ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪಿಯುಸಿ ಫಲಿತಾಂಶ: 24ನೇ ಸ್ಥಾನಕ್ಕಿಳಿದ ಮಂಡ್ಯ

ಶೇಕಡವಾರಿನಲ್ಲಿ ಸಮಾಧಾನ ಪಟ್ಟುಕೊಂಡ ಜಿಲ್ಲೆ
Published : 11 ಏಪ್ರಿಲ್ 2024, 7:15 IST
Last Updated : 11 ಏಪ್ರಿಲ್ 2024, 7:15 IST
ಫಾಲೋ ಮಾಡಿ
Comments

ಮಂಡ್ಯ: ದ್ವಿತೀಯ ಪಿಯು ಪರೀಕ್ಷಾ ಫಲಿತಾಂಶವು ಬುಧವಾರ ಪ್ರಕಟವಾಗಿದ್ದು, ಕಳೆದ ವರ್ಷಕ್ಕಿಂತ ಮತ್ತಷ್ಟು ಕುಸಿದಿದೆ. ಶೇಕಡಾವಾರು ಫಲಿತಾಂಶದಲ್ಲಿ ಶೇ. 77.42 ರಿಂದ 80.56 ಏರಿಕೆಯಾಗುವ ಮೂಲಕ ಕಳೆದ ಬಾರಿಗಿಂತ ಹೆಚ್ಚಿದೆ. ಈ ಬಾರಿಯೂ ಬಾಲಕಿಯರದ್ದೇ ಮೇಲುಗೈ ಸಾಧಿಸಿದ್ದಾರೆ.

ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.80.56 ರಷ್ಟು ಫಲಿತಾಂಶ ಪಡೆದ ಮಂಡ್ಯ ಜಿಲ್ಲೆಯು 24ನೇ ಸ್ಥಾನಕ್ಕೆ ಕೆಳಕ್ಕಿಳಿದಿದೆ.  ಕಳೆದ ವರ್ಷ ಶೇ.77.47 ರಷ್ಟು ಫಲಿತಾಂಶದೊಂದಿಗೆ 20ನೇ ಸ್ಥಾನದಲ್ಲಿದ್ದ ಮಂಡ್ಯ ಜಿಲ್ಲೆಯ ಈ ಬಾರಿಯ ಫಲಿತಾಂಶದಲ್ಲಿ ಶೇಕಡವಾರು ಸುಧಾರಣೆ ಕಂಡಿದ್ದರೂ ಕೂಡ ಸ್ಥಾನವಾರು ಪಲ್ಲಟವಾಗಿದೆ.

ಜಿಲ್ಲೆಯಲ್ಲಿ ಒಟ್ಟು 12,218 ವಿದ್ಯಾರ್ಥಿಗಳು ಹೊಸದಾಗಿ ಪರೀಕ್ಷೆ ಬರೆದಿದ್ದರು. ಇವರ ಪೈಕಿ 9,843 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 2022 ರಲ್ಲಿ ಶೇ.58.77 ರಷ್ಟು ಫಲಿತಾಂಶದೊಂದಿಗೆ 27ನೇ ಸ್ಥಾನದಲ್ಲಿದ್ದ ಜಿಲ್ಲೆಯು ಕಳೆದ ವರ್ಷ 7 ಸ್ಥಾನಗಳ ಬಡ್ತಿಯೊಂದಿಗೆ 20ನೇ ಸ್ಥಾನಕ್ಕೇರಿತ್ತು.

ಆದರೆ, ಈ ವರ್ಷ ಮತ್ತೆ ನಾಲ್ಕು ಸ್ಥಾನಗಳ ಕುಸಿತ ಕಂಡಿದೆ. ಕೋವಿಡ್ ಕಾರಣದಿಂದ ಎಲ್ಲ ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸಿದ 2021ರ ಕೋವಿಡ್ ವರ್ಷದ ಹೊರತಾಗಿ ಕಳೆದ 15 ವರ್ಷಗಳಲ್ಲಿ ಮಂಡ್ಯ ಜಿಲ್ಲೆಯು ಇದೇ ಮೊದಲ ಬಾರಿಗೆ ಗರಿಷ್ಠ(ಶೇ.80.56) ಫಲಿತಾಂಶ ಪಡೆದಿದೆ.

(2017ರಲ್ಲಿ ಕಡಿಮೆ ಫಲಿತಾಂಶ(ಶೇ.56.43) ಪಡೆದಿದ್ದರೂ ರಾಜ್ಯದಲ್ಲೇ 17ನೇ ಸ್ಥಾನದಲ್ಲಿತ್ತು. ಆದರೆ, ಕಳೆದೊಂದು ದಶಕದಲ್ಲಿ ಮಂಡ್ಯ ಜಿಲ್ಲೆಯು ಪಿಯುಸಿ ಪರೀಕ್ಷೆಯಲ್ಲಿ ಗರಿಷ್ಠ ಫಲಿತಾಂಶದೊಂದಿಗೆ ಗಣನೀಯ ಸಾಧನೆ ಮಾಡಿದೆ. ಈ ವರ್ಷ 393 ಖಾಸಗಿ ಅಭ್ಯರ್ಥಿಗಳು, 846 ಮಂದಿ ಪುನರಾವರ್ತಿತ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 13,457 ಮಂದಿ ಪರೀಕ್ಷೆ ತೆಗೆದುಕೊಂಡಿದ್ದರು. ಇವರಲ್ಲಿ 10,380 (ಶೇ.77.13) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಈ ವರ್ಷ ಹೊಸದಾಗಿ ಪರೀಕ್ಷೆ ಬರೆದಿದ್ದ 12,218 ಮಂದಿವಿದ್ಯಾರ್ಥಿಗಳಲ್ಲಿ 9,843 (ಶೇ.80.56) ಮಂದಿ ತೇರ್ಗಡೆ ಹೊಂದಿದ್ದಾರೆ. ಕಳೆದ ವರ್ಷ 9,378 ಮಕ್ಕಳು ಉತ್ತೀರ್ಣರಾಗಿದ್ದರು. ಈ ವರ್ಷ ಇನ್ನೂ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ತೇರ್ಗಡೆಯಾಗಿರುವುದು ವಿಶೇಷವಾಗಿದೆ.

ನಿರೀಕ್ಷೆಯಂತೆ ಈ ಬಾರಿಯೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಣ್ಣು ಮಕ್ಕಳೇ ಮೇಲುಗೈ ಸಾಧಿಸಿದ್ದಾರೆ. ಖಾಸಗಿ, ಪುನಾರಾವರ್ತಿತ ಸೇರಿದಂತೆ ಪರೀಕ್ಷೆ ಬರೆದಿದ್ದ 7,560 ವಿದ್ಯಾರ್ಥಿನಿಯರಲ್ಲಿ 6,164(ಶೇ.81.53) ಮಂದಿ ಹಾಗೂ 5,897 ಗಂಡು ಮಕ್ಕಳಲ್ಲಿ 4,216(ಶೇ.71.49) ಮಂದಿ ತೇರ್ಗಡೆ ಹೊಂದಿದ್ದಾರೆ. ಆದರೆ, ಈ ವರ್ಷ ಗ್ರಾಮೀಣ ವಿದ್ಯಾರ್ಥಿಗಳಿಗಿಂತ(ಶೇ.79.78) ನಗರ ಪ್ರದೇಶದ ವಿದ್ಯಾರ್ಥಿಗಳು (ಶೇ.77.38) ಹೆಚ್ಚಿನ ಸಂಖ್ಯೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಮೂರು ವಿಭಾಗಗಳಿಗೆ ಹೋಲಿಸಿದರೆ ವಿಜ್ಞಾನ ವಿಭಾಗಕ್ಕೆ ಗರಿಷ್ಠ ಫಲಿತಾಂಶ (ಶೇ.88.42) ಬಂದಿದೆ. ವಿಜ್ಞಾನ ವಿಭಾಗದಲ್ಲಿ ಪರೀಕ್ಷೆ ತೆಗೆದುಕೊಂಡಿದ್ದ 5,891 ವಿದ್ಯಾರ್ಥಿಗಳಲ್ಲಿ 5,209 ಮಂದಿ ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆ ಬರೆದಿದ್ದ 4,030 ವಿದ್ಯಾರ್ಥಿಗಳಲ್ಲಿ 3,192 ಮಂದಿ(ಶೇ.79.21) ಪಾಸಾಗಿದ್ದಾರೆ. ಇನ್ನು ಕಲಾ ವಿಭಾಗದ 2,297 ವಿದ್ಯಾರ್ಥಿಗಳಲ್ಲಿ 1,442 ಮಂದಿ(ಶೇ.62.78) ತೇರ್ಗಡೆ ಹೊಂದಿದ್ದಾರೆ.

ಕೋವಿಡ್‌ನಿಂದ 2021 ರಲ್ಲಿ ಪರೀಕ್ಷೆ ತೆಗೆದುಕೊಂಡಿದ್ದ ಎಲ್ಲ ವಿದ್ಯಾರ್ಥಿಗಳಲ್ಲಿ ಪಾಸ್ ಮಾಡಲಾಗಿತ್ತು. ಹೀಗಾಗಿ ಆ ವರ್ಷ ಜಿಲ್ಲೆಗೆ ಶೇ.100 ರಷ್ಟು ಫಲಿತಾಂಶ ಬಂದಿತ್ತು. ಆಧರೆ, ವಿದ್ಯಾರ್ಥಿಗಳು ಪಡೆದಿದ್ದ ಫಲಿತಾಂಶದ ಆಧಾರದ ಮೇಲೆ ಜಿಲ್ಲೆಗಳಿಗೆ ನೀಡಿದ್ದ ಗ್ರೇಡಿಂಗ್‌ನಲ್ಲಿ ಮಂಡ್ಯಗೆ 19ನೇ ಸ್ಥಾನ ಲಭಿಸಿತ್ತು.

ಒಟ್ಟಿನಲ್ಲಿ ಕಳೆದ ವರ್ಷ 20 ಸ್ಥಾನದಲ್ಲಿದ್ದದ್ದು ಈ ಬಾರಿ 24ಕ್ಕೆ ಕುಸಿದಿದೆ, ಈ ಬಾರಿ ಗ್ರಾಮೀಣ ವಿಭಾಗಕ್ಕಿಂತ ನಗರ ಪ್ರದೇಶದ ವಿದ್ಯಾರ್ಥಿಗಳು ಮೇಲುಗೈ ಸಾಧಿಸಿದ್ದಾರೆ, ಒಟ್ಟಾರೆ ಫಲಿತಾಂಶದಲ್ಲಿ ಬಾಲಕಿಯರೇ ಮೇಲುಗೈ ಸಾಧಿಸಿರುವುದು ವಿಶೇಷವಾಗಿದೆ.

ಗ್ರಾಮೀಣ ಭಾಗದ ವಿದ್ಯಾರ್ಥಿಗಳೇ ಹೆಚ್ಚು ಉತ್ತೀರ್ಣ ಈ ಬಾರಿಯೂ ಬಾಲಕಿಯರದ್ದೇ ಮೇಲುಗೈ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT