ಶನಿವಾರ, ಏಪ್ರಿಲ್ 1, 2023
23 °C

ನೀವು ಶಾಸಕರೋ, ಭಯೋತ್ಪಾದಕರೋ: ಜೆಡಿಎಸ್‌ ಶಾಸಕರ ವಿರುದ್ಧ ಸಂಸದೆ ಸುಮಲತಾ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ‘ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯಿಂದ ಕೆಆರ್‌ಎಸ್‌ ಜಲಾಶಯಕ್ಕೆ ಧಕ್ಕೆಯುಂಟಾಗುತ್ತಿದೆ. ಇದನ್ನು ಪ್ರಶ್ನೆ ಮಾಡಿದರೆ ಮಾಜಿ ಮುಖ್ಯಮಂತ್ರಿ ಸೇರಿ ಜಿಲ್ಲೆಯ ಹಲವು ಶಾಸಕರು ಹಲವು ರೀತಿಯಲ್ಲಿ ಬೆದರಿಕೆಯೊಡ್ಡುತ್ತಿದ್ದಾರೆ. ಇವರು ಶಾಸಕರೋ ಅಥವಾ ಭಯೋತ್ಪಾದಕರೋ’ ಎಂದು ಸಂಸದೆ ಸುಮಲತಾ ಬುಧವಾರ ಪ್ರಶ್ನಿಸಿದರು.

ಶ್ರೀರಂಗಪಟ್ಟಣ, ಪಾಂಡವಪುರ ತಾಲ್ಲೂಕಿನ ವಿವಿಧ ಕಲ್ಲು ಗಣಿ ಚಟುವಟಿಕೆ ಪ್ರದೇಶಗಳಿಗೆ ಭೇಟಿ ನೀಡಿ ನಂತರ ಸುದ್ದಿಗಾರರ ಜೊತೆ ಮಾತನಾಡಿದರು.

‘ನಮ್ಮ ಬಳಿ ಸಿಡಿ ಬಾಂಡ್‌ ಇದೆ, ಮಿಸೈಲ್‌ ಇದೆ ಎಂದೆಲ್ಲಾ ಬೆದರಿಕೆ ಹಾಕುತ್ತಿದ್ದಾರೆ. ಇದು ಜನಪ್ರತಿನಿಧಿಗಳೂ ಆಡುವ ಮಾತುಗಳಾ, ಮುಖ್ಯಮಂತ್ರಿ ಮಗ, 8 ಮಂದಿ ಜೆಡಿಎಸ್‌ ಎಂಎಲ್‌ಎಗಳ ವಿರುದ್ಧ ಹೋರಾಡಿ ನಾನು ಗೆಲುವು ಪಡೆದಿದ್ದೇನೆ. ಇವರಿಗೆ ಸೋತ ಮೇಲೂ ಬುದ್ಧಿ ಬಂದಿಲ್ಲ. ಶಾಸಕರ ಬೆದರಿಕೆಗಳಿಗೆ ನಾನು ಬೆದರುವುದಿಲ್ಲ’ ಎಂದರು.

‘ನನ್ನ ನಡೆ ನನಗೆ ಗೊತ್ತಿದೆ, ಕಲ್ಲು ಗಣಿ ಅಕ್ರಮದ ಬಗ್ಗೆ ಮಾತನಾಡಿದರೆ ನಿಮಗೆ ಯಾಕೆ ಅಷ್ಟೊಂದು ಭಯ. ಜೆಡಿಎಸ್‌ ನಾಯಕರನ್ನು ಕಂಡರೆ ಪಾಪ ಅನ್ನಿಸುತ್ತದೆ. ಅಂಬರೀಷ್‌ ಅವರ ಮುಂದೆ ಇವರೆಲ್ಲರೂ ಕೈಕಟ್ಟಿ ನಿಂತಿದ್ದನ್ನು ಕಂಡಿದ್ದೇನೆ, ನಿಮ್ಮಿಂದ ನಾನು ಪಾಠ ಕಲಿಯಬೇಕಾಗಿಲ್ಲ. ಗಣಿ ಪ್ರದೇಶಕ್ಕೆ ಭೇಟಿ ನೀಡುವುದು ದಿಢೀರ್‌ ನಿಗದಿಯಾಗಿಲ್ಲ, ಕಳೆದ ವಾರ ಅಧಿಕಾರಿಗಳ ಸಭೆಯಲ್ಲೇ ತಿಳಿಸಿದ್ದೆ. ನಾನು ಮಂಡ್ಯ ಸಂಸದೆ, ಗಣಿ ಪ್ರದೇಶಕ್ಕಾದರೂ ಹೋಗುತ್ತೇನೆ, ಕೆಆರ್‌ಎಸ್‌ಗಾದರೂ ಹೋಗುತ್ತೇನೆ, ನಿಮಗ್ಯಾಕೆ ಭಯ’ ಎಂದು ಪ್ರಶ್ನಿಸಿದರು.

‘ಮಾಜಿ ಮುಖ್ಯಮಂತ್ರಿಯಾಗಿ ಸಂಸದೆ ಬಗ್ಗೆ ಆಡುವ ಮಾತು ನಿಮ್ಮ ಸಂಸ್ಕಾರ ತೋರಿಸುತ್ತದೆ. ನಿಮ್ಮ ಮಾತುಗಳಿಂದಲೇ ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋತಿದ್ದೀರಿ. ಇವತ್ತಿಗೆ ನೀವು ಚನ್ನಪಟ್ಟಣ ಶಾಸಕ ಅಷ್ಟೇ, ನಾನು ಮಂಡ್ಯ ಸಂಸದೆ. ನನ್ನ ಕೆಲಸಗಳನ್ನು ತಡೆಯಲು ಬರಬೇಡಿ, ಸಿನಿಮಾದವರ ಬಗ್ಗೆ ಕೆಟ್ಟದಾಗಿ ಮಾತನಾಡಿದರೆ ಸುಮ್ಮನಿರುವುದಿಲ್ಲ. ನೀವಾಡುವ ನಾಟಕ, ಅಭಿನಯ ಮೀರಿದ ಇನ್ನೊಂದು ನಾಟಕವಿಲ್ಲ’ ಎಂದು ವಾಗ್ದಾಳಿ ನಡೆಸಿದರು.

‘ಡಿ.ಕೆ.ಶಿವಕುಮಾರ್‌ ಅವರು ಜಲಸಂಪನ್ಮೂಲ ಸಚಿವರಾಗಿದ್ದಾಗ  ₹ 76 ಕೋಟಿ ವೆಚ್ಚದಲ್ಲಿ ಕೆಆರ್‌ಎಸ್‌ ಜಲಾಶಯ ದುರಸ್ತಿ ಮಾಡಲಾಗಿದೆ. ಜಲಾಶಯ ಬಿರುಕು ಬಿಟ್ಟಿದ್ದಕ್ಕೇ ಅಷ್ಟೊಂದು ಹಣ ವೆಚ್ಚ ಮಾಡಲಾಗಿದೆ. ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳೇ ನನಗೆ ಮಾಹಿತಿ ನೀಡಿದ್ದಾರೆ. ಜಲಾಶಯದ ಆಸುಪಾಸಿನಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲುಗಣಿಗಾರಿಕೆಯಿಂದ ಕೆಆರ್‌ಎಸ್‌ಗೆ ತೊಂದರೆಯಾಗುತ್ತಿದೆ. ಕಲ್ಲು ಗಣಿಗಳ ವಿರುದ್ಧ ನಿರಂತರವಾಗಿ ಹೋರಾಟ ನಡೆಸುತ್ತೇನೆ’ ಎಂದರು.

‘ಗಣಿಗಾರಿಕೆ ನಿಷೇಧಿಸಿದ್ದರೂ ರಾತ್ರಿವೇಳೆ ಕದ್ದು ಮುಚ್ಚಿ ಗಣಿಗಾರಿಕೆ ನಡೆಸುತ್ತಿದ್ದಾರೆ. ಗಣಿ ಸ್ಫೋಟದಿಂದ ಸ್ಥಳೀಯರಿಗೆ ತೊಂದರೆಯಾಗಿದೆ, ಪರಿಸರಕ್ಕೆ ಹಾನಿಯಾಗುತ್ತಿದೆ, ಕೃಷಿ ಭೂಮಿ ಹಾಳಾಗುತ್ತಿದೆ. ನಿತ್ಯವೂ ನನಗೆ ಜನರು ದೂರು ಹೇಳುತ್ತಿದ್ದಾರೆ. ಗಣಿಗಾರಿಕೆ ವಿರುದ್ಧ ಶಾಸಕರು ಹೋರಾಟ ನಡೆಸಬೇಕಾಗಿತ್ತು, ಅವರು ಮಾಡದ ಕೆಲಸವನ್ನು ನಾನು ಮಾಡುತ್ತಿದ್ದೇನೆ’ ಎಂದರು.

ಸುಮಲತಾ ಬಂಧನಕ್ಕೆ ಒತ್ತಾಯ

ಕೆಆರ್‌ಎಸ್‌ ಜಲಾಶಯ ಬಿರುಕು ಬಿಟ್ಟಿದೆ ಎಂದು ಹೇಳಿ ರೈತರನ್ನು ಆತಂಕ ಮೂಡಿಸುತ್ತಿರುವ ಸಂಸದೆ ಸುಮಲತಾ ಅವರನ್ನು ಬಂಧಿಸಬೇಕು ಎಂದು ಒತ್ತಾಯಿಸಿ ಜೆಡಿಎಸ್‌ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಕನ್ನಂಬಾಡಿ ಈ ದೇಶದ ಆಸ್ತಿಯಾಗಿದೆ, ಮಾನಸಿಕ ಅಸ್ವಸ್ಥರಾಗಿರುವ ಸಂಸದರು ಇಲ್ಲಸಲ್ಲದ ಅಪಪ್ರಚಾರ ಮಾಡುತ್ತಿದ್ದಾರೆ. ಕೆಆರ್‌ಎಸ್‌ ಜಲಾಶಯವನ್ನು ನಂಬಿ ರೈತರು ಜೀವನ ನಡೆಸುತ್ತಿದ್ದಾರೆ. ರಾಜ್ಯ ಸರ್ಕಾರ ಕೂಡಲೇ ಅವರನ್ನು ಬಂಧಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು