ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಂಪುರದ ‘ಊರ ಮಗ’ ರಂಗಯ್ಯ ಇನ್ನಿಲ್ಲ

ಮೃತ ಪೌರಕಾರ್ಮಿಕನಿಗೆ ರಾಜ ಮರ್ಯಾದೆಯ ವಿದಾಯ
Last Updated 3 ಮಾರ್ಚ್ 2021, 2:04 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ತಾಲ್ಲೂಕಿನ ರಾಂಪುರ ಗ್ರಾಮದಲ್ಲಿ ಮಂಗಳವಾರ ಮುಂಜಾನೆ ಮೃತಪಟ್ಟ ಪೌರಕಾರ್ಮಿಕ ರಂಗಯ್ಯ (72) ಅವರ ಮೃತದೇಹವನ್ನು ಗ್ರಾಮಸ್ಥರು ವಿಶೇಷ ವಾಹನದಲ್ಲಿಟ್ಟು ಮೆರವಣಿಗೆ ಮಾಡಿ, ರಾಜ ಮರ್ಯಾದೆ ನೀಡಿ ವಿದಾಯ ಹೇಳಿದರು.

25 ವರ್ಷಗಳಿಂದ ಗ್ರಾಮದಲ್ಲಿ ಸೇವೆ ಮಾಡುತ್ತಿದ್ದ ರಂಗಯ್ಯ ಅವರ ಸಾವಿಗೆ ಆಬಾಲವೃದ್ಧರಾಗಿ ಊರ ಜನರೆಲ್ಲ ಕಂಬನಿ ಮಿಡಿದರು. ಊರ ಮಗನಂತಿದ್ದ ರಂಗಯ್ಯ ಅವರ ದಿಢೀರ್‌ ಅಗಲಿಕೆಗೆ ಮರುಗಿದರು. ಕಳೇಬರವನ್ನು ಸಿಂಗಾರ ಮಾಡಿ, ಮೈಸೂರಿನಿಂದ ವಿಶೇಷ ವಾಹನ ತರಿಸಿ ಬೀದಿ ಬೀದಿಗಳಲ್ಲಿ ಮೆರವಣಿಗೆ ಮಾಡಿದರು. ಪ್ರತಿ ಮನೆಯ ಮುಂದೆಯೂ ಪೂಜೆ ಸಲ್ಲಿಸಿದರು. ಅಂತ್ಯ ಸಂಸ್ಕಾರದಲ್ಲಿ ಊರಿಗೆ ಊರೇ ಭಾಗವಹಿಸಿತ್ತು.

ಸ್ವಂತ ಸೂರು, ಆಧಾರ್‌ ಚೀಟಿ, ಪಡಿತರ ಚೀಟಿ, ಏನೂ ಇಲ್ಲದ ರಂಗಯ್ಯ ಊಟ ಸಿಕ್ಕಲ್ಲಿ ಉಂಡು, ತಾವು ಸಿಕ್ಕಲ್ಲಿ ಮಲಗುತ್ತಿದ್ದರು. ಹಲವು ವರ್ಷಗಳಿಂದ ಯಾವುದೇ ಪಗಾರ ಸಿಗದಿದ್ದರೂ ಬೀದಿ ಗುಡಿಸುವ, ನಾಯಿ ಸತ್ತರೆ ಎಳೆದು ಹಾಕುವ, ಚರಂಡಿ ಕಟ್ಟಿಕೊಂಡರೆ ಕೆಸರು ಬಳಿಯುವ, ಮದುವೆ, ಬೀಗರ ಊಟದಲ್ಲಿ ಎಂಜಲೆಲೆ ಎತ್ತುವ ಕೆಲಸವನ್ನು ನಿಷ್ಠೆ ಯಿಂದ ಮಾಡುತ್ತಿದ್ದರು. ದುರಭ್ಯಾಸಗಳಿಲ್ಲದ, ಮಗು ಮನಸ್ಸಿನ ರಂಗಯ್ಯ ಇನ್ನೆಲ್ಲಿ? ಎಂದು ಗ್ರಾಮಸ್ಥರು ಮರುಗಿದರು.

‘ನಮ್ಮೂರಿನ ರಂಗಯ್ಯನನ್ನು ಕಂಡೇ ಕುವೆಂಪು ಅವರು ಜಲಗಾರ ನಾಟಕ ಬರೆದರೇನೋ ಎನಿಸುತ್ತಿತ್ತು. ಅವರ ದಿಢೀರ್‌ ಸಾವನ್ನು ನಂಬಲೂ ಆಗುತ್ತಿಲ್ಲ. ಇಂಥ ಸಜ್ಜನ, ಕಾಯಕ ಜೀವಿ ಎಲ್ಲೂ ಸಿಗುವುದಿಲ್ಲ’ ಎಂದು ಮುಖಂಡರಾದ ಆರ್‌.ಎನ್‌. ಗುರುಪ್ರಸಾದ್‌, ಮುರಳಿ, ಪ್ರೀತಂ ಹೆಳಿದರು.

ದರಸಗುಪ್ಪೆ ಪಿಡಿಒ ಶಶಿಕಲಾ, ‘ತಂದೆಯನ್ನು ಕಳೆದುಕೊಂಡಂತಾಗಿದೆ’ ಎಂದು ಗದ್ಗದಿತರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT