ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗವಿಕಲರಿಗೆ ಹಕ್ಕು: ಸಂವಿಧಾನದ ತಿದ್ದುಪಡಿ ಬೇಕು- ನಂಬುರಾಜನ್‌

ಎಂ.ಎನ್‌.ಯೋಗೇಶ್‌
Published 6 ಜನವರಿ 2024, 5:56 IST
Last Updated 6 ಜನವರಿ 2024, 5:56 IST
ಅಕ್ಷರ ಗಾತ್ರ

ಮಂಡ್ಯ: ಕರ್ನಾಟಕ ರಾಜ್ಯ ಅಂಗವಿಕಲರ ಮತ್ತು ಪಾಲಕರ ಒಕ್ಕೂಟದ ಮೂರನೇ ರಾಜ್ಯ ಸಮ್ಮೇಳನಕ್ಕೆ ನಗರದ ಕೆ.ವಿ.ಎಸ್‌ ಶತಮಾನೋತ್ಸವ ಭವನ ಸಜ್ಜಾಗಿದೆ. ಸಮಾವೇಶದ ಅಂಗವಾಗಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಅಂಗವಿಕಲರು, ಒಕ್ಕೂಟದ ಪದಾಧಿಕಾರಿಗಳು ನಗರಕ್ಕೆ ಬಂದಿದ್ದಾರೆ. ಸಮಾರಂಭದಲ್ಲಿ ಅಂಗವಿಕಲರ ಹಕ್ಕುಗಳ ರಾಷ್ಟ್ರೀಯ ವೇದಿಕೆ ಕಾರ್ಯಾಧ್ಯಕ್ಷ ನಂಬುರಾಜನ್‌ ಪಾಲ್ಗೊಳ್ಳುತ್ತಿರುವುದು ವಿಶೇಷವಾಗಿದೆ. ಸಮ್ಮೇಳನದ ಹಿನ್ನೆಲೆಯಲ್ಲಿ ನಂಬುರಾಜನ್‌ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ್ದಾರೆ.

ಸಮಾಜದಲ್ಲಿ ಅಂಗವಿಕಲರಿಗೆ ಘನತೆಯ ಬದುಕು ದೊರೆಯುತ್ತಿದೆಯೇ?

ಸಂವಿಧಾನದ 14ನೇ ವಿಧಿಯ ಸಮಾನತೆಯ ಹಕ್ಕಿನಲ್ಲಿ ನೇರವಾಗಿ ಅಂಗವಿಕಲರ ಪ್ರಸ್ತಾಪವಾಗಿಲ್ಲ. 15ನೇ ವಿಧಿಯಲ್ಲಿ ಕೂಡ ತಾರತಮ್ಯದ ವಿರುದ್ಧದ ಮೂಲಭೂತ ಹಕ್ಕಿನಲ್ಲೂ ಅಂಗವಿಕಲರನ್ನು ಸೇರ್ಪಡೆ ಮಾಡಿಲ್ಲ. ಸಂವಿಧಾನ ತಿದ್ದುಪಡಿಯಾದರೆ ಮಾತ್ರ ಅಂಗವಿಕಲರಿಗೆ ಹಕ್ಕುಗಳು ದೊರೆಯಲು ಸಾಧ್ಯ. 2019ರ ಲೋಕಸಭಾ ಚುನಾವಣೆ ವೇಳೆ ಕಾಂಗ್ರೆಸ್‌ ಪಕ್ಷ ಸಂವಿಧಾನ ತಿದ್ದುಪಡಿಯ ಭರವಸೆ ನೀಡಿತ್ತು. ಆದರೆ ಆಗ ಕಾಂಗ್ರೆಸ್‌ ಅಧಿಕಾರಕ್ಕೆ ಬರಲಿಲ್ಲ. ಮುಂದೆ ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೂ ಸಂವಿಧಾನ ತಿದ್ದುಪಡಿಯ ಮೂಲಕ ಅಂಗವಿಕಲರಿಗೆ ಮೂಲಭೂತ ಹಕ್ಕು ದೊರೆಯುವಂತೆ ಮಾಡಬೇಕು.

ಕೇಂದ್ರ ಹಾಗೂ ರಾಜ್ಯಗಳಲ್ಲಿ ಅಂಗವಿಕಲರ ಹಕ್ಕುಗಳ ಕಾಯ್ದೆ (ಆರ್‌ಪಿಡಬ್ಲ್ಯುಡಿ) ಜಾರಿ ಸಮರ್ಪಕವಾಗಿದೆಯೇ?

ಕಾರ್ಯಾಂಗ, ನ್ಯಾಯಾಂಗದ ಇಚ್ಛಾಶಕ್ತಿಯ ಕೊರತೆಯಿಂದಾಗಿ ಕಾಯ್ದೆ ಸಮರ್ಪಕವಾಗಿ ಜಾರಿಯಾಗುತ್ತಿಲ್ಲ, ಅಧಿಕಾರಿ ವರ್ಗ ಕಾಯ್ದೆ ಅನುಷ್ಠಾನಕ್ಕೆ ಕನಿಷ್ಠ ಆದ್ಯತೆ ನೀಡಿಲ್ಲ. ಕಾಯ್ದೆಯಲ್ಲಿ 102 ಕಲಂಗಳಿವೆ, ಅಂಗವಿಕಲರಿಗೆ ಶಿಕ್ಷಣ, ಆರೋಗ್ಯ ಸೇರಿದಂತೆ ಸಮರ್ಪಕ ಸೌಲಭ್ಯ ನೀಡುವ ಪ್ರಸ್ತಾಪವಿದೆ. ಆದರೆ ಅನುಷ್ಠಾನದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತೀರಾ ಹಿಂದುಳಿದಿವೆ.

ಕೇಂದ್ರ, ರಾಜ್ಯ ಸರ್ಕಾರಗಳ ಬಜೆಟ್‌ನಲ್ಲಿ ಶೇ 5ರಷ್ಟು ಅನುದಾನ ಅಂಗವಿಕಲರಿಗೆ ಬಳಕೆಯಾಗುತ್ತಿದೆಯೇ?

ರಾಷ್ಟ್ರ ಹಾಗೂ ರಾಜ್ಯಮಟ್ಟದ ನಿಧಿಯಿಂದ ಅಂಗವಿಕಲರಿಗೆ ಯಾವುದೇ ಸೌಲಭ್ಯಗಳು ದೊರೆಯುತ್ತಿಲ್ಲ. ಪಾಲಿಕೆ, ನಗರಸಭೆ, ಪಟ್ಟಣ ಪಂಚಾಯಿತಿ, ಪುರಸಭೆ ಬಜೆಟ್‌ನಲ್ಲೂ ಅಂಗವಿಕಲರಿಗಾಗಿ ಅನುದಾನ ಮೀಸಲಿಡುವ ಪರಿಪಾಠವೂ ಇಲ್ಲವಾಗಿದೆ. ಇಂತಹ ತಾತ್ಸಾರ ಏಕೆ ಎಂಬ ಪ್ರಶ್ನೆಗೆ ಉತ್ತರ ದೊರೆಯುತ್ತಿಲ್ಲ

ಅಂಗವಿಲರ ಭತ್ಯೆ ಹೆಚ್ಚಳವಾಗಬೇಕು ಎಂಬ ಬೇಡಿಕೆ ಈಡೇರುವ ವಿಶ್ವಾಸವಿದೆಯೇ?

ಹೋರಾಟದ ಮೂಲಕ ಹಕ್ಕು ಪಡೆದುಕೊಳ್ಳುವ ವಿಶ್ವಾಸವಿದೆ. ಸರ್ಕಾರ ನೀಡುವ ಮಾಸಾಶನವನ್ನು ಕನಿಷ್ಠ ₹3 ಸಾವಿರಕ್ಕೆ ಏರಿಸಬೇಕು. ಶೇ 75ರಷ್ಟು ನ್ಯೂನತೆ ಉಳ್ಳವರಿಗೆ ಕನಿಷ್ಠ ₹ 5 ಸಾವಿರ ಭತ್ಯೆ ನೀಡಬೇಕು ಎಂಬುದು ನಮ್ಮ ಒತ್ತಾಯವಾಗಿದೆ.

ಅಂಗವಿಕಲರ ಗುರುತಿನ ಚೀಟಿಗೆ ದೇಶದಾದ್ಯಂತ ಮಾನ್ಯತೆ ದೊರೆಯಬೇಕು ಎಂಬ ಕೂಗು ಇದೆಯಲ್ಲಾ?

ಕೂಗಿಗೆ ಸರ್ಕಾರಗಳು ಸ್ಪಂದನೆ ನೀಡುತ್ತಿಲ್ಲ. ಇಲ್ಲಿಯವರೆಗೂ ಅಂಗವಿಕಲರು ಸೌಲಭ್ಯಗಳನ್ನು ಹೋರಾಟದ ಮೂಲಕವೇ ಪಡೆದುಕೊಂಡಿದ್ದೇವೆ. ಮುಂದೆಯೂ ಹೋರಾಟ ನಡೆಸುವುದು ಅನಿವಾರ್ಯ. ಮಂಡ್ಯದ ಸಮಾವೇಶದಲ್ಲಿ ಮುಂದಿನ ಹೋರಾಟದ ರೂಪುರೇಷೆ ರೂಪಿಸಲಾಗುವುದು.

ಅಂಗವಿಕಲ ಅಥವಾ ವಿಕಲಚೇತನ ಪದಗಳಲ್ಲಿ ಯಾವುದು ಸೂಕ್ತ?

ಅಂಗವಿಕಲ ಎಂದರೆ ಅಂಗವು ಊನವಾಗಿರುವ ವ್ಯಕ್ತಿ ಎಂದು ಅರ್ಥ. ಅದಕ್ಕೆ ಪರ್ಯಾಯವಾಗಿ ವಿಕಲಚೇತನ ಎಂಬ ಪದ ಬಳಸುವುದು ಸರಿಯಲ್ಲ. ಏಕೆಂದರೆ ಅಂಗವಿಕಲರ ಅಂಗ ಊನವಾಗಿದೆಯೇ ಹೊರತು ಚೇತನವಲ್ಲ ಎಂದು ಸ್ಪಷ್ಟನೆ ನೀಡಿದರು.

ರಾಜ್ಯ ಸಮ್ಮೇಳನ
ಕರ್ನಾಟಕ ರಾಜ್ಯ ಅಂಗವಿಕಲರ ಮತ್ತು ಪಾಲಕರ ಒಕ್ಕೂಟದ ಮೂರನೇ ರಾಜ್ಯ ಮಟ್ಟದ ಸಮ್ಮೇಳನವು ಜ. 6 ಹಾಗೂ 7ರಂದು ಮಂಡ್ಯದ ಕರ್ನಾಟಕ ಸಂಘದ ಕೆ.ವಿ. ಶಂಕರಗೌಡ ಶತಮಾನೋತ್ಸವ ಭವನದಲ್ಲಿ ನಡೆಯಲಿದೆ. ಜ.6ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿ ಕುಮಾರ ಸಮ್ಮೇಳನ ಉದ್ಘಾಟಿಸಲಿದ್ದಾರೆ. ಅಂಗವಿಕಲರ ಹಕ್ಕುಗಳ ರಾಷ್ಟ್ರೀಯ ವೇದಿಕೆ ಕಾರ್ಯಾಧ್ಯಕ್ಷ ನಂಬುರಾಜನ್‌ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಜಿ.ಎನ್‌.ನಾಗರಾಜ್‌ ಪ್ರಾಸ್ತಾವಿಕ ಮಾತನಾಡುವರು. ಜಿಲ್ಲಾ ಪಂಚಾಯಿತಿ ಶೇಖ್‌ ತನ್ವೀರ್‌ ಆಸೀಫ್‌ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌.ಯತೀಶ್‌ ಹಿರಿಯ ನಾಗರಿಕರು ಮತ್ತು ಅಂಗವಿಕಲರ ಕಲ್ಯಾಣಾಧಿಕಾರಿ ಶಿವಕುಮಾರ ಬಿರಾದರ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶ್‌ಗೌಡ ಅತಿಥಿಗಳಾಗಿ ಪಾಲ್ಗೊಳ್ಳುವರು. ಎರಡೂ ದಿನಗಳ ವಿಚಾರ ಸಂಕಿರಣ ಸಂವಾದ ನಡೆಯಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT