ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಸ್‌ಸಿಗಳಲ್ಲಿ ‘ಸೇವಾ ಸಿಂಧು’ ಸ್ಥಗಿತ: ಪರದಾಟ

ಮತ್ತೆ ಸರ್ಕಾರಿ ಕಚೇರಿಗಳಿಗೆ ಎಡತಾಕುತ್ತಿರುವ ಜನ, ಯೋಜನೆಗಳ ಲಾಭ ಪಡೆಯಲು ಅಡ್ಡಿ
Last Updated 3 ಅಕ್ಟೋಬರ್ 2020, 14:31 IST
ಅಕ್ಷರ ಗಾತ್ರ

ಮಂಡ್ಯ: ಕಳೆದೊಂದು ತಿಂಗಳಿಂದ ಖಾಸಗಿ ಸೇವಾ ಕೇಂದ್ರಗಳಲ್ಲಿ (ಸಿಎಸ್‌ಸಿ) ‘ಸೇವಾ ಸಿಂಧು’ ಪೋರ್ಟಲ್‌ ಸ್ಥಗಿತಗೊಂಡಿದ್ದು ರಾಜ್ಯದಾದ್ಯಂತ ಸಾರ್ವಜನಿಕರು ಸರ್ಕಾರದ ವಿವಿಧ ಇಲಾಖೆಗಳ ಸೇವೆ ಪಡೆಯಲು ಪರದಾಡುತ್ತಿದ್ದಾರೆ.

ಒಂದೇ ಸೂರಿನಡಿ ಸರ್ಕಾರಿ ಸೇವೆ ಒದಗಿಸುವ ಉದ್ದೇಶದಿಂದ 69 ಇಲಾಖೆಗಳ 629 ನಾಗರಿಕ ಸೇವೆಗಳನ್ನು ಸೇವಾಸಿಂಧು ಪೋರ್ಟಲ್‌ನೊಂದಿಗೆ ಸಂಯೋಜಿಸಲಾಗಿದೆ. ಇ–ಆಡಳಿತ ಇಲಾಖೆಯ ವಿದ್ಯುನ್ಮಾನ ನಾಗರಿಕ ಸೇವಾ ವಿತರಣಾ ನಿರ್ದೇಶನಾಲಯ (ಇಡಿಸಿಎಸ್‌), ಸೇವಾಸಿಂಧು ಅನುಷ್ಠಾನ ಜವಾಬ್ದಾರಿ ಹೊತ್ತಿದೆ. ಜನರು ಸರ್ಕಾರಿ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ಸರ್ಕಾರ ರಾಜ್ಯದಾದ್ಯಂತ 15 ಸಾವಿರಕ್ಕೂ ಹೆಚ್ಚು ಸಿಎಸ್‌ಸಿಗಳಿಗೆ ಅನುಮತಿ ನೀಡಿದೆ.

ಆದರೆ, ಸಿಎಸ್‌ಸಿಗಳಲ್ಲಿ ಏಕಾಏಕಿ ಸೇವಾಸಿಂಧು ಪೋರ್ಟಲ್‌ ಸ್ಥಗಿತಗೊಂಡಿದ್ದು ಜನರು ವಿವಿಧ ದಾಖಲಾತಿ ಪಡೆಯಲು ಮತ್ತೆ ಸರ್ಕಾರಿ ಕಚೇರಿಗಳಿಗೆ ಎಡತಾಕುವಂತಾಗಿದೆ. ಜನರಿಗೆ ಅತ್ಯವಶ್ಯಕವಾದ ಆರೋಗ್ಯ, ಶಿಕ್ಷಣ, ಕಂದಾಯ, ಸಾರಿಗೆ ಸೌಲಭ್ಯಗಳು ದೊರೆಯುತ್ತಿಲ್ಲ. ಇದರಿಂದ ಕಾರ್ಮಿಕರು, ರೈತರು, ಮಕ್ಕಳು, ಮಹಿಳೆ, ವೃದ್ಧರು ಹಾಗೂ ಅಂಗವಿಕಲರಿಗೆ ಸಮಸ್ಯೆಯಾಗಿದೆ.

‘ಮೇ ತಿಂಗಳಲ್ಲಿ ಮುಕ್ತಾಯವಾಗಿದ್ದ ಕಾರ್ಮಿಕರ ಕಾರ್ಡ್‌ ನವೀಕರಣಕ್ಕೆ ಅರ್ಜಿ ಹಾಕಲು ಸಾಧ್ಯವಾಗುತ್ತಿಲ್ಲ. ಕಾರ್ಮಿಕರ ಇಲಾಖೆಯಲ್ಲಿ ಕೇಳಿದರೆ ಸಿಎಸ್‌ಸಿಯಲ್ಲೇ ಅರ್ಜಿ ಸಲ್ಲಿಸಿ ಇಲ್ಲಿಗೆ ಬರಬೇಕು ಎಂದು ಹೇಳುತ್ತಿದ್ದಾರೆ. ಕಾರ್ಡ್‌ ನವೀಕರಣಗೊಳ್ಳದಿದ್ದರೆ ಮಗನ ಶಿಕ್ಷಣದ ಸಹಾಯಧನ ಪಡೆಯಲು ಸಾಧ್ಯವಾಗುವುದಿಲ್ಲ’ ಎಂದು ಗಾರೆ ಕೆಲಸಗಾರ ಆರ್‌.ಮಹೇಶ್‌ ಹೇಳಿದರು. ಗ್ರಾಮೀಣ ಜನರಿಗೂ ಸಕಾಲದಲ್ಲಿ ಸೇವೆ ಒಗಿಸುವ ಉದ್ದೇಶದಿಂದ
ಬೆಂಗಳೂರು ಒನ್‌, ಮೈಸೂರು ಒನ್‌, ಕರ್ನಾಟಕ ಒನ್‌ ಕೇಂದ್ರಗಳ ಜೊತೆಗೆ ಸಿಎಸ್‌ಸಿಗಳಿಗೂ ಸೇವಾ ಸಿಂಧು ಪೋರ್ಟಲ್‌ನ ಲಾಗಿನ್‌ ಐಡಿ ನೀಡಲಾಗಿದೆ. ಪ್ರತಿ ಸೇವೆಯ ನಿಗದಿತ ಶುಲ್ಕದಲ್ಲಿ ಶೇ 25–30ರಷ್ಟು ಸೇವಾ ಕೇಂದ್ರಗಳಿಗೆ ಸಿಗುತ್ತದೆ.

‘ಕಂಪ್ಯೂಟರ್‌ನಲ್ಲಿ ಸೇವಾಸಿಂಧು ಪುಟ ತೆರೆದುಕೊಳ್ಳುತ್ತದೆ. ಆದರೆ ಅರ್ಜಿ ತುಂಬಿದ ನಂತರ ಶುಲ್ಕ ಪಾವತಿಸುವ ವ್ಯಾಲೆಟ್‌ ಸ್ಥಗಿತಗೊಂಡಿದೆ. ಫಲಾನುಭವಿಗಳಿಗೆ ಅರ್ಜಿ ಸಲ್ಲಿಸಿದ ರಸೀದಿ ನೀಡಲು ಸಾಧ್ಯವಾಗುತ್ತಿಲ್ಲ, ಅಪಾರ ಪ್ರಮಾಣದ ಅರ್ಜಿಗಳು ಬಾಕಿ ಉಳಿದಿವೆ’ ಎಂದು ನಗರದ ಸಿಎಸ್‌ಸಿ ಕೇಂದ್ರವೊಂದರ ಮಾಲೀಕ ವಿ.ಡಿ.ಶಿವಪ್ರಸಾದ್‌ ಹೇಳಿದರು.

‘ಪೇಮೆಂಟ್‌ ವ್ಯಾಲೆಟ್‌ನಲ್ಲಿ ತಾಂತ್ರಿಕ ಸಮಸ್ಯೆ ಇರಬಹುದು. ಅದನ್ನು ಅವರೇ ಸರಿಪಡಿಸಿಕೊಳ್ಳಬೇಕು. ಬೆಂಗಳೂರು ಒನ್‌ ಸೇರಿದಂತೆ ಸರ್ಕಾರಿ ಸೇವಾ ಕೇಂದ್ರಗಳಲ್ಲಿ ಯಾವುದೇ ತೊಂದರೆ ಆಗಿಲ್ಲ’ ಎಂದು ಇಡಿಸಿಎಸ್‌ ನಿರ್ದೇಶನಾಲಯದ ಯೋಜನಾ ನಿರ್ದೇಶಕ ಬಿ.ಎಸ್‌.ವರಪ್ರಸಾದ್‌ ರೆಡ್ಡಿ ಹೇಳಿದರು.

ಡಿಜಿಟಲ್‌ ಇಂಡಿಯಾ ಯೋಜನೆಗೆ ಧಕ್ಕೆ

‘ಖಾಸಗಿ ಸೇವಾ ಕೇಂದ್ರಗಳು ಡಿಜಿಟಲ್‌ ಇಂಡಿಯಾ ಯೋಜನೆಯ ಭಾಗ. ಸರ್ಕಾರಿ ಕಚೇರಿಗಳಲ್ಲಿದ್ದ ಭ್ರಷ್ಟಾಚಾರ ಕೊನೆಗೊಳಿಸುವ ಉದ್ದೇಶದಿಂದ ಸರ್ಕಾರಿ ಸೇವೆ ನೀಡುವ ಒದಗಿಸುವ ಖಾಸಗೀಕರಣಗೊಳ್ಳುತ್ತಿದೆ. ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಈ ವ್ಯವಸ್ಥೆ ಯಶಸ್ವಿಯಾಗಿದೆ. ಲಂಚದ ರುಚಿ ನೋಡಿರುವ ಅಧಿಕಾರಿಶಾಹಿ ಸಿಎಸ್‌ಸಿಗಳನ್ನು ದುರ್ಬಲಗೊಳಿಸುವ ಯತ್ನ ಮಾಡುತ್ತಿದೆ. ಇದರಿಂದ ಡಿಜಿಟಲ್‌ ಇಂಡಿಯಾ ಯೋಜನೆಗೆ ಧಕ್ಕೆಯಾಗುತ್ತಿದೆ’ ಎಂದು ಸಿಎಸ್‌ಸಿ– ವಿಎಲ್‌ಇ (ವಿಲೇಜ್‌ ಲೆವೆಲ್‌ ಎಂಟ್ರಪ್ರೂನರ್‌) ಸೊಸೈಟಿಯ ಮುಖ್ಯಸ್ಥರೊಬ್ಬರು ತಿಳಿಸಿದರು.

ಅ.6ರಂದು ಸಚಿವರೊಂದಿಗೆ ಸಭೆ

‘ಹಣ ಪಾವತಿಸುವ ವ್ಯಾಲೆಟ್‌ನಲ್ಲಿ ಉಂಟಾಗಿರುವ ತಾಂತ್ರಿಕ ಸಮಸ್ಯೆಯನ್ನು ಸಿಎಸ್‌ಸಿ ತಂತ್ರಜ್ಞರಿಂದ ಸರಿಪಡಿಸಲು ಸಾಧ್ಯವಾಗುತ್ತಿಲ್ಲ. ಇದನ್ನು ಇಡಿಸಿಎಸ್‌ ನಿರ್ದೇಶನಾಲಯವೇ ಬಗೆಹರಿಸಬೇಕು. ಈ ಕುರಿತು ಚರ್ಚಿಸಲು ‘ಸಕಾಲ’ ಜವಾಬ್ದಾರಿ ನಿರ್ವಹಿಸುತ್ತಿರುವ ಸಚಿವ ಎಸ್‌.ಸುರೇಶ್‌ಕುಮಾರ್‌ ಅವರೊಂದಿಗೆ ಅ.6ರಂದು ಸಭೆ ನಿಗದಿಯಾಗಿದೆ’ ಎಂದು ಖಾಸಗಿ ಸೇವಾ ಕೇಂದ್ರಗಳ ರಾಜ್ಯ ಮುಖ್ಯಸ್ಥ ಎಸ್‌.ಪಿ.ಕುಲಕರ್ಣಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT