ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶ್ರೀರಂಗಪಟ್ಟಣ: ನದಿ ತೀರದಲ್ಲಿ ಕಸ ಗುಡಿಸಿದ ನ್ಯಾಯಾಧೀಶರು

Published : 30 ಸೆಪ್ಟೆಂಬರ್ 2024, 14:09 IST
Last Updated : 30 ಸೆಪ್ಟೆಂಬರ್ 2024, 14:09 IST
ಫಾಲೋ ಮಾಡಿ
Comments

ಶ್ರೀರಂಗಪಟ್ಟಣ: ಸ್ವಚ್ಛತಾ ಅಭಿಯಾನ್‌ ನಿಮಿತ್ತ ಪಟ್ಟಣದ ಸ್ನಾನಘಟ್ಟದ ಬಳಿ, ಕಾವೇರಿ ನದಿ ತೀರದಲ್ಲಿ ನ್ಯಾಯಾಧೀಶರು ಸೋಮವಾರ ಕಸ ಗುಡಿಸಿ ಗಮನಸೆಳೆದರು.

ನ್ಯಾಯಾಧೀಶರಾದ ಗೋಪಾಲಕೃಷ್ಣ ರೈ, ಎಂ.ಕೆ. ರೂಪಾ, ಮಹದೇವಪ್ಪ, ಹರೀಶ್‌ ಕುಮಾರ್‌, ಹನುಮಂತರಾಯಪ್ಪ ನದಿಯ ದಡದಲ್ಲಿ ಬಿದ್ದಿದ್ದ ತ್ಯಾಜ್ಯವನ್ನು ಗುಡಿಸಿ ರಾಶಿ ಹಾಕಿದರು. ನದಿಯ ಒಳಗೆ ಬಿದ್ದಿದ್ದ ಬಟ್ಟೆ, ಪ್ಲಾಸ್ಟಿಕ್‌, ಇಸ್ತ್ರಿ ಎಲೆ, ಬಾಳೆ ಎಲೆ, ಕುಡಿಕೆ ಇತರೆ ವಸ್ತುಗಳನ್ನು ಸಂಗ್ರಹಿಸಿದರು.

ಜೋತಿಷಿ ವಿ. ಭಾನುಪ್ರಕಾಶ್‌ ಶರ್ಮಾ, ರಂಗನಾಯಕಿ ಸ್ತ್ರೀ ಸಮಾಜದ ಅಧ್ಯಕ್ಷೆ ಆಶಾಲತಾ ‍ಪುಟ್ಟೇಗೌಡ, ಆಚೀವರ್ಸ್‌ ಅಕಾಡೆಮಿ ಅಧ್ಯಕ್ಷ ರಾಘವೇಂದ್ರ, ವಕೀಲರ ಸಂಘದ ಅಧ್ಯಕ್ಷ ಸತ್ಯನಾರಾಯಣ, ಕಾರ್ಯದರ್ಶಿ ಪವನ್‌ಗೌಡ, ಮಾಜಿ ಕಾರ್ಯದರ್ಶಿ ಎಸ್‌.ಆರ್‌. ಸಿದ್ದೇಶ್‌ ಕೂಡ ನ್ಯಾಯಾಧೀಶರ ಜತೆ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡರು.

ಸ್ನಾನಘಟ್ಟದ 100 ಮೀಟರ್‌ ಫಾಸಲೆಯಲ್ಲಿ ಒಂದು ತಾಸಿಗೂ ಹೆಚ್ಚು ಕಾಲ ಶ್ರಮದಾನ ನಡೆಯಿತು. ಸಂಗ್ರಹಗೊಂಡ ಒಂದು ಟ್ರಾಕ್ಟರ್‌ನಷ್ಟು ತ್ಯಾಜ್ಯವನ್ನು ದೂರಕ್ಕೆ ಸಾಗಿಸಲಾಯಿತು. ನ್ಯಾಯಾಲಯ ಪಕ್ಕದ ಐತಿಹಾಸಿಕ ತೂಗು ಸೇತುವೆ ಸ್ಮಾರಕದ ಬಳಿ ಬೆಳೆದಿದ್ದ ಗಿಡ ಗಂಟಿಗಳನ್ನು ಕೂಡ ನ್ಯಾಯಾಧೀಶರು ಮತ್ತು ವಿವಿಧ ಸಂಘ, ಸಂಸ್ಥೆಗಳ ಪ್ರತಿನಿಧಿಗಳು ಕಿತ್ತು ಹಸನು ಮಾಡಿದರು. ಶ್ರೀರಂಗನಾಥಸ್ವಾಮಿ ದೇವಾಲಯ ಬಳಿಯ ಮುಮ್ಮಡಿ ಕೃಷ್ಣರಾಜ ಒಡೆಯರ್‌ ಉದ್ಯಾನದಲ್ಲಿ ಬಗೆ ಬಗೆಯ ಗಿಡಗಳನ್ನು ನೆಟ್ಟು ನೀರೆರೆಯಲಾಯಿತು.

ವಕೀಲರ ಸಂಘದ ಅಧ್ಯಕ್ಷ ಸತ್ಯನಾರಾಯಣ ಮಾತನಾಡಿ, ಕಾವೇರಿ ನದಿಯು ಕಲುಷಿತವಾಗದಂತೆ ನಾಗರಿಕರು ನೋಡಿಕೊಳ್ಳಬೇಕು. ಸ್ಥಳೀಯ ಪುರಸಭೆಯ ಜೊತೆಗೆ ಸಾಮಾಜಿಕ ಕಾಳಜಿಯುಳ್ಳ ಸಂಘ, ಸಂಸ್ಥೆಗಳು ಈ ಕಾರ್ಯಕ್ಕೆ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT