ಮಂಗಳವಾರ, ಮೇ 24, 2022
21 °C
ನಮ್‌ ಡಾಕ್ಟ್ರು ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭದಲ್ಲಿ ಡಿಸಿಎಂ ಅಶ್ವತ್ಥನಾರಾಯಣ

ಶಂಕರೇಗೌಡರದ್ದು ನಿಸ್ವಾರ್ಥ ಸೇವೆ: ಶ್ಲಾಘನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ಐದು ರೂಪಾಯಿ ಡಾಕ್ಟ್ರು ಶಂಕರೇಗೌಡರು ಜಿಲ್ಲೆಯಲ್ಲಿನ ಜನರನ್ನು ಅಣ್ಣ–ತಮ್ಮಂದಿರು, ಮನೆಯ ಮಕ್ಕಳೆಂದು ಭಾವಿಸಿ ನಿಸ್ವಾರ್ಥವಾಗಿ ವೈದ್ಯಕೀಯ ಸೇವೆ ನೀಡುತ್ತಿದ್ದಾರೆ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ್‌ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ವತಿಯಿಂದ ನಾಲ್ವಡಿ ಕೃಷ್ಣರಾಜ ಒಡೆಯರ್‌ ಕಲಾಮಂದಿರದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಐದು ರೂಪಾಯಿ ಡಾಕ್ಟ್ರು ಎಂದೇ ಪ್ರಖ್ಯಾತರಾಗಿರುವ ಡಾ.ಎಸ್‌.ಸಿ.ಶಂಕರೇಗೌಡ ಅವರ ‘ನಮ್‌ ಡಾಕ್ಟ್ರು’ ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ವಿದ್ಯಾಭ್ಯಾಸ ಮಾಡಬೇಕಾದರೆ ಸಮಾಜ ಸೇವೆಯ ಭಾವನೆ ಬರುತ್ತದೆ. ಆದರೆ, ವೃತ್ತಿ ಜೀವನದಲ್ಲಿ ದುಡ್ಡು ಮಾಡುವುದು, ಐಷಾರಾಮಿ ಜೀವನಕ್ಕೆ ಆಕರ್ಷಿತರಾಗುತ್ತಾರೆ. ಸರಳ ಜೀವನ ನಡೆಸಬೇಕು ಎಂಬ ಭಾವನೆ ಮನಸ್ಸಿನಲ್ಲಿ ಇದ್ದರೂ ಹಣ, ಮೋಹಕ್ಕೆ ಒಳಗಾಗಿ ಅದನ್ನು ಆಚರಣೆಗೆ ತರುವುದು ಕಷ್ಟವಾಗುತ್ತದೆ. ಮದುವೆ, ಮಕ್ಕಳಾದ ನಂತರವೂ ಶಂಕರೇಗೌಡರ ಜೀವನದಲ್ಲಿ ಯಾವುದೇ ಬದಲಾವಣೆಗಳು ಆಗದಿರುವುದು ಅನನ್ಯವಾಗಿದೆ ಎಂದು ಹೇಳಿದರು.

ಹಣ ವ್ಯಕ್ತಿತ್ವ, ಗುಣದ ಮುಂದೆ ಹಣಕ್ಕೆ ಯಾವ  ಮೌಲ್ಯ ಇದೆ ಎಂದು ಹೇಳುತ್ತಾರೆ. ಹಣಕ್ಕೆ ದೊಡ್ಡ ಶಕ್ತಿ ಇದ್ದು, ಬೇರೆ ಯಾವುದಕ್ಕೂ ಈ ಶಕ್ತಿ ಇಲ್ಲ. ಹಣವನ್ನು ಯಾವ ರೀತಿಯಲ್ಲಿ ಬಳಸುತ್ತೇವೆ ಎಂಬುದರ ಮೇಲೆ ಜೀವನ ನಿರ್ಧರಿತವಾಗುತ್ತದೆ. ಒಳ್ಳೆಯದಕ್ಕೆ, ಕೆಟ್ಟದಕ್ಕೆ ಬಳಕೆ ಮಾಡುವುದರ ಮೇಲೆ ಹಣದ ಮೌಲ್ಯ ನಿಂತಿರುತ್ತದೆ. ಅಂತೆಯೇ ಹಣದ ಮೋಹಕ್ಕೆ ಒಳಗಾಗದೆ ಬಡ ಜನರಿಗಾಗಿಯೇ ಶಂಕರೇ
ಗೌಡರು ದುಡಿಯುತ್ತಿದ್ದಾರೆ ಎಂದು ಹೇಳಿದರು.

ಐಷಾರಾಮಿ ಜೀವನ ನಡೆಸಬೇಕು, ಇನ್ನೊಬ್ಬರಿಗಿಂತ ಚೆನ್ನಾಗಿರಬೇಕು, ನಾನು ನನ್ನ ಮನೆಯವರು ಸುತ್ತಮುತ್ತಲಿನವರು ನಮ್ಮ ಸಮಾನವಾಗಿರಬಾರದು ಎಂಬ ಭಾವನೆ ಪ್ರಸ್ತುತ ಸನ್ನಿವೇಶದ ಸಮಾಜದಲ್ಲಿ ಕಾಣುತ್ತೇವೆ. ಸಮಾಜಕ್ಕಾಗಿ ತುಡಿಯುವ ಇಂಥ ವ್ಯಕ್ತಿಗಳನ್ನು ಎಲ್ಲಿಯೂ ನೋಡಲು ಸಾಧ್ಯವಿಲ್ಲ. ಸಮಾಜಕ್ಕಾಗಿ ನಾವು ಕಲಿತಿದ್ದನ್ನು, ಸಮಾಜದಿಂದ ಪಡೆದಿದ್ದನ್ನು ವೃತ್ತಿಯ ಮೂಲಕ ವಾಪಸ್‌ ನೀಡುವ ಕೆಲಸವನ್ನು ಅತ್ಯಂತ ಪ್ರಾಮಾಣಿಕವಾಗಿ ಮಾಡಿದ್ದಾರೆ. ಇದು ಎಲ್ಲರಿಗೂ ಉದಾಹಣೆಯಾಗಬೇಕು. ಮಾದರಿಯಾಗಿ ಸ್ವೀಕರಿಸಬೇಕು ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಸಿ.ಎಸ್.ಪುಟ್ಟರಾಜು, ಡಾ. ಶಂಕರೇಗೌಡ ಅವರಿಗೆ ಸರ್ಕಾರದಿಂದ ಸಲ್ಲಬೇಕಾದ ರಾಜ್ಯೋತ್ಸವ ಹಾಗೂ ಪದ್ಮಶ್ರೀ ಪ್ರಶಸ್ತಿಗಳನ್ನು ದೊರಕಿಸಿಕೊಡಲು ಅಶ್ವತ್ಥನಾರಾಯಣ ನಾರಾಯಣ ಅವರು ಕ್ರಮವಹಿಸಬೇಕು ಎಂದು ಅವರು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಅವರು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.

ನಿರ್ಮಲಾನಂದನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಾಸಕ ಎಂ.ಶ್ರೀನಿವಾಸ್‌, ಮನ್‌ಮುಲ್‌ ಅಧ್ಯಕ್ಷ ಬಿ.ಆರ್‌.ರಾಮಚಂದ್ರ, ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಸಿ.ಪಿ.ಉಮೇಶ್‌, ಉನ್ನತ ಶಿಕ್ಷಣ ಇಲಾಖೆಯ ಪ್ರಭಾಕರ್‌, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಕೆ.
ರವಿಕುಮಾರ್‌ ಚಾಮಲಾಪುರ, ಗ್ರಂಥದ ಸಂಪಾದಕ ಪ್ರದೀಪ್‌ಕುಮಾರ್‌ ಹೆಬ್ರಿ, ರೆಡ್‌ ಕ್ರಾಸ್‌ ಮುಖ್ಯಸ್ಥೆ ಮೀರಾ ಶಿವಲಿಂಗಯ್ಯ, ಶಂಕರೇಗೌಡರ ಪತ್ನಿ ರುಕ್ಮಿಣಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು