ನಾಗಮಂಗಲ: ಮಳೆ- ಗಾಳಿಗೆ ತಾಲ್ಲೂಕಿನ ಗಡಿಭಾಗ ಕೆಸುವಿನಕಟ್ಟೆ ಗ್ರಾಮದ ಗೇಟ್ ಸಮೀಪ ಶನಿವಾರ ರಾತ್ರಿ ರಸ್ತೆಗೆ ಬಿದ್ದಿದ್ದ ಮರದ ಕೊಂಬೆಗೆ ಬೈಕ್ ಡಿಕ್ಕಿ ಹೊಡೆದಿದ್ದರಿಂದ ಸವಾರ ಯುವಕರಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಕೆ.ಆರ್.ಪೇಟೆ ತಾಲ್ಲೂಕಿನ ಕಿಕ್ಕೇರಿ ಹೋಬಳಿಯ ಲಿಂಗಾಪುರದ ರೇವಣ್ಣ (30) ಮತ್ತು ಕಿಕ್ಕೇರಿಯ ಕೃಷ್ಣ (30) ಮೃತಪಟ್ಟವರು.
ಕೆ.ಆರ್.ಪೇಟೆ ಕಡೆಯಿಂದ ನಾಗಮಂಗಲ ಕಡೆಗೆ ಮಾಗಡಿ-ಜಲಸೂರು ರಾಜ್ಯ ಹೆದ್ದಾರಿಯಲ್ಲಿ ಬೈಕ್‌ನಲ್ಲಿ ಬರುತ್ತಿದ್ದ ಯುವಕರಿಗೆ ಮರದ ಕೊಂಬೆ ಬಿದ್ದಿರುವುದು ಸರಿಯಾಗಿ ಕಾಣದ್ದರಿಂದ ಡಿಕ್ಕಿ ಹೊಡೆದಿದೆ. ಇಬ್ಬರ ತಲೆಗೆ ತೀವ್ರ ಪೆಟ್ಟಾಗಿತ್ತು.
ಇವರಿಬ್ಬರು ನೃತ್ಯ ಪಟುಗಳಿದ್ದು ಆಕ್ರೇಸ್ಟ್ರಾ ಕಾರ್ಯಕ್ರಮಕ್ಕೆ ತೆರಳುತ್ತಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.
ಸ್ಥಳಕ್ಕೆ ಸಿಪಿಐ ನಿರಂಜನ್, ನಾಗಮಂಗಲ ಗ್ರಾಮಾಂತರ ಠಾಣೆ ಪಿಎಸ್‌ಐ ರವಿಕುಮಾರ್ ಹಾಗೂ ಸಿಬ್ಬಂದಿ ಬಂದು ಪರಿಶೀಲಿಸಿದರು. ಮೃತರ ಸಂಬಂಧಿಕರ ರೋದನೆ ಮುಗಿಲು ಮುಟ್ಟಿತ್ತು.
ಘಟನೆಯ ಸಂಬಂಧ ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.