ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶ್ರೀರಂಗಪಟ್ಟಣ: ಗಣಂಗೂರು ಟೋಲ್‌ಗೆ ಕೆಆರ್‌ಎಸ್‌ ಕಾರ್ಯಕರ್ತರ ಮುತ್ತಿಗೆ

Published 2 ಜುಲೈ 2023, 14:07 IST
Last Updated 2 ಜುಲೈ 2023, 14:07 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ಟೋಲ್‌ ಶುಲ್ಕ ಇಳಿಸಬೇಕು ಮತ್ತು ಸ್ಥಳೀಯರಿಗೆ ಉದ್ಯೋಗ ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್‌) ‍ಪಕ್ಷದ ಕಾರ್ಯಕರ್ತರು ತಾಲ್ಲೂಕಿನ ಗಣಂಗೂರು ಟೋಲ್‌ಗೆ ಭಾನುವಾರ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣಕುಮಾರ್‌ ನೇತೃತ್ವವಹಿಸಿ ಟೋಲ್‌ ಗೇಟ್‌ನಲ್ಲಿ ಹೊರ ಭಾಷಿಕರನ್ನು ಕೆಲಸಕ್ಕೆ ನೇಮಿಸಿಕೊಂಡಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ವ್ಯವಸ್ಥಾಪಕರು ತಡವಾಗಿ ಬಂದರು ಎಂಬ ಕಾರಣಕ್ಕೆ ಅವರ ವಿರುದ್ಧ ಹರಿಹಾಯ್ದರು. ಟೋಲ್‌ ಶುಲ್ಕ ದುಬಾರಿಯಾಗಿದೆ. ಅರ್ಧದಷ್ಟು ಇಳಿಸಬೇಕು ಎಂದು ಅರುಣಕುಮಾರ್‌ ಒತ್ತಾಯಿಸಿದರು.

ಟೋಲ್‌ನಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡಬೇಕು. ಶೌಚಾಲಯ, ಚಿಕಿತ್ಸಾ ಕೇಂದ್ರಗಳು ಮತ್ತು ಕ್ಯಾಂಟೀನ್‌ ವ್ಯವಸ್ಥೆ ಮಾಡಬೇಕು. ಕಾಮಗಾರಿ ಮುಗಿಯುವವರೆಗೆ ಟೋಲ್‌ ಸಂಗ್ರಹ ಪ್ರಕ್ರಿಯೆ ಸ್ಥಗಿತಗೊಳಿಸಬೇಕು ಎಂದು ಅವರು ಒತ್ತಾಯಿಸಿದರು. ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ರಮೇಶಗೌಡ, ಗೌರವಾಧ್ಯಕ್ಷ ಶಾಂತಿಪ್ರಸಾದ್‌, ಹೆಬ್ಬಕವಾಡಿ ಮಲ್ಲೇಶ್‌, ಡಿ.ಜಿ. ನಾಗರಾಜ್‌ ಇತರರು ಇದ್ದರು.

ವಾಗ್ವಾದ: ಟೋಲ್‌ ಶುಲ್ಕದ ಪ್ರಮಾಣ ಹೆಚ್ಚಾಗಿದೆ ಎಂದು ಕೆಲವು ವಾಹನಗಳ ಚಾಲಕರು ಟೋಲ್‌ ಸಂಗ್ರಹಿಸುವ ಸಿಬ್ಬಂದಿಯ ಜತೆ ವಾಗ್ವಾದ ನಡೆಸಿದರು. ಈ ಮಾರ್ಗದಲ್ಲಿ ಓಡಾಡಿದರೆ ಜೇಬಿಗೆ ಕತ್ತರಿ ಬೀಳುವುದು ಖಚಿತ ಎಂದು ಬೆಂಗಳೂರಿನಿಂದ ಮೈಸೂರಿಗೆ ಕಾರಿನಲ್ಲಿ ತೆರಳುತ್ತಿದ್ದ ಅರವಿಂದ್‌ ಹೇಳಿದರು. ಟೋಲ್‌ ಬಳಿ ಭಾನುವಾರ ಕೂಡ ಪೊಲೀಸರನ್ನು ನಿಯೋಜಿಸಲಾಗಿತ್ತು.

ಅಸಮಾಧಾನ: ಗಣಂಗೂರು ಟೋಲ್‌ ಮೂಲಕ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಿಗೆ ಹೋಗಿ ಬರುವ ವಾಹನಗಳಿಗೂ ₹300ಕ್ಕೂ ಹೆಚ್ಚು ಶುಲ್ಕ ವಿಧಿಸಲಾಗುತ್ತಿದೆ. ಸಾರ್ವಜನಿಕರ ತೆರಿಗೆ ಹಣದಿಂದ ಹೆದ್ದಾರಿ ನಿರ್ಮಿಸಿ ಮತ್ತೆ ಶುಲ್ಕ ವಸೂಲಿ ಮಾಡುವುದು ಸರಿಯಲ್ಲ.  ಶುಲ್ಕದಲ್ಲಿ ಸ್ಥಳೀಯರಿಗೆ ರಿಯಾಯಿತಿ ನೀಡದೇ ಇರುವುದು ತಪ್ಪು ಎಂದು ರೈತ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮಂಜೇಶ್‌ಗೌಡ ಅಸಮಾಧಾನ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT