ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡದ ಮೇಲೆ ಅಭಿಮಾನ ಇರಲಿ: ಸಿದ್ದರಾಮಯ್ಯ ಹೇಳಿಕೆ

ಡಾ.ಹಾಮಾನಾ ಪ್ರಶಸ್ತಿ ಪ್ರದಾನ ಸಮಾರಂಭ
Last Updated 14 ಫೆಬ್ರುವರಿ 2021, 4:01 IST
ಅಕ್ಷರ ಗಾತ್ರ

ಮಂಡ್ಯ: ಪ್ರತಿಯೊಬ್ಬ ಕನ್ನಡಿಗನಿಗೆ ಕನ್ನಡ ಭಾಷೆಯ ಮೇಲೆ ಭಾಷಾಭಿಮಾನ ಇರಬೇಕು. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆಯಾಗಿದ್ದು, ನಾವು ನಮ್ಮ ಮಾತೃ ಭಾಷೆಯನ್ನು ಗೌರವಿ ಸದಿದ್ದರೆ ಮತ್ಯಾರು ಗೌರವಿಸುತ್ತಾರೆ ಎಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದರು.

ಕರ್ನಾಟಕ ಸಂಘದ ವತಿಯಿಂದ ನಗರದ ಸಂಘದ ಆವರಣದಲ್ಲಿ ಶನಿ ವಾರ ನಡೆದ ಕಾರ್ಯಕ್ರಮದಲ್ಲಿ 9ನೇ ವರ್ಷದ ಡಾ.ಹಾಮಾನಾ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

ತಮಿಳುನಾಡು, ಆಂಧ್ರಪ್ರದೇಶ, ಕೇರಳ, ಮಹಾರಾಷ್ಟ್ರದ ಜನರಿಗಿರುವ ಭಾಷಾಭಿಮಾನ ಕನ್ನಡಿಗರಲ್ಲಿ ಇಲ್ಲ. ಕನ್ನಡಿಗರಿಗೆ ಭಾಷಾಭಿಮಾನದ ಕೊರತೆ ಬಹಳಷ್ಟಿದೆ. ಪರಭಾಷಿಕನೊಬ್ಬ ತನ್ನ ಭಾಷೆಯಲ್ಲಿ ವಿಳಾಸ ಕೇಳಿದರೆ ನಾವು ಅವನ ಭಾಷೆಯಲ್ಲೇ ಉತ್ತರಿಸಲು ಮುಂದಾಗುತ್ತೇವೆ. ಆದರೆ ನೀವು ಬೇರೆ ರಾಜ್ಯಗಳಲ್ಲಿ ಮಾಹಿತಿ ಕೇಳಿದರೆ ಅವರು ಅವರದೇ ಭಾಷೆಯಲ್ಲಿ ಉತ್ತರಿಸುತ್ತಾರೆ. ಆದ್ದರಿಂದ ಕರ್ನಾಟಕದಲ್ಲಿ ಕನ್ನಡತನ ಅನಿವಾರ್ಯವಾಗಬೇಕು. ಆಗ ನಿಜ ವಾದ ಕನ್ನಡಿಗ ಎನ್ನಲು ಧೈರ್ಯ ಬರುತ್ತದೆ ಎಂದರು.

ಅನಕ್ಷರಸ್ಥರೂ ತಮ್ಮ ಮಕ್ಕಳನ್ನು ಇಂಗ್ಲಿಷ್ ಭಾಷೆಯಲ್ಲಿ ಓದಿಸಬೇಕೆಂಬ ಧಾವಂತದಲ್ಲಿದ್ದಾರೆ. ಇಂಗ್ಲಿಷ್ ಓದಿದರೆ ಸಮಾಜದಲ್ಲಿ ಗೌರವ ಸಿಗುತ್ತದೆ. ಕನ್ನಡದಲ್ಲಿ ಓದಿದವರು ಹಿಂದುಳಿ ಯುತ್ತಾರೆ ಎಂಬ ಭ್ರಮೆಯಲ್ಲಿದ್ದಾರೆ. ಮಾತೃಭಾಷೆಯಲ್ಲಿ ಓದಿದರೆ ಮಾತ್ರ ಹೆಚ್ಚಿನ ಜ್ಞಾನ ಸಿಗುತ್ತದೆ. ಕನ್ನಡ ಭಾಷೆ ಕರ್ನಾಟಕದಲ್ಲಿ ಸಾರ್ವಭೌಮ ಭಾಷೆ ಆಗಿರಬೇಕು. ಪಂಜಾಬ್, ತಮಿಳುನಾಡು, ಆಂಧ್ರ, ಕೇರಳ, ಕರ್ನಾಟಕದಲ್ಲಿ ಹಿಂದಿ ಇಲ್ಲ. ಹೀಗಿದ್ದರೂ ಅದನ್ನು ಹೇಗೆ ರಾಷ್ಟ್ರೀಯ ಭಾಷೆ ಎನ್ನಲು ಸಾಧ್ಯ ಎಂದು ಪ್ರಶ್ನಿಸಿದರು.

‘ಮೆಟ್ರೋದಲ್ಲಿ ಹಿಂದಿ ಫಲಕಗಳನ್ನು ಹಾಕಿಸಿದ್ದರು. ಅದನ್ನು ತೆಗೆಸಿ, ಕನ್ನಡ ಹಾಕಿಸಿದ್ದೆನು. ಮಾತೃಭಾಷೆ ಮೇಲೆ ಕನಿಷ್ಠ ಅಭಿಮಾನ ಇರಬೇಕು. ಬೇರೆ ಭಾಷೆಯನ್ನು ಬೇಕಿದ್ದರೆ ಕಲಿಯಬಹುದು. ಆದರೆ, ಕನ್ನಡ ಮೇಲಿನ ಅಭಿಮಾನ ಎಂದಿಗೂ ಕುಂದಬಾರದು. ನಾವೆಲ್ಲರೂ ಕನ್ನಡಿಗರು, ಮೊದಲು ಕನ್ನಡಿಗ, ನಂತರ ಭಾರತೀಯರು. ಎಲ್ಲದಕ್ಕೂ ಔದಾರ್ಯ ಇರಬೇಕು. ಆದರೆ, ಅದು ನಮ್ಮ ಭಾಷೆಯನ್ನೇ ಒತ್ತರಿಸಿಕೊಂಡು ಬೆಳೆಯಲು ಬಿಡಬಾರದು. ಮಾತ್ರವಲ್ಲ, ಮಾತೃಭಾಷೆಯನ್ನೇ ಕುಂಠಿತಗೊಳಿಸುವ ಔದಾರ್ಯ ಇರಬಾರದು’ ಎಂದು ಹೇಳಿದರು.

ಮಾಜಿ ಶಾಸಕ, ತೀರ್ಥಹಳ್ಳಿ ತಾಲ್ಲೂಕಿನ ಕೋಣಂದೂರು ಲಿಂಗಪ್ಪ ಅವರಿಗೆ 9ನೇ ವರ್ಷದ ಡಾ.ಹಾಮಾನಾ ಕನ್ನಡ ಕಟ್ಟುವಿಕೆ ಹಿರಿಯ ಪ್ರಶಸ್ತಿ ಹಾಗೂ ರಂಗ ನಿರ್ದೇಶಕ, ಗದುಗಿನ ಪ್ರಮೋದ್‌ ಶಿಗ್ಗಾಂವ್‌ ಅವರಿಗೆ ಕನ್ನಡ ಕಟ್ಟುವಿಕೆ ಯುವ ಪ್ರಶಸ್ತಿಯನ್ನು ಸಿದ್ದರಾಮಯ್ಯ ಪ್ರದಾನ ಮಾಡಿದರು. ಹಿರಿಯ ಪ್ರಶಸ್ತಿ ₹ 50 ಸಾವಿರ ಮತ್ತು ಕಿರಿಯ ಪ್ರಶಸ್ತಿ ₹ 25 ಸಾವಿರ ನಗದು, ಫಲಕವನ್ನೊಳಗೊಂಡಿದೆ.

ಡಾ.ಹಾಮಾನಾ ಪ್ರಶಸ್ತಿ ಸ್ವೀಕರಿಸಿದ ಮಾಜಿ ಶಾಸಕ ಕೋಣಂದೂರು ಲಿಂಗಪ್ಪ, ಬೆಂಗಳೂರಿನ ಕಾರ್ಯಕ್ರಮವೊಂದರಲ್ಲಿ ಕೇಂದ್ರದ ಸಚಿವರೊಬ್ಬರು ಏಕ್ ದೇಶ್, ಏಕ್ ಭಾಷಾ ಸೂತ್ರದ ಬಗ್ಗೆ ಮಾತನಾಡಿದ್ದಾರೆ. ಆದರೆ, ಇಡೀ ರಾಜ್ಯದ ಯಾವೊಬ್ಬ ಕನ್ನಡ ಕಟ್ಟಾಳು ಚಕಾರವೆತ್ತಲಿಲ್ಲ. ಆ ಬಗ್ಗೆ ಗಟ್ಟಿ ಧ್ವನಿ ಎತ್ತಿ ಸಿದ್ದರಾಮಯ್ಯ ಖಂಡಿಸಿದ್ದರು. ಸಿದ್ದರಾಮಯ್ಯ ಕೇವಲ ಮೈಸೂರು ಹುಲಿಯಲ್ಲ. ಕರ್ನಾಟಕದ ಸಿಂಹ ಕೂಡ ಹೌದು. ಮಾಜಿ ಮುಖ್ಯಮಂತ್ರಿ ಮಾತ್ರವಲ್ಲ, ಭಾವಿ ಮುಖ್ಯಮಂತ್ರಿಯೂ ಹೌದು ಎಂದು ಲಿಂಗಪ್ಪ ಶ್ಲಾಘಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಸಚಿವ ಎನ್‌.ಚಲುವರಾಯಸ್ವಾಮಿ, ಸಿದ್ದರಾಮಯ್ಯ ಅವರನ್ನು ಜಾತಿವಾದಿ ಎಂದು ಕೆಲವರು ಬಿಂಬಿಸುತ್ತಾರೆ. ಅವರು ಜಾತಿವಾದಿಯಲ್ಲ, ಎಲ್ಲಾ ವರ್ಗದ ಬಡವರ ಪರ ಇರುವ ಒಂದು ಶಕ್ತಿಯಾಗಿದ್ದಾರೆ. ಆರ್ಥಿಕ, ಸಾಮಾಜಿಕ, ಸಾಹಿತ್ಯಿಕ, ಶೈಕ್ಷಣಿಕವಾಗಿ ವಿಷಯ ಕರಗತ ಮಾಡಿಕೊಂಡಿರುವ ಅವರು, ಆರ್ಥಿಕ ತಜ್ಞ ಅಲ್ಲದಿದ್ದರೂ, ಅತಿ ಹೆಚ್ಚು ಬಾರಿ ಬಜೆಟ್ ಮಂಡಿಸಿದ ಕೀರ್ತಿಗೆ ಭಾಜನರಾಗಿದ್ದಾರೆ ಎಂದು ಹೇಳಿದರು.

ಶಾಸಕ ಎಂ.ಶ್ರೀನಿವಾಸ್ ಅಧ್ಯಕ್ಷತೆ ವಹಿಸಿದ್ದರು. ವಿಧಾನಪರಿಷತ್ ಮಾಜಿ ಸದಸ್ಯ ಬಿ.ರಾಮಕೃಷ್ಣ, ದಡದಪುರ ಶಿವಣ್ಣ, ಡಾ.ಹಾಮಾನಾ ಅವರ ಸಹೋದರ ಪ್ರೊ.ಈಶ್ವರ್, ಮೊಮ್ಮಗ ಅಜಿಂತ್ಯ, ಗಣಿಗ ರವಿ, ಪ್ರೊ.ಜಯಪ್ರಕಾಶಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT