ಭಾನುವಾರ, ಏಪ್ರಿಲ್ 11, 2021
25 °C
ಕೆರೆಯ ಹೂಳು ತೆಗೆಸಿ, ನೀರು ಸಂಗ್ರಹ ಹೆಚ್ಚಿಸಲು ಅಧಿಕಾರಿಗಳ ನಿರ್ಲಕ್ಷ್ಯ, ಇಚ್ಛಾಶಕ್ತಿಯ ಕೊರತೆ

ಹೂಳು, ಒತ್ತುವರಿ: ನೀರು ಸಂಗ್ರಹ ಇಳಿಕೆ

ಎಂ.ಆರ್.ಅಶೋಕ್ ಕುಮಾರ್ Updated:

ಅಕ್ಷರ ಗಾತ್ರ : | |

Prajavani

ಮದ್ದೂರು: ತಾಲ್ಲೂಕಿನ ಸೂಳೆಕೆರೆ ಸೇರಿದಂತೆ ಬಹುತೇಕ ಕೆರೆಗಳು ಒತ್ತುವರಿಯಾಗಿದ್ದು, ಹೂಳು ತುಂಬಿಕೊಂಡಿದೆ. ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯ ಕಾರಣದಿಂದ ಪೂರ್ಣ ನೀರಿನ ಸಂಗ್ರಹಣಾ ಸಾಮರ್ಥ್ಯ ಇಲ್ಲದೆ ಮಳೆಗಾಲದ ಸಂದರ್ಭದಲ್ಲಿ ನೀರು ವ್ಯರ್ಥವಾಗಿ ಹೋಗುತ್ತಿದ್ದು, ಬೇಸಿಗೆಯಲ್ಲಿ ಪರದಾಡುವಂತಾಗಿದೆ.

ತಾಲ್ಲೂಕು ಕೆಆರ್‌ಎಸ್‌ ಅಣೆಕಟ್ಟೆ ನಾಲೆಯ ಕೊನೆ ಭಾಗದಲ್ಲಿ ಇದ್ದು, ಕೆಆರ್‌ಎಸ್‌ ತುಂಬಿದ್ದರೂ ಕೌಡ್ಲೆ ಸೇರಿದಂತೆ ವಿವಿಧೆಡೆ ನೀರು ತಲುಪುವುದಿಲ್ಲ. ಈ ಮಧ್ಯೆ ಕೆರೆಗಳ ಒತ್ತುವರಿಯಿಂದಾಗಿ ನೀರಿನ ಸಾಮರ್ಥ್ಯ ಕಡಿಮೆಯಾಗುತ್ತಿದ್ದು, ಜಲ ಮೂಲಗಳಲ್ಲಿ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಗ್ರಾಮೀಣ ಭಾಗದಲ್ಲಿ ವ್ಯವಸಾಯದ ಮೂಲ ಆಸರೆಯಾಗಿರುವ ಕೆರೆಗಳಲ್ಲಿ ಗಿಡಗಂಟಿಗಳು ಬೆಳೆದು ನಿಂತಿವೆ.

ಕಾವೇರಿ ನೀರಾವರಿ ನಿಗಮದ ವ್ಯಾಪ್ತಿಗೆ ತಾಲ್ಲೂಕಿನ 27 ಕೆರೆಗಳು ಕಾವೇರಿ ನದಿಯ ನೀರನ್ನು ಅವಲಂಬಿ ಸಿವೆ. ಚಿಕ್ಕರಸಿನಕೆರೆ ಹೋಬಳಿಯ ಭಾರತೀನಗರದ ಬಳಿ ಇರುವ ಸೂಳೆಕೆರೆಯು ತಾಲ್ಲೂಕಿನ ಅತಿ ದೊಡ್ಡ ಕೆರೆಗಳಲ್ಲಿ ಒಂದಾಗಿದೆ. ಸೂಳೆಕೆರೆ ನಾಲೆ ಹಾಗೂ ಹೆಬ್ಬಳ್ಳ ಚನ್ನಯ್ಯ ನಾಲೆಗಳ ಮೂಲಕ ಹತ್ತಾರು ಗ್ರಾಮಗಳ 10,802 ಹೆಕ್ಟೇರ್ ಪ್ರದೇಶಗಳಿಗೆ ನೀರುಣಿಸುತ್ತಿದೆ.

ವಿಸಿ ನಾಲೆ, ಮಳೆ ನೀರು ಸೂಳೆಕೆರೆಗೆ ಮೂಲವಾಗಿದೆ. ವಿಸ್ತಾರವಾಗಿದ್ದ ಸೂಳೆಕೆರೆ ಒತ್ತುವರಿಯಿಂದ ಕಿರಿದಾಗುತ್ತಿದ್ದು, ಅಂಬರಹಳ್ಳಿ, ಕನ್ನಲಿ, ಮಾದರಹಳ್ಳಿ, ಹೆಮ್ಮಿಗೆ ಗ್ರಾಮಗಳಿಂದ ಆವೃತವಾಗಿದೆ. ದೊಡ್ಡದಾದ ಕೆರೆಗೂ ಒತ್ತುವರಿ ಕಾಟವಿದೆ. ಹಲವು ವರ್ಷಗಳಿಂದ ಹೂಳೆತ್ತದೆ ನೀರು ಸಂಗ್ರಹ ಸಾಮರ್ಥ್ಯ ದಿನೇದಿನೇ ಕುಗ್ಗುತ್ತಿದೆ.

ಸೂಳೆಕೆರೆ ಒತ್ತುವರಿ ತೆರವುಗೊಳಿ ಸುವುದಕ್ಕೆ ಸಂಬಂಧಿಸಿದಂತೆ ಹಲವಾರು ಬಾರಿ ಒತ್ತಾಯ ಕೇಳಿ ಬರುತ್ತಿದ್ದರೂ ಯಾವುದೇ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಂಡಿ ಲ್ಲ. ಹೂಳು ತುಂಬಿರುವ ಕಾರಣ ಕೆರೆ ನೀರು ಸಂಗ್ರಹ ಕಡಿಮೆಯಾಗಿದೆ.

ತಾಲ್ಲೂಕಿನ ದೇಶಹಳ್ಳಿ ಗ್ರಾಮದ ಕೆರೆಯು ಹೊನ್ನಮ್ಮ ಎಂಬ ಮಹಿಳೆಯ ಬಲಿದಾನದಿಂದ ನಿರ್ಮಾಣವಾಗಿರುವ ಇತಿಹಾಸ ಹೊಂದಿದೆ. 950 ಎಕರೆ ವಿಸ್ತೀರ್ಣ ಹೊಂದಿದೆ. ಕೆರೆಯು ಇದುವರೆಗೂ 300 ಎಕರೆಗಳಿಗೂ ಹೆಚ್ಚು ಒತ್ತುವರಿ ಯಾಗಿದ್ದು, 350ಕ್ಕೂ ಹೆಚ್ಚು ಎಕರೆ ವಿಸ್ತೀರ್ಣದಲ್ಲಿ ಸುಮಾರು 8 ರಿಂದ 10 ಅಡಿಗಳಷ್ಟು ಹೂಳು ತುಂಬಿಕೊಂ ಡಿರುವುದರಿಂದ ಬೇಸಿಗೆಯಲ್ಲಿ ನೀರಿನ ಸಂಗ್ರಹ ತೀರ ಕಡಿಮೆಯಾಗುತ್ತಿದೆ.

ದೇಶಹಳ್ಳಿ, ಚಾಮನಹಳ್ಳಿ, ಶಿವಪುರ, ಮದ್ದೂರು, ಗೊರವನಹಳ್ಳಿ, ಚನ್ನಸಂದ್ರ, ವೈದ್ಯನಾಥಪುರ, ನಗರಕೆರೆ, ಮಾಲಗಾರನಹಳ್ಳಿ, ಸೋಂಪುರ, ಅಜ್ಜಳ್ಳಿ, ಉಪ್ಪಿನಕೆರೆ, ತೊರೆಚಾಕನಹಳ್ಳಿ ಸೇರಿದಂತೆ ಕೆರೆಯ ಅಚ್ಚುಕಟ್ಟು  ವ್ಯಾಪ್ತಿಗೆ 10 ಸಾವಿರ ಎಕರೆ ಬರುತ್ತದೆ. ಬೇಸಿಗೆ ಸಂದರ್ಭದಲ್ಲಿ ನೀರು ಸಂಗ್ರಹಣ ಕಡಿಮೆಯಾಗಿ ವ್ಯವಸಾಯಕ್ಕೆ ತೊಂದರೆಯಾಗುತ್ತಿದೆ. ಕೆಲವು ಕೆರೆಗಳಲ್ಲಿ ಸದಾ ಕಾಲ ಮೀನುಗಾರಿಕೆ ನಡೆಯುತ್ತಿದ್ದು, ಮೀನುಗಾರರ ಜೀವನ ನಿರ್ವಹಣೆಗೆ ಆಸರೆಯಾಗಿವೆ.

ದೇಶಹಳ್ಳಿ ಕೆರೆಯಿಂದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅಡಿ 30ಕ್ಕೂ ಹೆಚ್ಚು ಹಳ್ಳಿಗಳಿಗೆ ಕುಡಿಯುವ ನೀರನ್ನು ಕೊಂಡೊಯ್ಯುವ ಕಾಮಗಾರಿ ಆರಂಭವಾಗಬೇಕಿತ್ತು. ಆದರೆ ಸ್ಥಳೀಯರ ಭಾರೀ ವಿರೋಧದಿಂದ ಕಾಮಗಾರಿ ಸ್ಥಗಿತಗೊಂಡಿದೆ. ವ್ಯವಸಾಯಕ್ಕೆ ಸಾಕಾಗುವಷ್ಟು ನೀರಿದ್ದು, ಕುಡಿಯುವ ನೀರಿಗಾಗಿ ಕೆಆರ್‌ಎಸ್‌ನಿಂದ ಹೆಚ್ಚುವರಿಯಾಗಿ ನೀರು ತಂದು ಯೋಜನೆ ಮುಂದುವರಿಸಲಿ ಎಂದು ರೈತರು ಆಗ್ರಹಿಸುತ್ತಾರೆ.

ಬಹುತೇಕ ಕೆರೆಗಳು ಕೆಆರ್‌ಎಸ್‌ ನೀರನ್ನೇ ಅವಲಂಬಿಸಿವೆ. ಆದರೆ, ಜಲಾಶಯಗಳಲ್ಲಿ ಈಗಿರುವ ನೀರನ್ನು ಕುಡಿಯುವ ಉದ್ದೇಶಕ್ಕೆ ಮಾತ್ರ ಉಳಿಸಿಕೊಳ್ಳಬೇಕು, ಕೃಷಿ ಉದ್ದೇಶಕ್ಕೆ ಹರಿಸಬಾರದು ಎಂದು ಸರ್ಕಾರ ನಿರ್ಧಾರ ಕೈಗೊಂಡಿರುವುದು ಇಲ್ಲಿಯ ರೈತರ ಭಯಕ್ಕೆ ಕಾರಣವಾಗಿದೆ.

‘ಸರಣಿ ಕೆರೆಗಳ ಜಲಮೂಲ ಕಡಿತ ಗೊಂಡಿದ್ದು, ಕೇವಲ ಮಳೆಯಿಂದ ಕೆರೆಗಳ ಒಡಲು ತುಂಬುತ್ತಿಲ್ಲ. ಕೆಆರ್‌ ಎಸ್‌ ನೀರು ಸಿಗದಿದ್ದರೆ ಜನರು ಬೆಳೆ ಬೆಳೆಯಲು ಪರದಾಡಬೇಕಾಗುತ್ತದೆ. ಈ ಬಾರಿ ಫೆಬ್ರುವರಿಯಿಂದಲೇ ಬಿಸಿಲು ಜೋರಾಗಿದೆ. ಮುಂದೆ ಏನಾಗುತ್ತದೋ ಗೊತ್ತಿಲ್ಲ’ ಎಂದು ರೈತ ಶಿವರಾಮೇಗೌಡ ಆತಂಕ ವ್ಯಕ್ತಪಡಿಸಿದರು.

ಏತ ನೀರಾವರಿ ಕೆರೆಗಳೂ ಒತ್ತುವರಿ
ತಾಲ್ಲೂಕಿನ ಆತಗೂರು ಹೋಬಳಿಗೆ ಸೇರಿದ ಆತಗೂರು, ಕೆಸ್ತೂರು, ಮಾಚಹಳ್ಳಿ, ಕದಲೂರು, ಕೆ.ಹೊನ್ನಲಗೆರೆ ಕೆರೆಗಳು, ಶಿಂಷಾ ಎಡದಂಡೆಗೆ ಬರುವ ಸುಮಾರು 15 ಕೆರೆಗಳಿಗೆ ಶಿಂಷಾ ನದಿಯಿಂದ ಏತ ನೀರಾವರಿ ಯೋಜನೆಗಳ ಮೂಲಕ ನೀರು ತುಂಬಿಸಲಾಗುತ್ತಿದೆ. ಈ ಕೆರೆಗಳಿಗೆ ಹೊಂದಿಕೊಂಡಂತಿರುವ ಜಮೀನುಗಳ ರೈತರು ಒತ್ತುವರಿ ಮಾಡಿಕೊಂಡಿದ್ದು, ನೀರಿನ ಸಂಗ್ರಹ ಗಣನೀಯವಾಗಿ ಕಡಿಮೆಯಾಗಿದೆ.

ವ್ಯವಸಾಯಕ್ಕೆ ಅನುಕೂಲವಾಗಲು ಏತ ನೀರಾವರಿ ಮೂಲಕ ಕೆರೆಗಳಿಗೆ ನೀರು ತುಂಬಿಸಲಾಗುತ್ತಿದೆ. ಆದರೆ, ಇದರ ಪ್ರಯೋಜನ ಪಡೆಯಬೇಕಾದ ರೈತರೇ ಒತ್ತುವರಿ ಮಾಡಿಕೊಂಡಿದ್ದು, ಸರ್ಕಾರ ಯೋಜನೆಗಳನ್ನು ಜಾರಿಗೆ ತಂದರೂ ಪೂರ್ಣ ಪ್ರಮಾಣದ ಅನುಕೂಲ ರೈತರಿಗೆ ಆಗುತ್ತಿಲ್ಲ ಎಂಬುದು ರೈತ ಹೋರಾಟಗಾರರ ಅಳಲು.

ಪ್ರಗತಿಯಲ್ಲಿದೆ ಕಾಮಗಾರಿ...
ಶಿಂಷಾ ನದಿಯಿಂದ ಕೂಳಗೆರೆ ಏತ ನೀರಾವರಿ ಮೂಲಕ 18 ಗ್ರಾಮಗಳ ಕೆರೆಗೆ ನೀರು ತುಂಬಿಸುವ ಯೋಜನೆ ಕಾಮಗಾರಿ ಭರದಿಂದ ಸಾಗಿದೆ. ಈ ಯೋಜನೆ ಮೂಲಕ ಕೆ.ಹೊನ್ನಲಗೆರೆ, ಮಾದನಾಯಕನಹಳ್ಳಿ, ತೈಲೂರು ಸೇರಿದಂತೆ ವಿವಿಧ ಗ್ರಾಮಗಳ ಕೆರೆ ತುಂಬಿಸಿ ರೈತರ ಅಚ್ಚುಕಟ್ಟು ಪ್ರದೇಶಗಳಿಗೆ ನೀರುಣಿಸುವ ಯೋಜನೆ ಪ್ರಗತಿಯಲ್ಲಿದೆ.

ಕೊಪ್ಪ ಹೋಬಳಿಗೆ ಸೇರಿದ ಬೆಸಗರಹಳ್ಳಿ, ಬಿದರಕೋಟೆ, ನಿಲುವಾಗಿಲು, ಕೊಪ್ಪ, ಬೋಳಾರೆ, ಕೌಡ್ಲೆ ಸೇರಿದಂತೆ ಇತರ ಕೆರೆಗಳ ಸ್ಥಳ ಒತ್ತುವರಿಯಾಗಿದೆ. ಒತ್ತುವರಿ ತೆರವು ಮಾಡುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಬೆಸಗರಹಳ್ಳಿ ಗ್ರಾಮದಲ್ಲಿ ಸ್ಮಶಾನಕ್ಕಾಗಿ ಕೆಲವರು ಕೆರೆಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ.

ಜಲಧಾರೆ ಯೋಜನೆಗೆ ವಿರೋಧ
ಕೊಪ್ಪ ಕೆರೆಯಿಂದ 48 ಗ್ರಾಮಗಳಿಗೆ ಕುಡಿಯುವ ನೀರನ್ನು ಒದಗಿಸುವ ಜಲಧಾರೆಯ ಬಹುಗ್ರಾಮ ಶುದ್ಧ ಕುಡಿಯುವ ನೀರಿನ ಯೋಜನೆ ಪ್ರಗತಿಯಲ್ಲಿದ್ದು, ಈ ಯೋಜನೆಗೆ ಸ್ಥಳೀಯ ರೈತರು ವಿರೋಧ ವ್ಯಕ್ತಪಡಿಸಿದ್ದಾರೆ.

ಕುಡಿಯುವ ನೀರಿನಿಂದಾಗಿ ಕೆರೆಯಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿ ವ್ಯವಸಾಯಕ್ಕೆ ತೊಂದರೆಯಾಗುತ್ತದೆ ಎಂದು ರೈತರು ಆರೋಪಿಸುತ್ತಾರೆ.

ಮೊದಲು ಕೆರೆಗಳ ಹೂಳೆತ್ತಿ
ಹೂಳು ತುಂಬಿಕೊಂಡಿರುವುದರಿಂದ ನೀರಿನ ಸಂಗ್ರಹ ಕಡಿಮೆಯಾಗಿದೆ. ಅಧಿಕಾರಿಗಳು ಹೂಳು ತೆಗೆಸಬೇಕು. ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ದೇಶಹಳ್ಳಿ ಕೆರೆಯ ನೀರನ್ನು ಬಳಸಿಕೊಳ್ಳುವ ಬದಲು ಶಿಂಷಾ ನದಿಯ ನೀರನ್ನು ಯೋಜನೆಗೆ ಬಳಸಿಕೊಳ್ಳುವುದು ಸೂಕ್ತವೆನಿಸುತ್ತದೆ.
-ಮೋಹನ್ ಕುಮಾರ್, ದೇಶಹಳ್ಳಿ

ನಾಲೆ ನೀರೇ ಆಧಾರ
ಹೂಳಿನಿಂದ ಅಚ್ಚುಕಟ್ಟು ಪ್ರದೇಶಗಳಿಗೆ ನೀರುಣಿಸಲು ಕೆರೆ ನೀರು ಸಾಕಾಗುತ್ತಿಲ್ಲ. ಕೆರೆಗಳಿಗೆ ವಿ.ಸಿ.ನಾಲೆಯ ನೀರು ಮೂಲವಾಗಿರುವುದರಿಂದ ನಾಲೆಗೆ ನೀರು ಬಿಟ್ಟಾಗ ಅಥವಾ ಹೆಚ್ಚಿನ ಮಳೆ ಬಿದ್ದಾಗ ಮಾತ್ರ ಕೆರೆ ತುಂಬುತ್ತದೆ.
-ಬಿ.ಮಂಜುನಾಥ, ಕಾಡುಕೊತ್ತನಹಳ್ಳಿ

ಜಾನುವಾರುಗಳಿಗೆ ನೀರಿನ ಕೊರತೆ
ಕೆರೆಗಳ ಒತ್ತುವರಿಯಿಂದಾಗಿ ಜಾನುವಾರುಗಳ ಕುಡಿಯುವ ನೀರಿಗೆ ಕೊರತೆಯಾಗಿದೆ. ಜಾನುವಾರುಗಳು ಕುಡಿಯುವ ನೀರಿಗಾಗಿ ಮನೆ ಹತ್ತಿರವೇ ಬರುವಂತಾಗಿದೆ. ತೊರೆಬೊಮ್ಮನಹಳ್ಳಿ, ಮುಡೀನಹಳ್ಳಿ, ಮಠದ ಹೊನ್ನಾಯನಹಳ್ಳಿ ಸೇರಿ 3 ಗ್ರಾಮಗಳ ಮಧ್ಯೆ ಸುಮಾರು 4 ಎಕರೆಯಷ್ಟಿದ್ದ ಪುರಾತನ ಕೆಜ್ಜನ ಕಟ್ಟೆ ಸಂಪೂರ್ಣ ಮುಚ್ಚಿ ಹೋಗಿದೆ.
-ಮುಡೀನಹಳ್ಳಿ ತಿಮ್ಮಯ್ಯ, ರೈತ

ಕುಗ್ಗುತ್ತಿರುವ ಕೆರೆ ವಿಸ್ತೀರ್ಣ
ಕೆರೆಗಳನ್ನು ಒತ್ತುವರಿ ತೆರವು ಮಾಡಿ ಗಡಿ ಗುರುತಿಸುವಂತೆ ಹಲವು ಬಾರಿ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ದಿನದಿಂದ ದಿನಕ್ಕೆ ಕೆರೆಗಳ ವಿಸ್ತೀರ್ಣ ಕಡಿಮೆಯಾಗುತ್ತಿದೆ. ಭವಿಷ್ಯದಲ್ಲಿ ನೀರಿಗೆ ತೊಂದರೆಯಾಗುವ ಸಾಧ್ಯತೆ ಇದೆ.
--ಚೊಟ್ಟನಹಳ್ಳಿ ನಾರಾಯಣ, ಡಿಎಸ್‌ಎಸ್ ಮುಖಂಡ

ಅಧಿಕಾರಿಗಳ ವೈಫಲ್ಯ
ಕೊಪ್ಪ ಕೆರೆಯಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಕೊಪ್ಪ ಕೆರೆಗೆ ಕೆಆರ್‌ಎಸ್‌ನಿಂದ ನೀರು ತರದೆ ಈ ಯೋಜನೆ ಅನುಷ್ಠಾನ ಸರಿಯಲ್ಲ. ಕೆರೆಗಳನ್ನು ಸಂರಕ್ಷಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯಿಂದ ಕೆರೆಗಳ ಅಭಿವೃದ್ದಿಯಾಗುತ್ತಿಲ್ಲ.
-ಚಿಕ್ಕದೊಡ್ಡಿ ಶಿವಕುಮಾರ್, ರೈತ ಮುಖಂಡ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು