ಶನಿವಾರ, ಡಿಸೆಂಬರ್ 3, 2022
21 °C
ಅಕ್ರಮ ಗಣಿಗಾರಿಕೆ; ಅಂಬರೀಷ್‌ ಹೆಸರು ಎಳೆದುತಂದ ಶ್ರೀರಂಗಪಟ್ಟಣ ಶಾಸಕ

ಸುಮಲತಾ ನಟೋರಿಯಸ್‌, ದೇಶದ್ರೋಹಿ: ಜೆಡಿಎಸ್‌ ಶಾಸಕ ರವೀಂದ್ರ ಶ್ರೀಕಂಠಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ: ಸಂಸದೆ ಸುಮಲತಾ ಹಾಗೂ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ, ಜೆಡಿಎಸ್‌ ಮುಖಂಡರ ನಡುವಿನ ವಾಕ್ಸಮರ ತಾರಕಕ್ಕೇರಿದೆ. ಶ್ರೀರಂಗಪಟ್ಟಣ ಶಾಸಕ ರವಿಂದ್ರ ಶ್ರೀಕಂಠಯ್ಯ ಗುರುವಾರ ಸಂಸದೆಯನ್ನು ‘ನಟೋರಿಯಸ್‌’ ಎಂದು ಕರೆದಿದ್ದಾರೆ.

‘ಸುಮಲತಾ ನಟೋರಿಯಸ್‌, ದೇಶದ್ರೋಹಿ. ಯಾವ ಆಧಾರ ಮೇಲೆ ನೀವು ಕೆಆರ್‌ಎಸ್‌ ಜಲಾಶಯ ಬಿರುಕು ಬಿಟ್ಟಿದೆ ಎಂದು ಹೇಳಿದ್ದೀರಿ, ದೇಶದ ಗೋಪ್ಯತೆ ಕಾಪಾಡುವುದಾಗಿ ಪ್ರಮಾಣ ಮಾಡಿದ ನೀವು ರಾಷ್ಟ್ರೀಯ ಆಸ್ತಿಯಾಗಿರುವ ಕೆಆರ್‌ಎಸ್‌ ಬಗ್ಗೆ ಬಹಿರಂಗ ಹೇಳಿಕೆ ನೀಡಿದ್ದು ಏಕೆ, ದೇಶ ವಿರೋಧಿ ಶಕ್ತಿಗಳು ನಿಮ್ಮ ಹೇಳಿಕೆಯನ್ನು ದುರ್ಬಳಕೆ ಮಾಡಿಕೊಳ್ಳುವುದಿಲ್ಲವೇ’ ಎಂದು ಪ್ರಶ್ನಿಸಿದರು.

‘ಅಂಬರೀಷ್‌ ಸಂಸದರಾಗಿದ್ದ ಅವಧಿಯಲ್ಲೇ ಜಿಲ್ಲೆಯಲ್ಲಿ ಅತೀ ಹೆಚ್ಚು ಕಲ್ಲು ಗಣಿಗಾರಿಕೆ ನಡೆದಿದೆ. ಅಂಗರಹಳ್ಳಿ ಗಣಿ ಪ್ರದೇಶದ ಜೀತಪ್ರಕರಣ ಅಂಬರೀಷ್‌ ಅವಧಿಯಲ್ಲೇ ನಡೆದಿದೆ. ಅವರ ಬೆಂಬಲಿಗರೇ ಅಕ್ರಮವಾಗಿ ಗಣಿ ನಡೆಸುತ್ತಿದ್ದರು’ ಎಂದು ಆರೋಪಿಸಿದರು.

‘ಸುಮಲತಾ ಈಗ ಏನು ಮಾಡುತ್ತಿದ್ದಾರೆ ಎಂಬುದು ನಮಗೆ ಗೊತ್ತಿದೆ. ಬೆಂಗಳೂರಿನ ಹೋಟೆಲ್‌ನಲ್ಲಿ ಕುಳಿತು ದಲ್ಲಾಳಿಗಳ ಮೂಲಕ ಗಣಿ ಮಾಲೀಕರಿಂದ ಹಣ ಪಡೆಯಲು ಯತ್ನಿಸುತ್ತಿದ್ದಾರೆ. ಆ ಕುರಿತು ಹಲವರ ಜೊತೆ ಚರ್ಚೆ ಮಾಡಿದ್ದಾರೆ. ನಮ್ಮ ಬಳಿ ಎಲ್ಲಾ ದಾಖಲೆಗಳಿದ್ದು ಶೀಘ್ರ ಬಿಡುಗಡೆ ಮಾಡಲಾಗುವುದು’ ಎಂದರು.

ಸುಮಲತಾ ಆಕ್ರೋಶ: ಅಕ್ರಮ ಗಣಿಗಾರಿಕೆ ವಿಚಾರದಲ್ಲಿ ಅಂಬರೀಷ್‌ ಅವರ ಹೆಸರು ಎಳೆದು ತಂದಿರುವುದಕ್ಕೆ ಸಂಸದೆ ಸುಮಲತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಅಂಬರೀಷ್‌ ಬಗ್ಗೆ ಮಾತನಾಡುವ ಯಾವ ಯೋಗ್ಯತೆಯೂ ಅವರಿಗಿಲ್ಲ, ಅಕ್ರಮ ಗಣಿಗಾರಿಕೆ ಇರುವುದನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ. ಅಂಬರೀಷ್‌ ವಿರುದ್ಧ ಮಾತನಾಡಿದರೆ ರವೀಂದ್ರ ಶ್ರೀಕಂಠಯ್ಯ ತಮ್ಮ ರಾಜಕೀಯ ಜೀವನ ಹಾಳುಮಾಡಿಕೊಳ್ಳುತ್ತಾರೆ’ ಎಂದು ತಿಳಿಸಿದ್ದಾರೆ.

*****

ಸುಮಲತಾ ವಿಶೇಷ ಮಹಿಳೆ: ಎಚ್‌ಡಿಕೆ ವ್ಯಂಗ್ಯ

‘ಸುಮಲತಾ ವಿಶೇಷ ಮಹಿಳೆ, ಮಹಿಳೆಯರಿಗೆ ಹೇಗೆ ಗೌರವ ಕೊಡಬೇಕು ಎಂಬುದು ನನಗೆ ಗೊತ್ತಿದೆ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಗುರುವಾರ ವ್ಯಂಗ್ಯವಾಡಿದರು.

ಭಾರತೀನಗರದಲ್ಲಿ ಜಿ.ಮಾದೇಗೌಡರ ಆರೋಗ್ಯ ವಿಚಾರಿಸಿದ ಅವರು ‘ಸುಮಲತಾ ವಿಚಾರವಾಗಿ ಮಾಧ್ಯಮಗಳು ನನ್ನನ್ನು ಕೆರಳಿಸುತ್ತಿವೆ. ನನ್ನ ಹೇಳಿಕೆಗಳನ್ನು ತಿರುಚಿ ವರದಿ ಮಾಡುತ್ತಿವೆ’ ಎಂದರು.

‘ಕೆಆರ್‌ಎಸ್‌ ಜಲಾಶಯ ಇನ್ನೂ ನೂರು ವರ್ಷ ಅಲ್ಲಾಡುವುದಿಲ್ಲ. ನಾನು ಮುಖ್ಯಮಂತ್ರಿ ಆಗಿದ್ದಾಗ ಅಕ್ರಮ ಗಣಿಗಾರಿಕೆಗೆ ಅವಕಾಶ ನೀಡಿರಲಿಲ್ಲ. ನಾನು ಎಂದಿಗೂ ಯಾರ ಕರೆಯನ್ನೂ ಟ್ಯಾಪ್‌ ಮಾಡಿಲ್ಲ. ಹಾಗೆ ಮಾಡಿದ್ದರೆ ನಾನು ಅಧಿಕಾರ ಕಳೆದುಕೊಳ್ಳುತ್ತಿದ್ದನೇ’ ಎಂದು ಪ್ರಶ್ನಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು