ಅಡ್ಡ ಬಂದ ನಾಯಿ ಉಳಿಸಲು ಹೋಗಿ ಅವಘಡ: ಸೇತುವೆಯಿಂದ ನದಿಗೆ ಬಿದ್ದ ಕಾರು

ನಾಗಮಂಗಲ: ಹೆದ್ದಾರಿಯಲ್ಲಿ ಅಡ್ಡ ಬಂದ ನಾಯಿಯನ್ನು ಉಳಿಸಲು ಹೋಗಿ ಕಾರು ಚಾಲಕನ ನಿಯಂತ್ರಣ ತಪ್ಪಿ ತಾಲ್ಲೂಕಿನ ಬೆಳ್ಳೂರು ಕ್ರಾಸ್ ಬಳಿಯ ಸೇತುವೆ ಮೇಲಿಂದ ವೀರವೈಷ್ಣವಿ ನದಿಗೆ ಬುಧವಾರ ಬೆಳಿಗ್ಗೆ ಉರುಳಿ ಬಿದ್ದಿದೆ. ಸುದೈವವಶಾತ್ ಕಾರಿನಲ್ಲಿದ್ದ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬೆಂಗಳೂರು– ಮಂಗಳೂರು ಹೆದ್ದಾರಿಯಲ್ಲಿ ಬೆಂಗಳೂರಿನ ಕಡೆಯಿಂದ ಹಾಸನ ಕಡೆಗೆ ಚಲಿಸುತ್ತಿದ್ದ ಸ್ವಿಫ್ಟ್ ಕಾರು ಕಾಫಿ ಡೇ ಸಮೀಪದ ಸೇತುವೆ ಬಳಿ ಈ ಘಟನೆ ಸಂಭವಿಸಿದ್ದು. ಕಾರಿನಲ್ಲಿದ್ದ ಬೆಂಗಳೂರು ರಾಮಮೂರ್ತಿನಗರದ ನಿವಾಸಿಗಳಾದ ಸತೀಶ್‌ಕುಮಾರ್, ಮಂಜುನಾಥ್ ಹಾಗೂ ಉಮೇಶ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆದಿಚುಂಚನಗಿರಿ ವೈದ್ಯಕೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸ್ಥಳಕ್ಕೆ ಬೆಳ್ಳೂರು ಠಾಣೆಯ ಎಸ್‌ಐ ದಯಾನಂದ್, ಎಎಸ್‌ಐ ಮರಿಸ್ವಾಮಿ ಭೇಟಿ ನೀಡಿ ಪರಿಶೀಲಿಸಿ ಕಾರನ್ನು ನದಿಯಿಂದ ಹೊರ ತೆಗೆಯಿಸಿದ್ದಾರೆ.
ಬೆಳ್ಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಕಾರು ಪಲ್ಟಿ: ಐವರಿಗೆ ಗಾಯ
ತಾಲ್ಲೂಕಿನ ಕದಬಹಳ್ಳಿ ಸಮೀಪದ ಟೋಲ್ ಬಳಿ ಬೆಂಗಳೂರಿನಿಂದ ಹಾಸನ ಕಡೆಗೆ ಕುಡಿದು ವಾಹನ ಚಲಿಸುತ್ತಿದ್ದ ಚಾಲಕನ ನಿಯಂತ್ರಣ ತಪ್ಪಿ ಕಾರು ರಸ್ತೆ ಪಕ್ಕದ ಹಳ್ಳಕ್ಕೆ ಮಗುಚಿದೆ.
ಕಾರಿನಲ್ಲಿದ್ದ ಐವರು ಮದ್ಯಪಾನ ಮಾಡಿದ್ದರು ಎಂದು ಹೇಳಲಾಗುತ್ತಿದ್ದು, ಹಳ್ಳಕ್ಕೆ ಬಿದ್ದ ಕಾರನ್ನು ಸ್ಥಳೀಯರು ಮೇಲೆತ್ತಿ ಕಾರಿನಲ್ಲಿದ್ದ 5 ಜನರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸಾರ್ವಜನಿಕರ ಸಮಯ ಪ್ರಜ್ಞೆಯಿಂದ 5 ಜನರ ಜೀವ ಉಳಿದಿದೆ.
ಐವರು ಬೆಂಗಳೂರಿನವರಾಗಿದ್ದು ವಿವರ ತಿಳಿದು ಬಂದಿಲ್ಲ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.