ಮಂಗಳವಾರ, ಮೇ 18, 2021
30 °C
ಶ್ರೀರಂಗಪಟ್ಟಣಕ್ಕೆ ಪ್ರತಿದಿನ ಸಾವಿರಾರು ಪ್ರವಾಸಿಗರು ಭೇಟಿ, ಮೂಲಸೌಕರ್ಯ ಮರೀಚಿಕೆ

ಬೀದಿಯಲ್ಲಿ ಮಲಗುವ ಪ್ರವಾಸಿಗರು

ಗಣಂಗೂರು ನಂಜೇಗೌಡ Updated:

ಅಕ್ಷರ ಗಾತ್ರ : | |

Prajavani

ಶ್ರೀರಂಗಪಟ್ಟಣ: ಪಟ್ಟಣಕ್ಕೆ ಪ್ರತಿ ದಿನ ದೇಶ, ವಿದೇಶಗಳ ನೂರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಹಾಗೆ ಬರುವವರು ಉಳಿದುಕೊಳ್ಳಲು ಇಲ್ಲಿ ಸೂಕ್ತ ವಸತಿ ವ್ಯವಸ್ಥೆ ಇಲ್ಲದ ಕಾರಣ ಬೀದಿ ಬದಿಯಲ್ಲಿ, ರೈಲು ನಿಲ್ದಾಣದಲ್ಲಿ ಮಲಗಿ ರಾತ್ರಿ ಕಳೆಯುತ್ತಿದ್ದಾರೆ.

ಪಟ್ಟಣದಲ್ಲಿ ಐತಿಹಾಸಿಕ ಕೋಟೆ, ಕಂದಕ, ಜೈಲುಗಳು, ಅರಮನೆ, ದೇಗುಲಗಳು, ಮಸೀದಿ, ಇಗರ್ಜಿಗಳಿವೆ. ಸ್ಮಾರಕ ಮತ್ತು ಶ್ರದ್ಧಾ ಕೇಂದ್ರಗಳನ್ನು ನೋಡಲೆಂದೇ ಪ್ರವಾಸಿಗರು ಸಹಸ್ರಾರು ಮೈಲುಗಳ ದೂರದ ಊರುಗಳಿಂದ ಇಲ್ಲಿಗೆ ಬರುತ್ತಾರೆ. ಇಲ್ಲಿಗೆ ಬರುವ ಪ್ರವಾಸಿಗರು ಮತ್ತು ಯಾತ್ರಾರ್ಥಿಗಳಿಂದ ಸರ್ಕಾರಕ್ಕೆ ಆದಾಯವೂ ಬರುತ್ತಿದೆ. ಆದರೆ, ಅವರಿಗೆ ತೃಪ್ತಿದಾಯಕ ಸೌಕರ್ಯಗಳನ್ನು ಕಲ್ಪಿಸಿಲ್ಲ. ಪ್ರವಾಸೋದ್ಯಮ, ಮುಜರಾಯಿ ಮತ್ತು ಪ್ರಾಚ್ಯವಸ್ತು ಇಲಾಖೆಗಳು ಇದುವರೆಗೆ ಇತ್ತ ಗಮನ ಹರಿಸಿಲ್ಲ. ಪ್ರವಾಸದ ಖುಷಿ ಅನುಭವಿಸಲು ಬರುವವರು ಸವಲತ್ತುಗಳ ಕೊರತೆಯಿಂದಾಗಿ ಫಜೀತಿ ಅನುಭವಿಸುತ್ತಿದ್ದಾರೆ.

ಇಲ್ಲಿನ ಶ್ರೀರಂಗನಾಥಸ್ವಾಮಿ ದೇವಾಲಯ ಮೈದಾನ, ರೈಲು ನಿಲ್ದಾಣದ ಮುಂದಿನ ಆವರಣ ಇತರೆಡೆ ಪ್ರವಾಸಿಗರು ಮಲಗುತ್ತಿದ್ದಾರೆ. ಮಹಿಳೆಯರು ಮಕ್ಕಳು ಕೂಡ ಮೈ ನಡುಗಿಸುವ ಚಳಿಯಲ್ಲೇ ರಾತ್ರಿ ಕಳೆಯುತ್ತಿರುವುದು ಎಂತಹವರ ಮನಸ್ಸನ್ನೂ ಕಲಕುತ್ತದೆ. ಬಯಲಿನಲ್ಲಿ ಮಲಗಿ ರಾತ್ರಿ ಕಳೆಯುವವರು ಶೌಚ ಮತ್ತು ಸ್ನಾನಕ್ಕೂ ತೊಂದರೆ ಅನುಭವಿಸುತ್ತಾರೆ. ನಾಯಿ, ಹಂದಿಗಳು, ವಿಷ ಜಂತುಗಳು ಓಡಾಡುವ ಸ್ಥಳಗಳಲ್ಲಿ ದಿನದೂಡುವ ಪ್ರವಾಸಿಗರು, ಮುಂಜಾನೆ ರಸ್ತೆ ಬದಿಯಲ್ಲೇ ಒಲೆಯೂಡಿ ಅಡುಗೆ ಸಿದ್ಧಪಡಿಸಿ ಮಣ್ಣಿನ ನೆಲದಲ್ಲೇ ಕುಳಿತು ಊಟ ಮಾಡುತ್ತಾರೆ.

‘ಕುಟುಂಬ ಸದಸ್ಯರು, ಸ್ನೇಹಿತರ ಜತೆಗೂಡಿ ದಕ್ಷಿಣ ಭಾರತದ ಪ್ರವಾಸಿ ಸ್ಥಳಗಳನ್ನು ನೋಡಲು ಬಂದಿದ್ದೇವೆ. ಶ್ರೀರಂಗನಾಥಸ್ವಾಮಿಯ ದರ್ಶನ ಪಡೆಯುವ ಹೊತ್ತಿಗೆ ಕತ್ತಲಾಯಿತು. ಇಲ್ಲಿನ ವಸತಿ ಗೃಹಗಳಲ್ಲಿ ಒಂದು ಕೊಠಡಿಗೆ ₹1 ಸಾವಿರ, ₹2 ಸಾವಿರ ಹಣ ಕೇಳಿದರು. ಹೆಚ್ಚು ಹಣ ತಂದಿಲ್ಲದ ಕಾರಣ 28 ಮಂದಿಯೂ ರಸ್ತೆ ಬದಿಯಲ್ಲೇ ಮಲಗಿದೆವು’ ಎಂದು ರಾಜಸ್ಥಾನದ ಶ್ಯಾಂ ಪ್ರಸಾದ್‌ ತಿಳಿಸಿದರು.

ವಸತಿಗೃಹಕ್ಕೆ ಶೇ 25ರಷ್ಟು ಪ್ರೋತ್ಸಾಹಧನ

‘ಪ್ರವಾಸಿ ತಾಣಗಳಲ್ಲಿ ವಸತಿ ಗೃಹ ನಿರ್ಮಿಸುವವರಿಗೆ ಇಲಾಖೆ ಶೇ 25ರಷ್ಟು ಪ್ರೋತ್ಸಾಹಧನ ನೀಡುತ್ತದೆ. ಅಂತಹ ವಸತಿ ಗೃಹಗಳಲ್ಲಿ ಕಡಿಮೆ ದರದಲ್ಲಿ ಕೊಠಡಿಗಳು ಸಿಗುತ್ತವೆ. ಗಂಜಾಂನಲ್ಲಿ 4 ವರ್ಷಗಳ ಹಿಂದೆ ಸರ್ಕಾರದಿಂದಲೇ ನಿರ್ಮಿಸಿರುವ ಯಾತ್ರಿ ನಿವಾಸ್‌ ಭವನ ಸದ್ಯ ಮುಜರಾಯಿ ಇಲಾಖೆ ಸುಪರ್ದಿಯಲ್ಲಿದೆ. ಪ್ರವಾಸಿಗರಿಗೆ ಅತ್ಯಂತ ಕಡಿಮೆ ದರದಲ್ಲಿ ಅದನ್ನು ಕೊಡಬಹುದು. ಆದರೆ, ಆ ಇಲಾಖೆಯವರು ಇನ್ನೂ ಮನಸ್ಸು ಮಾಡಿಲ್ಲ’ ಎಂದು ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ಹರೀಶ್‌ ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು