ಹಲಗೂರು: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಸುವರ್ಣ ಕರ್ನಾಟಕ ರಕ್ಷಣಾ ವೇದಿಕೆ ಸದಸ್ಯರು ಶನಿವಾರ ಮಧ್ಯಾಹ್ನ ಹಲಗೂರು ಪ್ರಮುಖ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಕನ್ನಡ ಗಿರೀಶ್ ಮಾತನಾಡಿ, ‘ಕಾವೇರಿ ನದಿ ಪಾತ್ರದಲ್ಲಿ ಮುಂಗಾರು ಮಳೆ ಇಲ್ಲ. ಕೃಷ್ಣರಾಜ ಸಾಗರ ಜಲಾಶಯದ ಒಳ ಹರಿವು ಕಡಿಮೆಯಾಗಿದೆ. ಜಿಲ್ಲೆಯ ಕೆರೆಗಳು ಬತ್ತಿ ಹೋಗುತ್ತಿದ್ದು, ರೈತ ಕಷ್ಟಪಟ್ಟು ಬಿತ್ತಿದ್ದ ಬೆಳೆಗಳು ಒಣಗುತ್ತಿವೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ರಾಜ್ಯದ ರೈತರ ಹಿತ ಕಾಯಬೇಕಾಗಿದ್ದ ರಾಜ್ಯ ಸರ್ಕಾರವು ತಮಿಳು ನಾಡಿಗೆ ನೀರು ಹರಿಸುತ್ತಿರುವ ಕ್ರಮ ಖಂಡನೀಯ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಹವಾಮಾನ ಪರಿಸ್ಥಿತಿ ಈ ರೀತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಈ ಭಾಗದ ಜನರು ಕುಡಿಯುವ ನೀರಿಗೂ ತಾತ್ವಾರ ಎದುರಿಸಬೇಕಿದೆ. ಮುಂಜಾಗ್ರತಾ ಕ್ರಮವಾಗಿ ರಾಜ್ಯ ಸರ್ಕಾರ ಕೂಡಲೇ ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸಬೇಕು’ ಎಂದು ಆಗ್ರಹಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಪಿ.ಜಯಶಂಕರ್, ತಾಲ್ಲೂಕು ಘಟಕದ ಅಧ್ಯಕ್ಷ ಶಿವಣ್ಣ, ಕಾರ್ಯಕರ್ತರಾದ ಮೋಹನ್ ಗುರೂಜಿ, ಮೋಹಿತ್ ಪ್ರಸಾದ್, ಮನು, ಕೆ.ಎಸ್.ಗಿರೀಶ್, ಕೃಷ್ಣ, ಸಂತೋಷ್ ಕುಮಾರ್, ಮುನಿಹೊನ್ನ, ಕೃಷ್ಣ, ಮುತ್ತು, ಆಕಾಶ್, ಕಿರಣ್, ಸುಹಾಸ್, ಸುನೀಲ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.