ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜುಲೈ ಮೊದಲ ವಾರದಲ್ಲಿ ಕಬ್ಬು ನುರಿಸಲು ಒತ್ತಾಯ: ಮಂಡ್ಯದಲ್ಲಿ ಪ್ರತಿಭಟನೆ

ಜಿಲ್ಲಾಧಿಕಾರಿ ಕಚೇರಿ ಎದುರು ರೈತ ಹಿತರಕ್ಷಣಾ ಸಮಿತಿ ಸದಸ್ಯರ ಪ್ರತಿಭಟನೆ
Last Updated 4 ಜೂನ್ 2020, 10:26 IST
ಅಕ್ಷರ ಗಾತ್ರ

ಮಂಡ್ಯ: ಜಿಲ್ಲೆಯ ವಿವಿಧ ಸಕ್ಕರೆ ಕಾರ್ಖಾನೆಗಳ ವ್ಯಾಪ್ತಿಯಲ್ಲಿ ಕಟಾವಿಗೆ ಬಂದಿರುವ 40–50 ಲಕ್ಷ ಟನ್‌ ಕಬ್ಬು ನುರಿಸಲು ಸರ್ಕಾರ ಶೀಘ್ರ ಕ್ರಮ ವಹಿಸಬೇಕು ಎಂದು ಒತ್ತಾಯಿಸಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಸದಸ್ಯರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಮೈಷುಗರ್‌ ವ್ಯಾಪ್ತಿಯ 8 ಲಕ್ಷ ಟನ್‌, ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆ ವ್ಯಾಪ್ತಿಯ 4 ಲಕ್ಷ ಟನ್‌ ಕಟಾವಿಗೆ ಬಂದಿದೆ. ಖಾಸಗಿ ಸಕ್ಕರೆ ಕಾರ್ಖಾನೆಗಳಾದ ಎನ್‌ಎಸ್ಎಲ್‌, ಚಾಂಷುಗರ್‌, ಐಸಿಎಲ್‌ ಕಾರ್ಖಾನೆ ವ್ಯಾಪ್ತಿಯಲ್ಲಿ 30–40 ಲಕ್ಷ ಟನ್‌ ಕಬ್ಬು ಕಡಿಯಬೇಕಾಗಿದೆ. ಜುಲೈ ಮೊದಲ ವಾರದಲ್ಲಿ ಕಾರ್ಖಾನೆಗಳು ಆರಂಭವಾಗಬೇಕು. ಆಗ ಮಾತ್ರ ರೈತರು ಹೆಚ್ಚು ಇಳುವರಿ ಪಡೆಯಲು ಸಾಧ್ಯ. ತಡ ಮಾಡದೇ ಸೂಕ್ತ ಅವಧಿಯಲ್ಲಿ ಕಬ್ಬು ನುರಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಮೈಷುಗರ್‌, ಪಿಎಸ್‌ಎಸ್‌ಕೆ ಆರಂಭವಾಗಲು ತಡವಾಗುತ್ತಿರುವ ಹಿನ್ನೆಲೆಯಲ್ಲಿ ಈ ಎರಡೂ ಕಾರ್ಖಾನೆ ವ್ಯಾಪ್ತಿಯ ಕಬ್ಬನ್ನು ಬೇರೆಡೆ ಅರೆಸಲು ಸೂಕ್ತ ಅವಧಿಯಲ್ಲಿ ನಿರ್ಧಾರ ಕೈಗೊಳ್ಳಬೇಕು. ಕೊರೊನಾ ಸೋಂಕಿನ ಪರಿಣಾಮದಿಂದಾಗಿ ಬೇಸಾಯದ ವೆಚ್ಚ ಗಗನಕ್ಕೇರುತ್ತಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ರೈತರ ಹಿತ ಕಾಯಬೇಕು. ಜಿಲ್ಲೆಯ ವಿವಿಧ ಸಕ್ಕರೆ ಕಾರ್ಖಾನೆಗಳು ಉಳಿಸಿಕೊಂಡಿರುವ ಬಾಕಿ ಹಣವನ್ನು ತಕ್ಷಣವೇ ಬಡ್ಡಿ ಸಮೇತ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಮೈಷುಗರ್‌ ಕಾರ್ಖಾನೆಯ ಈ ಹಿಂದಿನ ವ್ಯವಸ್ಥಾಪಕ ನಿರ್ದೇಶಕರು ಆನ್‌ಲೈನ್‌ ಮೂಲಕ ಸಾಮಾನ್ಯ ಸಭೆ ನಡೆಸಲು ಪ್ರಕರಣೆ ಹೊರಡಿಸಿದ್ದಾರೆ. ಇದು ಅವೈಜ್ಞಾನಿಕವಾಗಿದ್ದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಅವರ ಗಮನಕ್ಕೆ ತರಲಾಗಿದೆ. ಕೂಡಲೇ ಆನ್‌ಲೈನ್‌ ಸಭೆಯನ್ನು ರದ್ದುಗೊಳಿಸಿ ಮಂಡ್ಯದಲ್ಲೇ ಷೇರುದಾರರ ಸಭೆ ನಡೆಸಬೇಕು ಎಂದು ಆಗ್ರಹಿಸಿದರು.

ಕಳೆದ ಹಂಗಾಮಿನಲ್ಲಿ ಕಬ್ಬು ಕಟಾವು ಮಾಡಿದ ಸಾಗಣೆ ವೆಚ್ಚವನ್ನು ಕೂಡಲೇ ಬಿಡುಗಡೆ ಮಾಡಬೇಕು. ಕಬ್ಬಿಗೆ ಕೇಂದ್ರ ಸರ್ಕಾರ ನಿಗದಿ ಮಾಡಿದ ಎಫ್ಆರ್‌ಪಿ, ರಾಜ್ಯ ಸಲಹಾ ಸಮಿತಿಯ ದರವನ್ನು ಸಕಾಲದಲ್ಲಿ ಬಿಡುಗಡೆ ಮಾಡಬೇಕು. ರಾಜ್ಯದಲ್ಲಿ ಏಕಮಾತ್ರ ಸರ್ಕಾರಿ ಸ್ವಾಮ್ಯದ ಮುಷುಗರ್‌ ಕಾರ್ಖಾನೆಯನ್ನು ಸರ್ಕಾರವೇ ನಡೆಸಬೇಕು. ಕಾರ್ಯಾಚರಣೆ ಮತ್ತು ನಿರ್ವಹಣೆ (ಒ ಅಂಡ್‌ ಎಂ), ಗುತ್ತಿಗೆಗೆ ನೀಡಬಾರದು ಎಂದು ಒತ್ತಾಯಿಸಿದರು.

ಮೈಷುಗರ್‌, ಪಿಎಸ್‌ಎಸ್‌ಕೆ ಕಾರ್ಖಾನೆ ಆವರಣದಲ್ಲಿ ಇದೂವರೆಗೆ ನಡೆದಿರುವ ಅಕ್ರಮಗಳ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಯಬೇಕು. ಸುಸ್ಥಿತಿಯಲ್ಲಿರುವ ಮೈಷುಗರ್‌ನ ಒಂದು ಘಟಕವನ್ನು ಕೂಡಲೇ ಆರಂಭಿಸಬೇಕು. ಪಿಎಸ್‌ಎಸ್‌ಕೆಯನ್ನು ಖಾಸಗಿಯವರಿಗೆ ನೀಡದೇ ಸರ್ಕಾರ ಅನುದಾನ ಬಿಡುಗಡೆ ಮಾಡಿ ಮುನ್ನಡೆಸಬೇಕು. ಕಾರ್ಖಾನೆಗಳ ನೌಕರರಿಗೆ ಕಾನೂನುಬದ್ಧವಾಗಿ ನೀಡಬೇಕಾದ ವೇತನ ಹಾಗೂ ಇತರ ಭತ್ಯೆಗಳನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು. ಸಕ್ಕರೆ ಸಚಿವ ಶಿವರಾಮ್‌ ಹೆಬ್ಬಾರ್‌ ಅವರಿಗೆ ಬರೆದ ಮನವಿ ಪತ್ರ ಅರ್ಪಿಸಿದರು.

ರೈತ ಮುಖಂಡರಾದ ಕೆ.ಬೋರಯ್ಯ, ಮಂಜುನಾಥ್‌, ಎಂ.ಬಿ.ಶ್ರೀನಿವಾಸ್‌, ಸಿ.ಕುಮಾರಿ, ಟಿ.ಸಿ.ಕೃಷ್ಣೇಗೌಡ, ಚಂದ್ರಶೇಖರ್‌, ಸುಧೀರ್‌ಕುಮಾರ್‌ ಇದ್ದರು.

ನಾಲ್ವಡಿ ಕೃಷ್ಣರಾಜ ಒಡೆಯರ್‌ ನೆನಪು

ರೈತನಾಯಕಿ ಸುನಂದಾ ಜಯರಾಂ ಮಾತನಾಡಿ ‘ಜೂನ್‌ 4 ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ಜನ್ಮದಿನ. ಅವರ ಮುನ್ನೋಟದೊಂದಿಗೆ ಆರಂಭವಾದ ಮೈಷುಗರ್‌ ಕಾರ್ಖಾನೆ ಇಂದು ಮೌನಕ್ಕೆ ಜಾರಿಗೆ. ಸರ್ಕಾರಗಳ ಇಚ್ಛಾಶಕ್ತಿಯ ಕೊರತೆಯಿಂದ ಏಕೈಕ ಸರ್ಕಾರಿ ಸ್ವಾಮ್ಯದ ಕಾರ್ಖಾನೆಯನ್ನು ನಡೆಸಲು ಸಾಧ್ಯವಾಗುತ್ತಿಲ್ಲ. ಒಡೆಯರ್‌ ಅವರಿಗೆ ಗೌರವ ಸಲ್ಲಬೇಕಾದರೆ ಮೈಷುಗರ್‌ ಕಾರ್ಖಾನೆ ಶೀಘ್ರ ಕಾರ್ಯಾರಂಭ ಮಾಡಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT