ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ: 'ಸಾಮಾಜಿಕ ನ್ಯಾಯ ಸಂವಿಧಾನದ ಕೇಂದ್ರ ವಸ್ತು'

ಪ್ರೊ.ಲಕ್ಷ್ಮಿಸಾಗರ ಸ್ಮರಣೆಯ ಉಪನ್ಯಾಸ; ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಬಿ.ವಿ.ನಾಗರತ್ನಾ ಅಭಿಮತ
Last Updated 25 ಜೂನ್ 2022, 13:25 IST
ಅಕ್ಷರ ಗಾತ್ರ

ಮಂಡ್ಯ: ‘ಶ್ರೇಷ್ಠ ಶಿಕ್ಷಕ, ಉತ್ತಮ ಕಾನೂನು ಸಚಿವರಾಗಿದ್ದ ಪ್ರೊ.ಲಕ್ಷ್ಮಿಸಾಗರ ಅವರು ಸಾಮಾಜಿಕ ನ್ಯಾಯಕ್ಕಾಗಿ ತಮ್ಮ ಜೀವನವಿಡೀ ಹೋರಾಟ ನಡೆಸಿದರು. ಸಮಾಜಿಕ ನ್ಯಾಯವೇ ಭಾರತೀಯ ಸಂವಿಧಾನ ಮೂಲ ವಸ್ತು ಎಂದು ನಂಬಿದ್ದರು’ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ.ವಿ.ನಾಗರತ್ನಾ ಹೇಳಿದರು.

ರಾಜ್ಯ ವಕೀಲರ ಪರಿಷತ್‌ ವತಿಯಿಂದ ಜಿಲ್ಲಾ ವಕೀಲರ ಸಂಘದ ಆವರಣದಲ್ಲಿ ಶನಿವಾರ ನಡೆದ ಪ್ರೊ.ಲಕ್ಷ್ಮಿಸಾಗರ ಸ್ಮರಣಾರ್ಥ ದತ್ತಿ ಉಪನ್ಯಾಸ ಉದ್ಘಾಟಿಸಿ ಉಪನ್ಯಾಸ ನೀಡಿದರು.

‘ಲಕ್ಷ್ಮಿಸಾಗರ ಅವರು ಕರ್ನಾಟಕ ಸರ್ಕಾರದ ಕಾನೂನು ಸಚಿವರಾಗಿದ್ದ ಸಂದರ್ಭದಲ್ಲಿ ಜನರಿಗೆ ಸಾಮಾಜಿಕ ನ್ಯಾಯ ಒದಗಿಸುವ ಕೆಲಸ ಮಾಡಿದ್ದಾರೆ. ಒಬ್ಬ ಶಿಕ್ಷಣ ತಜ್ಞರಾಗಿ, ವಕೀಲರಾಗಿ, ಸಾಮಾಜಿಕ ಹೋರಾಟಗಾರರಾಗಿ ಸಮಾಜದಲ್ಲಿ ಶ್ರೇಷ್ಠ ಕೆಲಸಗಳನ್ನು ಮಾಡಿದ್ದಾರೆ. ದಾರ್ಶನಿಕರಾಗಿದ್ದ ಲಕ್ಷ್ಮಿಸಾಗರ ಅವರ ಕೊಡುಗೆಗಳ ಬಗ್ಗೆ ಮಾತನಾಡುವುದೇ ಒಂದು ಗೌರವ ತರುವ ವಿಚಾರ’ ಎಂದರು.

‘ಸರ್ವರಿಗೂ ಸಾಮಾಜಿಕ ನ್ಯಾಯ ಹಂಚಬೇಕು ಎಂಬುದು ಅವರ ಉದ್ದೇಶವಾಗಿತ್ತು. ಅವರು ಸಚಿವರಾಗಿದ್ದ ಸಂದರ್ಭದಲ್ಲಿ ಹಲವು ಸಮಸ್ಯೆಗಳಿಗೆ ಹಲವು ಹಂತಗಳಲ್ಲಿ ಪರಿಹಾರ ಕಂಡುಹಿಡಿದಿದ್ದಾರೆ. ಅವರ ಜೊತೆ ಕೆಲಸ ಮಾಡಿದವರಿಗೆ ಈ ವಿಚಾರಗಳು ತಿಳಿಸಿವೆ. 70ರ ದಶಕದಲ್ಲಿ ಅವರನ್ನು ಭೇಟಿಯಾಗುವ ಹಲವು ಅವಕಾಶಗಳು ನನಗೂ ಸಿಕ್ಕಿವೆ. ಅದು ಎಂದಿಗೂ ಮರೆಯಾಗದ ಅನುಭವ’ ಎಂದರು.

‘ನಾನು ಲಕ್ಷ್ಮಿಸಾಗರ ಅವರನ್ನು ನೋಡಿಕೊಂಡೇ ಬೆಳೆದಿದ್ದೇನೆ. ಬೆಂಗಳೂರಿನ ಗಾಂಧಿನಗರದಲ್ಲಿ ನನ್ನ ಕಚೇರಿ ಸಮೀಪವೇ ಅವರ ಸಣ್ಣದೊಂದು ಮನೆ ಇತ್ತು, ಅಲ್ಲಿ ಅವರನ್ನು ನೋಡುತ್ತಿದ್ದೆ. ಅವರ ಮನೆಯ ಮುಂದಿದ್ದ ಅವರ ಹೆಸರಿನ ಫಲಕವನ್ನು ನೋಡಿಕೊಂಡೇ ನಾನು ಓಡಾಡುತ್ತಿದ್ದೆ. ವೈಯಕ್ತಿಕವಾಗಿ ನನಗೂ ಸೇರಿದಂತೆ ಅವರ ಎಲ್ಲರಿಗೂ ಸ್ಫೂರ್ತಿಯಾಗಿದ್ದರು’ ಎಂದು ಹೇಳಿದರು.

‘ಅವರು ಸಮಾಜಕ್ಕೆ, ವಿಶ್ವಕ್ಕೆ ಜ್ಞಾನ ಹಂಚಿ ಹೋಗಿದ್ದಾರೆ. ಅವರ ಕೆಲಸಗಳ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದರು. ಸಮಾಜದಲ್ಲಿ ಅವರು ಮುತ್ಸದ್ಧಿ ನಾಯಕರಾಗಿ, ಉತ್ತಮ ಶಿಕ್ಷಣ ತಜ್ಞರಾಗಿ ಕೊಡುಗೆ ನೀಡಿದ್ದಾರೆ. ಮುಂದಿನ ಪೀಳಿಗೆಯ ಯುವಜನರು ಅವರು ಸಮಾಜಕ್ಕೆ ನೀಡಿರುವ ಕೊಡುಗೆಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಮುಂದೆ ಸಾಗಬೇಕು’ ಎಂದು ಸಲಹೆ ನೀಡಿದರು.

ಸಂಬಂಧ ಹಾಳಾಗದಿರಲಿ: ಮಹಿಳಾ ಹಕ್ಕುಗಳ ಬಗ್ಗೆ ಉಪನ್ಯಾಸ ನೀಡಿದ ಅವರು ‘ಕಾನೂನಿನಲ್ಲಿ ಮಹಿಳೆಗೆ ಆಸ್ತಿಯ ಹಕ್ಕಿದೆ. ತವರಿನ ಆಸ್ತಿ ಕೇಳುವ ಹಕ್ಕು ಸಾಂವಿಧಾನಿಕವಾದುದು. ಆದರೆ ಆ ಹಕ್ಕು ಯಾವುದೇ ಸಂದರ್ಭದಲ್ಲೂ ದುರುಪಯೋಗ ಆಗಬಾರದು. ಅದರಿಂದ ತವರಿನ ಸಂಬಂಧ ಹಾಳಾಗಬಾರದು. ಇಂತಹ ಪ್ರಕರಣಗಳಲ್ಲಿ ವಕೀಲರು ಕೂಡ ರಾಜೀ, ಸಂಧಾನಕ್ಕೆ ಹೆಚ್ಚು ಒತ್ತು ನೀಡಬೇಕು’ ಎಂದರು.

ಸಮಾರಂಭದಲ್ಲಿ ಹೈಕೋರ್ಟ್‌ ನ್ಯಾಯಮೂರ್ತಿಗಳಾದ ಪಿ.ಎಸ್‌.ದಿನೇಶ್‌ ಕುಮಾರ್‌, ಬಿ.ಎಂ.ಶ್ಯಾಮಪ್ರಸಾದ್‌, ಇ.ಎಸ್‌.ಇಂದಿರೇಶ್‌, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಿ.ಜಿ.ರಮಾ, ವಕೀಲರ ಸಂಘದ ಅಧ್ಯಕ್ಷ ಎಂ.ಟಿ.ರಾಜೇಂದ್ರ ಇದ್ದರು.

*******

ಹೂವಿನ ತಕ್ಕಡಿಯ ಕತೆ...

ನ್ಯಾಯಮೂರ್ತಿ ನಾಗರತ್ನಾ ಅವರು ತಮ್ಮ ತಂದೆ ಹೇಳಿದ ಹೂವಿನ ತಕ್ಕಡಿಯ ಕತೆಯೊಂದನ್ನು ಹೇಳಿದ್ದು ಎಲ್ಲರ ಗಮನ ಸೆಳೆಯಿತು

‘ಜೂನ್‌ 25ನೇ ದಿನವನ್ನು ವೈಯಕ್ತಿಕವಾಗಿ ಎಂದೂ ಮರೆಯಲು ಸಾಧ್ಯವಿಲ್ಲ. ನಮ್ಮ ತಂದೆಯವರು 1970, ಜೂನ್‌ 25ರಂದು ಹೈಕೋರ್ಟ್‌ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಶುಭಕೋರಿದ ವ್ಯಕ್ತಿಯೊಬ್ಬರು ನೀಡಿದ್ದ ಹೂವಿನ ತಕ್ಕಡಿಯೊಂದನ್ನು ನಮ್ಮ ಮನೆಗೆ ತಂದಿದ್ದರು. ಇದು ಏನಿದು ಎಂದು ನಾನು ತಂದೆಯನ್ನು ಪ್ರಶ್ನಿಸಿದೆ. ‘ಇದು ನ್ಯಾಯದ ತಕ್ಕಡಿ, ಇದೇ ನಮ್ಮ ಗುರಿ’ ಎಂದರು. 5 ದಶಕಗಳ ಹಿಂದೆ ತಂದೆ ಹೇಳಿದ ಮಾತು ಈಗಲೂ ನನ್ನ ಮನಸ್ಸಿನಲ್ಲಿದೆ’ ಎಂದರು.

‘ಸಕ್ಕರೆ ಜಿಲ್ಲೆ ಮಂಡ್ಯ ನನ್ನ ತವರು ಮನೆಯಾಗಿದ್ದು ಇಲ್ಲಿ ಸನ್ಮಾನ ಸ್ವೀಕರಿಸಿ ಉಪನ್ಯಾಸ ನೀಡುತ್ತಿರುವುದು ಅತೀವ ಸಂತಸ ತಂದಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT