ಶುಕ್ರವಾರ, ಡಿಸೆಂಬರ್ 4, 2020
20 °C
ಗ್ಯಾಲರಿ ಸೀಟ್‌, ಬೇಲಿ, ಚಾವಣಿ ದುರಸ್ತಿ, 400 ಮೀಟರ್‌ ಅಥ್ಲೆಟಿಕ್‌ ಮಡ್‌ ಟ್ರ್ಯಾಕ್‌ ಪುನರ್‌ ನಿರ್ಮಾಣ

₹ 50 ಲಕ್ಷ ವೆಚ್ಚದಲ್ಲಿ ಮಂಡ್ಯ ಜಿಲ್ಲಾ ಕ್ರೀಡಾಂಗಣ ಅಭಿವೃದ್ಧಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ಅವ್ಯವಸ್ಥೆಯ ಆಗರವಾಗಿದ್ದ ನಗರದ ಸರ್‌ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣ ಅಭಿವೃದ್ಧಿಗೆ  ₹50 ಲಕ್ಷ ಅನುದಾನ ಬಿಡುಗಡೆಯಾಗಿದೆ. ಹೊಸ ಮಡ್‌ ಟ್ರ್ಯಾಕ್‌, ವಾಕಿಂಗ್‌ ಪಾಥ್ ಸೇರಿದಂತೆ ವಿವಿಧ ಕಾಮಗಾರಿ ಆರಂಭಗೊಂಡಿದ್ದು ಸಾರ್ವಜನಿಕರು, ಕ್ರೀಡಾಪಟುಗಳು ಹಾಗೂ ವಾಯುವಿಹಾರಿಗಳಲ್ಲಿ ಸಂತಸ ಮೂಡಿದೆ.

2019–20ರ ಆಯ ವ್ಯಯದಲ್ಲಿ ಘೋಷಣೆ ಮಾಡಲಾಗಿದ್ದ ₹ 1 ಕೋಟಿ ಅನುದಾನದಲ್ಲಿ ಈಗ ₹50 ಲಕ್ಷ ಬಿಡುಗಡೆಯಾಗಿದ್ದು ಪೆವಿಲಿಯನ್‌ ವೀಕ್ಷಕರ ಗ್ಯಾಲರಿ ಸೀಟಿಂಗ್‌ ದುರಸ್ತಿ, ಚಾವಣಿ, ಶೀಟ್‌ ರಿಪೇರಿ, ಕ್ರೀಡಾಂಗಣದ ಸುತ್ತ ಚೈನ್‌ಲಿಂಕ್‌, ಬೇಲಿ ದುರಸ್ತಿ, 400 ಮೀಟರ್‌ ಅಥ್ಲೆಟಿಕ್‌ ಮಡ್‌ ಟ್ರ್ಯಾಕ್‌ ಪುನರ್‌ ನಿರ್ಮಾಣ, ಹೊಸ ಶೌಚಾಲಯ ಕಟ್ಟಡ, ವಾಕಿಂಗ್‌ ಪಾಥ್‌ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿದೆ.

ಇಡೀ ಕ್ರೀಡಾಂಗಣ 12 ಎಕರೆ ವಿಸ್ತೀರ್ಣ ಹೊಂದಿದ್ದು, ಜಿಲ್ಲೆಗೆ ಅತಿ ದೊಡ್ಡ ಕ್ರೀಡಾಂಗಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕ್ರೀಡೇತರ ಚಟುವಟಿಕೆಗಳಿಗೆ ಕ್ರೀಡಾಂಗಣ ಹೆಚ್ಚು ಬಳಕೆಯಾಗುತ್ತಿದ್ದ ಕಾರಣ ಸಾಕಷ್ಟು ಹದಗೆಟ್ಟಿತ್ತು. ಕೋವಿಡ್‌ ಲಾಕ್‌ಡೌನ್‌ ಅವಧಿಯಲ್ಲಿ ತರಕಾರಿ ಮಾರುಕಟ್ಟೆ ಕ್ರೀಡಾಂಗಣಕ್ಕೆ ಸ್ಥಳಾಂತರಗೊಂಡಿದ್ದ ಕಾರಣ ಕಸದ ರಾಶಿಯೇ ತುಂಬಿ ತುಳುಕುತ್ತಿತ್ತು. ಟ್ರ್ಯಾಕ್‌ ಮೇಲೆ ಗುಂಡಿಗಳು ನಿರ್ಮಾಣವಾಗಿದ್ದವು. ಕ್ರೀಡಾಂಗಣ ಕೆರೆಯ ರೂಪ ಪಡೆದಿತ್ತು.

ಮಳೆ ನೀರು ನಿಂತು ಹಳ್ಳಗಳು ನಿರ್ಮಾಣವಾಗಿದ್ದ ಕಾರಣ ಕ್ರೀಡಾಭ್ಯಾಸಕ್ಕೆ ತೊಂದರೆಯಾಗುತ್ತಿತ್ತು. ಸುತ್ತಲೂ ಇರುವ ಚರಂಡಿಯ ಕಲ್ಲುಗಳು ಮೇಲೆದ್ದು ಬಂದು ಅಪಾಯಕ್ಕೆ ಆಹ್ವಾನ ನೀಡುತ್ತಿದ್ದವು. ವಾಯುವಿಹಾರಿಗಳು ಅವ್ಯವಸ್ಥೆ ಸರಿಪಡಿಸುವಂತೆ ಸಾಕಷ್ಟು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಇದೀಗ ಸರ್ಕಾರದಿಂದ ಹಣ ಬಿಡುಗಡೆಯಾಗಿದ್ದು, ಕಾಮಗಾರಿ ಆರಂಭಗೊಂಡಿದೆ.

ಪೆವಿಲಿಯನ್‌ ವೀಕ್ಷಕರ ಗ್ಯಾಲರಿಯ ಕಲ್ಲು ಚಪ್ಪಡಿಗಳು ಕೆಲವೆಡೆ ಹೋಳಾಗಿದ್ದವು, ಮರಗಳ ಬೇರು ಬೆಳೆದು ಕೂರಲು ಆಗದಂತಾಗಿತ್ತು. ಕ್ರೀಡಾಂಗಣದಲ್ಲಿ 100ಮೀಟರ್‌ ಅಗಲ, 72 ಮೀಟರ್‌ ಉದ್ದ ವಿಸ್ತೀರ್ಣದ ಫುಟ್‌ಬಾಲ್‌ ಕೋರ್ಟ್‌ ಇದೆ. ಇದನ್ನು ಹೊರತುಪಡಿಸಿದಂತೆ 8 ಮೀಟರ್‌ ಅಗಲವಾದ ಟ್ರ್ಯಾಕ್‌ ನಿರ್ಮಾಣ ಮಾಡಲಾಗುತ್ತಿದೆ. 8 ಮೀಟರ್‌ ಟ್ರ್ಯಾಕ್‌ನಲ್ಲಿ 1 ಮೀಟರ್‌ ಅಗಲದ 8 ಲೈನ್‌ಗಳು ಇದ್ದು, ಇದು ಸಂಪೂರ್ಣ ಅಥ್ಲೆಟಿಕ್‌ ಟ್ರ್ಯಾಕ್‌ ಆಗಲಿದೆ. 1 ಮೀಟರ್‌ ಅಗಲದ ಟ್ರ್ಯಾಕನ್ನು ವಾಕಿಂಗ್‌ ಪಾಥ್‌ ಆಗಿ ನಿರ್ಮಾಣ ಮಾಡಲಾಗುತ್ತಿದೆ. ಪ್ರತ್ಯೇಕ ವಾಕಿಂಗ್‌ ಪಾಥ್‌ ನಿರ್ಮಾಣ ಮಾಡುತ್ತಿರುವುದಕ್ಕೆ ವಾಯು ವಿಹಾರಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.

‘ಟ್ರ್ಯಾಕ್ಟರ್‌ ಮೂಲಕ ಮಣ್ಣು ಅಗೆದು, ಕಲ್ಲುಗಳನ್ನು ಬೇರ್ಪಡಿಸಿ ಹೊಸ ಕೆಂಪು ಮಣ್ಣನ್ನು ಹಾಕಲಾಗುವುದು. ಕ್ರೀಡಾ ಇಲಾಖೆ ನಿರ್ದೇಶನಾಲಯದಿಂದ ನಿರ್ಮಿತಿ ಕೇಂದ್ರಕ್ಕೆ ಕಾಮಗಾರಿ ವಹಿಸಲಾಗಿದ್ದು, ಟ್ರ್ಯಾಕ್‌ ಮರು ನಿರ್ಮಾಣಕ್ಕಾಗಿ ₹ 7.5ಲಕ್ಷ ವೆಚ್ಚ ಮಾಡಲಾಗುತ್ತಿದ್ದು, 20ದಿನಗಳಲ್ಲಿ ಪೂರ್ಣಗೊಳಿಸಲಾಗುವುದು’ ಎಂದು ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ನರೇಶ್‌ ಹೇಳಿದರು.

‘ಕ್ರೀಡಾಂಗಣದ ಬಳಿ ಮೂರು ಶೌಚಾಲಯಗಳಿದ್ದರೂ ಬಳಕೆಗೆ ಯೋಗ್ಯವಾಗಿಲ್ಲ. ರಾಷ್ಟ್ರೀಯ ಹಬ್ಬಗಳ ಸಂದರ್ಭ ಹೊರತುಪಡಿಸಿದಂತೆ ಶೌಚಾಲಯಗಳು ಬಂದ್‌ ಆಗಿರುತ್ತವೆ. ಜನರು  ಕ್ರೀಡಾಂಗಣದ ಗೋಡೆ ಮರೆಯಲ್ಲೇ ಮೂತ್ರ ವಿಸರ್ಜನೆ ಮಾಡುತ್ತಾರೆ. ಶೌಚಾಲಯವನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಬೇಕು’ ಎಂದು ವಾಯುವಿಹಾರಿ ಮಧುಕುಮಾರ್‌ ಒತ್ತಾಯಿಸಿದರು.

‘ಗಣರಾಜ್ಯೋತ್ಸವದ ಒಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ. ಅಲ್ಲಿಯವರೆಗೆ ಕ್ರೀಡಾಪಟುಗಳು, ವಾಯುವಿಹಾರಿಗಳು ಸಹಕಾರ ನೀಡಬೇಕು’ ಎಂದು ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಆರ್‌.ಅನಿತಾ ಹೇಳಿದರು.

ಕ್ರೀಡಾ ಸಂಕೀರ್ಣ ನಿರ್ಮಾಣಕ್ಕೆ ಪ್ರಸ್ತಾವ

‘ಜಿಲ್ಲಾ ಕ್ರೀಡಾಂಗಣ ಕ್ರೀಡಾ ಬಳಕೆಗಿಂತ ಕ್ರೀಡೇತರ ಚಟುವಟಿಕೆಗಳಿಗೆ ಬಳಕೆ ಮಾಡಿದ್ದೇ ಹೆಚ್ಚು. ಆದ್ದರಿಂದ ಜಿಲ್ಲೆಯಲ್ಲಿ ಸೂಕ್ತ ಕ್ರೀಡಾ ಸಂಕೀರ್ಣ ನಿರ್ಮಾಣ ಮಾಡಲು ತಾಲ್ಲೂಕಿನ ಎಚ್‌.ಮಲ್ಲಿಗೆರೆಯಲ್ಲಿ 9.14 ಎಕರೆ ಜಾಗ ಗುರುತಿಸಲಾಗಿದೆ. ₹29.95 ಕೋಟಿ ವೆಚ್ಚದಲ್ಲಿ ಕ್ರೀಡಾ ಸಂಕೀರ್ಣ ನಿರ್ಮಾಣ ಮಾಡಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ’ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಅನಿತಾ ತಿಳಿಸಿದರು.

‘ಇದರಲ್ಲಿ ಸಿಂಥೆಟಿಕ್‌ ಟ್ರ್ಯಾಕ್‌, ಫುಟ್‌ಬಾಲ್‌ ಮೈದಾನ, ಹಾಕಿ ಟರ್ಫ್‌, ವಿವಿಧೋದ್ದೇಶ ಪೆವಿಲಿಯನ್‌ ಬಿಲ್ಡಿಂಗ್‌ ನಿರ್ಮಾಣದ ಗುರಿ ಹೊಂದಲಾಗಿದೆ. ನಿಗದಿಯಾಗಿರುವ ಜಾಗ ರೇಷ್ಮೆ ಇಲಾಖೆಗೆ ಸೇರಿದ್ದು ಇನ್ನೂ ನಮ್ಮ ಇಲಾಖೆಗೆ ಹಸ್ತಾಂತರಗೊಂಡಿಲ್ಲ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು