ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತೇಬಾಚಹಳ್ಳಿ: ಮೇವು, ನೀರಿಲ್ಲದೆ ಕರುಗಳ ಸಾವು

ಗವಿರಂಗನಾಥಸ್ವಾಮಿ ದೇವಾಲಯದ ಬಳಿ ವಿದ್ಯಮಾನ
Last Updated 21 ಫೆಬ್ರುವರಿ 2022, 12:41 IST
ಅಕ್ಷರ ಗಾತ್ರ

ಸಂತೇಬಾಚಹಳ್ಳಿ (ಮಂಡ್ಯ):ರಾಜ್ಯ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ ಜಾರಿಗೆ ಬಂದ ನಂತರ ಕೆಲ ರೈತರು ಇಲ್ಲಿನ ಗವಿರಂಗನಾಥಸ್ವಾಮಿ ದೇವಾಲಯದ ಆವರಣದಲ್ಲಿ ಗಂಡು ಕರು ಮತ್ತು ವಯಸ್ಸಾದ ದನಗಳನ್ನು ಬಿಟ್ಟು ಹೋಗುತ್ತಿದ್ದಾರೆ. ಆದರೆ, ಅವು ಮೇವು, ನೀರಿಲ್ಲದೆ ಸಾಯುತ್ತಿವೆ.

‘ಗಂಡು ಕರುಗಳಿಂದ ಉಪಯೋಗವಿಲ್ಲ, ಅವುಗಳ ಸಾಕಣೆಗೂ ಹೆಚ್ಚು ವೆಚ್ಚವಾಗುತ್ತದೆ’ ಎಂದು ರೈತರು ಗಂಡು ಕರು ಹುಟ್ಟಿದ ಮೂರು ದಿನಗಳಲ್ಲೇ ಈ ದೇವಾಲಯದ ಬಳಿ ಬಿಟ್ಟು ಹೋಗುತ್ತಿದ್ದಾರೆ. ಸರಿಯಾಗಿ ನಡೆದಾಡಲು ಆಗದ ಸ್ಥಿತಿಯಲ್ಲಿರುವ ಕರುಗಳನ್ನು ನಾಯಿಗಳು ಎಳೆದಾಡಿ ತಿಂದು ಹಾಕುತ್ತಿವೆ. ಹಾಲು, ನೀರು, ಮೇವು ಸಿಗದೆ ಕೆಲವು ಕರುಗಳು ಸಾಯುತ್ತಿವೆ.

‘ಪ್ರತಿ ವಾರ ಸುಮಾರು 10 ಗಂಡು ಕರುಗಳನ್ನು ಬಿಟ್ಟು ಹೋಗುತ್ತಾರೆ. ಗೋಶಾಲೆ ಪ್ರಾರಂಭಿಸಲು ಸಿದ್ಧತೆ ಮಾಡಿಕೊಳ್ಳುತ್ತಿರುವುದಾಗಿ ತಾಲ್ಲೂಕು ಆಡಳಿತ ಹೇಳುತ್ತಿದೆ. ಆದರೆ, ಇದುವರೆಗೆ ಪ್ರಾರಂಭವಾಗಿಲ್ಲ. ಪ್ರಾಣಿದಯಾ ಸಂಘದ ಕಾರ್ಯಕರ್ತರು ಸೇರಿ ಯಾರೂ ಕರುಗಳ ರಕ್ಷಣೆಗೆ ಮುಂದಾಗಿಲ್ಲ’ ಎಂದು ಬಿಲ್ಲೇನಹಳ್ಳಿ ಗ್ರಾಮದ ರೈತ ಹರೀಶ್ ಲಕ್ಕೇಗೌಡ ದೂರಿದರು.

‘ಬಿಲ್ಲೇನಹಳ್ಳಿ ಗವಿರಂಗನಾಥಸ್ವಾಮಿ ದೇವಾಲಯದಿಂದ ಪ್ರತಿವರ್ಷ ಸುಮಾರು ₹ 50 ಲಕ್ಷ ಆದಾಯ ಸರ್ಕಾರಕ್ಕೆ ಬರುತ್ತಿದೆ. ದೇವಾಲಯದ ಆದಾಯ ಬಳಸಿಕೊಂಡೇ ಕ್ಷೇತ್ರದಲ್ಲಿ ಗೋಶಾಲೆ ಆರಂಭಿಸಬೇಕು’ ಎಂದು ಅವರು ಆಗ್ರಹಿಸಿದರು.

‘ಕ್ಷೇತ್ರದ ಧಾರ್ಮಿಕ ಪದ್ಧತಿಯಂತೆ ರೈತರು ಹರಕೆ ಹೊತ್ತ ಗೋವುಗಳನ್ನು ಕ್ಷೇತ್ರಕ್ಕೆ ತಂದು ಬಿಡುತ್ತಿದ್ದರು. ಈಚೆಗೆ ವಯಸ್ಸಾದ ಮತ್ತು ಎಳೆಯ ಕರುಗಳನ್ನು ಮಾಹಿತಿ ನೀಡದೆ ಬಿಟ್ಟು ಹೋಗುತ್ತಿದ್ದಾರೆ. ಮೇವು, ನೀರು ಕುಡಿಯಲು ಶಕ್ತವಾದ ಬಳಿಕ ಕ್ಷೇತ್ರಕ್ಕೆ ಕರುಗಳನ್ನು ತಂದು ರಶೀದಿ ಪಡೆದರೆ ಅಂಥ ಕರುಗಳನ್ನು ಸಮೀಪದ ಗೋಶಾಲೆಗಳಿಗೆ ಅಧಿಕಾರಿಗಳು ಬಿಡುತ್ತಾರೆ. ಸರ್ಕಾರದ ಮಟ್ಟದಲ್ಲಿ ಗೋಶಾಲೆ ತೆರೆಯುವ ಚರ್ಚೆ ನಡೆಯುತ್ತಿದೆ. ರೈತರು ಎಳೆಯ ಕರುಗಳನ್ನು ಬಿಟ್ಟುಹೋಗಬಾರದು’ ಎಂದು ಕೆ.ಆರ್‌.ಪೇಟೆ ತಹಶೀಲ್ದಾರ್‌ ಎಂ.ವಿ.ರೂಪಾ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT