ಸೋಮವಾರ, ಸೆಪ್ಟೆಂಬರ್ 26, 2022
22 °C

ಶ್ರೀರಂಗಪಟ್ಟಣ: ‘ಬೆಳವಾಡಿ ಶಾಲೆಗೆ ಬೆಳಕು’ ನೀಡಿದ ದಿನೇಶ್‌ ದಂಪತಿ

ಗಣಂಗೂರು ನಂಜೇಗೌಡ Updated:

ಅಕ್ಷರ ಗಾತ್ರ : | |

Prajavani

ಶ್ರೀರಂಗಪಟ್ಟಣ: ಶಿಕ್ಷಕ ದಂಪತಿ ಪಿ.ವಿ.ದಿನೇಶ್‌ ಮತ್ತು ಲಕ್ಷ್ಮಿ ಅವರ ಪರಿಶ್ರಮ ಮತ್ತು ಆಸಕ್ತಿಯ ಫಲವಾಗಿ ಖಾಸಗಿ ಶಾಲೆಗೆ ಕಡಿಮೆ ಇಲ್ಲದಂತೆ ತಾಲ್ಲೂಕಿನ ಬೆಳವಾಡಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆ ರೂಪುಗೊಂಡಿದೆ.

12 ವರ್ಷಗಳ ಹಿಂದೆ ಈ ಶಾಲೆಗೆ ಬಂದ ಈ ದಂಪತಿ ಶೈಕ್ಷಣಿಕ ಮತ್ತು ಭೌತಿಕ ಪರಿಸರಕ್ಕೆ ವಿಶಿಷ್ಟ ರೂಪ ನೀಡಿದ್ದಾರೆ. ಈ ಶಾಲೆಯಲ್ಲಿ 57 ವಿದ್ಯಾರ್ಥಿಗಳಿದ್ದು, ಪ್ರತಿ ಮಗುವಿನ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಿದ್ದಾರೆ. ಗುಣಮಟ್ಟದ ಶಿಕ್ಷಣ ಸಿಗುತ್ತಿರುವುದರಿಂದ ಖಾಸಗಿ ಶಾಲೆಗೆ ಹೋಗುತ್ತಿದ್ದ 10 ವಿದ್ಯಾರ್ಥಿಗಳು ಈ ಶಾಲೆಗೆ ಸೇರಿದ್ದಾರೆ.

ವಾಟ್ಸ್‌ಆ್ಯಪ್‌ ಗ್ರೂಪ್‌: ಪ್ರತಿ ವಿದ್ಯಾರ್ಥಿಯ ಕಲಿಕೆ ಮತ್ತು ಹವ್ಯಾಸಗಳ ಬಗ್ಗೆ ಪೋಷಕರ ಜತೆ ಸಂವಹನ ನಡೆಸಲು ವಾಟ್ಸ್‌ಆ್ಯಪ್‌ ಗ್ರೂಪ್ ರಚಿಸಲಾಗಿದೆ. ವಿದ್ಯಾರ್ಥಿಯ ಧನಾತ್ಮಕ ಮತ್ತು ಋಣಾತ್ಮಕ ಅಂಶಗಳನ್ನು ಪೋಷಕರ ಗಮನಕ್ಕೆ ತರಲಾಗುತ್ತದೆ. ಪೋಷಕರ ಜತೆ ನಿರಂತರ ಸಂಪರ್ಕ ಹೊಂದಲು ಇದು ಸಹಕಾರಿಯಾಗಿದೆ.

ಸಂಸ್ಕೃತಿ ಕಲಿಕೆ: ಈ ಭಾಗದಲ್ಲಿ ಪ್ರಚಲಿತದಲ್ಲಿರುವ ಹಬ್ಬಗಳು, ಸಾಂಸ್ಕೃತಿಕ ಆಚರಣೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲು ಗಾಳಿಪಟ ಸ್ಪರ್ಧೆ, ಶ್ರೀಕೃಷ್ಣ ಜನ್ಮಾಷ್ಟಮಿಗೆ ಛದ್ಮವೇಶ ಸ್ಪರ್ಧೆ ಏರ್ಪಡಿಸಲಾಗುತ್ತದೆ. ಶಾಲೆಯ ಆವರಣದಲ್ಲಿ ವರ್ಷಕ್ಕೊಮ್ಮೆ ತೆಪ್ಪೋತ್ಸವ ನಡೆಯುತ್ತದೆ. ವಿದ್ಯಾರ್ಥಿಗಳೇ ಸಿದ್ಧಪಡಿಸಿದ ಗಣಪತಿ ಮೂರ್ತಿಯನ್ನು ಶಾಲೆಯಲ್ಲಿ ಪ್ರತಿಷ್ಠಾಪಿಸಲಾಗುತ್ತದೆ.

ಚಿಣ್ಣರ ಬ್ಯಾಂಕ್‌: ವಿದ್ಯಾರ್ಥಿಗಳ ಹೆಸರಿನಲ್ಲಿ ಸಮೀಪದ ನಗುವನಹಳ್ಳಿ ಎಸ್‌ಬಿಐ ಶಾಖೆಯಲ್ಲಿ ಬ್ಯಾಂಕ್‌ ಖಾತೆ ತೆರೆಯಲಾಗಿದೆ. ಪ್ರತಿ ತಿಂಗಳು ಇಂತಿಷ್ಟು ಹಣವನ್ನು ವಿದ್ಯಾರ್ಥಿಗಳು ತಮ್ಮ ಖಾತೆಗೆ ಜಮೆ ಮಾಡುವಂತೆ ಶಿಕ್ಷಕರು ಹೇಳುತ್ತಾರೆ. 7ನೇ ತರಗತಿವರೆಗೆ ಜಮೆಯಾದ ಹಣವನ್ನು ವರ್ಗಾವಣೆ ಪತ್ರದ ಜತೆಗೆ ವಿದ್ಯಾರ್ಥಿಗೆ ನೀಡಲಾಗುತ್ತದೆ. ಮುಂದಿನ ಶಿಕ್ಷಣಕ್ಕೆ ಅನುಕೂಲ ಆಗಲಿ ಎಂಬ ಉದ್ದೇಶದಿಂದ ಈ ವ್ಯವಸ್ಥೆ ಮಾಡಿದ್ದೇವೆ ಎನ್ನುತ್ತಾರೆ ಶಿಕ್ಷಕ ದಿನೇಶ್‌.

ನಿಸರ್ಗ ಕಲಿಕೆ: ವಿದ್ಯಾರ್ಥಿಗಳಿಗೆ ಶಾಲೆಯ ಕೊಠಡಿ ಒಳಗೆ ಕಲಿಸುವ ಜತೆಗೆ ಬಯಲಿನಲ್ಲಿ ನಿಸರ್ಗ ಕಲಿಕೆಗೆ ಈ ಶಾಲೆ ಹೆಸರಾಗಿದೆ. ಹೂ, ಭತ್ತ, ಕಬ್ಬು, ತರಕಾರಿ ಬೆಳೆಯುವ ವಿಧಾನಗಳು, ಗಾಳಿ, ಬಿಸಿಲು, ಪಕ್ಷಿ ಮತ್ತು ಪ್ರಾಣಿಗಳ ಬಗ್ಗೆ ಬಯಲಿನಲ್ಲಿ ಪಾಠ ಹೇಳಿಕೊಡಲಾಗುತ್ತದೆ. ‘ಮಾಡಿ ಕಲಿ: ನೋಡಿ ಕಲಿ’ ತತ್ವದಂತೆ ಇಲ್ಲಿ ಶಿಕ್ಷಣ ನೀಡಲಾಗುತ್ತಿದೆ.

‘ಬುನಾದಿ ಸಾಮರ್ಥ್ಯ’ ಪರಿಕಲ್ಪನೆಗೆ ಪೂರಕವಾದ ಮಳೆ ಬಿಲ್ಲು, ವಿದ್ಯಾ ಪ್ರವೇಶ, ಕಲಿಕಾ ಚೇತರಿಕೆ ಕಾರ್ಯಕ್ರಮಗಳು ನಡೆಯುತ್ತಿವೆ. ಕಂಪ್ಯೂಟರ್‌ ಮೂಲಕ ಪ್ರತಿ ವಿದ್ಯಾರ್ಥಿಯ ಎಸ್‌ಎಟಿಎಸ್‌ (ಸ್ಟೂಡೆಂಟ್‌ ಆಚೀವ್‌ಮೆಂಟ್‌ ಟ್ರ್ಯಾಕಿಂಗ್‌ ಸಿಸ್ಟಂ) ದತ್ತಾಂಶ ಸಂಗ್ರಹಿಸಲಾಗುತ್ತಿದೆ. ಈ ಶಾಲೆ ಭೌತಿಕ ಮತ್ತು ಶೈಕ್ಷಣಿಕವಾಗಿ ಇತರ ಶಾಲೆಗಳಿಗೆ ಮಾದರಿಯಾಗಿದ್ದು, ‘ಉತ್ತಮ ಪರಿಸರ ಶಾಲೆ’ ಮತ್ತು ‘ಉತ್ತಮ ಎಸ್‌ಡಿಎಂಸಿ’ ಪ್ರಶಸ್ತಿಗಳು ಬಂದಿವೆ. ಶಿಕ್ಷಕಿ ಲಕ್ಷ್ಮಿ ‘ತಾಲ್ಲೂಕು ಮಟ್ಟದ ಉತ್ತಮ ಶಿಕ್ಷಕಿ’ ಪ್ರಶಸ್ತಿ ಪಡೆದಿದ್ದಾರೆ.

‘ಮುಖ್ಯ ಶಿಕ್ಷಕಿ ಮೀನಾಕ್ಷ್ಮಿಬಾಯಿ ಮತ್ತು ಸಹ ಶಿಕ್ಷಕರ ಸಹಕಾರ, ಶಾಲಾಭಿವೃದ್ಧಿ ಸಮಿತಿ, ದಾನಿಗಳ ಪ್ರೋತ್ಸಾಹದಿಂದ ಒಂದಷ್ಟು ವಿಭಿನ್ನ ಕೆಲಸ ಮಾಡಲು ಸಾಧ್ಯವಾಗಿದೆ. ಈ ಊರಿನಿಂದ ಒಂದು ಮಗುವೂ ಖಾಸಗಿ ಶಾಲೆಗೆ ಹೋಗದಂತೆ ಶಾಲೆಯನ್ನು ಸರ್ವ ರೀತಿಯಲ್ಲೂ ಆಕರ್ಷಗೊಳಿಸುವ ಗುರಿ ನಮ್ಮದು’ ಎಂದು ದಿನೇಶ್‌ ಹೇಳುತ್ತಾರೆ.

‘ಬೆಳವಾಡಿ ಸರ್ಕಾರಿ ಶಾಲೆ ಸುತ್ತಮುತ್ತಲಿನ ಶಾಲೆಗಳಿಗೆ ಮಾದರಿಯಾಗಿದೆ. ಶಿಕ್ಷಕರಾದ ದಿನೇಶ್‌ ಮತ್ತು ಲಕ್ಷ್ಮಿ ದಂಪತಿಯ ಕಾಳಜಿಯಿಂದಾಗಿ ಕಲಿಕೆ ಮಾತ್ರವಲ್ಲದೆ ಭೌತಿಕ ಪರಿಸರವೂ ವಿಶೇಷವಾಗಿದೆ’ ಎಂದು ಶಿಕ್ಷಣ ಸಂಯೋಜಕಿ ಡಾ.ಬಿ.ಕೆ.ಪ್ರತಿಮಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು