ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ಹೆದ್ದಾರಿಗೆ ಪರ್ಯಾಯ ರಸ್ತೆ: ರಂಗನತಿಟ್ಟು ಪಕ್ಷಿಧಾಮಕ್ಕೆ ಧಕ್ಕೆ

ಶ್ರೀರಂಗಪಟ್ಟಣದಿಂದ ಮಡಿಕೇರಿ ಹೆದ್ದಾರಿಗೆ ನೇರ ಸಂಪರ್ಕ
Last Updated 19 ಸೆಪ್ಟೆಂಬರ್ 2019, 6:28 IST
ಅಕ್ಷರ ಗಾತ್ರ

ಮಂಡ್ಯ: ರಂಗನತಿಟ್ಟು ಪಕ್ಷಧಾಮದ ಕೂಗಳತೆ ದೂರದಲ್ಲಿ, ಬೆಂಗಳೂರು– ಮೈಸೂರು ರಾಷ್ಟ್ರೀಯ ಹೆದ್ದಾರಿ (275)ಗೆ ಪರ್ಯಾಯ ರಸ್ತೆ ನಿರ್ಮಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಸೂಚನೆ ಹೊರಡಿಸಿರುವುದು ಪರಿಸರ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಶ್ರೀರಂಗಪಟ್ಟಣ ತಾಲ್ಲೂಕು ಬೊಮ್ಮೂರು ಅಗ್ರಹಾರ ಗ್ರಾಮದಿಂದ ಅವ್ವೇರಗಹಳ್ಳಿ, ಬಲಮುರಿ, ಬೀಚನಕುಪ್ಪೆ, ಕರಿಮಂಟಿ, ಕೆಂಪಲಿಂಗ ಪುರ, ಪಾಲಹಳ್ಳಿ, ಬೆಳಗೊಳ ಗ್ರಾಮಗಳ ಮೂಲಕ ಮಡಿಕೇರಿ ಹೆದ್ದಾರಿಯನ್ನು ನೇರವಾಗಿ ಸಂಪರ್ಕಿಸುವ ಪರ್ಯಾಯ ರಸ್ತೆಗೆ, ಭೂಸ್ವಾಧೀನ ಮಾಡಿಕೊಳ್ಳಲು ಪ್ರಾಧಿಕಾರ ಮುಂದಾಗಿದೆ.

ಭೂಸ್ವಾಧೀನಕ್ಕೆ ಗುರುತಿಸಿರುವ ಕರಿಮಂಟಿ ಹಾಗೂ ಕೆಂಪಲಿಂಗಪುರ ಗ್ರಾಮಗಳು ಪಕ್ಷಿಧಾಮದ ಭಾಗವೇ ಆಗಿವೆ. ಈ ಸೂಕ್ಷ್ಮ ಪ್ರದೇಶದಲ್ಲಿ ಹೆದ್ದಾರಿ ನಿರ್ಮಾಣಗೊಂಡರೆ ಪಕ್ಷಿಗಳ ಚಲನವಲನಕ್ಕೆ ಧಕ್ಕೆಯಾಗಿ ಪರಿಸರ ಹಾಳಾಗುವ ಅಪಾಯವಿದೆ ಎಂಬುದು ಪರಿಸರ ಪ್ರೇಮಿಗಳ ಆತಂಕ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಮೈಸೂರು– ಮಡಿಕೇರಿ ವಿಭಾಗ) ಆ.1ರಂದು ಅಧಿಸೂಚನೆ ಹೊರಡಿಸಿದ್ದು ಜಿಲ್ಲೆ ವ್ಯಾಪ್ತಿಯ 14.5 ಕಿ.ಮೀ ಭೂಮಿ ವಶಪಡಿಸಿಕೊಳ್ಳಲು ಸಿದ್ಧತೆ ನಡೆಸಿದೆ.

ಕಳೆದ ಸಮ್ಮಿಶ್ರ ಸರ್ಕಾರದ ಅವಧಿ ಯಲ್ಲಿ ಯೋಜನೆಗೆ ಅನುಮೋದನೆ ದೊರೆತಿದೆ. ಹೆದ್ದಾರಿ ಪ್ರಾಧಿಕಾರದ ಹಣ ಬಳಸಿಕೊಳ್ಳುವ ಆತುರದಲ್ಲಿ ಅಂದಿನ ಲೋಕೋಪಯೋಗಿ ಸಚಿವರಾಗಿದ್ದ ಎಚ್‌.ಡಿ.ರೇವಣ್ಣ, ಯೋಜನೆಗೆ ತರಾತುರಿಯಲ್ಲಿ ಅನುಮೋದನೆ ಕೊಡಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಆಕ್ಷೇಪಣೆ ಸಲ್ಲಿಕೆ: ಪರ್ಯಾಯ ರಸ್ತೆ ನಿರ್ಮಿಸಲು ಉದ್ದೇಶಿಸಿರುವ ಸ್ಥಳದ ಸಮೀಪದಲ್ಲೇ ಶ್ರೀರಂಗಪಟ್ಟಣ– ಕೆಆರ್‌ಎಸ್‌– ಹುಣಸೂರು ರಾಜ್ಯ ಹೆದ್ದಾರಿ ಇದೆ. ಕೋಲಂಬಿಯಾ ಏಷ್ಯಾ ಆಸ್ಪತ್ರೆ ಬಳಿಯ ರಿಂಗ್‌ ರಸ್ತೆ ಮೂಲಕ ಮತ್ತೊಂದು ಬೈಪಾಸ್‌ಕೂಡ ನಿರ್ಮಾಣ ಗೊಳ್ಳುತ್ತಿದೆ. ಇಷ್ಟೆಲ್ಲಾ ರಸ್ತೆಗಳಿದ್ದರೂ ಪರ್ಯಾಯ ರಸ್ತೆ ಬೇಕಿತ್ತೇ ಎಂದು ಪರಿಸರ ಪ್ರೇಮಿಗಳು ಪ್ರಶ್ನಿಸಿದ್ದು, ಪ್ರಾಧಿಕಾರದ ಅಧಿಸೂಚನೆಗೆ ಆಕ್ಷೇಪಣೆ ಸಲ್ಲಿಸಿದ್ದಾರೆ.

ಇದರ ಬದಲಾಗಿ, ಶ್ರೀರಂಗಪಟ್ಟಣ–ಹುಣಸೂರು ರಾಜ್ಯ ಹೆದ್ದಾರಿಯನ್ನೇ ವಿಸ್ತರಣೆ ಮಾಡಬೇಕು. ಪರಿಸರ ಸೂಕ್ಷ್ಮತೆಯನ್ನು ಪರಿಗಣಿಸದೇ ಕೈಗೊಳ್ಳಲಾಗಿರುವ ಯೋಜನೆಯನ್ನು ಕೈಬಿಡಬೇಕು ಎಂದು ಆಕ್ಷೇಪಣೆಯಲ್ಲಿ ಒತ್ತಾಯಿಸಲಾಗಿದೆ.

‘ಅಧಿಸೂಚನೆಯಲ್ಲಿ ನಮೂದಿ ಸಿರುವ ಗ್ರಾಮಗಳ ಜಮೀನು ಸಂಪೂರ್ಣವಾಗಿ ನೀರಾವರಿ ಸೌಲಭ್ಯಕ್ಕೆ ಒಳಪಡುತ್ತದೆ. ಆದರೆ ಖುಷ್ಕಿ ಎಂದು ತಪ್ಪಾಗಿ ನಮೂದಿಸಿರುವುದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಯೋಜನೆ ಅನುಷ್ಠಾನದಿಂದ ಉಂಟಾಗುವ ತೊಂದರೆ ಕುರಿತ ವರದಿಯೊಂದನ್ನು ‘ಕಾವೇರಿ ಕೂಗು’ ಅಭಿಯಾನ ನಡೆಸುತ್ತಿರುವ ಜಗ್ಗಿ ವಾಸುದೇವ್‌ ಅವರಿಗೆ ಸಲ್ಲಿಸಲಾಗಿದೆ. ಅದನ್ನು ಅವರು ಪ್ರಧಾನಮಂತ್ರಿಗೆ ಸಲ್ಲಿಸುವ ಭರವಸೆ ನೀಡಿದ್ದಾರೆ’ ಎಂದು ಪರಿಸರ ಲೇಖಕ, ನಿವೃತ್ತ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಎಚ್‌.ಟಿ.ಚಂದ್ರಶೇಖರ್‌ ಹೇಳಿದರು.

‘ಅಭಿವೃದ್ಧಿ ಹೆಸರಿನಲ್ಲಿ ಕೊಡಗು ಜಿಲ್ಲೆಯ ಪರಿಸರಕ್ಕೆ ಕೈಹಾಕಿದ ಪರಿಣಾಮ ಪ್ರಳಯ ಸನ್ನಿವೇಶ ನಿರ್ಮಾಣವಾಗಿದೆ. ಕಾವೇರಿ ಹರಿವಿನ ಪ್ರಮಾಣ ಶೇ 40ರಷ್ಟು ಕುಗ್ಗಿದೆ. ಕೇಂದ್ರ ಸರ್ಕಾರ ಹೆದ್ದಾರಿಗಳಿಗೆ ಹಣದ ಹೊಳೆಯನ್ನೇ ಹರಿಸುತ್ತಿರುವುದು ಅಪಾಯಕಾರಿ ಬೆಳವಣಿಗೆ. ಈ ಯೋಜನೆಯಿಂದ ಕಾವೇರಿ ನದಿಗೆ ಧಕ್ಕೆಯಾದರೆ ಮುಂದೆ ಬೆಂಗಳೂರಿನ ಜನರಿಗೆ ಕುಡಿಯವ ನೀರಿಗೂ ಹಾಹಾಕಾರ ಉಂಟಾಗಬಹುದು’ ಎಂದು ಅರಣ್ಯ ಮತ್ತು ಪರಿಸರ ಇಲಾಖೆಯ ನಿವೃತ್ತ ಕಾರ್ಯದರ್ಶಿ ಎ.ಸಿ.ಲಕ್ಷ್ಮಣ್‌ ಆತಂಕ ವ್ಯಕ್ತಪಡಿಸಿದರು.

ದಿನಕ್ಕೆ 14 ಕಿ.ಮೀ ಹೆದ್ದಾರಿ ಅಭಿವೃದ್ಧಿ ಗುರಿ

‘ಕಾಂಗ್ರೆಸ್‌ ಸರ್ಕಾರ ಅಸ್ತಿತ್ವದಲ್ಲಿದ್ದಾಗ ದಿನಕ್ಕೆ 7 ಕಿ.ಮೀ ರಾಷ್ಟ್ರೀಯ ಹೆದ್ದಾರಿಯನ್ನು ಅಭಿವೃದ್ಧಿಪಡಿಸುವ ಗುರಿ ಹೊಂದಿತ್ತು. ಈಗಿನ ಬಿಜೆಪಿ ಸರ್ಕಾರ 14 ಕಿ.ಮೀ ಅಭಿವೃದ್ಧಿ ಗುರಿ ಹೊಂದಲು ಉದ್ದೇಶಿಸಿದೆ. ಜನಸಂಖ್ಯೆಯ ಆಧಾರದ ಮೇಲೆ ರಸ್ತೆ ಅಭಿವೃದ್ಧಿಗೆ ಮುಂದಾದರೆ ಸಂಪೂರ್ಣ ಅರಣ್ಯವನ್ನೇ ನಾಶ ಮಾಡಬೇಕಾಗುತ್ತದೆ. ರಂಗನತಿಟ್ಟು ಪಕ್ಷಿಧಾಮ ಸಾವಿರಾರು ಕಿ.ಮೀ ದೂರದಿಂದ ಹಾರಿ ಬರುವ ಪಕ್ಷಿಗಳ ಸಂತಾನೋತ್ಪತ್ತಿಯ ಸ್ಥಳವಾಗಿದೆ. ಇಲ್ಲಿ ಹೆದ್ದಾರಿ ಬಂದರೆ ಪರಿಸರ ಅಸಮತೋಲನವಾಗಲಿದೆ’ ಎಂದು ನೀರಾವರಿ ಇಲಾಖೆ ನಿವೃತ್ತ ಮುಖ್ಯ ಎಂಜಿನಿಯರ್‌, ಗ್ರೋ ಮೋರ್‌ ಟ್ರೀ ಸಂಸ್ಥೆ ಸಂಸ್ಥಾಪಕ ಎಂ.ಬಿ.ಜಯಶಂಕರ್‌ ಆತಂಕ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT