ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀರಂಗಪಟ್ಟಣ ಹೊಸ ದಸರಾಕ್ಕೆ 13 ವರ್ಷ

ವರ್ಷದಿಂದ ವರ್ಷಕ್ಕೆ ಮೆರುಗು ಪಡೆಯುತ್ತಿದೆ ಉತ್ಸವ, ಈ ಬಾರಿ ₹2 ಕೋಟಿ ಅನುದಾನ
Last Updated 2 ಅಕ್ಟೋಬರ್ 2019, 5:31 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ಪಟ್ಟಣದಲ್ಲಿ ಹೊಸ ದಾಗಿ ದಸರಾ ಆರಂಭವಾಗಿ 13 ವರ್ಷ ಗಳು ಕಳೆದಿದ್ದು, ವರ್ಷದಿಂದ ವರ್ಷಕ್ಕೆ ಉತ್ಸವ ಮೆರುಗು ಪಡೆಯುತ್ತಿದೆ.

ಪ್ರಾಚ್ಯವಸ್ತು ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ಆಯುಕ್ತರಾಗಿದ್ದ ಟಿ.ಎಂ. ವಿಜಯಭಾಸ್ಕರ್‌ 2007ರಲ್ಲಿ ದಸರಾ ಉತ್ಸವ ಆರಂಭಿಸಲು ಮೈಸೂರು ದಸರಾ ಉತ್ಸವಕ್ಕೆ ಬರುವ ಅನುದಾನ ದಲ್ಲಿ ಹಣ ಕೊಡಿಸಿದ್ದರು. 2016ರಲ್ಲಿ ಕಾವೇರಿ ಚಳವಳಿಯ ಕಾರಣಕ್ಕೆ ಸರ್ಕಾರ ದಸರಾ ಆಚರಣೆ ಮಾಡದಿದ್ದರೂ ಸ್ಥಳೀಯ ಸಂಘ, ಸಂಸ್ಥೆಗಳು ವಂತಿಗೆ ಸಂಗ್ರಹಿಸಿ ದಸರಾ ಆಚರಿಸಿದ್ದವು.

ಸಾಹಿತಿಗಳು, ಕಲಾವಿದರು, ಪ್ರಗತಿಪರ ರೈತರು ದಸರಾ ಉದ್ಘಾಟಿಸಿದ್ದರು. ಕಳೆದ ಎರಡು ವರ್ಷಗಳಿಂದ ಶ್ರೀರಂಗಪಟ್ಟಣ ದಸರಾ ಉತ್ಸವಕ್ಕೆ ಸರ್ಕಾರ ಪ್ರತ್ಯೇಕವಾಗಿ ₹2 ಕೋಟಿ ಹಣ ನೀಡುತ್ತಿದೆ. ಶ್ರೀರಂಗಪಟ್ಟಣ ಮಾತ್ರವಲ್ಲದೆ ಕೆಆರ್‌ಎಸ್‌ ಬೃಂದಾವನದಲ್ಲಿ ಕೂಡ ದಸರಾ ಆಚರಣೆ ನಡೆಯುತ್ತದೆ. ಈ ಬಾರಿ ಹೊಸದಾಗಿ ‘ಹಳ್ಳಿ ದಸರಾ’ ಆಚರಿಸುತ್ತಿದ್ದು, ಕೃಷಿ ಪ್ರಧಾನವಾದ ಶ್ರೀನಿವಾಸ ಅಗ್ರಹಾರ ಗ್ರಾಮವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

ಮಂಟಪ ಪ್ರಮುಖ ಆಕರ್ಷಣೆ: ಪಟ್ಟಣದಲ್ಲಿ ಹೊಸದಾಗಿ ದಸರಾ ಉತ್ಸವ ಆರಂಭವಾದ ದಿನದಿಂದ ತಾಲ್ಲೂಕಿನ ಕಿರಂಗೂರು ವೃತ್ತದ ಬಳಿಯ ಬನ್ನಿಮಂಟಪದಿಂದ ಉತ್ಸವ ಆರಂಭವಾಗುತ್ತದೆ. ಪಟ್ಟಣವನ್ನು ರಾಜಧಾನಿ ಮಾಡಿಕೊಂಡು ಸರಿ ಸುಮಾರು ಎರಡು ಶತಮಾನ ಆಳಿದ ಮೈಸೂರು ಒಡೆಯರ್‌ ದೊರೆಗಳ ಕಾಲದಲ್ಲಿ ಈ ಮಂಟಪ ನಿರ್ಮಾಣವಾಗಿದೆ. ಇದನ್ನು ಮೇಲುಕೋಟೆ ವೈರಮುಡಿ ಮಂಟಪ ಎಂದೂ ಕರೆಯಲಾಗುತ್ತದೆ.

24 ಕಲ್ಲಿನ ಕಂಬಗಳ ಮೇಲೆ ನಿಂತಿರುವ ಈ ಮಂಟಪ ಬೆಂಗಳೂರು– ಮೈಸೂರು ಹಾಗೂ ಶ್ರೀರಂಗಪಟ್ಟಣ ಬೀದರ್‌ ಹೆದ್ದಾರಿಗೆ ಹೊದಿಕೊಂಡ ವೃತ್ತದಲ್ಲಿದೆ. ಮಂಟಪದ ಮುಂದೆ ಬನ್ನಿ ವೃಕ್ಷ ಇದ್ದು, ದಸರಾ ಉತ್ಸವದಂದು ಅದಕ್ಕೆ ನವರಾತ್ರಿಯ ಸಾಂಪ್ರದಾಯಿಕ ಪೂಜೆ, ‍ಪುನಸ್ಕಾರಗಳನ್ನು ಸಲ್ಲಿಸ ಲಾಗುತ್ತದೆ. ದಸರಾ ಉತ್ಸವಕ್ಕಾಗಿ ಮಂಟಪವನ್ನು ವಿದ್ಯುತ್‌ ದೀಪ ಹಾಗೂ ತಳಿರು, ತೋರಣಗಳಿಂದ ಸಿಂಗರಿಸಲಾಗುತ್ತದೆ.

48 ಉಬ್ಬು ಶಿಲ್ಪಗಳು: ಈ ಮಂಟಪದ 24 ಕಲ್ಲಿನ ಸ್ತಂಭಗಳ ಪೈಕಿ 16 ಕಂಬಗಳಲ್ಲಿ ಆಕರ್ಷಕವಾದ 48 ಉಬ್ಬು ಶಿಲ್ಪಗಳಿವೆ. ಹಿಂದೂ ದೇವತೆಗಳಾದ ಗಣೇಶ, ನಂದಿ, ನಟರಾಜ, ಲಕ್ಷ್ಮಿ, ಮತ್ಸ್ಯಕನ್ಯೆ, ಗಂಧರ್ವ, ಕೂರ್ಮ, ಸರ್ಪ ಬಂಧ, ಶಿವಲಿಂಗ, ಉಗ್ರ ನರಸಿಂಹ, ಶಾರದೆ, ನೃತ್ಯಗಾರ್ತಿ, ಕಾಮಧೇನು ಇತರ ಶಿಲ್ಪಗಳು ಗಮನ ಸೆಳೆಯುತ್ತವೆ. ಮಂಟಪದ ಎಡ ಮಗ್ಗುಲಲ್ಲಿ ಕಲ್ಲಿನ ಕೊಳ ಇದ್ದು, ಮಂಟಪ ನಿರ್ಮಾಣವಾದ ಕಾಲಘಟ್ಟದಲ್ಲಿಯೇ ಇದು ನಿರ್ಮಾಣ ಆಗಿರಬಹುದು ಎಂದು ಸ್ಥಳೀಯರು ಹೇಳುತ್ತಾರೆ.

ದಸರಾ ಸಾಂಸ್ಕೃತಿಕ ವೈಭವ

ಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯ ಮೈದಾನದಲ್ಲಿ ದಸರಾ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರತಿ ವರ್ಷ ನಡೆಯುತ್ತವೆ. ಜನಪದ ಕಲಾವಿದರು, ಕಿರುತೆರೆ ಹಾಗೂ ಹಿರಿತೆರೆ ಕಲಾವಿದರು ವೇದಿಕೆ ಯಲ್ಲಿ ಐತಿಹಾಸಿಕ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಬಿಂಬಿಸುವ ಕಾರ್ಯಕ್ರಮ ಗಳನ್ನು ಪ್ರಸ್ತುತಪಡಿಸಿ ಪ್ರೇಕ್ಷಕರಿಗೆ ರಸದೌತಣ ನೀಡುತ್ತಾ ಬಂದಿದ್ದಾರೆ. ಆಟೋಟ ಹಾಗೂ ವಸ್ತುಪ್ರದರ್ಶನ ಏರ್ಪಡಿಸಲಾಗುತ್ತದೆ. ದಸರೆಯ ಹಿನ್ನೆಲೆಯಲ್ಲಿ ಸರ್ಕಾರಿ ಕಚೇರಿಗಳು ಬಣ್ಣ ಬಣ್ಣದ ಬೆಳಕಿನಲ್ಲಿ ಮಿನುಗುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT