯಕ್ಷ ಹುದ್ದೆ? ಕುತೂಹಲ
Last Updated 9 ಅಕ್ಟೋಬರ್ 2020, 20:30 IST
ಅಕ್ಷರ ಗಾತ್ರ

ಮಂಡ್ಯ: ಕಳೆದೆರಡು ವರ್ಷಗಳಿಂದ ಅಧಿಕಾರವಿಲ್ಲದೇ ಕಂಗಾಲಾಗಿದ್ದ ನಗರಸಭೆ ಸದಸ್ಯರಿಗೆ ಸರ್ಕಾರದ ಆದೇಶ ಸಮಾಧಾನ ತಂದಿದೆ. ಅಧ್ಯಕ್ಷ–ಉಪಾಧ್ಯಕ್ಷರ ಮೀಸಲಾತಿ ಪ್ರಕಟಗೊಂಡಿದ್ದು ಸದಸ್ಯರು ಗೆಲುವು ಸಾಧಿಸಿ 2 ವರ್ಷಗಳ ನಂತರ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಅಧ್ಯಕ್ಷ–ಉಪಾಧ್ಯಕ್ಷರ ಮೀಸಲಾತಿಯಲ್ಲಿ ಗೊಂದಲ ಹೈಕೋರ್ಟ್‌ನಲ್ಲಿ ಉಳಿದಿದ್ದ ಕಾರಣ 2 ವರ್ಷಗಳಿಂದ ಸದಸ್ಯರು ಹೆಸರಿಗಷ್ಟೇ ಸದಸ್ಯರಾಗಿದ್ದರು. ನಗರಸಭೆ ಆಡಳಿತದಲ್ಲಿ ಅವರಿಗೆ ಯಾವುದೇ ಅಧಿಕಾರ ಇರಲಿಲ್ಲ. ಎಲ್ಲಾ ಅಧಿಕಾರವನ್ನು ಆಡಳಿತಾಧಿಕಾರಿಯಾಗಿದ್ದ ಜಿಲ್ಲಾಧಿಕಾರಿ ಅವರೇ ನಿರ್ವಹಿಸುತ್ತಿದ್ದರು. ವಿವಿಧ ವಾರ್ಡ್‌ಗಳಲ್ಲಿದ್ದ ನೂರಾರು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸದಸ್ಯರು ಪರದಾಡುತ್ತಿದ್ದರು. ‘ಅಧಿಕಾರ ಇಲ್ಲ’ ಎಂದು ಸಿದ್ಧ ಉತ್ತರ ನೀಡುತ್ತಿದ್ದರು.

ಈಗ ಮೀಸಲಾತಿ ಪಟ್ಟಿ ಪ್ರಕಟವಾಗಿದ್ದು ಅಧ್ಯಕ್ಷ ಹುದ್ದೆ ಸಾಮಾನ್ಯ, ಉಪಾಧ್ಯಕ್ಷ ಹುದ್ದೆ ಇತರ ಹಿಂದುಳಿದ ವರ್ಗಕ್ಕೆ ಮೀಸಲಾಗಿದೆ. ಮೀಸಲಾತಿ ಪಟ್ಟಿ ಪ್ರಕಟಗೊಳ್ಳುತ್ತಿದ್ದಂತೆ ನಗರಸಭೆ ಅಂಗಳದಲ್ಲಿ ರಾಜಕೀಯ ಚಟುವಟಿಕೆ ಬಿರುಸುಗೊಂಡಿದ್ದು ಅಧ್ಯಕ್ಷ ಹುದ್ದೆಯ ಆಕಾಂಕ್ಷಿಗಳು ಮುಖಂಡರ ಮನೆಗಳಿಗೆ ಎಡತಾಕುತ್ತಿದ್ದಾರೆ.

35 ವಾರ್ಡ್‌ಗಳ ಪೈಕಿ 18 ಜೆಡಿಎಸ್‌, 10 ಕಾಂಗ್ರೆಸ್‌, 5 ಪಕ್ಷೇತರ, ಇಬ್ಬರು ಬಿಜೆಪಿ ಸದಸ್ಯರಿದ್ದಾರೆ. ಜೆಡಿಎಸ್‌ ಬಹುಮತ ಪಡೆದಿದ್ದು ಅಧ್ಯಕ್ಷ ಹುದ್ದೆಯ ಆಕಾಂಕ್ಷಿಗಳಲ್ಲಿ ದೊಡ್ಡ ಪಟ್ಟಿಯೇ ಇದೆ. ಜೆಡಿಎಸ್‌ನಿಂದ ಗೆದ್ದಿರುವ ಎಲ್ಲಾ 18 ಸದಸ್ಯರು ಮೊದಲ ಬಾರಿಗೆ ಆಯ್ಕೆಯಾದವರೇ ಆಗಿದ್ದು ಯಾರಿಗೆ ಅಧ್ಯಕ್ಷ ಹುದ್ದೆ ಒಲಿಯಲಿದೆ ಎಂಬ ಕುತೂಹಲ ಸೃಷ್ಟಿಯಾಗಿದೆ. ಶಾಸಕ ಎಂ.ಶ್ರೀನಿವಾಸ್‌ ಮನೆಯಲ್ಲಿ ಚಟುವಟಿಕೆ ಬಿರುಸುಗೊಂಡಿದ್ದು ಅವರ ಯಾರತ್ತ ಮಣೆ ಹಾಕುತ್ತಾರೆ ಎಂಬ ಮಾತು ಕೇಳಿಬರುತ್ತಿದೆ.

ಜೆಡಿಎಸ್‌ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆಯೂ ಆಗಿರುವ 19ನೇ ವಾರ್ಡ್‌ ಸದಸ್ಯೆ ಮಂಜುಳಾ ಉದಯಶಂಕರ್‌ ಅಧ್ಯಕ್ಷ ಹುದ್ದೆಯ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಕಳೆದ ಬಾರಿ ಮೀಸಲಾತಿ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. ಆಗಲೂ ಅಧ್ಯಕ್ಷ ಹುದ್ದೆಗೆ ಮಂಜುಳಾ ಅವರ ಹೆಸರು ಮುನ್ನೆಲೆಗೆ ಬಂದಿತ್ತು. ಈಗಲೂ ಅವರ ಹೆಸರೇ ಕೇಳಿ ಬರುತ್ತಿದೆ.

ಇವರ ಜೊತೆಗೆ 1ನೇ ವಾರ್ಡ್‌ ಸದಸ್ಯ ನಾಗೇಶ್‌, 6ನೇ ವಾರ್ಡ್‌ ಸದಸ್ಯ ಟಿ.ರವಿ, 20ನೇ ವಾರ್ಡ್‌ ಸದಸ್ಯ ಎಚ್‌.ಎಸ್‌.ಮಂಜು ಹೆಸರುಗಳೂ ಕೇಳಿ ಬರುತ್ತಿವೆ. 29ನೇ ವಾರ್ಡ್‌ ಸದಸ್ಯೆ ವಿಶಾಲಾಕ್ಷಿ ಅವರು ಶಾಸಕ ಎಂ.ಶ್ರೀನಿವಾಸ್‌ ಅವರ ಸಂಬಂಧಿಯೂ ಆಗಿದ್ದು ಅವರ ಹೆಸರು ಕೂಡ ಮುನ್ನೆಲೆಗೆ ಬಂದಿದೆ. ಅಂತಿಮವಾಗಿ ಅಧ್ಯಕ್ಷ ಹುದ್ದೆ ಯಾರ ಮುಡಿಗೇರಲಿದೆ ಎಂಬ ಕುತೂಹಲ ಮೂಡಿದೆ.

‘ಈಗಷ್ಟೇ ಮೀಸಲಾತಿ ಪ್ರಕಟಗೊಂಡಿದ್ದು ಅಧ್ಯಕ್ಷ ಹುದ್ದೆಯ ಆಕಾಂಕ್ಷಿಗಳ ಮನವಿಯನ್ನು ಪರಿಗಣಿಸಲಾಗುತ್ತಿದೆ. ಶೀಘ್ರದಲ್ಲಿ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಶಾಸಕ ಎಂ.ಶ್ರೀನಿವಾಸ್‌ ಹೇಳಿದರು.

‘ನಾನು ಮೊದಲ ಬಾರಿ ಸದಸ್ಯನಾಗಿದ್ದರೂ ಪಕ್ಷಕ್ಕೆ ಹಲವು ವರ್ಷಗಳಿಂದ ದುಡಿದಿದ್ದೇನೆ. ಮುಖಂಡರು ನನ್ನ ಹೆಸರನ್ನು ಅಧ್ಯಕ್ಷ ಹುದ್ದೆಗೆ ಪರಿಗಣಿಸುತ್ತಾರೆ’ ಎಂಬ ಭರವಸೆ ಇದೆ ಎಂದು 1ನೇ ವಾರ್ಡ್‌ ಸದಸ್ಯ ನಾಗೇಶ್ ಹೇಳಿದರು.

‘ಶಾಸಕರನ್ನು ಭೇಟಿಯಾಗಿ ಮನವಿ ಸಲ್ಲಿಸುತ್ತೇನೆ.ಕಡೆಗೆ ವರಿಷ್ಠರ ತೀರ್ಮಾನಕ್ಕೆ ಬದ್ಧಳಾಗಿರುತ್ತೇನೆ’ ಎಂದು ಮಂಜುಳಾ ಉದಯಶಂಕರ್‌ ತಿಳಿಸಿದರು.

ಚುನಾವಣೆ ನಡೆಸಲು ಡಿ.ಸಿ ಸೂಚನೆ

ಮಂಡ್ಯ ನಗರಸಭೆ, ಮಳವಳ್ಳಿ, ಮದ್ದೂರು, ಕೆ.ಆರ್‌.ಪೇಟೆ, ಪಾಂಡವಪುರ, ಶ್ರೀರಂಗಪಟ್ಟಣ, ನಾಗಮಂಗಲ ಪುರಸಭೆ ಹಾಗೂ ಬೆಳ್ಳೂರು ಪಟ್ಟಣ ಪಂಚಾಯಿತಿ ಅಧ್ಯಕ್ಷ– ಉಪಾಧ್ಯಕ್ಷ ಚುನಾವಣೆ ನಡೆಸುವಂತೆ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ಶುಕ್ರವಾರ ಅಧಿಕಾರಿಗಳಿಗೆ ಸೂಚನೆ ನೀಡಿದರು.

‘ಮಂಡ್ಯ ನಗರಸಭೆ ಚುನಾವಣೆ ನಡೆಸಲು ಉಪ ವಿಭಾಗಾಧಿಕಾರಿ ಹಾಗೂ ಪುರಸಭೆ ಚುನಾವಣೆ ನಡೆಸಲು ಆಯಾ ತಾಲ್ಲೂಕುಗಳ ತಹಶೀಲ್ದಾರ್‌ಗಳಿಗೆ ಸೂಚನೆ ನೀಡಲಾಗಿದೆ’ ಎಂದು ಜಿಲ್ಲಾಧಿಕಾರಿ ವೆಂಕಟೇಶ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT