ಮಂಗಳವಾರ, ಅಕ್ಟೋಬರ್ 26, 2021
20 °C
ಶ್ರೀರಂಗಪಟ್ಟಣ ದಸರಾಕ್ಕೆ ಚುಂಚಶ್ರೀ ಚಾಲನೆ: ಬೆಳ್ಳಿರಥದಲ್ಲಿ ದೇವಿ ಮೆರವಣಿಗೆ

ಶ್ರೀರಂಗಪಟ್ಟಣ ದಸರಾ: ಬೆದರಿದ ಅಂಬಾರಿ ಹೊತ್ತ ಆನೆ, ಜಂಬೂಸವಾರಿ ಸ್ಥಗಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀರಂಗಪಟ್ಟಣ: ಕಿರಂಗೂರು ಬನ್ನಿಮಂಟಪದಲ್ಲಿ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ನೆರವೇರಿಸುವ ಮೂಲಕ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಶನಿವಾರ ಶ್ರೀರಂಗಪಟ್ಟಣ ದಸರಾಕ್ಕೆ ಚಾಲನೆ ನೀಡಿದರು.

ಆದರೆ, ಅಂಬಾರಿ ಹೊತ್ತ ಆನೆ ‘ಗೋಪಾಲಸ್ವಾಮಿ’ ಪಟಾಕಿ ಹಾಗೂ ವಾದ್ಯಗಳ ಸದ್ದಿಗೆ ಬೆದರಿದ ಕಾರಣ ಜಂಬೂಸವಾರಿಯನ್ನು ಸ್ಥಗಿತಗೊಳಿಸಲಾಯಿತು. ನಂತರ ದೇವಿಯನ್ನು ಬೆಳ್ಳಿರಥದಲ್ಲಿ ಕೂರಿಸಿ ದಸರಾ ಮೆರವಣಿಗೆ ಮುಂದುವರಿಸಲಾಯಿತು.

ಗೋಪಾಲಸ್ವಾಮಿ ಆನೆಗೆ ಕಾವೇರಿ ಆನೆ ಸಾಥ್‌ ನೀಡಿತ್ತು. ಜಂಬೂಸವಾರಿ ಆರಂಭವಾದ ಕೆಲವೇ ಕ್ಷಣಗಳಲ್ಲಿ ಆನೆಗಳು ಬೆದರಿದವು, ಗೋಪಾಲಸ್ವಾಮಿ ಆನೆ ನಿಂತಲೇ ಹಿಂದಕ್ಕೆ ಸುತ್ತು ಹಾಕಿತು. ಇದರಿಂದ ಗಾಬರಿಗೊಂಡ ಜನರು ಚೆಲ್ಲಾಪಿಲ್ಲಿಯಾಗಿ ಓಡಿದರು. ನೂಕುನುಗ್ಗಲು ಉಂಟಾಗಿ ಕೆಲವರು ನೆಲಕ್ಕೆ ಬಿದ್ದರು.

ಆನೆ ವೈದ್ಯರು, ಮಾವುತರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಯ ಸಮಯಪ್ರಜ್ಞೆಯಿಂದಾಗಿ ಯಾವುದೇ ತೊಂದರೆಯಾಗಲಿಲ್ಲ.

ವಾದ್ಯ, ಧ್ವನಿವರ್ಧಕ ಬಂದ್‌ ಮಾಡಿದ ನಂತರ ಆನೆ ಸಮಾಧಾನಗೊಂಡಿತು. ಆದರೂ ಮುನ್ನೆಚ್ಚರಿಕೆಯ ದೃಷ್ಟಿಯಿಂದ ಜಂಬೂಸವಾರಿಯನ್ನು ಸ್ಥಗಿತಗೊಳಿಸಲಾಯಿತು. ಅಂಬಾರಿಯಲ್ಲಿದ್ದ ದೇವಿ ವಿಗ್ರಹವನ್ನು ಬೆಳ್ಳಿ ರಥದಲ್ಲಿ ಕೂರಿಸಿ ಮೆರವಣಿಗೆ ಮುಂದುವರಿಸಲಾಯಿತು. ಕಲಾತಂಡಗಳೊಂದಿಗೆ ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿ ಮೂಲಕ ಮೆರವಣಿಗೆ ರಂಗನಾಥಸ್ವಾಮಿ ದೇವಾಲಯದ ಆವರಣ ಪ್ರವೇಶಿಸಿತು.

‘ಮೈಸೂರಿನಲ್ಲಿ ಪಿರಂಗಿ ತಾಲೀಮಿನ ವೇಳೆಯಲ್ಲೂ ಆನೆ ಗೋಪಾಲಸ್ವಾಮಿ ಬೆದರಿತ್ತು.  ಇದನ್ನು ಗಮನದಲ್ಲಿಟ್ಟುಕೊಂಡು ಜಂಬೂಸವಾರಿ ಸ್ಥಗಿತಗೊಳಿಸಲಾಯಿತು’ ಎಂದು ಅರಣ್ಯ ಇಲಾಖೆ ಸಿಬ್ಬಂದಿ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು